ನನಗೆ ಪುನರ್ಜನ್ಮದಲ್ಲಿ ನಂಬಿಕೆ ಇಲ್ಲ. ಆದರೆ ಪ್ರೀತಿಯ ವಿಷಯಕ್ಕೆ ಬಂದಾಗ ಮಾತ್ರ ಜನ್ಮ ಜನ್ಮಾಂತರಗಳ ಸಂಬಂಧಗಳ ಬಗ್ಗೆ ನನಗೆ ನಂಬಿಕೆ ಹುಟ್ಟಿಬಿಡುತ್ತದೆ.
ನಾವು ನಮ್ಮ ಬದುಕಿನಲ್ಲಿ ಎಷ್ಟೊಂದು ಜನರಿಂದ ಪ್ರೀತಿಯನ್ನು ಪಡೆದಿದ್ದೇವೆ ಮತ್ತು ಪಡೆಯುತ್ತಲೂ ಇದ್ದೇವೆ ಎಂಬುದನ್ನು ಯೋಚಿಸಿದರೆ ಅದರ ಋಣಭಾರದಿಂದ ನಮ್ಮ ಮನಸು ಬಾಗಿ ಬಿಡುತ್ತದೆ. ಅವರೆಲ್ಲರಿಗೂ ಕೃತಜ್ನತೆಯನ್ನು ಸಲ್ಲಿಸಲು ನಮಗಿರುವ ಏಕೈಕ ಮಾರ್ಗವೆಂದರೆ ನಾವೂ ಕೂಡಾ ನಮಗೆ ಸಾಧ್ಯವಿರುವಷ್ಟು ಜನರಿಗೆ ಪ್ರೀತಿಯನ್ನು ಹಂಚುತ್ತಾ ಹೋಗುವುದು.
ಮನುಷ್ಯನ ಬುದ್ಧಿಶಕ್ತಿಯೂ ಸೇರಿದಂತೆ. ಈ ಪ್ರಪಂಚದ ಎಲ್ಲಾ ಭೌತಿಕ ವಸ್ತುಗಳನ್ನು ಮೌಲ್ಯಮಾಪನ ಮಾಡಬಹುದು. ಒಂದು ಹಂತದಲ್ಲಿ ಅದು ಖಾಲಿಯಾಗಿಯೂ ಬಿಡಬಹುದು. ಆದರೆ, ಬೆಲೆ ಕಟ್ಟಲಾಗದ, ನಾವು ಹಂಚಿದಷ್ಟೂ ಖಾಲಿಯಾಗದೇ ಮತ್ತಷ್ಟು ತುಂಬಿಕೊಳ್ಳುವ ವಸ್ತು ಅಥವಾ ಭಾವ ಎಂದರೆ ಬಹುಶಃ ಅದು ಪ್ರೀತಿ ಮಾತ್ರ.
ಪ್ರೀತಿ ಎನ್ನುವುದು ಮನುಷ್ಯನ ಮನಸ್ಸಿನಾಳದಲ್ಲಿರುವ ಒಂದು ಸ್ಥಾಯಿ ಭಾವ. ಇದು ಸ್ನೇಹ, ವಿಶ್ವಾಸ, ಗೌರವ, ಭಕ್ತಿ, ವಾತ್ಸಲ್ಯ, ಕರುಣೆ, ಪ್ರೇಮ, ಅನುರಾಗ ಮುಂತಾದ ಸಂಚಾರಿ ಭಾವಗಳಲ್ಲಿ ಪ್ರಕಟಗೊಳ್ಳುತ್ತದೆ.
ಪ್ರೀತಿಯ ಸಮಾನ ನೆಲೆಯಿಂದ ಒಂದು ಮೆಟ್ಟಿಲು ಮೇಲಕ್ಕೆ ಏರಿದರೆ, ಅದು ಭಕ್ತಿ, ಗೌರವಗಳಾಗಿ ಮಾನ್ಯತೆ ಪಡೆಯುತ್ತದೆ. ಒಂದು ಮೆಟ್ಟಿಲು ಕೆಳಕ್ಕೆ ಇಳಿದರೆ ವಾತ್ಸಲ್ಯ, ಮಮತೆ, ಕರುಣೆ, ದಯೆಗಳಾಗಿ ಕೈ ಚಾಚಿಕೊಳ್ಳುತ್ತದೆ. ಪ್ರೀತಿಯ ಸಮಾನ ನೆಲೆಯಲ್ಲಿ ನಿಂತರೆ ಸ್ನೇಹ, ವಿಶ್ವಾಸ, ನಂಬಿಕೆಗಳಾಗಿ ಕವಲೊಡೆಯುತ್ತದೆ. ಇದೇ ನೆಲೆಯಲ್ಲಿ ಗಂಡು-ಹೆಣ್ಣು ಇದ್ದಾಗ ಅದು ಪರಸ್ಪರ ಅನುರಾಗವಾಗಿ ಪ್ರಣಯವಾಗುವ ಸಾಧ್ಯತೆಯಿದೆ.
ಪ್ರೀತಿ ಎಂದರೇನು? ಅದು ಯಾವ ಸ್ವರೂಪದಲ್ಲಿ ವ್ಯಕ್ಟವಾಗುತ್ತದೆ? ಪ್ರೀತಿಯ ನೆಲೆ ಯಾವುದು? ಅದೊಂದು ಕಲೆಯೇ? ಮುಂತಾದ ಪ್ರಶ್ನೆಗಳನ್ನು ಹಲವು ಜನರು ಕೇಳುತ್ತಾರೆ. ಇದಕ್ಕೆಲ್ಲಾ ಉತ್ತರ ನೀಡುವುದು ಕಷ್ಟ. ಯಾಕೆಂದರೆ ಪ್ರೀತಿ ಎನ್ನುವುದು ಒಂದು ಉತ್ಕಟವಾದ ಅನುಭವ. ಅದೊಂದು ಮನಸ್ಥಿತಿ. ಅದನ್ನು ಶಬ್ದಗಳಲ್ಲಿ ವರ್ಣಿಸುವುದು ಸಾಧ್ಯವಿಲ್ಲ. ಅದು ಕಲೆಯೂ ಆಗಲಾರದು.ಯಾಕೆಂದರೆ ಕಲೆಗೆ ಉದ್ದೇಶವಿರುತ್ತದೆ; ಕಲೆಗಾರಿಕೆ ಇರುತ್ತದೆ; ಬಣ್ಣ ಇರುತ್ತದೆ. ಅದನ್ನು ಸೃಷ್ಟಿಸುವಾತ ಇರುತ್ತಾನೆ. ಅದನ್ನು ಇನ್ಯಾರೋ ಕಲಿಸಬೇಕಾಗುತ್ತದೆ. ಆದರೆ ಪ್ರೀತಿಯನ್ನು ಯಾರೂ ಯಾರಿಗೂ ಕಲಿಸಿಕೊಡುವುದಿಲ್ಲ; ಅದಕ್ಕೆ ಯಾವ ಬಣ್ಣವೂ ಇರುವುದಿಲ್ಲ. ಅದು ಸತ್ಯದ ಹಾಗೆ ನಿಚ್ಚಳ.
ಮಾನವತೆಯ ತಳಹದಿಯ ಮೇಲೆ ಮನುಷ್ಯ ಸಂಬಂಧಗಳ ನಡುವಿನ ಪ್ರೀತಿಯ ಬಗ್ಗೆ ಹೇಳ ಹೊರಟಾಗ ನನ್ನ ಕಣ್ಣ ಮುಂದೆ ಬರುವ ವ್ಯಕ್ತಿಗಳು ಮೂವರು. ಅವರಲ್ಲಿ ಒಬ್ಬಾತ ಪುರಾಣ ಪುರುಷನಾದ ಶ್ರೀ ಕೃಷ್ಣ.. ಇನ್ನಿಬ್ಬರು ಇತಿಹಾಸ ಪುರುಷರಾದ ತಥಾಗತ ಬುದ್ಧ ಮತ್ತು ಏಸು ಕ್ರಿಸ್ತ. ಈ ಮೂವರು ಕೇವಲ ವ್ಯಕ್ತಿಗಳಲ್ಲ. ಪ್ರೀತಿಗೆ ಸಂವಾದಿಯಾಗಿ ಬಾಳಿದವರು.ಕೃಷ್ಣನ ಕೈಯ್ಯಲ್ಲಿ ಪ್ರೀತಿಯ ಅಕ್ಷಯ ಪಾತ್ರೆ ಇತ್ತು. ಪ್ರೀತಿಯ ಎಲ್ಲಾ ಮುಖಗಳಿಗೂ ಅವನದೇ ಮೇರು ವ್ಯಕ್ತಿತ್ವ. ಆತ ಹಿರಿಯರೆದುರು ವಿನಯದಿಂದ ತಲೆಬಾಗುತ್ತಿದ್ದ. ಕಿರಿಯರ ತಲೆಯ ಮೇಲೆ ಸದಾ ಆತನ ಅಭಯ ಹಸ್ತವಿರುತ್ತಿತ್ತು.
ಇನ್ನೊಬ್ಬಾತ ಮನುಕುಲಕ್ಕೆ ಬೆಳಕನ್ನು ನೀಡಿದ ಬುದ್ಧ. ಮೊಟ್ಟಮೊದಲ ಬಾರಿಗೆ ದೀನ ದಲಿತರೆಡೆಗೆ ಪ್ರೀತಿಯ ನೋಟವನ್ನು ಬೀರಿದ ಮಹಾನುಭಾವ. ಸಮಾಜದ ಒಳಿತಿಗಾಗಿ ರಾಜ್ಯ, ಕೋಶ,ಸತಿ, ಸುತ ಎಲ್ಲವನ್ನೂ ತ್ಯಾಗ ಮಾಡಿದವನು. ಮನುಷ್ಯನ ದುಃಖಕ್ಕೆ ಕಾರಣವೇನಿರಬಹುದೆಂದು ಚಿಂತಿಸಿ, ಆ ನಿಟ್ಟಿನಲ್ಲಿ ಪರಿಹಾರಕ್ಕಾಗಿ ಕಾರ್ಯಪ್ರವೃತ್ತನಾದ ಮೊಟ್ಟಮೊದಲ ಮಾನವ. ಅವನ ಅರೆನಿಮಿಲಿತ ನೇತ್ರಗಳಲ್ಲಿ ಜಗತ್ತಿನೆಡೆಗೆ ಪ್ರೀತಿ ಮತ್ತು ಶಾಂತಿಯ ಹೊಳೆಯೇ ಹರಿಯುತ್ತಿತ್ತು.
ಕ್ಷಮೆ ಮತ್ತು ಪ್ರೀತಿಯ ಸಂಕೇತದಂತಿರುವ ಏಸುಕ್ರಿಸ್ತ ತನ್ನವರಿಗಾಗಿ, ತಾನು ನಂಬಿರುವ ಮೌಲ್ಯಗಳಿಗಾಗಿ ನಗುನಗುತ್ತಲೇ ವಧಾಕಂಬವನ್ನೇರಿದ. ’ನಿನ್ನ ನೆರೆಹೊರೆಯವರನ್ನು ಪ್ರೀತಿಸು’ ಎಂಬ ಆತನ ಶಾಂತಿ ಸಂದೇಶ ಯುದ್ಧ ಮತ್ತು ಶಾಂತಿಯ ಎರಡೂ ಕಾಲಗಳಲ್ಲಿ ಪ್ರಸ್ತುತ ಎನಿಸುತ್ತದೆ.
ಜಿಡ್ಡು ಕೃಷ್ಣಮೂರ್ತಿ ಒಂದೆಡೆ ಹೇಳುತ್ತಾರೆ ’ ಪ್ರೀತಿ ಎಂಬುದು, ತುಂಬಿ ಹರಿಯುವ ನದಿಯಂತೆ. ಹರಿದೆಡೆಯಲೆಲ್ಲ ನದಿ ಜೀವ ತುಂಬುತ್ತದೆ. ಪ್ರೀತಿ ಇರುವ ಸಂಬಂಧಗಳಲ್ಲಿ ನಮ್ಮನ್ನು ನಾವು ಕಳೆದುಕೊಳ್ಳಬೇಕು’ ಅಂದರೆ, ಪ್ರೀತಿಯ ಎದುರಿನಲ್ಲಾದರೂ ಮನುಷ್ಯ ತನ್ನಲ್ಲಿರುವ ಅಹಂನ್ನು ಕಳೆದುಕೊಂಡು ಶೂನ್ಯವಾಗಬೇಕು. ಏನೋ ಆಗಿ ಮೆರೆಯುವ ವ್ಯಕ್ತಿಯೊಬ್ಬ ಎನೂ ಅಲ್ಲವಾಗಿಬಿಡುವ ಈ ಸ್ಥಿತಿಯನ್ನು ಹೊಂದಬೇಕು. ಪ್ರೀತಿಯ ಪರಿಪೂರ್ಣತೆ ಅಂದರೆ ಇದೇ. ’ನಾನು’ ಎಂಬುದು ಸಂಪೂರ್ಣ ಇಲ್ಲವಾಗಿ ನಾನೇ ನೀನಾಗಿಬಿಡುವ, ನೀನೇ ನಾನಾಗುವ ಅಥವಾ ಸಮಾಧಿ ಸ್ಥಿತಿಯನ್ನು ಹೊಂದುವ ಪರಮಾನಂದದ ಕ್ಷಣ.
ಇಂಥ ದಿವ್ಯ ಜಗತ್ತಿಗೆ ಕಾಲಿಡಲು, ಪ್ರಾಪಂಚಿಕ ಮೋಹದಲ್ಲಿ ಬಿದ್ದು ಒದ್ದಾಡುವವರಿಗೆ ಸ್ವಲ್ಪ ಕಷ್ಟವೇ. ಇದೆಲ್ಲಾ ಆದರ್ಶದ ಇಲ್ಲವೇ ತಾರ್ಕಿಕ ವಿಷಯಗಳಾದವು. ಈಗ ನಮ್ಮ ಮುಂದಿರುವ ವಾಸ್ತವದ ಚಿತ್ರಣಕ್ಕೆ ಬರೋಣ. ಇಲ್ಲಿ ಈಗ ಎಷ್ಟೊಂದು ದುಃಖ, ನೋವು, ಅಸಹಾಯಕತೆ ಇದೆಯೆಂದರೆ, ಮನುಷ್ಯ- ಮನುಷ್ಯರ ನಡುವಿನ ಸಂಬಂಧಗಳಿಗೆ ಅರ್ಥವೇ ಉಳಿದಿಲ್ಲ. ಆರ್ಥಿಕ ಮಾನದಂಡಗಳು ಮನುಷ್ಯನ ಭಾನನಾತ್ಮಕ ಸಂಬಂಧಗಳ ಮೇಲೆ ಮೇಲುಗೈ ಸಾಧಿಸಿವೆ. ಹಿಂದೆಲ್ಲಾ ಮನುಷ್ಯ ತನ್ನ ನಾಡಿಗಾಗಿ, ಸಮಾಜಕ್ಕಾಗಿ,ಊರಿಗಾಗಿ ಕೊನೆಯ ಪಕ್ಷ ತನ್ನ ಕುಟುಂಬದ ಏಳಿಗೆಗಾಗಿ ಬದುಕಿದ್ದ. ಈಗಿನ ಮನುಷ್ಯ ಕೇವಲ ತನ್ನ ಸುಖಕ್ಕಾಗಿ ಬದುಕುವಷ್ಟು ಸ್ವಾರ್ಥಿಯಾಗಿದ್ದಾನೆ.
ಹಾಗಿದ್ದರೂ ಆತ ಒಂದು ಹಿಡಿ ಪ್ರೀತಿಗಾಗಿ, ಒಂದು ಪ್ರೀತಿಯ ಸ್ಪರ್ಷಕ್ಕಾಗಿ, ಸಾಂತ್ವನದ ನೋಟಕ್ಕಾಗಿ, ಭರವಸೆಯ ಒಂದು ನುಡಿಗಾಗಿ ಸದಾ ತಹತಹಿಸುತ್ತಿದ್ದಾನೆ. ಈ ಪ್ರೀತಿಯ ಹಪಹಪಿಕೆಯೇ ಅನೇಕ ಸಂದರ್ಭಗಳಲ್ಲಿ ಅನೈತಿಕ ಹಾಗೂ ವಿವಾಹಬಾಹಿರ ಸಂಬಂಧಗಳಿಗೆ ಎಡೆ ಮಾಡಿಕೊಡುತ್ತದೆ.
ಪ್ರೀತಿಗೆ ಯಾವುದೇ ಚೌಕಟ್ಟು ಹಾಗೂ ಬಂಧನಗಳಿರುವುದಿಲ್ಲ. ಅದು ದೇಶ, ಭಾಷೆ, ಜಾತಿ, ಮತ, ಅಂತಸ್ತು, ವಯಸ್ಸು ಎಲ್ಲವನ್ನೂ ಮೀರಿ ನಿಲ್ಲುತ್ತದೆ. ಅದಕ್ಕೆ ಹೋಲಿಕೆಗಳಿಲ್ಲ. ಅದು ಆಕಾಶದ ಹಾಗೆ ಅನಂತವಾದುದು. ಸಮುದ್ರದಷ್ಟು ಆಳವಾದುದು. ಮೊಗೆ ಮೊಗೆದಷ್ಟು ಅದು ಉಕ್ಕಿ ಹರಿಯುತ್ತಲೇ ಇರುತ್ತದೆ. ವಸುಂಧರೆಯಷ್ಟೇ ಕೌತುಕವಾದುದು ಈ ಪ್ರೀತಿ. ಪ್ರೀತಿ ಏಕಾಂತದ ಒಂದು ಭಾಗ. ಪ್ರೀತಿಯ ಹಣತೆ ನಮ್ಮ ಎದೆಯೊಳಗೆ ಇದ್ದರೆ ಸರಳವಾದ, ಪ್ರಶಂತವಾದ, ನೆಮ್ಮದಿಯ, ಆನಂದದ ಬದುಕು ನಮ್ಮದಾಗುತ್ತದೆ.
ಇಲ್ಲಿ ಇನ್ನೊಂದು ಸೂಕ್ಷ್ಮ ವಿಚಾರವಿದೆ. ರೂಢಿಯಲ್ಲಿ ಪ್ರೀತಿ ಮತ್ತು ಪ್ರೇಮವನ್ನು ಒಂದೇ ಅರ್ಥದಲ್ಲಿ ಬಳಸಲಾಗುತ್ತದೆ. ಆದರೆ ಅವುಗಳ ಮಧ್ಯೆ ಸೂಕ್ಷ್ಮವಾದ ಆದರೆ ನಿಖರವಾದ ವ್ಯತ್ಯಾಸವಿದೆ. ’ನನಗೆ ನಿನ್ನಲ್ಲಿ ಪ್ರೀತಿಯಿದೆ’ ಅಥಾ ’ನಾನು ನಿನ್ನನ್ನು ಪ್ರೀತಿಸುತ್ತೇನೆ’ ಎಂದು ನೀವು ಯಾರಿಗೆ ಬೇಕಾದರೂ, ಎಷ್ಟು ಜನರ ಮುಂದಾದರೂ ಹೇಳಬಹುದು.ಯಾಕೆಂದರೆ ಅದು ಸೃಷ್ಠಿಯ ಭಾಷೇಯೇ ಸರಿ. ಆದರೆ’ ನಾನು ನಿನ್ನನ್ನು ಪ್ರೇಮಿಸುತ್ತೇನೆ’ ಎಂದು ಹೇಳಿದಾಗ ಅದರಲ್ಲಿ ಲೈಂಗಿಕತೆಯೂ ತಳಕು ಹಾಕಿಕೊಂಡಿರುತ್ತದೆ. ಅದಕ್ಕೊಂದು ಸೀಮಿತ ಅರ್ಥ ಒದಗಿಬಿಡುತ್ತದೆ. ಪ್ರೀತಿ ಹಾಗಲ್ಲ. ಅದೊಂದು ರೀತಿಯಲ್ಲಿ ಆತ್ಮಗಳ ಆಕರ್ಷಣೆ. ಅಲ್ಲಿ ಎರಡು ವ್ಯಕ್ತಿಗಳ ನಡುವೆ ಅಥವಾ ವ್ಯಕ್ತಿ ಮತ್ತು ಸಮಾಜದ ನಡುವೆ ಅಲೌಕಿಕವಾದ ಒಂದು ಅಗೋಚರ ಸಂಬಂಧ ಇರುತ್ತದೆ. ಪ್ರೇಮದಲ್ಲಿರುವ ದೇಹ ಸಾಂಗತ್ಯಕ್ಕೂ, ಪ್ರೀತಿಯಲ್ಲಿರುವ ಆತ್ಮ ಸಾಂಗತ್ಯಕ್ಕೂ ಅಪಾರವಾದ ವ್ಯತ್ಯಾಸವಿದೆ. ಆತ್ಮ ಸಾಂಗತ್ಯದೊಂದಿಗೆ ದೇಹ ಸಾಂಗತ್ಯವೂ ಸೇರಿದಾಗ ಅದು ಅಪರೂಪದ ದಾಂಪತ್ಯವಾಗುತ್ತದೆ.
ಗಂಡು ಹೆಣ್ಣಿನ ನಡುವೆ ನಡೆಯುವ ದೇಹ ಸಾಂಗತ್ಯಕ್ಕೆ ಸಮಾಜ ನೈತಿಕತೆಯ ಬೇಲಿಅಯನ್ನು ಕಟ್ಟಿ ವಿವಾಹವೆಂಬ ಸಂಸ್ಥೆಯಡಿ ದೈಹಿಕ ಮಿಲನಕ್ಕೆ ಅನುಮತಿಯನ್ನು ನೀಡುತ್ತದೆ. ದಾಂಪತ್ಯದ ಚೌಕಟ್ಟಿನೊಳಗಿನ ಈ ಪ್ರೇಮದಲ್ಲಿ ಬಂಧಿಯಾಗುವ ಗಂಡು-ಹೆಣ್ಣಿನಲ್ಲಿ ಪ್ರರಸ್ಪರ ಪ್ರೀತಿ ಇರಲೇಬೇಕೆಂದಿಲ್ಲ. ಏಕೆಂದರೆ, ಮದುವೆಯ ಉದ್ದೇಶವೇ ಬೇರೆಯಾಗಿರುತ್ತದೆ. ಅದು ವಂಶದ ಮುಂದುವರಿಕೆ ಹಾಗೂ ಆಸ್ತಿ ಮತ್ತು ಅಧಿಕಾರದ ಕೇಂದ್ರೀಕರಣದ ಜತೆ ಕೌಟುಂಬಿಕ ಅವಲಂಬನೆಯ ನೆಲೆಯೂ ಆಗಿರುತ್ತದೆ.
ಈ ದಿಸೆಯಲ್ಲಿ ಆಚಾರ್ಯ ರಜನೀಶರ ಮದುವೆಯ ಕುರಿತಾದ ಕ್ರಾಂತಿಕಾರಕ ಚಿಂತನೆಗಳು ಹೊಸ ತಲೆಮಾರಿನ ಯುವಕ ಯುವತಿಯರಿಗೆ ಅಪ್ಯಾಯವೆನಿಸುತ್ತದೆ.”ಸ್ತ್ರೀ ಪುರುಷರಿಬ್ಬರೂ ಪರಿಪೂರ್ಣ ಪ್ರೀತಿ ಮತ್ತು ಆನಂದದಿಂದ ಮಿಲನಗೊಂಡಾಗ ಅದು ಅಧ್ಯಾತ್ಮಿಕ ಕ್ರಿಯೆ ಎನಿಸುವುದು. ಅದರಲ್ಲಿ ಕಾಮವಾಂಛೆ ಇರುವುದಿಲ್ಲ. ಅದು ಯೋಗಿಯೊಬ್ಬನ ಸಮಾಧಿ ಸ್ಥಿತಿಗೆ ಸಮ. ಇದು ಎರಡು ಆತ್ಮಗಳ ಮಿಲನ.ಇದು ಅತ್ಯಂತ ಪವಿತ್ರವಾದುದು. ಇದು ಪರಮಾತ್ಮನ ವ್ಯವಸ್ಥೆ. ಆದರೆ ವಿವಾಹ ಎಂಬುದು ಮನುಷ್ಯನ ಅನ್ವೇಷಣೆ. ವಿವಾಹದಲ್ಲಿ ಪ್ರೀತಿಯು ಜೀವದಾಳದಿಂದ ಸಹಜವಾಗಿ ಮೂಡಿ ಬರುವುದಿಲ್ಲ.’ ಎಂದು ವಿವಾಹ ವ್ಯವಸ್ಥೆಯನ್ನೇ ನಿರಾಕರಿಸಿಬಿಡುವ ರಜನೀಶ್ ಮುಕ್ತ ಲೈಂಗಿಕತೆಯ ಹರಿಕಾರರಾಗಿ ಅನೇಕ ವಿವಾದಗಳಿಗೆ ಸಿಕ್ಕಿ ಹಾಕಿಕೊಂಡದ್ದು ಎಲ್ಲರಿಗೂ ಗೊತ್ತಿರುವ ವಿಚಾರ.
ಪ್ರೀತಿ ಬಗ್ಗೆ ನಾವು ಎಷ್ಟೇ ಉದಾತ ವಿಚಾರಗಳನ್ನು ಹೊಂದಿದ್ದರೂ ವೈಯಕ್ತಿಕ ನೆಲೆಯಲ್ಲಿ ಅದು ಗಂಡು ಹೆಣ್ಣುಗಳ ಮಧ್ಯೆ ಲೈಂಗಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡುತ್ತದೆ. ಪ್ಲೆಟಾನಿಕ್ ವಲ್ ಎನ್ನುವುದು ಕೇವಲ ಆದರ್ಶವಾಗಿ ಉಳಿದುಬಿಡುತ್ತದೆ. ಈ ಹಿನ್ನೆಲೆಯಲ್ಲಿ ದೇಹ ಸಾಂಗತ್ಯವನ್ನು ಮೀರಿ ಬೆಳೆದ ಮೀರಾ, ಅಕ್ಕಾಮಹಾದೇವಿಯ ಪ್ರೀತಿಯ ಪರಾಕಾಷ್ಠೆ ಪ್ರೀತಿಗೆ ಹೊಸ ಆಯಾಮವನ್ನು ನೋಡುತ್ತದೆ. ಭಕ್ತಿ ಪಂಥದಲ್ಲಿ ಪ್ರಕಟಗೊಂಡ ದೇವರು ಮತ್ತು ಭಕ್ತರ ನಡುವಿನ ಸಂಬಂಧ ಕೂಡಾ ಪ್ರೀತಿಯ ಉತ್ತುಂಗದ ಇನ್ನೊಂದು ರೂಪ.
ಭಿನ್ನ ಭಿನ್ನ ಪರಿಸರದಲ್ಲಿ ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಯೊಂದಿಗೆ ಬೆಳೆದು ಬಂದ ಗಂಡು-ಹೆಣ್ಣು ದಾಂಪತ್ಯ ಚೌಕಟ್ಟಿನೊಳಗೆ ಒಂದೇ ಸೂರಿನಡಿ ಬದುಕಬೇಕಾದಾಗ ಹಲವು ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಯಾಕೆಂದರೆ, ಯಶಸ್ವಿ ದಾಂಪತ್ಯದ ಭದ್ರ ಬುನಾದಿಯೇ ಪರಸ್ಪರ ನಂಬಿಕೆ. ಈ ಬುನಾದಿ ಅಲುಗತೊಡಗಿದಾಗ ದಾಂಪತ್ಯದಲ್ಲಿ ಬಿರುಕು ಕಾಣಿಸಿಕೊಳ್ಳುತ್ತದೆ.
ಹಾಗಾದರೆ ಗಂಡು-ಹೆಣ್ಣು ಪರಸ್ಪರ ವಿಶಿಷ್ಟತೆಗಳನ್ನು ಬಿಟ್ಟುಕೊಡದೇ ಪ್ರೀತಿಸುವುದು ಹೇಗೆ? ಪರಸ್ಪರ ಪ್ರೀತಿ, ಗೌರವವನ್ನು ಸಾಧಿಸುವುದು ಹೇಗೆ?
ಈ ಜಗತ್ತಿನಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ಇನ್ನೊಬ್ಬನಿಗಿಂತ ರೂಪ, ಗುಣ, ನಡತೆಗಳಲ್ಲಿ ವಿಭಿನ್ನ. ತನ್ನಷ್ಟಕ್ಕೆ ತಾನೇ ಅವನೊಬ್ಬ ಸ್ವತಂತ್ರ ವ್ಯಕ್ತಿ. ಅಂದರೆ ಒಂದರ್ಥದಲ್ಲಿ ಆತ ಸರಳ ರೇಖೆ. ಸರಳ ರೇಖೆಗಳು ಎಂದೂ ಪರಸ್ಪರ ಸಂಧಿಸುವುದಿಲ್ಲ. ಆದರೆ ಸಮಾನ ಅಭಿರುಚಿಯೆಂಬ ವಕ್ರ ರೇಖೆಗಳು ಇಬ್ಬರು ಸ್ವತಂತ್ರ ವ್ಯಕ್ತಿಗಳನ್ನು ಪರಸ್ಪರ ಸಂಧಿಸುವಂತೆ ಮಾಡಬಹುದು. ಬಹಳಷ್ಟು ಮಂದಿ ಪ್ರೇಮಿಗಳು ನಾವು ಮದುವೆಯಾದರೆ ನಮ್ಮ ಬದುಕು ಹೇಗಿರಬಹುದು ಎಂದು ನನ್ನನ್ನು ಕೇಳುತ್ತಾರೆ. ಆಗ ನಾನು ಅವರಿಗೆ ಹೇಳುವುದಿಷ್ಟೇ; ಈಗ ನಿಮ್ಮ ವಯಸ್ಸಿಗೆ ಸಹಜವಾಗಿ ಪರಸ್ಪರ ಆಕರ್ಷಣೆ, ಬದುಕುವ ಕೆಚ್ಚು, ಛಲ ಇರಬಹುದು. ಆದರೆ, ಇನ್ನು ಹತ್ತಾರು ವರ್ಷ ಕಳೆದಂತೆಲ್ಲಾ ಇದು ಕುಂದುತ್ತಾ ಬರುತ್ತದೆ. ಬದುಕಿನ ಬವಣೆಗಳು ನಿಮ್ಮ ನಂಬಿಕೆಗಳನ್ನು ತಲೆಕೆಳಗು ಮಾಡಬಹುದು. ಆಗ ನಿಮ್ಮ ಮನೆ ಮತ್ತು ಮನಸ್ಸುಗಳನ್ನು ಮೌನ ಮತ್ತು ವಿಷಾಧ ಆಳಲು ಪ್ರಾರಂಭಿಸುತ್ತದೆ. ರೋಷ, ಸಿಟ್ಟು, ಪರಸ್ಪರ ದೋಷಾರೋಪವೇ ಮೇಲುಗೈ ಸಾಧಿಸುತ್ತದೆ. ತಾವು ಪರಸ್ಪರ ಮೆಚ್ಚಿ ಮದುವೆಯಾದದ್ದು ಸುಳ್ಳಿರಬಹುದೇ ಎಂದು ನಿಮ್ಮನ್ನೇ ನೀವು ಪ್ರಶ್ನಿಸಿಕೊಳ್ಳಬಹುದು. ಅದ್ದರಿಂದಲೇ ಬಾಳ ಸಂಗಾತಿಯನ್ನು ಆಯ್ಕೆ ಮಾಡಿಕೊಳ್ಳುವಾಗ ಎರಡು ಬಹು ಮುಖ್ಯ ಅಂಶಗಳತ್ತ ಗಮನಹರಿಸಬೇಕು.
ಒಂದು, ಆತನ\ ಆಕೆಯ ದೌರ್ಭಲ್ಯಗಳನ್ನು ಅರಿತು ಅದರ ಸಮೇತ ಒಪ್ಪಿಕೊಳ್ಳುವುದು ಇನ್ನೊಂದು, ಹತ್ತಾರು ವರ್ಷಗಳು ಕಳೆದ ಮೇಲೂ ತಾವು ಪರಸ್ಪರ ಎದುರು-ಬದುರು ಕುಳಿತು ಆಸಕ್ತಿಯಿಂದ ಚರ್ಚಿಸಬಹುದಾದ ಸಮಾನ ಅಭಿರುಚಿ ನಮ್ಮ ನಡುವೆ ಇದೆಯೇ ಎಂಬುದು. ಇವೆರಡೂ ಸಾಧ್ಯವಾದರೆ, ಅಂತಹ ದಾಂಪತ್ಯ ಸುಮಧುರವಾಗುವುದರಲ್ಲಿ ಸಂದೇಹವೇ ಇಲ್ಲ. ಇಲ್ಲಿ ಯಾರೂ ಹೆಚ್ಚಲ್ಲ,ಯಾರೂ ಕಡಿಮೆಯಲ್ಲ. ಪರಸ್ಪರ ಹಕ್ಕು ಸ್ಥಾಪನೆಯ ಪ್ರಶೆಯೂ ಉದ್ಭವಿಸುವುದಿಲ್ಲ. ಮೇಲಿನ ಮನಸ್ಥಿತಿಯನ್ನು ಹೊಂದಿರುವ ಗಂಡು-ಹೆಣ್ಣು ಮಾತ್ರ ದೇಷ, ಭಾಷೆ, ಜಾತಿ, ಮತ, ವಯಸ್ಸು, ಅಂತಸ್ತು ಎಲ್ಲವನ್ನೂ ಮೀರಿ ಮದುವೆಯಾಗಬಲ್ಲರು. ಇಲ್ಲವೇ ಪರಸ್ಪರ ಒಟ್ಟಿಗೆ ಬದುಕಬಲ್ಲರು. ಸಮಾಜದ ಕಟ್ಟು ಪಡುಗಳು ಇಂತವರನ್ನು ಏನೂ ಮಾಡಲಾಗದು.
ಮನುಷ್ಯರಲ್ಲಿ ಪ್ರೀತಿಸುವ ಸಾಮರ್ಥ್ಯ ಕಡಿಮೆಯಾಗುತ್ತಿದೆ ಎಂದು ಬಹಳಷ್ಟು ಜನ ವಿಷಾಧದಿಂದ ಹೇಳುವುದನ್ನು ನಾನು ಕೇಳಿದ್ದೇನೆ. ಆತ ಭಾವನೆಗಳನ್ನು ಅದುಮಿಟ್ಟುಕೊಂಡು ಬದುಕುವುದನ್ನು ರೂಢಿಸಿಕೊಂಡಿದ್ದಾನೆ. ಒಂದೇ ಒಂದು ಮಿಡಿತಕ್ಕೆ ಈ ಭಾವನೆಗಳ ಕಟ್ಟೆಯೊಡೆದು ಪ್ರೀತಿಯ ಝರಿ ಹರಿದುಬಿಡಬಹುದು. ಅದಕ್ಕೆ ಮಿಡಿಯುವ ಬೆರಳಿನ ಅವಶ್ಯಕತೆ ಇದೆ.
ಪ್ರತಿ ಮನುಷ್ಯನ ಎದೆಯಾಳದಲ್ಲಿ ಸದಾ ಒಂದು ಶೂನ್ಯ ಇರುತ್ತದೆ. ಅದನ್ನು ತುಂಬಿಕೊಳ್ಳಲು ಆತ ಪ್ರಯತ್ನಿಸುತ್ತಲೇ ಇರುತ್ತಾನೆ. ನಿಷ್ಕಲ್ಮಶವಾದ, ಯಾವುದೇ ನಿರೀಕ್ಷೆಗಳಿಲ್ಲದ ಪ್ರೀತಿ ಮಾತ್ರ ಅದನ್ನು ತುಂಬಬಲ್ಲುದು ಎಂಬುದು ಆತನಿಗೆ ಗೊತ್ತು. ಆದರೆ, ಇಲ್ಲಿ ಒಂದು ವಿಷಯವನ್ನು ಆತ ಮರೆತು ಬಿಡುತ್ತಾನೆ. ಪ್ರೀತಿ ಯಾವಾಗಲೂ ಕಳೆದುಕೊಂಡು ಪಡೆದುಕೊಳ್ಳುವ ಕ್ರಿಯೆ. ಆದರೆ, ಆತನಿಗೆ ಪಡೆದುಕೊಳ್ಳುವಲ್ಲಿ ಇರುವ ಹಪಹಪಿಕೆ ನೀಡುವಲ್ಲಿ ಇರುವುದಿಲ್ಲ.
ಪ್ರೀತಿಯ ಅಕ್ಷಯ ಪಾತ್ರೆಯನ್ನು ತನ್ನಲ್ಲಿ ಇಟ್ಟುಕೊಂಡು ಪ್ರೀತಿ ಹಸಿವು ಎಂಬ ಬಿಕ್ಷಾಪಾತ್ರೆಯನ್ನು ಆತ ಎದುರಿಗಿರುವವರ ಮುಂದೊಡ್ಡುತ್ತಾನೆ. ಒಮ್ಮೆ ಆತ ಅಕ್ಷಯ ಪಾತ್ರೆಯನ್ನು ಖಾಲಿ ಮಾಡಲು ಆರಂಭಿಸಿದರೆ, ಬಿಕ್ಷಾಪಾತ್ರೆ ತನ್ನಿಂದ ತಾನೇ ತುಂಬಿಕೊಳ್ಳುತ್ತಾ ಹೋಗುತ್ತದೆ. ಇದು ಆತನಿಗೆ ಗೊತ್ತಿರಬೇಕು. ಇದುವೇ ಜೀವನ. ನದಿಯೊಂದು ತನ್ನಷಟಕ್ಕೆ ತಾನೇ ಹರಿಯುತ್ತದೆ. ಹೂವೊಂದು ಕಾರಣವಿಲ್ಲದೆ ಅರಳುತ್ತದೆ. ಋತುಮಾನಗಳು ಸ್ವಯಂ ಬದಲಾಗುತ್ತವೆ. ಮಳೆ ಸುಮ್ಮನೆ ಹೊಯ್ಯುತ್ತದೆ. ಹಾಗೆಯೇ ಪ್ರೀತಿ ಕೂಡಾ; ಎರಡು ಹೃದಯಗಳ ಮಧ್ಯೆ ಘಟಿಸಿಬಿಡುತ್ತದೆ. ಉದ್ದೇಶವಿಲ್ಲದ ಈ ಪ್ರೀತಿಯಲ್ಲಿ ಪ್ರೀತಿಸುವ ವ್ಯಕ್ತಿಗಳೇ ಪ್ರೀತಿಯಾಗಿ ಬಿಡುತ್ತಾರೆ.
ಆದರೆ ಈ ಜಗತ್ತಿನಲ್ಲಿ ಸಧ್ಯದ ಪರಿಸ್ಥಿತಿಯಲ್ಲಿ ಎಲ್ಲಾ ತಡೆಗೋಡೆಗಳನ್ನು ಮೀರಿ ಪ್ರೀತಿ ತನ್ನ ಅಧಿಪತ್ಯವನ್ನು ಸಾಧಿಸಲು ಸಾಧ್ಯವಾಗಿಲ್ಲ. ಇಲ್ಲಿ ಈಗ ಕ್ಷುಲಕ ಕಾರಣಗಳಿಗಾಗಿ ದೇಶ- ದೇಶಗಳ ನಡುವೆ ದ್ವೇಷಾಗ್ನಿ ಹೊತ್ತಿ ಉರಿಯುತ್ತಿದೆ. ಭಯೋತ್ಪಾದನೆ ತಾಂಡವವಾಡುತ್ತಿದೆ. ಹುಸಿ ಆದರ್ಶಗಳ ಬೆನ್ನು ಹತ್ತಿ ಅಮಾಯಕ ಜನರ ಮಾರಣ ಹೋಮವಾಗುತ್ತಿದೆ. ಅಧಿಕಾರ ಮತ್ತು ಭೋಗಲಾಲಸೆ ಮನುಷ್ಯನ ಆಳದಲ್ಲಿರುವ ಪ್ರೀತಿಯನ್ನು ಹತ್ತಿಕ್ಕಿ ಕ್ರೌರ್ಯವನ್ನು ವಿಜೃಂಭಿಸುವಂತೆ ಮಾಡುತ್ತಿದೆ. ಆದರೆ ನಾವು ತೀರಾ ನಿರಾಶೆ ಪಡುವ ಅಗತ್ಯ ಇಲ್ಲ. ಅತ್ಯಂತ ದಟ್ಟ ಕತ್ತಲೆಇದ್ದಾಗಲೇ ಬೆಳಕಿನ ಕಿರಣವೊಂದು ಥಟ್ಟನೆ ಮೂಡಿ ಬರಬಹುದು. ವರ್ಣ ಭೇದ ನೀತಿಯನ್ನು ಸಮರ್ಥವಾಗಿ ಎದುರಿಸಿದ ನೆಲ್ಸನ್ ಮಂಡೇಲಾ, ಹಿಂದೂ-ಮುಸ್ಲಿಂ ಏಕತೆಗಾಗಿ ಹೋರಾಡಿ ಬಲಿದಾನಗೈದ ಗಾಂಧೀಜಿ, ಸಾಮಾಜಿಕವಾಗಿ ಹಿಂದುಳಿದವರ ಬದುಕಿಗೊಂದು ಘನತೆಯನ್ನು ತಂದುಕೊಟ್ಟ ಬಸವಣ್ಣ ಎಲ್ಲರೂ ಕೂಡಾ ಪ್ರೀತಿಯ ವಿವಿಧ ನೆಲೆಗಳಲ್ಲಿ ಕಂಡು ಬಂದ ನಕ್ಷತ್ರಗಳು. ’ಪರಮಾತ್ಮನ ಕಡೆಗೆ ಹೋಗಲು ಇರುವುದು ಒಂದೇ ಬಾಗಿಲು. ಅದುವೇ ಪ್ರೀತಿಯ ಬಾಗಿಲು. ಅಲ್ಲಿರುವ ಪ್ರೀತಿಯ ಜ್ಯೋತಿಯನ್ನು ನಂದಿಸಲು ಮಂದಿರ ಮಸೀದಿಗಳ ಧರ್ಮಗುರುಗಳು ಮುಂದಾಗಿದ್ದಾರೆ’ ಎಂದು ಓಶೋ ಹೇಳುತ್ತಾರೆ. ಇದು ಭಾರತದ ಸಧ್ಯದ ಸ್ಥಿತಿಗಂತೂ ನೂರಕ್ಕೆ ನೂರಷ್ಟು ನಿಜ.
ಆದರೆ ನನಗೆ ಮನುಷ್ಯ್ರರಲ್ಲಿ ನಂಬಿಕೆಯಿದೆ. ಪ್ರೀತಿಗಿರುವ ಶಕ್ತಿಯ ಅರಿವಿದೆ.
ಈ ಬದುಕು ನನಗೆ ಬಹಳಷ್ಟನ್ನು ನೀಡಿದೆ. ಆ ಬಗ್ಗೆ ನನಗೆ ಕೃತಜ್ನತೆಯಿದೆ. ತೀರಾ ವೈಯಕ್ತಿಕ ಮಟ್ಟದಲ್ಲಿ, ಬಸಿರು ಬಾಣಂತನ ಮುಂತಾದ ಸಂದರ್ಭಗಳಲ್ಲಿ ಅತೀ ಅಗತ್ಯವಾಗಿ ಬೇಕಾಗಿದ್ದ ಪ್ರೀತಿಯ ಆಸರೆ ನನಗೆ ದೊರಕಿಲ್ಲದಿರಬಹುದು. ಆದರೆ ಹಾಗೆಂದು ನನಗೆ ದುಃಖವಿಲ್ಲ. ನನ್ನಲ್ಲಿ ನನಗೆ ಭರವಸೆಯಿದೆ. ಅಪರಿಚಿತ ವ್ಯಕ್ತಿಗಳು ಹಾಗೂ ಕುಟುಂಬದವರು ಸೇರಿದಂತೆ ಎಷ್ಟೊಂದು ಜನರಿಂದ ನಾನು ಉಪಕಾರ, ಪ್ರೀತಿ, ವಿಶ್ವಾಸಗಳನ್ನು ಗಳಿಸಿಕೊಂಡಿದ್ದೇನೆಂದರೆ, ಈ ಜಗತ್ತು ಎಷ್ಟೊಂದು ಪ್ರೀತಿಯನ್ನು ತನ್ನೊಳಗೆ ಬಚ್ಚಿಟ್ಟುಕೊಂಡಿದೆ ಎಂದು ನನಗೆ ಆಶ್ಚರ್ಯವಾಗುತ್ತದೆ. ಅವರೆಲ್ಲರ ಅಂತಃಕರಣ ಹಾಗೂ ಪ್ರೀತಿಯನ್ನು ನಾನು ಪಡೆದುಕೊಳ್ಳುವಾಗಲೆಲ್ಲಾ ಇವರು ಮತ್ತು ನನ್ನ ನಡುವೆ ಜನ್ಮ ಜನ್ಮಾಂತರಗಳ ಸಂಬಂಧಗಳಿರಬಹುದೇ ಎಂಬ ಪ್ರಶ್ನೆ ನನ್ನಲ್ಲಿ ಹುಟ್ಟಿಕೊಳ್ಳುತ್ತದೆ. ಇಷ್ಟೆಲ್ಲಾ ಹೇಳಿದ ಮೇಲೂ ಪ್ರೀತಿ ಎಂದರೆ ಇದಲ್ಲ, ಇನ್ನೇನೋ ಇದೆ ಎನಿಸುತ್ತದೆ. ಅದು ಹೃದಯಗಳ ನಡುವಿನ ಪಿಸುಮಾತೇ? ಉದಾತ ಮನಸುಗಳ ನಡುವಿನ ಸಂವಾದವೇ? ಒಬ್ಬ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ತೋರುವ ಕನಿಷ್ಠ ಕಾಳಜಿಯೇ? ಅದು ಬದುಕಿನ ನಿಗೂಢ ಪಯಣದಲ್ಲಿ ಸಿಗುವ ಆನಂದವೇ? ಗೊತ್ತಿಲ್ಲ. ಪ್ರೀತಿಯ ವಿಶ್ಲೇಷಣೆಗಿಂತ ಸುಮ್ಮನೆ ಪ್ರೀತಿಸುತ್ತಾ ಸಾಗೋಣ..ಅದುವೇ ಪ್ರೀತಿ ಇರಬಹುದು.
[ಶಿವಮೊಗ್ಗಾದ ’ನೆನಪು ಪ್ರಕಾಶನ’ದವರು ೨೦೦೩ ರ ವ್ಯಾಲೈಂಟೈನ್ ಡೇ ಯ ಸಂದರ್ಭದಲ್ಲಿ ಕೆ. ಗಿರೀಶ್ ಸಂಪಾದಕತ್ವದಲ್ಲಿ
ಪ್ರೀತಿಯ ಕುರಿತಂತೆ ’ಪ್ರೀತಿಗಾಗಿ’ ಎಂಬ ಲೇಖನ ಸಂಕಲನವೊಂದನ್ನು ಹೊರತಂದಿದ್ದರು. ಅದರಲ್ಲಿ ಪ್ರಕಟವಾಗಿದ್ದ ಲೇಖನ]
10 comments:
ಕೆ. ಗಿರೀಶರು ಅಭಿನಂದನಾರ್ಹರು.
ವಿವಿದ ಮಜಲುಗಳಲ್ಲಿ, ಹಲವು ಕೋನಗಳ ಮೂಲಕ, ತಕ್ಕ ಉದಾಹರಣೆಗಳ ಸಹಿತ ಪ್ರೀತಿಯನ್ನು ತುಂಬ ವಿಸ್ಕೃತವಾಗಿ ವಿವರಿಸಿದ್ದೀರ.
https://m.facebook.com/groups/191375717613653?view=permalink&id=483794418371780&refid=13
ಪ್ರೀತಿಯ ವಿವಿಧ ಆಯಾಮಗಳನ್ನು ನಿಶ್ಚಳವಾಗಿ ಬಣ್ಣಿಸಿದ್ದೀರಿ ಸುಖ ದಾಂಪತ್ಯದ ಮೂಲವನ್ನು ಮನಸಿನಾಳಕ್ಕೆ ಇಳಿಯುವಂತೆ ಮಾಡಿದ ನಿಮಗೆ ಧನ್ಯವಾದ .....
ಪ್ರೀತಿಯೆಂದರೆ ಹೀಗೆಲ್ಲಾ..?!
ಪ್ರಶ್ನೆಗೆ ನಿಮ್ಮದೇ ಉತ್ತರ ನನ್ನಲ್ಲೂ.. ಪ್ರೀತಿಸುತ್ತಾ ಸಾಗೋಣ.. ಇಷ್ಟವಾಯಿತು ಮೇಡಂ...
ಪ್ರೀತಿಯ ವಿಶ್ವರೂಪದ ಬಗ್ಗೆ ಸುಂದರ ಸಂಗ್ರಹ ಯೋಗ್ಯ ಬರಹ.ತುಂಬಾ ಇಷ್ಟವಾಯಿತು.ಪ್ರೀತಿ ಆತ್ಮದ ಗುಣ.ನಾವು ಅದನ್ನು ಕಂಡುಕೊಳ್ಳಬೇಕು.ಧನ್ಯವಾದಗಳು.
ಪ್ರೀತಿಯೆಂದರೆ ಏನೇನೆಲ್ಲ...
ಪ್ರೀತಿಯೆಂದರೆ ಏನೂ ಇಲ್ಲ...
ಇಲ್ಲಿ ಖಾಲಿಯಾಗಿ ಅಲ್ಲೆಲ್ಲೋ ಭರಪೂರ ತುಂಬಿಕೊಳ್ಳುವುದು...
ಪ್ರೀತಿ ಅಂದರೆ ಪ್ರೀತಿ ಅಷ್ಟೇ...
ಚಂದ ಬರಹ...
ಪ್ರೀತಿಗೆ ನಾನಾ ಭಾವಗಳು ತುಂಬಾ ಚೆನ್ನಾಗಿ ತಿಳಿಸಿದ್ದೀರಿ ಮೇಡಂ ಧನ್ಯವಾದಗಳು.
ಹರಿಯಬೇಕು,ಕಳೆದುಹೋಗಬೇಕು,ಕಳೆದುಕೊಳ್ಳಬೇಕು �� Thanks for the write up
ಸಾಧ್ಯವಾದಷ್ಟೂ ಜನರಿಗೆ ಪ್ರೀತಿ ಹಂಚೋಣ. ಪ್ರೀತಿಯ ವಿಶ್ಲೇಷಣೆಗಿಂತ ಸುಮ್ಮನೆ ಪ್ರೀತಿಸುತ್ತಾ ಸಾಗೋಣ...ಸುಂದರ ಅಧ್ಬುತ ಲೇಖನ ಉಷಕ್ಕಾ! ಲವ್ ಯೂ...
ಪ್ರೀತಿಯು ಒಂದು ಬಲವಾದ ಭಾವನೆ.
ಏನಾದರೂ ಒಂದು ದೊಡ್ಡ ಆಸಕ್ತಿ ಮತ್ತು ಆನಂದ.
ಒಬ್ಬ ವ್ಯಕ್ತಿ ಅಥವಾ ಒಬ್ಬರು ಪ್ರೀತಿಸುವ ವಿಚಾರ.
ಪ್ರೇಮಾನುಭವವನ್ನು ಪದಗಳಲ್ಲಿ ವ್ಯಕ್ತಪಡಿಸಲಾಗದು.
ಇಂತಹ ಪ್ರೇಮ ವನ್ನು ಅನುಭವಿಸಲು ಸ್ವಲ್ಪ ಅರಿವು ಅಗತ್ಯ ಇದೆ.
ಅತ್ಯುತ್ತಮ ಲೇಖನ .ಧನ್ಯವಾದಗಳು
Post a Comment