Monday, November 10, 2014

...ಇದ್ದೂ ಇಲ್ಲದಂತಿರುವವರು!




ಸಾಮಾಜಿಕವಾಗಿ, ವೈಯಕ್ತಿಕವಾಗಿ ಇತ್ತೀಚೆಗೆ ನನ್ನನ್ನು ಅಲ್ಲಾಡಿಸಿಬಿಟ್ಟ ಎರಡು ಘಟನೆಗಳೆಂದರೆ ಕಂಬಾಲಪಲ್ಲಿ ಪ್ರಕರಣ ಮತ್ತು ರಾಮಚಂದ್ರಪುರ ಮಠದಲ್ಲಿ ನಡೆಯಿತ್ತೆನ್ನಲಾದ ಲೈಂಗಿಕ ಹಗರಣ.
ಈ ಎರಡು ಘಟನೆಗಳನ್ನೇ ಯಾಕೆ ಮುಖ್ಯವಾಗಿ ತೆಗೆದುಕೊಂಡೆನೆಂದರೆ ಇಲ್ಲಿ ಬಲಿಪಶುವಾಗಿದ್ದವರು ಸಮಾಜದ ಅಸಡ್ಡೆಗೆ ಒಳಗಾದ ದಲಿತರು ಮತ್ತು ಪುರುಷಪ್ರಧಾನ ಸಮಾಜವ್ಯವಸ್ಥೆಯಲ್ಲಿ ದಲಿತರಂತೆಯೇ ದನಿಯಿಲ್ಲದೆ ಬದುಕುತ್ತಿರುವ ಮಹಿಳಾ ಸಮೂಹದ ಒಳ ತುಡಿತಗಳು. ಮುಖ್ಯವಾಗಿ ಈ ಘಟನೆಯನ್ನು ನಿಯಂತ್ರಿಸಿದ್ದು ಧರ್ಮ ಮತ್ತು ಜಾತಿಯ ಶಕ್ತಿಗಳು.
ನನಗೀಗಲೂ ಚೆನ್ನಾಗಿ ನೆನಪಿದೆ.
ಆಗ ನಾನಿನ್ನೂ ಪುಟ್ಟ ಬಾಲೆ. ನಮ್ಮ ಮನೆಯಲ್ಲಿ ಕೆಲಸ ಮಾಡುತ್ತಿದ್ದ ಕರಿಯನ ಮಗ ಕುಂಡ ತನ್ನಪ್ಪನ ಜೊತೆ ನಮ್ಮ ಮನೆಗೆ ಬರುತ್ತಿದ್ದ. ಆಗೆಲ್ಲಾ ಹರಿಜನರಿಗೆ ಈಗಿನಂತೆ ಸರಕಾರದಿಂದ ವಿಶೇಷ ಸವಲತ್ತುಗಳಿರಲಿಲ್ಲ. ಹಾಗಾಗಿ ಅವರದು ಬಡತನದ ಬಾಳು. ನಮ್ಮ ಮನೆಯಲ್ಲಿ ಹರಿಜನರು ನಮ್ಮ ಮನೆಯೊಳಗೆ ಬರುತ್ತಿರಲಿಲ್ಲ ಎಂಬುದನ್ನು ಬಿಟ್ಟರೆ ಅವರಿಗೆ ಪ್ರತ್ಯೇಕವಾದ ತಟ್ಟೆ ಲೋಟಗಳನ್ನೇನೂ ಇಡುತ್ತಿರಲಿಲ್ಲ.ನಾವು ಊಟ ಮಾಡುತ್ತಿರುವುದೇ ಅವರಿಗೂ ಊಟ. ನಮಗೆ ನಮ್ಮನೆಯ ಪಿಂಗಾಣಿ ಬಟ್ಟಲಲ್ಲಿ ಊಟ. ಅವರಿಗೆ ಹಾಳೆ ಅಥವಾ ಬಾಳೆಯಲ್ಲಿ ಊಟ..ಅವರು ಬಿಸ್ನೀರು ಕೊಟ್ಟಿಗೆಯಲ್ಲಿ ಊಟ ಮಾಡುತ್ತಿರುವಾಗ ನಾನು ನನ್ನ ಬಟ್ಟಲನೆತ್ತಿಕೊಂಡು ಅಲ್ಲಿಗೆ ಹೋಗಿ ಊಟ ಮಾಡುತ್ತಿದ್ದುಂಟು. ಕೊಟ್ಟಿಗೆ ಎಂದರೆ ದನದ ಕೊಟ್ಟಿಗೆಯ ನೆನಪು ನಿಮಗೆ ಬರಬಹುದು. ಆದರೆ ಇದು ಅದಲ್ಲ..ಬಿಸ್ನೀರು ಕೊಟ್ಟಿಗೆಯೆಂದರೆ. ನಮ್ಮ ಮನೆಗಿಂತಲೂ ದೊಡ್ಡದಾದ ಎರಡು ಮಾಡಿನ ಕಟ್ಟಡವದು. ಅದರಲ್ಲಿ ಎರಡು ಪಾರ್ಟೀಷನ್ ಇರುತ್ತಿತ್ತು. ಒಂದರಲ್ಲಿ ಸ್ನಾನದ ರೂಂ .ರೂಂ ಅಂದರೆ ಮತ್ತೆ ಕಲ್ಪನೆಗೆ ಎಡೆ ಕೊಡದಿರಿ. ಅಲ್ಲಿ ದೊಡ್ಡದೊಂದು ತಾಮ್ರದ ಹಂಡೆ. ಪಕ್ಕದಲ್ಲೇ ಹಾಳೆ ಕೊತ್ತಳಿಕೆ, ಸೌದೆಗಳನ್ನು ಒಟ್ಟಿ ಇಡಲು ಸ್ವಲ್ಪ ಜಾಗ. ಈ ರೂಂ ನ ಏಳೆಂಟು ಪಟ್ಟು ದೊಡ್ಡದಾದ ಇನ್ನೊಂದು ರೂಂ. ಅಲ್ಲಿ ಮದ್ಯದಲ್ಲಿ ಭತ್ತ ಕುಟ್ಟುವ ಜಾಗ. ಒನಕೆಯನ್ನು ಮೇಲಕ್ಕೆತ್ತಲು ಜಾಗ ಬೇಕಾದ ಕಾರಣ ಅಲ್ಲಿ ಅಟ್ಟವಿಲ್ಲ. ಆದರೆ ಆ ಹಾಲ್ ನ ಅರ್ಧ ಭಾಗಕ್ಕೆ ಅಟ್ಟವುಂಟು. ಅದರ ತುಂಬಾ ಬೈ ಹುಲ್ಲನ್ನು ತುಂಬಿ ಇಡುತಿದ್ದರು. ಅದು ಜಾನವಾರುಗಳಿಗೆ ಮಳೆಗಾಲದ ಮೇವು. ಕೊಟ್ಟಿಗೆಯ ಮೂಲೆಗಳಲ್ಲಿ ಹಾರೆ, ಪಿಕ್ಕಾಸು, ನೊಗ, ನೇಗಿಲು ವಿವಿಧ ಆಕರದ ಹೆಡಿಗೆಗಳು ಮುಂತಾದ ಕೃಷಿ  ಸಲಕರಣೆಗಳನ್ನು ಒರಗಿಶಿ ಇಡುತ್ತಿದ್ದರು. ಕೊಟ್ಟಿಗೆಯ ಅರ್ಧ ಗೋಡೆಗಳಲ್ಲಿ ಕೋಳಿ ಹುಂಜಗಳು ಗತ್ತಿನಿಂದ  ಪಟಪಟನೆ ರೆಕ್ಕೆ ಬಡಿಯುತ್ತಾ, ಹೇಂಟೆ ಕೋಳಿಗಳನ್ನು ಓಡಿಸುವುದು ಸಾಮಾನ್ಯ ದೃಶ್ಯವಾಗಿತ್ತು.
ಇಂತಪ್ಪ ಪರಿಸರದಲ್ಲಿ ಕುಂಡ ನಮ್ಮ ಜೊತೆ ಆಟವಾಡುತ್ತಿದ್ದ. ಒಂದು ದಿನ ಅವನ ಬೆರಳಿಗೆ ಕತ್ತಿಯಿಂದ ಗಾಯವಾಯಿತು. ರಕ್ತ ಒಸರತೊಡಗಿತು. ಅಲ್ಲೇ ಇದ್ದ ನಾನು ತಕ್ಷಣ ಪಕ್ಕದಲ್ಲಿದ್ದ ಕಮ್ಯೂನಿಸ್ಟ್ ಗಿಡದ [ಈ ಕಮ್ಯೂನಿಸ್ಟ್ ಗಿಡದ ರಸವೆಂಬುದು ಸರ್ವ ಗಾಯಗಳಿಗೂ ರಾಮಬಾಣ ಎಂಬುದು ನಮ್ಮ ನಂಬಿಕೆ..ಅದನ್ನು ಸಣ್ಣಗೆ ಕೊಚ್ಚಿ ಹಾಕಿದರೆ ಹೊಂಡದಲ್ಲಿರುವ ಮೀನುಗಳು ಮತ್ತಿಗೆ ಒಳಗಾಗಿ ನಮ್ಮ ಬುಟ್ಟಿ ಸೇರುತ್ತಿದ್ದುದು ನನ್ನ ಸ್ವಾನುಭವ!] ಬಳಿ ಹೋಗಿ ಅದರ ಚಿಗುರೆಲೆಗಳನ್ನು ಕಿತ್ತು ಅಂಗೈಯಲ್ಲಿ ಹಿಸುಕಿ ರಸಬರ್ಸಿ ಅದಕ್ಕೆ ನನ್ನ ಎಂಜಲನ್ನು ಸೇರಿಸಿ,ಎಂಜಲು ಮಿಶ್ರಿತ ರಸವನ್ನು ಅವನ ಗಾಯಕ್ಕೆ ಹಾಕಿದೆ..ಅವನು ಉರಿ ಉರಿ ಎನ್ನುತ್ತಾ ಕೈ ಕಾಲು ಬಡಿಯುತಾ ಅಳತೊಡಗಿದ. ನಾನು ಬಿಡದೆ ಅವನ ಕೈಹಿಡಿದೆಳೆದು ಅದೇ ಸೊಪ್ಪಿನ ಮಿಶ್ರಣವನ್ನು ಅವನ ಗಾಯದ ಮೇಲಿಟ್ಟು ನನ್ನ ರಿಬ್ಬನಿನಿಂದ ಸುತ್ತಿ ಕಟ್ಟು ಹಾಕಿದೆ..ಇದೆಲ್ಲಾ ಕ್ಷಣಾರ್ಧದಲ್ಲಿ ನಡೆದು ಹೋಗಿತ್ತು. ಅಷ್ಟರಲ್ಲಾಗಲೇ ಅವನ ಬೊಬ್ಬೆಗೆ ದೊಡ್ಡವರೆಲ್ಲಾ ಅಲ್ಲಿಗೆ ಬಂದು ನನ್ನ ಉಪಚಾರವನ್ನು ನಗುತ್ತಾ ನೋಡುತ್ತಿದ್ದರು..ಕರಿಯ ನಗುತ್ತಾ ’ಎಡ್ಡೆ ಬಾಲೆ [ಒಳ್ಳೆ ಮಗು] ಎಂದರೆ ನಮ್ಮ ಅಮ್ಮನಂತೂ ಇಂದಿಗೂ ಈ ಘಟನೆಯನ್ನು ಉದಾಹರಿಸುತ್ತಾ ’ನಮ್ಮ ಉಷಾನಿಗೆ ಜಾತಿ ಗೀತಿ ಅನ್ನೊದು ಹುಟ್ಟಿನಿಂದಲೇ ಇರಲಿಲ್ಲ’ ಅಂತ ಹೇಳುತ್ತಾರೆ. ಅ ಹೇಳಿಕೆಯಲ್ಲಿ ಯಾವ ಭಾವ ಹುದುಗಿದೆಯೆಂಬುದು ನನಗಿಂದಿಗೂ ಅರ್ಥವಾಗಿಲ್ಲ.
ಇದನ್ನಿಲ್ಲಿ ಯಾಕೆ ಹೇಳುತ್ತಿದ್ದೇನೆಂದರೆ ಮೂರು ದಶಕಗಳ ಹಿಂದೆ ಹರಿಜನರು ನಮ್ಮಿಂದ ದೈಹಿಕವಾಗಿ ದೂರವಿದ್ದರು. ಆದರೆ ಮಾನಸಿಕವಾಗಿ ಹತ್ತಿರವಿದ್ದರು. ನಮ್ಮ ಮತ್ತು ಅವರ ನಡುವೆ ಮಾನವೀಯ ಸಂಬಂಧವಿತ್ತು. ಆದರೆ ಇಂದು ಸರಕಾರ ನೀಡಿದ ಹಲವು ಸೌಲಭ್ಯಗಳಿಂದಾಗಿ ಅವರು ಸ್ವಾಭಿಮಾನದಿಂದ ತಲೆಯೆತ್ತಿ ಬದುಕುತ್ತಿದ್ದಾರೆ..ಊರಿಗೆ ಹೋದಾಗ ಈಗಲೂ ನನಗೆ ಕರಿಯ ಸಿಗುತ್ತಾನೆ. ಪ್ರೀತಿಯಿಂದ ನನ್ನ ಗಂಡ ಮಕ್ಕಳ ಬಗ್ಗೆ ವಿಚಾರಿಸಿಕೊಳ್ಳುತ್ತಾನೆ. ಕುಂಡ ಪರಿಚಯದ ಗೌರವನಗು ಬೀರುತ್ತಾನೆ..
ನಮ್ಮ ನಡುವೆ ಗೋಡೆಯೊಂದು ಎದ್ದಿದೆ. ಓಲೈಕೆಯ ಪಕ್ಷ ರಾಜಕಾರಣ ಗ್ರಾಮ ಪಂಚಾಯತ್ ಮಟ್ಟದಲ್ಲೇ ಜನರ ಮನಸುಗಳನ್ನು ಒಡೆದಿದೆ.
ಕಂಬಾಲಪಲ್ಲಿ ಘಟನೆಗೆ ಬನ್ನಿ.
೨೦೦೦ನೇ ಇಸವಿ ಮಾರ್ಚ್೧೧.
ಕೋಲಾರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಕಂಬಾಲ ಪಲ್ಲಿಯಲ್ಲಿ ಹಾಡು ಹಗಲೇ ಏಳು ಮಂದಿ ದಲಿತರ ಸಜೀವ ದಹನವಾಯ್ತು. ಕೇವಲ ಕುರಿಯ ನೆಪದಲ್ಲಿ ಸ್ಥಳಿಯ ರೆಡ್ಡಿ ಜನಾಂಗ ಮತ್ತು ದಲಿತರ ನಡುವಿನ ಮುಸುಕಿನ ಗುದ್ದಾಟ ಪೈಶಾಚಿಕ ಕೃತ್ಯದಲ್ಲಿ ಅಂತ್ಯಗೊಂಡಿತ್ತು.
ಸಮಸ್ತ ನಾಗರಿಕ ಸಮಾಜ ತಲೆತಗ್ಗಿಸುವ ವಿಚಾರವಿದು. ಆದರೆ ಆದದ್ದೇನು. ಹದಿನಾಲ್ಕು ವರ್ಷಗಳ ನ್ಯಾಯಾಲಯದ ಹೋರಾಟದ ಬಳಿಕ ಆರೋಪಿ ಸ್ಥಾನದಲ್ಲಿದ್ದ ೩೨ ಮಂದಿಯನ್ನು ಆರೋಪ ಮುಕ್ತಗೊಳಿಸಲಾಯ್ತು. ಅಂದರೆ ಆ ಘಟನೆ ನಡೆದೆ ಇಲ್ಲವೇ? ಅಂದು ಸಜೀವವಾಗಿ ಸತ್ತು ಹೋದ ಆ ಏಳು ಮಂದಿ ಜೀವ ಅಷ್ಟು ನಿಕೃಷ್ಟವಾಗಿ ಹೋಯಿತೆ?ಯಾರ ಮುಂದೆ ಈ ಪ್ರಶ್ನೆಗಳನ್ನು ಇಡಬೇಕು?
ನ್ಯಾಯಾಸ್ಥಾನದಲ್ಲಿ ವಿರಾಜಮಾನರಾಗಿರುವವರು ಒಮ್ಮೊಮ್ಮೆ ಯೋಚಿಸುವ ಧಾಟಿಯನ್ನು ನೆನೆದರೆ ಬೆಚ್ಚಿ ಬೀಳುವಂತಾಗುತ್ತದೆ. ಬನ್ವರಿಲಾಲ್ ಕೇಸಿನಲ್ಲಿ ಅಪಾದೀತರನ್ನು ಖುಲಾಸೆ ಮಾಡುವಾಗ ನ್ಯಾಯಾಧೀಶರು ಕೊಟ್ಟ ಕಾರಣ, ಬನ್ವಾರಿಲಾಲ್ ಅಸ್ಪರ್ಶ್ಯಳು. ಹಾಗಾಗಿ ಆಕೆಯ ಮೇಲೆ ಮೇಲ್ಜಾತಿಯವರು ಅತ್ಯಾಚಾರವೆಸಗಲು ಸಾಧ್ಯವಿಲ್ಲವೆಂದು.
ನೀವು ಏನೇ ಅನ್ನಿ ಬಹುತೇಕ ಪುರುಷರ ದೃಷ್ಟಿಯಲ್ಲಿ ಹೆಣ್ಣು ಒಂದು ಉಪಭೋಗದ ವಸ್ತು. ಅವಳು ಗಂಡನ್ನು ರಂಜಿಸುವುದಕ್ಕಷ್ಟೇ ಸೀಮಿತಳು.
ಮಹಿಳಾಸಮೂಹವನ್ನೇಕೆ ಈ ಒಂದು ಘಟನೆಗೆ ತಳುಕು ಹಾಕುತ್ತೀರಿ, ನಾವವರಿಗೆ ನಮ್ಮ ಸಂಸ್ಕ್ರುತಿಯಲ್ಲಿ ಬಹು ಉನ್ನತವಾದ ಸ್ಥಾನವನ್ನು ನೀಡಿದ್ದೇವೆ ಎಂದು ನೀವು ಹೇಳಬಹುದು.ಒಂದರ್ಥದಲ್ಲಿ ಅದು ನಿಜವೇ..ಯಾಕೆಂದರೆ ಆಕೆಯನ್ನು ಕೌಟುಂಬಿಕ ವ್ಯವಸ್ಥೆಯೊಳಗೆ ಬಂದಿಸಿಡುವುದಕ್ಕಾಗಿ ಭ್ರಮಾತ್ಮಕವಾದ ಒಂದು ಪರಿಸರವನ್ನು ನಿರ್ಮಿಸಲೇ ಬೇಕಾದ ಅನಿವಾರ್ಯತೆ ಪುರುಷ ಸಮೂಹಕ್ಕಿತ್ತು. ಹಾಗಾಗಿ ಆಕೆಯನ್ನು ದೇವಿ ಅಂದರು..ಗೃಹ ಸ್ವಾಮಿನಿ ಅಂದರು. ತಾಯ್ತನವನ್ನು ವಿಜೃಂಭಿಸಿ ಅವಳನ್ನು ಭಾವನಾತ್ಮಕವಾಗಿ ಬಂದಿಸಿಟ್ಟರು.ಆಕೆಯ ತನ್ನ ಕರ್ತುತ್ವ ಶಕ್ತಿಯನ್ನೇ ವಿಸ್ಮ್ರುತಿಗೆ ತಳ್ಳಿ ಅವಳನ್ನು ಸಂಸ್ಕೃತಿ ರಕ್ಷಣೆಯ ಕಾವಲುಗಾರರನ್ನಾಗಿ ಮಾಡಿಬಿಟ್ಟರು. ವಾಸ್ತವದಲ್ಲಿ ಅವಳು ಗಂಡಿನ ತೊತ್ತು.

ತೀರ ಇತ್ತೀಚೆಗೆ ನಡೆದ ರಾಘವೇಶ್ವರ ಭಾರತಿ ಪ್ರಕರಣವನ್ನೇ ನೋಡಿ.
ಪ್ರೇಮಲತಾ ದಂಪತಿಗಳ ಮೇಲಿರುವುದು ರಾಮಕಥಾ ಕಾರ್ಯಕ್ರಮಕ್ಕೆ ತೆರಳಬಾರದು ಎಂದು ಕಲಾವಿದರಿಗೆ ಬೆದರಿಕೆ ಹಾಕಿದ ಆರೋಪ. ಐ.ಪಿ.ಸಿ ೫೦೬ ಸೆಕ್ಷನ್ ಅಡಿಯಲ್ಲಿ ದಾಖಲಾದ ಕೇಸ್. ಇದಕ್ಕೆ ಬಂದನದ ಅವಶ್ಯಕತೆಯೇ ಇಲ್ಲ. ಹಾಗೊಂದು ವೇಳೆ ಬಂದಿಸಿದರೂ  ಸುಲಭದಲ್ಲಿ ಬೇಲ್ ಸಿಗಬಹುದಾದ ಈ ಪ್ರಕರಣ್ದಲ್ಲಿ ಪ್ರೇಮಲತಾ ದಂಪತಿಗಳು ಸರಿ ಸುಮಾರು ಒಂದು ತಿಂಗಳವರೆಗೂ ಜೈಲಿನಲ್ಲಿದ್ದರು. ಆದರೆ ಅತ್ಯಾಚಾರದ ಆರೋಪ ಹೊತ್ತ ಸ್ವಾಮೀಜಿಯ ಬಂಧನ ಇದುವರೆಗೂ ಆಗಿಲ್ಲ. ಅತ್ಯಾಚಾರದ ಆರೋಪಿಯನ್ನು ತಕ್ಷಣ ಬಂದಿಸಬೇಕು ಮತ್ತು ಅದಕ್ಕೆ ಜಾಮೀನಿಲ್ಲ. ಅದರೆ ಪ್ರೇಮಲತಾ ಮಗಳು ತನ್ನ ತಾಯಿಯ ಮೇಲೆ ಸ್ವಾಮೀಜಿ ಲೈಂಗಿಕ ಅತ್ಯಾಚಾರವೆಸಗಿದ್ದಾರೆಂದು ದೂರು ನೀಡಿ ಎರಡು ತಿಂಗಳು ಕಳೆದರೂ ಸ್ವಾಮೀಜಿಯ ಬಂದನವಾಗಿಲ್ಲ. ಈ ನಡುವೆ ಈ ಪ್ರಕರಣದ ನಿಮಿತ್ತವಾಗಿ ಒಂದು ಒಂದು ಸಾವು ಕೂಡಾ ಸಂಭವಿಸಿದೆ. ಅದರಲ್ಲಿಯೂ ಆರೋಪಿಯಾಗಿರುವ ಈ ಸ್ವಾಮೀಜಿಯ ಬಂಧನವಾಗದೆ ಈಗಾಗಲೇ ಎರಡು ತಿಂಗಳು ಉರುಳಿಹೋಗಿದೆ.  ವಿಚಾರಣೆಗೆ ಒಳಪಡುವ ಪ್ರತಿ ಹಂತದಲ್ಲಿಯೂ ಮೇಲಿಂದ ಮೇಲೆ ನ್ಯಾಯಲಯದಿಂದ ತಡೆಯಾಜ್ನೆ ತರುವುದನ್ನು ಗಮನಿಸುವಾಗ ನ್ಯಾಯದ ತಕ್ಕಡಿ ಯಾರ ಕಡೆಗೆ ವಾಲುತ್ತಿದೆಯೆಂಬುದು ಅರ್ಥವಾಗದೇ?
ಇನ್ನೊಂದು ಪ್ರಮುಖ ಅಂಶವನ್ನಿಲ್ಲಿ ಗಮನಿಸಬೇಕು. ಮಹಿಳೆಯೊಬ್ಬಳು ತನಗಾದ ಅನ್ಯಾಯದ ವಿರುದ್ಧ ದನಿಯೆತ್ತೆದಾಗ ಆಕೆಯನ್ನು ಹಣಿಯಲು ಸಿದ್ಧರಾಗಿ ನಿಂತಿರುವವರು ಮೊದಲು ಮಾಡುವ ಕೆಲಸವೆಂದರೆ ಆಕೆಯ ಚಾರಿತ್ರ್ಯ ಹನನಕ್ಕೆ ಮುಂದಾಗುವುದು..ಈಗ ಪ್ರೇಮಲತಾ ಕೇಸಿನಲ್ಲಿ ಆಗುತ್ತಿರುವುದು ಅದೇ..ಆಕೆಯನ್ನು ಮಾತ್ರವಲ್ಲ. ಆಕೆಯ ಹೆಣ್ಣುಮಕ್ಕಳ ವಿಚಾರದಲ್ಲಿಯು ಅದೇ ಕಮ್ಯೂನಿಟಿಗೆ ಸೇರಿದ ರೋಗಗ್ರಸ್ತ ಮನಸ್ಸುಗಳು ಅದನ್ನೇ ಮಾಡುತ್ತಿವೆ. ಆಕಾಶಕ್ಕೆ ಉಗಿದರೆ ಬೀಳುವುದು ಯಾರಮೇಲೆ? ಈ ಬುದ್ಧಿಗೇಡಿಗಳಿಗೆ ಅಷ್ಟೂ ತಿಳಿಯಬಾರದೆ? ಆ ಕಮೂನಿಟಿಯಲ್ಲಿರುವ ವಿಚಾರವೆತ್ತವರು ಏನು ಮಾಡುತ್ತಿದ್ದಾರೆ?
ಹೌದು.. ಈ ದೇಶದಲ್ಲಿ ಹೆಣ್ಣುಮಕ್ಕಳು ಮತ್ತು ದಲಿತರು ಒಂದೇ ಕೆಟಗರಿಯಲ್ಲಿ ನಿಲ್ಲುತ್ತಾರೆ.ಜಾತೀಯ ಕಾರಣಕ್ಕಾಗಿ ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು ದುರ್ಭಲರು. ಲಿಂಗತಾರಮ್ಯದ ಕಾರಣಕ್ಕಾಗಿ ಮಹಿಳೆಯರು ದುರ್ಭಲರು. ಅವರು ಸವಾರಿ ಮಾಡಿಕೊಳ್ಳಲ್ಲಷ್ಟೇ ಅರ್ಹರು.ಅವರಿಗೆ ನ್ಯಾಯ ಬೇಡುವ ಹಕ್ಕಿಲ್ಲ. ಅವರಿಗೆ ನ್ಯಾಯ ನೀಡಲು ಸಂಬಂಧಪಟ್ಟವರಿಗೆ ಮನಸ್ಸಿಲ್ಲ. ಒಬ್ಬ ಮಹಿಳೆಯಾಗಿ ನನಗನ್ನಿಸುತ್ತಿರುವುದು ಇದು..ಹಾಗಾಗಿಯೇ ನನ್ನ ದಲಿತ ಬಂಧುಗಳಲ್ಲಿ ನಾನು ಹೇಳುತಿರುವುದು; ಅಪ್ಪಗಳಿರಾ..ನಾವೂ ನೀವೆಲ್ಲಾ ಒಂದೇ..ನಾವು ಈ ಸಮಾಜದಲ್ಲಿ ಇದ್ದೂ ಇಲ್ಲದಂತಿರುವವರು.ಅಸ್ಪರ್ಶ್ಯರು.
ಕೆಳ ಜಾತಿಯಲ್ಲಿ ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಯ ಸ್ಮೃತಿ ಕೋಶದಲ್ಲಿಯೂ ದಾಖಲಾದ ಹಲವಾರು ಕಹಿ ಸತ್ಯಗಳಿರುತ್ತವೆ. ಹಾಗಾಗಿಯ ನಮ್ಮ ಬಾಗಲಕೋಟದ ಬಿ.ಜೆ.ಪಿ ಸಂಸದ ರಮೇಶ್ ಜಿಗಜಿಣಗಿಯವರು ಬಸವನ ಬಾಗೇವಾಡಿಯ ಬಸವೇಶ್ವರ ದೇವಾಲಯದ ಒಳಗೆ ಹೋಗಲು ಮನಸು ಮಾಡುವುದಿಲ್ಲ. ಹೊರಗಿನಿಂದಲೇ ಕೈಮುಗಿದು ಬರುತ್ತಾರೆ..ಅಧಿಕಾರ ಸ್ಥಾನ ಮತ್ತು ಅರ್ಥಿಕ ಸ್ವಾವಲಂಬನೆಯೆಂಬುದು ಎಲ್ಲಾ ಸಂದರ್ಭಗಳಲ್ಲಿ ಜಾತಿಯಾಧಾರಿತ ಸಾಮಾಜಿಕ ವ್ಯವಸ್ಥೆಯಲ್ಲಿ ಮನ್ನಣೆಯನ್ನು ತಂದುಕೊಡುವುದಿಲ್ಲ

ಕಾನೂನು ಕತ್ತೆಯಿದ್ದಂತೆ ಎಂಬ ಮಾತೊಂದಿದೆ. ಅದಕ್ಕೆ ಹೇರನ್ನು ಹೊರುವುದಷ್ಟೇ ಗೊತ್ತು. ಅದರಲ್ಲಿರುವ ಹೂರಣ ಏನೆಂಬುದುದು ಅದಕ್ಕೆ ಬೇಕಾಗಿಲ್ಲ.ಅದು ಸಾಕ್ಸ್ಯ ಮತ್ತು ಸಾಂದರ್ಭಿಕ ಸಾಕ್ಷ್ಯಗಳನ್ನ್ನಷ್ಟೇ ನೋಡುತ್ತದೆ. ಆದರೆ ಸಾಕ್ಷ್ಯಗಳಿಗೂ ಮೀರಿದ್ದು ಇನ್ನೆನೋ ಇರುತ್ತೆ ಅಲ್ವಾ? ನ್ಯಾಯ ಸ್ಥಾನದಲ್ಲಿ ಕೂತುಕೊಳ್ಳುವವರಿಗೆ ಮಾತೃ ಹೃದಯ ಇರಬೇಕು..ಅದು ದುರ್ಭಲರತ್ತ ವಿಶೇಶಗಮನಕೊಡಬೇಕು.ಅದಕ್ಕೆ ಲಿಂಗ ತಾರತಮ್ಯದ ಬಗ್ಗೆ ಒಳನೋಟವಿರಬೇಕು . ಬಹುಶಃ ಬ್ರಿಟೀಶ್ ನೋಟದಲ್ಲಿರುವ ನಮ್ಮ ಇಂಡಿಯನ್ ಪೀನಲ್ ಕೋಡ್ ಅನ್ನು ಮತ್ತೊಮ್ಮೆ ಪರಾಮಾರ್ಶಿಸಬೇಕಾದ ಅವಶ್ಯಕತೆಯಿದೆಯೇನೋ. ಅಲ್ಲಿ ನ್ಯಾಯಾಲಯದ ಜೊತೆಗೆ ಜ್ಯೂರಿಗಳು ಇರುತ್ತಾರೆ. ನ್ಯಾಯದಾನದ ಪ್ರಕ್ರಿಯೆಯಲ್ಲಿ ಸಮಾಜದ ವಿವಿಧ ವರ್ಗವನ್ನು ಪ್ರತಿನಿಧಿಸುವ ಜ್ಯೂರಿಗಳೂ ಇದ್ದಾಗ ”ಕಾನೂನಿಗೆ ಕಣ್ಣಿಲ್ಲ’ ಎಂಬ ನಾಣ್ನುಡಿ ವ್ಯಂಗಾರ್ಥದಲ್ಲಿ ಬಳಸುವುದು ತಪ್ಪಬಹುದೆನೋ!



[ನವೆಂಬರ್ ೬ರಂದು ಶಿವಮೊಗ್ಗದಲ್ಲಿ ಬಿಡುಗಡೆಯಾದ ’ಸ್ವತಂತ್ರ ಪತ್ರಿಕೆಗಾಗಿ ಬರೆದ ಲೇಖನ]





4 comments:

sunaath said...

ನ್ಯಾಯವಿತರಣೆಯ ಸಂದರ್ಭದಲ್ಲಿ ನ್ಯಾಯಪ್ರಜ್ಞೆ ಹಾಗು ಸಾಮಾಜಿಕ ಪ್ರಜ್ಞೆ ಎರಡೂ ಇರುವುದು ಅವಶ್ಯಕ. ನ್ಯಾಯಾಧೀಶರಿಗೆ ನ್ಯಾಯಪ್ರಜ್ಞೆ ಇದೆ ಎಂದು ಭಾವಿಸಲೇ ಬೇಕಾಗುತ್ತದೆ. ಇನ್ನು ರಾಜಕಾರಣಿಗಳಿಂದ ನೇಮಿತರಾದ ಜ್ಯೂರಿಗಳಿಗೆ ಸಾಮಾಜಿಕ ಪ್ರಜ್ಞೆ ಇರದಿದ್ದರೆ, ನ್ಯಾಯದಾನವು ಕೇವಲ ಪ್ರಹಸನವಾಗುವ ಸಾಧ್ಯತೆ ಇದೆಯಲ್ಲವೆ?

ಮನಸಿನಮನೆಯವನು said...

ಸ್ಮೃತಿ ಕೋಶದಲ್ಲಿ ಕೆಲವು ಕಹಿಸತ್ಯಗಳು ಇರುತ್ತವೆ, ಕೆಳಜಾತಿಯ ಕೆಲವರು ಮೇಲ್ಜಾತಿಯವರಿಂದ ಅಂತರ ಕಾಯ್ದುಕೊಳ್ಳುತ್ತಾರೆ(ಮೇಲ್ಜಾತಿಯವರಿಗಿಂತ ಅಂತಸ್ತಿನಲ್ಲಿ ಮೇಲಿದ್ದರು ಕೂಡ ).. ಕೆಲವರು ಬಿಡಿ ಈಗ ಅವರಿಗೆಂದೇ ಸಿಗುವ ಸವಲತ್ತುಗಳಿಂದ ಬಲು ಸ್ವಲ್ಪ ಹೆಚ್ಚಿದಂತೆ(ಕೊಬ್ಬಿದಂತೆ ಎನ್ನಬಹುದೇನೋ) ತೋರುತ್ತಾರೆ.. ತಾವು ದಲಿತರು ತಮ್ಮ ಮೇಲೆ ಮೇಲ್ಜಾತಿಯವರು ಏನೇ ಮಾಡಲು ಹಿಂದೂ ಮುಂದು ನೋಡುತ್ತಾರೆ ಎಂದು ತಿಳಿದು ಮನಸೋ ಇಚ್ಛೆ ನಡೆಯುವವರೂ ಇದ್ದಾರೆ.. ನನ್ನ ಗೆಳೆಯನೊಬ್ಬ ಒಮ್ಮೆ ಯಾವುದೊ ಕೆಲಸದ ಮೇಲೆ ಜೈಲಿಗೆ ಹೋಗಿ ಅಲ್ಲಿ ಒಂದು ಬೋರ್ಡ್ ನಲ್ಲಿ ಇದ್ದುದನ್ನು ನೋಡಿ ಬಂದು ಹೇಳುತ್ತಿದ್ದ: ಅವುಗಳನ್ನು ಓದ್ತಾ ಇದ್ದರೆ ನಾವು ದಲಿತರನ್ನು ಕಣ್ಣೆತ್ತಿಯೂ ನೋದಬಾರದಪ್ಪ , ನೋಡಿದರೆ ನನ್ನನ್ನು ಹ್ಯೀಗೆ ನೋಡಿದರು ಅಂತ ಅವ್ರು ಕಂಪ್ಲೇಂಟ್ ಮಾಡಬಹುದು ಎಂದಿದ್ದ..
ಕಾರಂತರು ಒಂದು ಪುಸ್ತಕದಲ್ಲಿ ಹೇಳಿದ್ದಾರೆ .." ನಾವು ನಮ್ಮ ಸಮಾಜದಲ್ಲಿ ಬೆಳೆದು ಬಂದ ರೀತಿ ನಮ್ಮ ಮೇಲೆ ತುಂಬಾ ಪ್ರಭಾವ ಬೀರಿರುತ್ತದೆ.. ಯಾರಾದರೂ ದಲಿತರ ಮಗು ಬೀದಿಯಲ್ಲಿ ಜಾರಿಬಿದ್ದಾಗ ಆತನನ್ನು ಮೇಲೆತ್ತಲು ಹೊರಡಬೇಕೆಂದರೂ ಆಟ ದಲಿತನೆಂಬ ಕಾರಣಕ್ಕೆ ನನ್ನ ಹೆಜ್ಜೆಗಳನ್ನು ಕೀಳಲಾಗಿಲ್ಲ" ಎಂದು.
ಒಳ್ಳೆಯ ಲೇಖನ.. ಹೌದು ಈಗಿನ ಪಕ್ಷ ಸರ್ಕಾರಗಳು ದಲಿತರ ಮತ್ತು ನಮ್ಮ ಮನಸ್ಸಿನ ನಡುವಿನ ಸೇತುವೆಯನ್ನು ಮುರಿದಿದ್ದಾರೆ.

Badarinath Palavalli said...

ಅರೆರೆ ಇದ್ಯಾವುದು ಮೇಡಂ, ಕಮ್ಯೂನಿಸ್ಟ್ ಗಿಡ? ಇದರ ಬಗ್ಗೆ ನಾನು ತಿಳಿದುಕೊಳ್ಳ ಬೇಕಿದೆ!

’ನಮ್ಮ ಉಷಾನಿಗೆ ಜಾತಿ ಗೀತಿ ಅನ್ನೊದು ಹುಟ್ಟಿನಿಂದಲೇ ಇರಲಿಲ್ಲ’ ಈ ಮಾತನ್ನು ನಾವು ಈಗಲೂ ತಮ್ಮ ಬಗ್ಗೆ ಉದ್ಘರಿಸುತ್ತೇವೆ. ತಮ್ಮ ಮನೆ ಎಂಬ ಪಾಠ ಶಾಲೆಗೆ ನಾನು ಹಲವಾರು ಬಾರಿ ಬಂದುಹೋಗಿದ್ದೇನೆ. ಅಲ್ಲಿ ಮೇಲು ಕೀಳೆಂಬ ಭಾವ ನಿಮ್ಮ ಪರಿವಾರದೊಳಗಿಲ್ಲ.

ಕಾನೂನು ಕತ್ತೆಯಿದ್ದಂತೆ ಎಂಬ ಮಾತು ಹಲವಾರು ಸಂದರ್ಭಗಳಲ್ಲಿ ನಮ್ಮ ಅರಿವಿಗೂ ಬರುತ್ತದೆ. ಕಂಬಾಲಪಲ್ಲಿ, ಕಾಮಸಮುದ್ರ, ಮಲ ಹೊರುವ ಪದ್ಧತಿ, ಹೇಮಶ್ರೀ ಕೊಲೆ, ದೇವದಾಸಿ ಅಥವಾ ಇದೀಗ ರಾಮಚಂದ್ರಾಪುರ ಮಠದ ಸುತ್ತಲೂ ಹಬ್ಬಿದ ಪ್ರೇಮ ಪ್ರಕರಣ!

ಮೊದಲು ನಾವು ಈ ಗತಕಾಲದ ಇಂಗ್ಲೀಶ್ ಕಾನೂನು ಪದ್ಧತಿಯಿಂದ ಹೊರಬರದೆ, ನಮ್ಮದೇ ನೆಲಕೆ ಒಗ್ಗುವ ಕಾನೂನು ರಚಿಸಿಕೊಳ್ಳದೆ, ನ್ಯಾಯವನ್ನು ಸಮಾನವಾಗಿಸಲಾರವು!

shared at:
https://www.facebook.com/photo.php?fbid=602047969839656&set=gm.483794418371780&type=1&theater

suragi \ ushakattemane said...

ಇದನ್ನು ಪೋಸ್ಟ್ ಮಾಡಿ ಹಿಮಾಲಯಕ್ಕೆ ಪ್ರವಾಸ ಹೋಗಿದ್ದೆ. ಮೊನ್ನೆ ಭಾನುವಾರ ಹಿಂತಿರುಗಿದೆ. ಇವತ್ತು ಇಲ್ಲಿಗೆ ಬಂದು ನೋಡಿದರೆ ನಿಮ್ಮ ಕಾಮೆಂಟ್ ಗಳನ್ನು ನೋಡಿ ಖುಷಿಯಾಯ್ತು..
ಮೂವರಿಗೂ ನಾನು ಅಭಾರಿ.