Sunday, March 8, 2015

ಚರಿತ್ರೆಯಲ್ಲಿ ದಾಖಲಾಗದವರು...




ಪ್ರತಿವರ್ಷ ಮಾರ್ಚ್ ೮ ಬಂದೊಡನೆ ನಮಗೆ ಮಹಿಳಾ ದಿನಾಚರಣೆಯ ನೆನಪಾಗುತ್ತದೆ. ಆಗ ನಾವು ವಿವಿಧ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ಮಹಿಳೆಯರ ಬಗ್ಗೆ ಮಾತಾಡುತ್ತೇವೆ. ಅವರ ಬಗ್ಗೆ ಮಾಧ್ಯಮಗಳು ವಿಶೇಷ ಕಾರ್ಯಕ್ರಮಗಳನ್ನು ಬಿತ್ತರಿಸುತ್ತವೆ. ಪತ್ರೆಕೆಗಳು ವಿಶೇಷ ಪುರವಣಿಗಳನ್ನು ತರುತ್ತವೆ. ಪತ್ರಿಕಾ ಕಛೇರಿಗಳು. ಆ ದಿನದ ಮಟ್ಟಿಗೆ ಸಂಪಾದಕರ ಸ್ಥಾನವೂ ಸೇರಿದಂತೆ ಎಲ್ಲಾ ಜವಾಬ್ದಾರಿಗಳನ್ನು ಮಹಿಳಾ ಸಿಬ್ಬಂದಿಗೆ ಬಿಟ್ಟುಕೊಡುತ್ತದೆ. ಈ ಒಂದು ದಿನದ ಉತ್ಸವ ಮೂರ್ತಿಯಾಗಿ ಮಹಿಳೆ ಮೆರೆಯುತ್ತಾಳೆ.
ಇದಿಷ್ಟೇ ಸಾಕೆ?
ಕುಟುಂಬದ ಪರಿಕಲ್ಪನೆಯನ್ನು ಮೂಡಿಸಿದವಳು ಮಹಿಳೆ, ಕುಟುಂಬವನ್ನು ಕಟ್ಟಿ, ಪೋಷಿಸಿ ಅದಕ್ಕೆ ಶಕ್ತಿ ತುಂಬಿಸಿದವಳು ಮಹಿಳೆ. ಆದರೆ ಈಗ ಕುಟುಂಬದಲ್ಲಿ ಅವಳ ಸ್ಥಾನ ಮಾನ ಹೇಗಿದೆ? ಅವಳು ಬರಿಯ ದುಡಿಯುವ ಯಂತ್ರವಾಗಿದ್ದಾಳೆಯೇ? ಕುಟುಂಬ ನಿರ್ವಹಣೆಯಲ್ಲಿ ಅವಳ ಸಹಭಾಗಿಯಾದ ಪುರುಷ ಈಗ ಎಲ್ಲಿ ನಿಂತಿದ್ದಾನೆ? ಈ ಪ್ರಶ್ನೆಗಳನ್ನು ಕೇಳಿಕೊಂಡು ನಗರ ಬದುಕಿನತ್ತ ತಿರುಗಿದಾಗ ಅಲ್ಲಿ ನಮಗೆ ಉತ್ಸಾಹಿ ಮಹಿಳೆ ಕಾಣಿಸುತ್ತಿಲ್ಲ. ಮೇಲ್ನೋಟಕ್ಕೆ ಸಶಕ್ತ ಮಹಿಳೆ ಎಂದು ಕಾಣಿಸಿಕೊಂಡರೂ ವೈಯ್ಯಕ್ತಿಕವಾಗಿ ಸಂಬಂಧಗಳ ಗೋಜಲಿನಲ್ಲಿ ಸಿಕ್ಕಿಬಿದ್ದ ಅಸಾಯಕ ಹೆಣ್ಣುಮಗಳೊಬ್ಬಳು ಕಾಣಸಿಗುತ್ತಾಳೆ.
ಇದನ್ನೆಲ್ಲಾ ಮನದಲ್ಲೇ ಮಥಿಸುತ್ತಾ ನಾನು ಬಂದಿದ್ದು ಈ ಹಿಮಾಲಯವೆಂಬ ದೇವಭೂಮಿಗೆ. ಬೆಟ್ಟಗುಡ್ಡಗಳನ್ನು ಏರಿಳಿಯುತ್ತಾ ಹಳ್ಳ ಕಣಿವೆಗಳಲ್ಲಿ ಹರಿದಾಡುತ್ತಾ ಭವಿಷ್ಯ ಬದ್ರಿಯನ್ನು ಚಾರಣ ಮಾಡುತ್ತಿರುವಾಗ ಎದುರಾದವಳು ಈಕೆ. ಇವಳ ಹೆಸರು ಸುಮಿತ್ರಾದೇವಿ. ಬೆನ್ನ ಮೇಲೆ ಆಕೆ ಹೊತ್ತುಕೊಂಡಿದ್ದ ಉದ್ದವಾದ ಮರದ ದಿಮ್ಮಿಗಳನ್ನು ನೋಡಿ ನಾವು ದಂಗಾಗಿ ಹೋಗಿದ್ದೆವು. ಆಮೇಲೆ ಎಚ್ಚೆತ್ತು ಅವಳಲ್ಲಿ ಮಾತಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದೆವು. ಆಗ ಆಕೆ ಹೇಳಿದ್ದು; ತನ್ನ ಹೆಸರು ಸುಮಿತ್ರಾದೇವಿ. ತಪೋವನದಿಂದ ಮೇಲೆ ಮೂರು ಕಿ.ಮೀ ದೂರವಿರುವ ಸುಹಾನಿ ಎಂಬ ಊರಿಗೆ ತಮಗೊಂದು ಮನೆ ಕಟ್ಟಿಕೊಳ್ಳಲೆಂದು ಈ ತೊಲೆಗಳನ್ನು ಹೊತ್ತೊಯ್ಯುತ್ತಿದ್ದಳು. ಆಕೆಯ ಗಂಡನ ಬಗ್ಗೆ ವಿಚಾರಿಸಿದಾಗ, ಆತ ದೂರದ ದೆಹಲಿಯಲ್ಲಿ [ಇಲ್ಲಿಂದ ಸುಮಾರು ಐನೂರು ಕಿ.ಮೀ.ದೂರ] ಸೆಕ್ಯುರಿಟಿ ಗಾರ್ಡ್ ಆಗಿದ್ದಾನೆಂದು, ವರ್ಷಕ್ಕೆ ಎರಡ್ಮೂರು ಬಾರಿ ವಾರದ ಮಟ್ಟಿಗೆ ರಜೆಗೆ ಬರುವವನೆಂದೂ ಹೇಳಿದಳು.
 ಉತ್ತರಾಖಂಡ ರಾಜ್ಯದ ಜೋಶಿ ಮಠದಿಂದ ಹೊರಟ ನಾವು ದವಳಗಿರಿಯಿಂದ ಹರಿದು ಬರುವ ದವಳಿಗಂಗಾ ನದಿಗುಂಟಾ ನಮ್ಮ ವಾಹನದಲ್ಲಿ ಪಯಣಿಸಿ ತಪೋವನ ಎಂಬ ಊರಿನಿಂದ ಭವಿಷ್ಯ ಬದ್ರಿಗೆ ಚಾರಣ ಆರಂಭಿಸಿದವರು ನಾವು. ನಾಲ್ಕು ಕಿ.ಮೀ. ಹತ್ತಿಳಿಯಲು ಒಂದಿಡೀ ದಿನವನ್ನು ಇದಕ್ಕಾಗಿ ವ್ಯಯಿಸಿದ್ದೆವು . ಅಂತದ್ದರಲ್ಲಿ ಈ ಮಹಿಳೆ ಮತ್ತು ಜೀವನಾವಶ್ಯಕ ವಸ್ತುಗಳನ್ನು ಬೆನ್ನಮೇಲೆ ಹೇರಿಕೊಂಡು ಈ ಏರು ಹಾದಿಯನ್ನು ಕ್ರಮಿಸುತ್ತಿರುವವರನ್ನು ಕಂಡಾಗ  ಸಾವಿರಾರು ಮೈಲುಗಳ ದೂರದಿಂದ ಚಾರಣದ ಮೋಜಿಗಾಗಿ ಇಲ್ಲಿಗೆ ಬಂದ ನಮಗೆ ನಾಚಿಕೆಯೆನಿಸಿತು. ಅದರ ಜೊತೆಗೆ ಹಿಮಾಲಯವಾಸಿಗಳ ಬೆನ್ನ ಮೇಲೆ ಹೇರು ಹೊರುವ ವಿಧಾನಗಳ ಬಗ್ಗೆ ಕುತೂಹಲವಾಯ್ತು. ಇಂಧ್ರನ ಕೈಯ್ಯಲ್ಲಿರುವ ವಜ್ರಾಯುಧದ ನೆನಪು ಬಂತು. ಅದು ದದೀಚಿ ಮಹರ್ಷಿಯ ಬೆನ್ನಮೂಳೆಯಲ್ಲವೇ?
ಬೆನ್ನುಮೂಳೆ ಎಂಬುದು ಅಗಾಧವಾದ ಶಕ್ತಿಯ ಸಂಕೇತ. ಇಡೀ ಭೂಮಂಡಲವನ್ನು ಆಮೆಯೊಂದು ತನ್ನ ಬೆನ್ನ ಮೇಲೆ ಹೊತ್ತುಕೊಂಡಿದೆ ಎಂಬ ನಮ್ಮ ಪುರಾಣ ಕಲ್ಪನೆಯನ್ನು ಸ್ವಲ್ಪ ಜ್ನಾಪಿಸಿಕೊಳ್ಳಿ. ಬೆನ್ನುಮೂಳೆಯೆಂಬುದು ದೇಹದ ನರಮಂಡಲ ವ್ಯವಸ್ಥೆಯ ಮಿದುಳಿನ ವಾಹಕ. ಅದಕ್ಕೇನಾದರೂ ಘಾಸಿಯಾದರೆ ದೇಹಕ್ಕೆ ಲಕ್ವ ಹೊಡೆಯುತ್ತೆ.
ಹಿಮಾಲಯದಲ್ಲಿ ಬೆನ್ನ ಮೇಲೆ ಹೊರೆ ಹೊತ್ತ ಮಹಿಳೆಯರನ್ನು ನೋಡಿದಾಗಲೆಲ್ಲ ಇದು ನನಗೆ ನೆನಪಿಗೆ ಬರುತ್ತಿತ್ತು. ಇಲ್ಲಿ ಗಂಡಸರೆಲ್ಲಾ ದೂರದ ಊರುಗಳಿಗೆ, ನಗರಗಳಿಗೆ ದುಡಿಯಲು ಹೋಗುತ್ತಾರೆ. ಹೆಂಗಸರು ತಮ್ಮ ಪುಟ್ಟ ಹೊಲಗಳಲ್ಲಿ ದುಡಿಯುತ್ತಾ, ಹೈನುಗಾರಿಕೆ ಮಾಡುತ್ತಾ ತಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುತ್ತಾ ಸುಂದರ ನಾಳೆಗಳ ಬಗ್ಗೆ ಹೊಂಗನಸು ಕಾಣುತ್ತಿರುತ್ತಾರೆ. ನಾವು ಮಾತಾಡಿಸಲು ನಿಂತಾಗ ಸುಂದರವಾದ ಹಿಮ ಬಿಳುಪಿನ ನಗು ಚೆಲ್ಲಿ ನಮ್ಮ ದುಗುಡಗಳನ್ನು ಕ್ಷಣಕಾಲ ಮರೆಸಿಬಿಡುತ್ತಾರೆ.
ಹಿಮಾಲಯದ ಬಹುಪಾಲು ಶಿಖರಗಳನ್ನು ಹೊಂದಿರುವ ಉತ್ತರಾಖಂಡ ರಾಜ್ಯವನ್ನು ಪ್ರವಾಸೋಧ್ಯಮದ ಅನುಕೂಲತೆಗಳಿಗಾಗಿ ಎರಡು ವಲಯಗಳನ್ನಾಗಿ ವಿಂಗಡಿಸಲಾಗಿದೆ. ಒಂದು ಗಡ್ವಾಲ್ ವಲಯ. ಇನ್ನೊಂದು ಕುಮಾಂ ವಲಯ. ಗಡ್ವಾಲ್ ವಲಯದ ಕೆಲವು ಪಟ್ಟಣಗಳಲ್ಲಿ ನಿಮಗೆ ಸೈಕಲ್ ರಿಕ್ಷಗಳು, ಟ್ಯಾಕ್ಷಿಗಳು ಕಾಣಸಿಗುತ್ತವೆ.ತೀರಾ ವಿರಳವಾಗಿ ಅದೂ ಕೆಲವೆಡೆ ಮಾತ್ರ ರಿಕ್ಷಾಗಳು ಕಾಣುತ್ತವೆ. ಆದರೆ ಕುಮಂ ವಲಯದಲ್ಲಿ ಒಂದೇ ಒಂದು ರಿಕ್ಷಾವನ್ನೂ ನಾನು ಕಂಡಿಲ್ಲ. ಅಂದರೆಅವರು ದಿನಬಳಕೆಯ ಅಗತ್ಯ ವಸ್ತುಗಳ ಸಾಗಾಣೆಗೆ ಏನನ್ನು ಬಳಸುತ್ತಾರೆ? ಸಂಶಯಬೇಡ. ಅವರು ನಂಬಿರುವುದು ತಮ್ಮ ಬೆನ್ನನ್ನೇ...ಬೆನ್ನ ಮೇಲೆ ಗ್ಯಾಸ್ ಸಿಲಿಂಡರನ್ನು, ಬೀರುಗಳನ್ನು ಹೊತ್ತುಕೊಂಡು ಏರು ಹಾದಿಯಲ್ಲಿ ಹತ್ತಿ ಹೋಗುತಿರುವ ಜನರನ್ನು ನೀವಿಲ್ಲಿ ಕಾಣಬಹುದು.
ನಮ್ಮ ನಗರದ ಮಾರುಕಟ್ಟೆಗಳಲ್ಲಿ, ರೈಲ್ವೆ ಸ್ಟೇಷನ್ ಗಳಲ್ಲಿ ಬೆನ್ನ ಮೇಲೆ ಮೂಟೆಗಳನ್ನು ಹೊತ್ತು ಕೂಲಿ ಮಾಡುತ್ತಿರುವ ಗಂಡಸರನ್ನು ಎಲ್ಲರೂ ನೋಡಿರುತ್ತಾರೆ. ಅವರನ್ನು ದೇಹ ದಾರ್ಢ್ಯತೆಯುಳ್ಳ ಗಂಡಸರು, ಕುಟುಂಬ ನಿರ್ವಹಣೆಗಾಗಿ ಜೀವ ತೇಯುತ್ತಿರುವ ಕಷ್ಟಜೀವಿಗಳು ಎಂದೆಲ್ಲಾ ಬಿಂಬಿಸಲಾಗುತ್ತೆ. ಆದರೆ ಹಿಮಾಲಯದ ಈ ಮಹಿಳೆಯರನ್ನು ಏನೆಂದು ಕರೆಯಬೇಕು?
ಹೊರೆ ಅಂದ ತಕ್ಷಣ ನಮಗೆ ಹೊಳೆಯುವುದು ತಲೆಯ ಮೇಲಿನ ಹೊರೆಯೇ. ಆದರೆ ಬೆನ್ನ ಮೇಲಿನ ಹೊರೆಯನ್ನು ಏನೆಂದು ಕರೆಯುವುದು? ಅದಕ್ಕೆ ಬೇರೆಯದೇ ಆದ ಶಬ್ದವಿದೆಯೇ? ಅಥವಾ ತಲೆ ಹೊರೆ, ಬೆನ್ನ ಹೊರೆ ಎಂದು ವಿಂಗಡಿಸಿಕೊಳ್ಳಬೇಕೆ? ಗೊತ್ತಿಲ್ಲ. ಆದರೆ ವಿಚಾರ ಮತ್ತು ಭಾವಕ್ಕೆ ಸಂಬಂಧಿಸಿದ ಮನಸಿನ ಹೊರೆಯೊಂದು ಈ ಲೇಖನ ಬರೆಯಲು ನನ್ನನ್ನು ಪ್ರೇರೇಪಿಸಿತು.

ಸಾಮೂಹಿಕ ನೆಲೆಯಲ್ಲಿ ರೈತರನ್ನು ದೇಶದ ಬೆನ್ನೆಲುಬು ಎಂದು ಕರೆಯಲಾಗುತ್ತದೆ. ಆದರೆ ಈ ಬೆನ್ನೆಲುಬು ಸದೃಢವಾಗಿ ನಿಲ್ಲುವಂತ ಯೋಜನೆಗಳನ್ನು ನಮ್ಮ ಅಧಿಕಾರಣ ರಾಜಕಾರಣ ಎಂದಾದ್ರೂ ರೂಪಿಸಿದೆಯೇ? ಇಲ್ಲ. ರೈತ ಎಂದರೆ ಕೊಶ್ಚನ್ ಮಾರ್ಕ್ ಚಿನ್ಹೆಯಂತಿರುವ ಗೂನು ಬೆನ್ನಿನ ಅರೆಬೆತ್ತಲೆಯ ಮನುಷ್ಯನ ಚಿತ್ರವೇ ಕಣ್ಣು ಮುಂದೆ ಬಂದು ನಿಲ್ಲುತ್ತದೆ.  ಅಲೆಮಾರಿ ಮನುಷ್ಯನನ್ನು ಕೃಷಿ ಕಾರ್ಯಗಳಲ್ಲಿ ಪಾಲ್ಗೊಳ್ಳುವಂತೆ ಮಾಡಿ, ಅವನಿಗೆ ನಾಗರಿಕತೆಯ ಪಾಠ ಕಲಿಸಿದ ಮಹಿಳೆ ಇದ್ದಲ್ಲೇ ಇದ್ದಾಳೆ. ಅವಳ ಬೆನ್ನ ಮೇಲೆ  ಮಗುವಿನ ಜೋಳಿಗೆಯ ಜೊತೆ ಸಂಸಾರದ ಹೊರೆಯಿದೆ. ಗಂಡಸಿನ ಬೆನ್ನ ಮೇಲೆ ಏನಿದೆ? 

 [ಮಂಗಳೂರಿನಿಂದ ಪ್ರಕಟವಾಗುವ ’ಸಂವೇದಿ’ ನಿಯತಕಾಲಿಕದ ಮಹಿಳಾ ದಿನಾಚಾರಣೆ ಸಂಚಿಕೆಗಾಗಿ ಬರೆದ ಬರಹ].

2 comments:

Badarinath Palavalli said...

ಗಂಡಸಿನ ಬೆನ್ನ ಮೇಲೆ ಆಕೆಯ ಋಣ ಭಾರವಿದೆ. ಅದು ಯಾವತ್ತಿಗೂ ತೀರದ ಸಾಲ ಮತ್ತು ಅರಿವಿಗೂ ಬಾರದ / ಹಾಗೆ ನಟಿಸಬಲ್ಲ ನಿಜವಾದ ಉಪಕಾರ.

ಮಹಿಳಾ ದಿನಾಚರಣೆಯ ವಿಷಾದ ಮತ್ತು ಆಚರಣೆಯ ಪೊಳ್ಳು ವ್ಯಕ್ತವಾದ ರೀತಿಯಲ್ಲೇ ಮನಸಿಗೆ ನಾಟುತ್ತದೆ.

ಸುಮಿತ್ರಾದೇವಿಯ ಕಣ್ಣಲ್ಲಿರುವ ಜೀವ ಕಳೆ ಅನನ್ಯ.

ವಜ್ರಾಯುಧದ ಬಗೆಗೆಗಿನ ಮಾಹಿತಿಗಾಗಿ ಧನ್ಯವಾದಗಳು.

Unknown said...

Samvediyallu odide.... Manasige thattithu baraha sangeetha raviraj sampaje