Wednesday, August 28, 2013

ಪ್ರೀತಿ ದೇವರ ಕಿರು ಬೆರಳು ಹಿಡಿದು..

[ ಹದಿಮೂರು ವರಷಗಳ ಹಿಂದೆ ನಿಯತಕಾಲಿಕವೊಂದರಲ್ಲಿ ನಾನು ಕೃಷ್ಣನ ಬಗ್ಗೆ ಬರೆದ ಮೊದಲ ಬರಹವಿದು. ಅಷ್ಟು ವರಷಗಳ ಹಿಂದೆ ನನ್ನ ಪ್ರೇಮದೇವತೆಯ ಬಗ್ಗೆ ನನ್ನಲ್ಲಿ ಯಾವ ಭಾವನೆಗಳಿದ್ದಿರಬಹುದು? ಅದೀಗ ಮಸುಕಾಗಿರಬಹುದೇ?, ಸ್ಥಿತ್ಯಂತರ ಹೊಂದಿರಬಹುದೇ? ಎಂಬ ಕುತೂಹಲಕ್ಕಾಗಿ ಅದನ್ನು ಹುಡುಕಿ ತೆಗೆದು ಓದಿದೆ. ಇದನ್ನು ದಾಖಲಿಸೋಣ ಅನ್ನಿಸಿತ್ತು. ಅದಕ್ಕಾಗಿ ಇದನ್ನು ನನ್ನ ಬ್ಲಾಗ್ ನಲ್ಲಿ ಕಾದಿರಿಸುತ್ತಿದ್ದೇನೆ.
ನಿಮಗೆ ಇಷ್ಟವಾದಲ್ಲಿ ನೀವೂ ಕೂಡಾ ಓದಿ.
ಚಿತ್ರಗಳು; ಇಂಟರ್ ನೆಟ್ ಕೃಪೆ.]

ನಾನೊಬ್ಬಳು ಕನಸುಗಾರ್ತಿ. ಕನಸು ಕಾಣುವುದೆಂದರೆ ನನಗೆ ಅತ್ಯಂತ ಪ್ರಿಯ. ಕನಸಿಗೆ ವಾಸ್ತವದ ಕಡಿವಾಣವಿರುವುದಿಲ್ಲ!

ನನ್ನ ಅತ್ಯಂತ ದುಃಖದ, ಏಕಾಕಿತನದ ಕ್ಷಣಗಳಲ್ಲಿ  ನಾನು ಅರಬ್ಬಿ ಸಮುದ್ರದ ಕರಾವಳಿಗುಂಟ ಅನ್ಯಮನಸ್ಕಳಾಗಿ ಬಾರವಾದ ಹೆಜ್ಜೆಗಳನ್ನಿಡುತ್ತಾ ಸಾಗುತ್ತಿರುತ್ತೇನೆ. ಆಗ ಆತ ನನಗೆದುರಾಗಿ ನಡೆದು ಬರುತ್ತಾನೆ. ಮುಖದ ತುಂಬಾ ಕಿರುನಗೆ. ಕಣ್ಣುಗಳಲ್ಲಿ ತುಂಟತನ. ಬಂದವನೇ ನನ್ನ ಕಿರುಬೆರಳಿಗೆ ತನ್ನ ಕಿರುಬೆರಳು ಸೇರಿಸಿ ಮೌನವಾಗಿ ಹೆಜ್ಜೆ ಹಾಕುತ್ತಾನೆ. ನನ್ನ ಕಣ್ಣುಗಳು ತಂತಾನೆ ಮುಚ್ಚಿಕೊಳ್ಳುತ್ತವೆ. ಅ ಕ್ಷಣಕ್ಕೆ ನಾನು ಪರಮಸುಖಿ.

 ಈತ ಹಲವಾರು ರೂಪಗಳಲ್ಲಿ ಸದಾ ನನ್ನನ್ನು ಕಾಡುತ್ತಿರುತ್ತಾನೆ. ಅಂತರಂಗದಲ್ಲಿ ಭಾವತರಂಗಳನೆಬ್ಬಿಸುವ ಮುರಳಿಲೋಲನಾಗಿ, ಕನಸುಗಳ ಲೋಕಕ್ಕೆ ಲಗ್ಗೆಯಿಡುವ ಮಾಧವನಾಗಿ, ನನ್ನ ಸಮಾನಮನಸ್ಕ ಗೆಳೆಯನಾದ ಶ್ಯಾಮನಾಗಿ, ಬಾಲ್ಯದ ಒಡನಾಡಿ ಗೋಪಾಲಕನಾಗಿ,ನನ್ನ ಅಸಹಾಯಕ ಕ್ಷಣಗಳಲ್ಲಿ ರಕ್ಷಣೆ ನೀಡುವ ರಕ್ಷಕನಾಗಿ ಈತ ಪ್ರತ್ಯಕ್ಷ.
ನನ್ನ ಹಾಗೆಯೇ ಸಾಮಾನ್ಯವಾಗಿ ಎಲ್ಲಾ ಸ್ತ್ರೀಪುರುಷರಿಗೂ ಈತ ಒಂದಲ್ಲ ಒಂದು ವಿಧದಲ್ಲಿ ಸದಾ ಕಾಡುತ್ತಿರುತ್ತಾನೆ. ಬೆಚ್ಚನೆಯ ಭಾವ ಕೊಡುತ್ತಿರುತ್ತಾನೆ. ಆತನೇ ಮಹಾಭಾರತದ ಶ್ರೀಕೃಷ್ಣ.

ಕೃಷ್ಣನೆಂದರೆ ಒಂದು ಪರಿಪೂರ್ಣವಾದ ವ್ಯಕ್ತಿತ್ವ. ವಾಸ್ತವದಲ್ಲಿ ಪರಿಪೂರ್ಣವಾದ ವ್ಯಕ್ತಿತ್ವವೆಂಬುದಿಲ್ಲ. ಅದೊಂದು ಆದರ್ಶ. ಆದರೆ ಪ್ರತಿ ಮನುಷ್ಯನೂ ಪರಿಪೂರ್ಣವಾದ ಸಂಬಂಧವೊಂದಕ್ಕಾಗಿ ಸದಾ ಹುಡುಕಾಟ ನಡೆಸುತ್ತಿರುತ್ತಾನೆ. ಅಂತವರಿಗೆ ಶ್ರೀಕೃಷ್ಣನ ತುಂಬು ಬಾಳ್ವೆ ಸದಾ ಆದರ್ಶ. ಅವರವರ ಭಾವಕ್ಕೆ ತಕ್ಕಂತೆ ಗೋಚರವಾಗುವ ಪರಿಪೂರ್ಣ ವ್ಯಕ್ತಿತ್ವವನ್ನು ಹೊಂದಿರುವಾತ.

ಪ್ರೀತಿಯ ಎಲ್ಲಾ ಸಾಧ್ಯತೆಗಳನ್ನು ಅದರ ಆಳ, ವಿಸ್ತಾರಗಳೊಡನೆ ಜಗತ್ತಿನೆದುರು ತೆರೆದಿಟ್ಟವನು; ಪ್ರೇಮಕ್ಕೆ ವಿಶಿಷ್ಟ ಭಾಷ್ಯವನ್ನು ಬರೆದವನು. ರಾಧೆಯೊಡನೆಯ ಆತನ ಸಂಬಂಧಕ್ಕೆ ವ್ಯಾಖ್ಯಾನ ನೀಡುವುದು ಕಷ್ಟ. ಗೋಕುಲದಲ್ಲಿದ್ದಾಗ ಕೃಷ್ಣನಿನ್ನೂ ಬಾಲಕ. ಅವರಿವರ ಮನೆಯಲ್ಲಿ ಮೊಸರು, ಬೆಣ್ಣೆ ಕದಿಯುವ ಚೋರ. ಆದರೂ ವಯಸ್ಸಿನಲ್ಲಿ ತನಗಿಂತ ತುಂಬಾ ಹಿರಿಯಳಾದ ವಿವಾಹಿತ ರಾಧೆ ಆತನ ಪ್ರೇಯಸಿ. 

ಕೃಷ್ಣನ ವ್ಯಕ್ತಿತ್ವವೇ ಹಾಗೆ. ಅದು ಎಲ್ಲರನ್ನೂ, ಎಲ್ಲವನ್ನೂ ತನ್ನಲ್ಲಿ ಲೀನವಾಗಿಸಿಕೊಳ್ಳುತ್ತದೆ. ಆತ ರಾಧೆಯೆದುರಿನಲ್ಲಿ ಅಪ್ಪಟ ಪ್ರೇಮಿಯಾಗುತ್ತಾನೆ. ಯಶೋಧೆಯ ಮುಂದೆ ಕಾಡುವ ಕೃಷ್ಣ., ಗೋಪಿಕೆಯರಿಗೆ ಮುರಳಿ ಲೋಲ. ಗೋಪಾಲಕರಿಗೆ ಮೆಚ್ಚಿನ ಸಂಗಾತಿ. ಇಂತಹ ಕೃಷ್ಣ, ಒಂದು ದಿನ ಇವರೆಲ್ಲಾ ತನಗೆ ಸಂಬಂಧಿಸಿದವರೇ ಅಲ್ಲ ಎಂಬಂತೆ ಮಥುರೆಗೆ ಹೊರಟು ಹೋಗುತ್ತಾನೆ.. ಆತ ಮುಂದೆಂದೂ ಗೋಕುಲಕ್ಕೆ ಹಿಂದಿರುಗುವುದಿಲ್ಲ. ಮಾತ್ರವಲ್ಲ ಕೊಳಲನ್ನು ಕೈಗೆತ್ತಿಕೊಳ್ಳುವುದಿಲ್ಲ. ಮೃದು ಮಧುರ ಭಾವದ ಬೆಣ್ಣೆ ಕೃಷ್ಣನ ಕೊಳಲಗಾನ ಗೋಕುಲದಲ್ಲೇ ಮಾಯವಾಗಿ ಮುಂದೆ ಆತನ ಪಾಂಚಜನ್ಯವೇ ವಿಜೃಂಭಿಸತೊಡಗುತ್ತದೆ.

ಬಹುಶಃ ಭೂತಕಾಲವನ್ನು ಅವನಂತೆ ಮರೆತವನು ಮಹಾಭಾರತದಲ್ಲಿ ಇನ್ನೊಬ್ಬನಿರಲಾರ. ಸದಾ ವರ್ತಮಾನದಲ್ಲಿ ಬದುಕಿದವನು ಆತ. ಸಂಸಾರದಲ್ಲಿ ಅಂಟಿಯೂ ಅಂಟದಂತಿದ್ದ ನಿರ್ಮೋಹಿ. ಪದ್ಮಪತ್ರದ ಮೇಲಿನ ಜಲಬಿಂದುವಿನಂತೆ ಸದಾ ನಿರ್ಲಿಪ್ತ. ಮಹಾಭಾರತದ ಎಲ್ಲಾ ಘಟನೆಗಳಲ್ಲೂ ಇದ್ದೂ ಇಲ್ಲದಂತಿರುತ್ತಾನೆ. ಅ ಕಾಲದ ಶ್ರೇಣಿಕೃತ ವರ್ಣ ವ್ಯವಸ್ಥೆಯ ಕೆಳಹಂತದಲ್ಲಿನ ಯಾದವ ಕುಲದಲ್ಲಿ ಜನಿಸಿ ಇಡೀ ಮಾಹಾಭಾರತದ ಕೇಂದ್ರ ವ್ಯಕ್ತಿಯಾಗಿ ಬೆಳೆದ. ಕುರುಕ್ಷೇತ್ರದ ಮಹಾಸಂಗ್ರಾಮವನ್ನು ನಿಯಂತ್ರಿಸಿದ. ಕೊನೆಗೆ ತೀರಾ ಸಾಮಾನ್ಯನಂತೆ ಬೇಡನೊಬ್ಬನ ಬಾಣಕ್ಕೆ ತುತ್ತಾಗಿ ಇಹಲೋಕ ತ್ಯಜಿಸಿದ. ಕುರುಕ್ಷೇತ್ರ ಯುದ್ಧವನ್ನು ತಪ್ಪಿಸುವುದಕ್ಕೆ ಆತನಿಗೊಬ್ಬನಿಗೇ ಸಾಧ್ಯವಿತ್ತು. ಆದರೆ ಅದವನಿಗೆ ಬೇಕಿರಲಿಲ್ಲ. ಬಹುಶಃ ಆ ಕಾಲದ ಎಲ್ಲಾ ಬ್ರಾಹ್ಮಣ ಮತ್ತು ಕ್ಷತ್ರಿಯರನ್ನು ನಿರ್ನಾಮ ಮಾಡುವುದು ಆತನ ಉದ್ದೇಶವಿದ್ದಿರಬಹುದು.

ನಮಗೆ ಕೃಷ್ಣ ತೀರಾ ಹತ್ತಿರವಾಗುವುದು ಇಲ್ಲೇ.  ಆತನಿಗೆ ನಮ್ಮಂತೆ ರಾಗದ್ವೇಷಾಧಿ ಗುಣಗಳಿದ್ದವು. ಆತ ದೇವರಾಗಲು ಬಯಸಲೇ ಇಲ್ಲ. ಶಿವನಂತೆ ಮನುಷ್ಯ ಸಹಜವಾದ ಗುಣಗಳನ್ನು ಹೊಂದಿರುವ ಕೃಷ್ಣನನ್ನು ಜನರು ತಮಗೆ ಬೇಕಾದಂತೆ ಅರ್ಥೈಸಿಕೊಳ್ಳಬಲ್ಲರು. ಸ್ತ್ರೀಲೋಲರಿಗೆ ಆತ ಹದಿನಾರು ಸಾವಿರ ಸ್ತ್ರೀಯರನ್ನು ಹೊಂದಿದ್ದ ಬಹುಪತ್ನಿ ವಲ್ಲಭ. ವ್ಯಭಿಚಾರಿಗಳಿಗೆ ಆತ ಜಾರಕೃಷ್ಣ. ಪರಸ್ತ್ರೀ ಲಂಪಟರಿಗೆ ರಾಧಾಪ್ರಿಯ. ಚೋರಶಿಖಾಮಣಿಗಳಿಗೆ ಬೆಣ್ಣೆಕಳ್ಳ. ಆಧ್ಯಾತ್ಮವಾದಿಗಳಿಗೆ ಭಗವದ್ಗೀತೆಯನ್ನು ಭೋದಿಸಿದ ಮಹಾಪುರುಷ. ರಾಜಕಾರಣಿಗಳಿಗೆ ಕುಟಿಲ ತಂತ್ರಗಾರ...ಇನೂ ಏನೇನೋ...

ರುಕ್ಮಿಣಿಯ ಮುಂದೆ ಅಪ್ಪಟ ಗೃಹಸ್ಥನಾಗಿ, ಸತ್ಯಭಾಮೆಯ ಎದುರಿನಲ್ಲಿ ಆಜ್ನಾಧಾರಕ ಪತಿಯಾಗಿ, ರಾಧೆಯ ಉತ್ಕಟ ಪ್ರೇಮಿಯಾಗಿ, ಯಶೋಧೆಯ ಪ್ರೇಮದ ಕಂದನಾಗಿ ಸದಾ ಮಂದಸ್ಮಿತನಾಗಿ ಕಾಣಿಸಿಕೊಳ್ಳುವ ಕೃಷ್ಣ ನಮ್ಮ ಮೈ-ಮನಸ್ಸನ್ನು ಆವರಿಸಿಬಿಡುತ್ತಾನೆ.

ಗೋಕುಲದಲ್ಲಿದ್ದಾಗ ಪೂತನಿಯನ್ನು ಕೊಂದು, ಗೋವರ್ಧನಗಿರಿಯನ್ನೆತ್ತಿ, ಕಾಳಿಂಗಮರ್ಧನ ಮಾಡಿ...ಅನೇಕ ಪವಾಡಗಳನ್ನು ತೋರಿಸಿದ.’ಕ್ರಿಯೆ’ಗಳಲ್ಲಿ ಸ್ವತಃ ಭಾಗಿಯಾದ.ಆದರೆ ಮುಂದೆ ಪ್ರಭುದ್ಧನಾಗಿ ಬೆಳೆದ ಕೃಷ್ಣ  ತಾನು ನೇರವಾಗಿ ಯಾವ ಕ್ರಿಯೆಯಲ್ಲೂ ಭಾಗಿಯಾಗದೆ ಬೇರೆಯವರ ಮುಖಾಂತರ ದುಷ್ಟ ಸಂಹಾರ ಮಾಡುತ್ತಾ ತಾನು ಕೇವಲ ನಿಮಿತ್ತ ಮಾತ್ರನಾಗಿ ಉಳಿದು ಬಿಡುತ್ತಾನೆ..

ಇಂತಹ ಬಹುಮುಖ ವ್ಯಕ್ತಿತ್ವದ ಕೃಷ್ಣನ ನಿಜಾಂತರಂಗ ಏನಿದ್ದಿರಬಹುದು? ಆತ ಎಲ್ಲರಿಗೂ ಪ್ರೀತಿಯನ್ನು ಹಂಚುತ್ತಾ ಹೋದ. ಎಲ್ಲರೂ ತಮಗೆ ಬೇಕಾದುದನ್ನು ಆತನಲ್ಲಿ ಕಂಡುಕೊಂಡರು. ಆದರೆ ಆತನ ಒಳತೋಟಿಯನ್ನು ಬಲ್ಲವರು ಯಾರು? ತನಗೆ ಅತ್ಯಂತ ಪ್ರೀತಿಪಾತ್ರನಾದ ಅರ್ಜುನನಲ್ಲಿ ಕೂಡಾ ಆತ ಮನಸ್ಸನ್ನು ತೆರೆದಿಡಲಾರ. ಏಕೆಂದರೆ ಅಲ್ಲಿರುವುದು ದೇವರು ಮತ್ತು ಭಕ್ತನ ನಡುವಿನ ಸಂಬಂಧ.

ಇಡೀ ಮಹಾಭಾರತದಲ್ಲಿ ಕೃಷ್ಣನಿಗೆ ಬೌದ್ಧಿಕ ನೆಲೆಯಲ್ಲಿ ಸರಿಸಾಟಿಯಾಗಿ ನಿಲ್ಲಬಲ್ಲ ಪಾತ್ರವೆಂದರೆ ದ್ರೌಪದಿ ಮಾತ್ರ..ಇಲ್ಲಿ ಮಾತ್ರ ಆತನ ಗಾಂಭೀರ್ಯತೆ ಕಾಣಿಸಿಕೊಳ್ಳುತ್ತದೆ. ಅವರಿಬ್ಬರ ನಡುವೆ ಹೃದಯ ಸಂವಾದವಿತ್ತು. ಅದು ಎರಡು ಪ್ರಭುದ್ಧ ವ್ಯಕ್ತಿತ್ವಗಳ ನಡುವಿನ ಮೌನ ಸಂವಾದ. ಅವಳ ಒಂದು ನಿಟ್ಟುಸಿರು, ಅವಳದೊಂದು ಚಲನೆ, ಅವಳ ಕಣ್ಣಿನ ನೋಟ ಕೃಷ್ಣನಿಗೆ ಅರ್ಥವಾಗುತ್ತಿತ್ತು. ಅವರ ಕಣ್ಣುಗಳು ಪರಸ್ಪರ ಮಾತಾಡಿಕೊಂಡುವೆಂದರೆ ಯಾವುದೋ ಮಹತ್ತರವಾದುದಕ್ಕೆ ವೇದಿಕೆ ಸಿದ್ಧಗೊಳ್ಳುತ್ತಿದೆಯೆಂದೇ ಅರ್ಥ. 

ದ್ರೌಪದಿ ಕೃಷ್ಣನ ಅಂತರಂಗದ ಸಖಿ. ಗಂಡು-ಹೆಣ್ಣಿನ ನಡುವಿನ ಗೆಳೆತನಕ್ಕೆ ಹೊಸದೊಂದು ವ್ಯಾಖ್ಯೆಯನು ಬರೆದವರು ಅವರು. ದ್ರೌಪದಿಯ ಸ್ವಯಂವರಕ್ಕೆ ಕೃಷ್ಣನು ಕೂಡಾ ಬಂದಿದ್ದ ಎಂಬುದನ್ನು ಕುಮಾರವ್ಯಾಸ ತನ್ನ ಭಾರತದಲ್ಲಿ ಹೇಳಿಕೊಂಡಿದ್ದಾನೆ. ಅಣ್ಣ ಧೃಷ್ಟದ್ಯುಮ್ನ ಸ್ವಯಂವರಕ್ಕೆ ಬಂದ ರಾಜಕುಮಾರರೆಲ್ಲರನ್ನೂ ತಂಗಿಗೆ ಪರಿಚಯಿಸುತ್ತಾ ಬರುತ್ತಾ ಕೃಷ್ಣನ ಬಳಿ ಬಂದಾಗ ’ ಇತ್ತ ನೋಡಮ್ಮಾ ತಂಗೀ ಯದು ಭೂಪೋತ್ತಮನನು.. ಅಮರಾರಿಗಳೆಂಬ ಕದಳೀವನಕ್ಕೆ ಮತ್ತದಂತಿಯಾತ....ಎಂದೆಲ್ಲಾ ವರ್ಣಿಸುತ್ತಾ ಈತನನು ವರಿಸು ಎಂದಾಗ  ಅವಳು ಭಕ್ತಿಭಾವರಸದಲ್ಲಿ ಮುಳುಗಿ,ರೋಮಾಂಚನಗೊಂಡು ಮೈಯುಬ್ಬಿ ಮನದಲ್ಲಿ ಆತನಿಗೆ ವಂದಿಸಿ ’ಈತನಲಿ ಎನಗೆ ಗುರುಭಾವನೆ ಹುಟ್ಟಿದು. ಏಕೆಂದು ನಾನರಿಯೆ’ ಎಂದೆನುತ್ತಾ ಮುಂದೆ ಸಾಗುತ್ತಾಳೆ.

ಆಧುನಿಕ ಸ್ತ್ರೀವಾದಿ ಹೆಣ್ಣುಮಗಳೊಬ್ಬಳು ಕೂಡಾ ದ್ರೌಪದಿಯಲ್ಲಿ ತನ್ನನ್ನು ತಾನು ಗುರುತಿಸಿಕೊಳ್ಳುತ್ತಾಳೆ.ದ್ರೌಪದಿಯ ಕಣ್ಣಿನಲ್ಲಿ ನೀರು ಕಾಣಿಸಿಕೊಂಡಿದ್ದು ಒಂದೇ ಬಾರಿ. ಅದು ಆಕೆ ತನ್ನ ಮಕ್ಕಳಾದ ಉಪಪಾಂಡವರನ್ನು ಕಳೆದುಕೊಂಡಾಗ. ಆಗ ಅವಳನ್ನು ಸಂತೈಸಲು ಅವಳ ಅಂತರಂಗದ ಗೆಳೆಯ ಕೃಷ್ಣ ಕೂಡಾ ಹಾಜರಾಗುವುದಿಲ್ಲ. ಆದರೆ ಅವಳ ಕಣ್ಣು ಕಿಡಿ ಕಾರಿದಾಗಲೆಲ್ಲ ಅವನು ತಕ್ಷಣ ಹಾಜರು. ಅವಳು ಅಯ್ಯೋ ಎಂದು ನಲುಗಿದಾಗಲೆಲ್ಲ ಆತ ಪ್ರತ್ಯಕ್ಷ. ಹೆಣ್ಣಿನ ಕಣ್ಣೀರನ್ನು ಎದುರಿಸುವುದು ಗಂಡಿಗೆ ಯಾವತ್ತೂ ಕಷ್ಟವೇ.!

ದ್ರೌಪದಿಯ ಜೊತೆ ಅತ್ಯಂತ ಪ್ರಬುದ್ಧವಾಗಿ ವರ್ತಿಸಿದ ಕೃಷ್ಣ ನನ್ನನ್ನು ಸದಾ ಕಾಡುತ್ತಲೇ ಇರುತ್ತಾನೆ. ಗೋಕುಲದ ಕೃಷ್ಣ ಎಲ್ಲರಿಗೂ ಸಿಗುತ್ತಿದ್ದ. ಆತನನ್ನು ಎಲ್ಲರೂ ಪ್ರೀತಿಸಬಲ್ಲರು. ಆದರೆ ದ್ವಾರಕೆಯ ಕೃಷ್ಣನ ಒಲವು ಎಲ್ಲರಿಗೂ ದೊರೆಯಲಾರದು. ಅದು ದ್ರೌಪದಿಗೆ ದಕ್ಕಬಲ್ಲುದು. ಅಂತಹ ಕೃಷ್ಣನೆನ್ನ ಆತ್ಮ ಬಂಧು; ಸಖ. ಕನಸಿನಲ್ಲಾದರೂ ದ್ವಾರಕೆಯ  ಕೃಷ್ಣನ ಕಿರು ಬೆರಳು ಹಿಡಿದು ಸಮುದ್ರಕ್ಕೆದುರಾಗಿ ಹೆಜ್ಜೆ ಹಾಕುವ ಹೆಬ್ಬಯಕೆ ನನ್ನದು.

3 comments:

Swarna said...

ಬರಹ ಚೆನಾಗಿದೆ. ಆದರೆ ನನ್ನ ಅನಿಸಿಕೆಯಂತೆ ಮತ್ತು ನಾನು ಕೇಳಿರುವ ಓದಿರುವ ಹಾಗೆ ಅವನ ಉದ್ದೇಶ ಯಾರನ್ನೂ ನಿರ್ನಾಮ ಮಾಡುವುದಾಗಿರಲಿಲ್ಲ , ಸತ್ಯ ಧರ್ಮಗಳನ್ನು ಪುನಃ ಸ್ಥಾಪಿಸುವುದು ಮಾತ್ರವಾಗಿತ್ತು .

Unknown said...

nice one i like it

ravivarma said...

ದ್ರೌಪದಿಯ ಜೊತೆ ಅತ್ಯಂತ ಪ್ರಬುದ್ಧವಾಗಿ ವರ್ತಿಸಿದ ಕೃಷ್ಣ ನನ್ನನ್ನು ಸದಾ ಕಾಡುತ್ತಲೇ ಇರುತ್ತಾನೆ. ಗೋಕುಲದ ಕೃಷ್ಣ ಎಲ್ಲರಿಗೂ ಸಿಗುತ್ತಿದ್ದ. ಆತನನ್ನು ಎಲ್ಲರೂ ಪ್ರೀತಿಸಬಲ್ಲರು. ಆದರೆ ದ್ವಾರಕೆಯ ಕೃಷ್ಣನ ಒಲವು ಎಲ್ಲರಿಗೂ ದೊರೆಯಲಾರದು. ಅದು ದ್ರೌಪದಿಗೆ ದಕ್ಕಬಲ್ಲುದು. ಅಂತಹ ಕೃಷ್ಣನೆನ್ನ ಆತ್ಮ ಬಂಧು; ಸಖ. ಕನಸಿನಲ್ಲಾದರೂ ದ್ವಾರಕೆಯ ಕೃಷ್ಣನ ಕಿರು ಬೆರಳು ಹಿಡಿದು ಸಮುದ್ರಕ್ಕೆದುರಾಗಿ ಹೆಜ್ಜೆ ಹಾಕುವ ಹೆಬ್ಬಯಕೆ ನನ್ನದು.
aa krishna nimage sigali...