Saturday, November 28, 2015

ನಿನ್ನದೀ..ಒಲವಾಗ್ನಿ....!


                         

  ೧


ನಾನು... ಮಹಾಶ್ವೇತೆ;
ದೇವಲೋಕದ ಗಂಧರ್ವಕನ್ಯೆ.
ಮಾನುಷ ಪ್ರೀತಿಗಾಗಿ ಹಂಬಲಿಸಿದವಳು.
ಅಚ್ಛೋದ ಸರೋವರಕ್ಕೆ ಸ್ನಾನಕ್ಕೆಂದು ಬಂದಿದ್ದೇನೆ.
ಪುಂಡರೀಕಾ...
ನಿನ್ನನ್ನಿಲ್ಲಿ ಕಂಡೆ...ಮನಸೋತೆ.
ದೇವಲೋಕ ನರಕಲೋಕವಾಯ್ತು.
ನಿನ್ನೊಲವಿಗಾಗಿ ಜನ್ಮಜನ್ಮಾಂತರಗಳಲ್ಲೂ ಕಾಯಬಲ್ಲೆ.
ಈ ಒಂದು ಜನ್ಮದ ತಪಸ್ಸೇನು ಮಹಾ...! 


 ೨


 ಸಾಗರವನ್ನು ಎಂದೂ ನೋಡದವರ ಮುಂದೆ
ಅದರ ಅಗಾಧ ಜಲರಾಶಿಯನ್ನು ವರ್ಣಿಸಬಾರದು.

ಮನೆ ಮುಂದಿನ ಗುಡ್ಡವನ್ನೇ ಹತ್ತಲು ಮನಸ್ಸಿಲ್ಲದವರಿಗೆ
ಹಿಮಾಲಯದ ಔನತ್ಯದ ಬಗ್ಗೆ ಹೇಳಬಾರದು.

ಕಣ್ಣೀರಿಗೂ ಉಪ್ಪು ನೀರಿಗೂ ವ್ಯತ್ಯಾಸ ಅರಿಯದವರ ಮುಂದೆ
ಭಾವನೆಗಳ ಕಟ್ಟೆ ಹರಿಯಗೊಡಬಾರದು.

ನಾನೊಬ್ಬಳು ಹುಚ್ಚಿ; ಇಬ್ಬನಿಯಲ್ಲಿ ಕಾಮನಬಿಲ್ಲು ಕಾಣುತ್ತೇನೆ.

 


                       














 ೩


ಬಂದೆ.. ಎಂದೆ, ಮುಟ್ಟಿದೆ.. ಎಂದೆ.
ಮೈ ಝುಮ್ಮೆನ್ನಲಿಲ್ಲ;ಜೀವ ತಲ್ಲಣಿಸಲಿಲ್ಲ.
ಕವಿಸೃಷ್ಟಿಯ ನಾಯಕನಲ್ಲಿ ಮೈಮರೆತೆ. ಜೀವ ತಾಳಲಿಲ್ಲ.
ಮೇಘ ಸಂದೇಶಗಳೆಲ್ಲಾ ಭ್ರಮಾಸೃಷ್ಟಿಗಳು; ನೆರಳಿಲ್ಲ.ಉಸಿರಿಲ್ಲ
ಅನುಭಾವದ ಸುಖಕ್ಕೆ ಪಂಚೇಂದ್ರಿಯದ ಹಂಗಿಲ್ಲವಂತೆ.
ಸುಡಲಿ ಆ ಅನುಭಾವ; ನನ್ನ ಸ್ಪರ್ಷಕ್ಕೊಮ್ಮೆ ದಕ್ಕಿಬಿಡು.
ನನ್ನ ದಾಸಾನುದಾಸ ನೀನಾಗದಿದ್ದರೆ...
ನಾನೇ ನಿನ್ನ ತೋಳಿನ ಮಗುವಾಗಿಬಿಡುವೆ..
ಮುಟ್ಟಿದರೂ ಮುಟ್ಟದಂತಿರುವುದನ್ನು ನಾವಿಬ್ಬರೂ ಕೂಡಿ ಕಲಿಯೋಣ



   ೪

ಸುಮ್ಮನೆ 
ಜೊತೆ ಹೆಜ್ಜೆಗಳು, ಗುರಿಯಿರಲಿಲ್ಲ.
ವಾದ-ವಿವಾದ ನಡೆಯುತ್ತಿದ್ದವು, ಎಂದಿನಂತೆ
ಬೀದಿಯಲ್ಲಿದ್ದವರಿಗೆ ಕಾಡು, ಕಡಲು, ಬೆಳದಿಂಗಳ ಮೋಹ.
ಎದೆಯಲ್ಲೊಂದು ಪ್ರಶ್ನೆ ಕುದಿಯುತ್ತಿತ್ತು,
ಕೇಳಿದೆ.
ಕೈಮುಗಿದು ನುಡಿದ;
’ದಯವಿಟ್ಟು ನನ್ನನ್ನು ನನ್ನ ಪಾಡಿಗೆ ಬಿಡು’
ಎತ್ತರಕ್ಕೆ ಎಸೆಯಲ್ಪಟ್ಟೆ, 
ಅವನು ಕೆಳಗುಳಿದ.
ಈಗವನು ಪಂಚೇಂದ್ರಿಯಗಳಾಚೆಗಿನ ಇನಿಯ
ನೆನಪಾದೊಡನೆ ಅದೇ ಕೈಮುಗಿದ ಚಿತ್ರ.
ನನ್ನ ಚಿತ್ರಕ ಶಕ್ತಿಗೆ ನನಗೇ ಬೆರಗು;

ದೈನ್ಯಕ್ಕೆ ಪ್ರೀತಿ ಕೊಲ್ಲುವ ಶಕ್ತಿಯಿದೆ


                   














  ೫



ತುಂಬಾ ಹಿಂದೆ ಆ ಕಾಗದ ಬಂದಿತ್ತು.
ಸುಮ್ಮನೆ ಅದನ್ನೇ ತಿರುಗಿಸಿ ಮರುಗಿಸಿ ನೋಡಿದ್ದೆ.
ವಿಳಾಸವಿರಲಿಲ್ಲ.
ಬರೆದವರಾರೆಂದು ಗೊತ್ತಿತ್ತು.

ಒಳಗೇನಿರಬಹುದು?
ಎದೆಹಿಡಿದುಕೊಂಡೆ; ಹಣೆಯಲ್ಲಿ ಬೆವರೊಡೆದಿತ್ತು.
ಹಗುರಾಗಿ ತುಟಿ ತಾಗಿಸಿದೆ, ಎದೆಗೊತ್ತಿಕೊಂಡೆ.
ಸುಗಂಧವೊಂದು ತೇಲಿಬಂತು.
’....................................’
ಉಯಿಲು ಪತ್ರದೊಳಗೆ ಮೆಲ್ಲನೆ ಅದ ಹುದುಗಿಸಿ
ಸ್ಮೃತಿಸಂಪುಟದಲ್ಲಿಟ್ಟು ಕೀಲಿಕೈಯನು ಆಳ ಸಮುದ್ರಕ್ಕೆಸೆದೆ.
ಉರವಣಿಸಿ ಬರುತ್ತಿರುವ ಕಾಲತೆರೆಗಳನು ನೋಡುತ್ತಿದ್ದೇನೆ;
ಲೆಕ್ಕ ತಪ್ಪುತ್ತಿದೆ!





1 comments:

sunaath said...

ಅದ್ಭುತ!