ಕೆಳ
ಮಧ್ಯಮ ವರ್ಗದ ಸಂಪ್ರದಾಯಸ್ಥ ಮನೆಗಳನ್ನೊಮ್ಮೆ ಗಮನಿಸಿ. ಅದಕ್ಕೊಂದು ಹಿಂಬಾಗಿಲು ಇರುತ್ತೆ,
ಅದಕ್ಕೆ ತಾಗಿದಂತೆ ಹಿತ್ತಲು. ಇದು ಹೆಂಗಸರ ಸಾಮ್ರಜ್ಯ. ಅಂತಃಕರಣದ ಮಡಿಲು. ಆದ್ರೆ ಜಗಲಿ ಅಥವಾ
ಚಾವಡಿ ಅಧುನಿಕ ಪರಿಭಾಷೆಯಲ್ಲಿ ವರಾಂಡ ಅನ್ನುತ್ತಿವಲ್ಲಾ ಅದು ಗಂಡಸರ, ದರ್ಪದ, ಅದಿಕಾರದ
ಜಾಗವಾಗಿತ್ತು. ಅಲ್ಲಿಗೆ ಹೆಂಗಸರಿಗೆ ಸೀಮಿತ ಪ್ರವೇಶವಿತ್ತು. ಅಲ್ಲಿ ಬಂದು ಗಂಡಸರಿಗೆ
ಸರಿಸಮಾನವಾಗಿ ಕುಳಿತುಕೊಳ್ಳುವಂತಿಲ್ಲ. ಒಂದು ರೀತಿಯಲ್ಲಿ ಅದು ಹೆಂಗಸರಿಗೆ ನಿಷೇಧಿತ ಪ್ರದೇಶ.
ಹೆಣ್ಣುಮಕ್ಕಳು ವಿದ್ಯಭಾಸ ಕಲಿತು, ಗಂಡುಮಗನಂತೆ ನೌಕರಿ
ಮಾಡುತ್ತಾ, ಮನೆಯ ಜವಾಬ್ದಾರಿಯನ್ನು ಹೊತ್ತು ಹಿತ್ತಲಿನಿಂದ ಜಗುಲಿಗೆ ಬಂದಾಗಿದೆ. ಇನ್ನೂ
ಜಗಲಿಯಲ್ಲೇ ಕುಳಿತು ಒಳಮನೆಯನ್ನು ನಿಯಂತ್ರಿಸುತ್ತಿದ್ದ ಗಂಡು ಸಂತತಿಗೆ ಇದರಿಂದ ದಿಗಿಲಾಗಿದೆ.
ಅದರಲ್ಲಿ ಕೆಲವರು ನೀವಿನ್ನೂ ಅಲ್ಲೇ ಇರಿ, ಇಲ್ಲಿಗೆ ಬರಬೇಡಿ ಎನ್ನುತ್ತಿದ್ದಾರೆ. ಅದನ್ನು
ಕೇಳುವವಳೇ ಇವಳು? ಇಲ್ಲಾ, ಪ್ರಶ್ನಿಸುತ್ತಿದ್ದಾಳೆ, ಯಾಕೆ ಬರಬಾರದು? ನಾನಲ್ಲಿಗೆ ಬಂದರೆ ನಿನಗೇನು
ತೊಂದರೆ? ನಿನಗೆ ಈ ಮನೆಯಲ್ಲಿರಲು ಎಷ್ಟು ಹಕ್ಕಿದೆಯೋ ನನಗೂ ಅಷ್ಟೇ ಹಕ್ಕಿದೆ.
ಇಂತಹ ಹಕ್ಕಿನ ಮನಸ್ಥಿತಿಯೇ ಆಯ್ಯಪ್ಪನ ಸನ್ನಿಧಿಗೆ
ತಾನೇಕೆ ಬರಬಾರದು? ಶನಿ ಶಿಂಗ್ನಾಪುರದ ಸನ್ನಿಧಾನದಲ್ಲಿ ತಾನೇಕೆ ಪೂಜೆ ಸಲ್ಲಿಸಬಾರದು ಎಂದು ಪ್ರಶ್ನಿಸುತ್ತಿದೆ. ಪುರುಷ ಸಮೂಹ ಅದಕ್ಕೆ ಏನೆಂದು
ಉತ್ತರಿಸುತ್ತಿದೆ? ಅವಳನ್ನು ಧಮನಿಸಲು ಪ್ರಯತ್ನಿಸುತ್ತದೆ. ಅವಳು ಮತ್ತಷ್ಟು
ಪುಟಿದೇಳುತ್ತಿದ್ದಾಳೆ. ಧಾರ್ಮಿಕ ಹಕ್ಕು ಅಥವಾ ಧಾರ್ಮಿಕ ಸ್ವಾತಂತ್ರ್ಯದ ಬಗ್ಗೆ ಮಾತ್ರ
ಹೇಳುತ್ತಿಲ್ಲ. ನೀವು ಯಾವುದನ್ನೇ ಆಗಲಿ ಅದುಮಿಡಲು ಪ್ರಯತ್ನಪಟ್ಟಷ್ಟು ಅದು ಇನ್ನಷ್ಟು ಶಕ್ತಿ
ತುಂಬಿಕೊಂಡು ಪುಟಿಯುತ್ತದೆ..
ಈಗ
ಆಗಿರುವುದು ಅಷ್ಟೇ.
ಅಯ್ಯಪ್ಪನ ಸನ್ನಿಧಾನಕ್ಕೆ”ಫಲವಂತಿಕೆ’ಯ ಘಟ್ಟದಲ್ಲಿರುವ
ಸ್ತ್ರೀ ಬರಬಾರದೆಂದು ಹಿಂದಿನಿಂದಲೂ ಕಟ್ಟಳೆ ಇದೆ. ಅದನ್ನು ಮಹಿಳೆಯರೂ ಪಾಲಿಸಿಕೊಂಡು
ಬರುತ್ತಿದ್ದರು. ಈಗ ನನ್ನಂತಹ ”ಗಂಡುಬೀರಿ’ಯರು ಯಾಕೆ ಬರಬಾರದು? ಎಂದು ಪ್ರಶ್ನಿಸುತ್ತಿದ್ದಾರೆ.
ಅದು ಯಾವಗಲೂ ಹಾಗೆಯೇ. ’ಇಲ್ಲಿಗೆ ನೀನು ಬರಕೂಡದು’ ಎಂದು ಕಟ್ಟಪ್ಪಣೆ ಮಾಡಿದರೆ. ಯಾಕೆ ಬರಕೂಡದು?
ನಾನು ಬಂದೇ ಬರುತ್ತೇನೆ. ಎಂದು ಸವಾಲು ಹಾಕುವುದು ಮನುಷ್ಯ ಸಹಜ ಗುಣ. ಮಹಾರಾಷ್ಟ್ರದ ಶನಿ
ಶಿಂಗಾಣಪುರದಲ್ಲಿ ಮತ್ತು ಶಬರಿಮಲೆಯಲ್ಲಿ ಆಗಿರುವುದೂ ಇದೇ. ನೀನು ತಿಂಗಳ ಕೆಲವೊಂದು ದಿನಗಳಲ್ಲಿ
ಅಪವಿತ್ರಳು. ಹಾಗಾಗಿ ಬರಬೇಡ ಎನ್ನುತ್ತದೆ ದೇವಸ್ಥಾನಗಳ ಆಡಳಿತ ಮಂಡಳಿ. ಮಹಿಳೆಗೆ ’ಆ ದಿನಗಳು’
ಬಾರದೇ ಇರುತ್ತಿದ್ದರೆ ಈ ಪುರುಷ ಪುಂಗವರು ಹುಟ್ಟುತ್ತಿದ್ದರೇ? ಮನುಕುಲ ಮುಂದುವರಿಯುತ್ತಿತ್ತೇ?
ಹಾಗೆ ನೋಡಿದರೆ ದೇವರು ದಿಂಡರು ಅಂತ ಧಾರ್ಮಿಕ
ಕ್ಷೇತ್ರಗಳಿಗೆ ಯಾತ್ರೆ ಹೋಗುವ ನಿಜವಾದ ಆಸ್ತಿಕರು,
’ಆ ದಿನಗಳಲ್ಲಿ’ ಪೂಜಾ ಸ್ಥಾನಗಳಿಗೆ ಹೋಗುವುದಿಲ್ಲ. ಭಕ್ತರಿಗೂ ಅಕ್ಟ್ವಿಸ್ಟ್ ಗಳಿಗೂ
ವ್ಯತ್ಯಾಸವಿದೆ. ಅಯ್ಯಪ್ಪನ ದೇವಸ್ಥಾನ ಅಥವಾ ಶನಿಶಿಂಗ್ಣಾಪುರದಲ್ಲಿ ಮಹಿಳೆಯರಿಗೂ ಪ್ರವೇಶ ಕೊಡಿ
ಎಂದು ಆಗ್ರಹಿಸುತ್ತಿರುವವರೆಲ್ಲಾ ಆಧುನಿಕತೆಯನ್ನು ರೂಡಿಸಿಕೊಂಡ ಮಹಿಳಾವಾದಿಗಳೇ ಆಗಿದ್ದಾರೆ.
ಅವರಿಗೆ ದೇವರಲ್ಲಿ ’ನೀನೇ ಗತಿ’ ಎಂಬ ಶರಣಾಗತಿ ಭಾವ, ಅಚಲ ನಂಬಿಕೆ ಇಲ್ಲ. ಬದಲಾಗಿ ’ನೀನಿಲ್ಲಿಗೆ
ಬರಕೂಡದು’ ಎಂದು ಹೇಳುತ್ತಾರಲ್ಲ. ’ಯಾಕೆ ಬರಕೂಡದು’ ಎಂದು ಪ್ರಶ್ನಿಸುವ ಮನೋಭಾವವೇ ಎದ್ದು
ಕಾಣುತ್ತದೆ. ಧಾರ್ಮಿಕ ಸ್ವಾತಂತ್ರ್ಯ ಮಹಿಳೆಯರಿಗೆ ಸಂವಿಧಾನ ಕೊಟ್ಟಿರುವ ಹಕ್ಕು. ಆದ ಕಾರಣವೇ
ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶಕ್ಕೆ ತಡೆಯೊಡ್ಡಿರುವ ತಿರುವಾಂಕೂರು ದೇವಶ್ಯ ಮಂಡಳಿಯ
ಕ್ರಮವನ್ನು ಸಂವಿಧಾನದ ಉಲ್ಲಂಘನೆ ಎಂದು ಸುಪ್ರಿಂ ಕೋರ್ಟ್ ಹೇಳಿದೆ. ಭೂಮಾತ ಬ್ರಿಗೇಡ್ ನ
ತ್ರುಪ್ತಿ ದೇಸಾಯಿ ಇದೇ ಕಾರಣಕ್ಕೆ ಶನಿ ಶಿಂಗ್ಣಾಪುರದಲ್ಲಿ ಮಹಿಳೆಯರಿಗೂ ಪೂಜೆಗೆ ಅವಕಾಶ ಕೊಡಿ
ಎಂದು ಕೇಳುತ್ತಿದ್ದಾರೆ.
ಭೂಮಾತ
ಬ್ರಿಗೇಡ್ ನ ಹೋರಾಟ ಮುಸ್ಲಿಂ ಮಹಿಳೆಯರನ್ನೂ ತಟ್ಟಿದೆ ಎಂಬುದು ಇದರಿಂದಾದ ಸಕಾರಾತ್ಮಕ
ಬೆಳವಣಿಗೆ. ಇಸ್ಲಾಂ ಪ್ರಕಾರ ಮಹಿಳೆಯರು ಪುರುಷ ಮುಸ್ಲಿಂ ಸಂತರ ಸಮಾಧಿಯನ್ನು ದರ್ಶಿಸುವಂತಿಲ್ಲ.
ಅದು ಮಹಾ ಪಾಪವಂತೆ. ಈಗ ಮುಂಬಯಿಯ ಹಾಜಿ ಅಲಿ
ದರ್ಗಾಕ್ಕೆ ತಮಗೂ ಅವಕಾಶ ನೀಡಬೇಕೆಂದು ಮುಸ್ಲಿಂ ಮಹಿಳಾ ಹಕ್ಕುಗಳ ಸಂಘಟನೆ ಒತ್ತಾಯಿಸುತ್ತಿದೆ.
ಇದನ್ನೆಲ್ಲಾ ಪಕ್ಕಕ್ಕಿಟ್ಟು ಇಂಹ ಆಚರಣೆಗಳು ರೂಡಿಯಲ್ಲಿ
ಯಾಕೆ ಬಂದಿರಬಹುದು ಎಂದು ಯೋಚಿಸಿದರೆ ಅದಕ್ಕೂ ಪುರುಷ ಮನಸ್ಥಿತಿಯೇ ಕಾರಣವೆನ್ನಬಹುದು.
ಅಯ್ಯಪ್ಪನನ್ನೇ ನೋಡಿ. ಆತ ಅಯೋನಿಜ. ತಾಯಗರ್ಭದಿಂದ ಜನಿಸಿದವನಲ್ಲ. ಅಂದರೆ ಸ್ತೀ
ಸಂಪರ್ಕವಿಲ್ಲದೆ ಉದ್ಭವಿಸಿದವನು. ಹಾಗಾಗಿ ಅನಾದಿಯಲ್ಲಿ ಆತನನ್ನು ಪ್ರತಿಷ್ಟಾಪಿಸಿದ
ಅರ್ಚಕನೊಬ್ಬ[ ಜಾತಿ ಆಧಾರಿತವಾದ ಅರ್ಚಕನಲ್ಲ; ಅರ್ಚಿಸುವವನು ಅರ್ಚಕ] ಇಲ್ಲಿಗೆ ಮಹಿಳೆಯರು
ಬರುವುದು ಬೇಡ ಎಂದು ನಿರ್ಭಂದಿಸಿರಬಹುದು. ಅಥವಾ ಈಗಿನವರು ತರ್ಕಿಸುತ್ತಿರುವಂತೆ ಕಾಡು
ಪ್ರಾಣಿಗಳಿಂದ ತುಂಬಿದ್ದ ಬೆಟ್ಟ ಕಾಡುಗಳ ದುರ್ಗಮ ಹಾದಿಯನ್ನು ಕ್ರಮಿಸಿ ಬರಲು ಮಹಿಳೆಯರಿಗೆ
ಕಷ್ಟವಾಗಬಹುದು ಎಂಬ ಕಾರಣಗಳಿಂದಾಗಿಯೂ ಪ್ರವೇಶ ನಿರಾಕರಿಸಿರಬಹುದು. ಆದರೆ ತುಳು ನಾಡಿನವಳಾದ
ನನಗೆ ಬೇರೊಂದು ಕಾರಣವೂ ಹೊಳೆಯುತ್ತಿದೆ.
ತುಳುನಾಡಿನಲ್ಲಿ ”ಶಾಸ್ತಾವು’ ಎನ್ನುವ ದೈವಾರಾಧನೆಯಿದೆ.
ಅದು ನಾಗಾರಾಧನೆಯೇ ಆಗಿರಬಹುದು ಎಂದು ತುಳುನಾಡಿನ ದೈವಗಳ ಬಗ್ಗೆ ಕ್ಷೇತ್ರ ಕಾರ್ಯ ಮಾಡಿರುವ
ಇಂದಿರಾ ಹೆಗ್ಡೆಯವರ ಅಭಿಪ್ರಾಯ.. ಅದು ಕಲ್ಲಿನ ರೂಪದಲ್ಲಿ ಆರಾಧನೆಗೊಳ್ಳುತ್ತದೆ. ಶನಿ
ಶಿಂಗ್ಣಾಪುರದಲ್ಲಿ ಪೂಜೆಗೊಳ್ಳುತ್ತಿರುವ ದೇವರು ಕೂಡಾ ಐದೂವರೆ ಅಡಿ ಎತ್ತರದ ಕರಿಯ ಶಿಲೆ.
ಅಯ್ಯಪ್ಪ ಸನ್ನಿಧಾನದಲ್ಲಿ ಕೂಡಾ ’ಶಾಸ್ತಾವು’ ಆರಾಧನೆಯಿದೆ. ಅಂದರೆ ಮೂಲದಲ್ಲಿ ಇವೆಲ್ಲವೂ
ಪ್ರಕ್ರುತಿ ಆರಾಧನೆಯ ಸ್ಥಳಗಳೇ ಆಗಿರಬಹುದು. ಪ್ರಕ್ರುತಿ ಆರಾಧನೆಯಲ್ಲಿ ಸ್ತ್ರೀ
ಅಸ್ಪರ್ಶ್ಯಳಲ್ಲ. ಹಾಗಾದರೆ ಅವಳು ಯಾವ ಕಾಲಘಟ್ಟದಲ್ಲಿ ಈ ದೇವರುಗಳ ದರ್ಶನಕ್ಕೆ ಅನರ್ಹಳಾದಳು? ತುಳುನಾಡು
ಪ್ರೃತಿ ಪೂಜಕರ ನಾಡು. ಅಲ್ಲಿ ಮಾತ್ರುಮೂಲ ಸಂಸ್ಕ್ರೂತಿ ಮುನ್ನೆಲೆಯಲ್ಲಿದ್ದರೂ ಅಲ್ಲಿರುವ
ದೈವಸ್ಥಾನಗಳಿಗೆ[ ಭೂತಸ್ಥಾನಗಳಿಗೆ] ಮಹಿಳೆಯರಿಗೆ ಪ್ರವೇಶವಿಲ್ಲ ಎಂಬುದು ನನ್ನ ಕಣ್ಣ ಮುಂದಿದೆ.
ಇಂದಿಗೂ ಧರ್ಮಸ್ಥಳದಲ್ಲಿರುವ ಅಣ್ಣಪ್ಪ ಪಂಜುರ್ಲಿಯ ಬೆಟ್ಟಕ್ಕೆ ಮಹಿಳೆಯರು ಹೋಗುವಂತಿಲ್ಲ.
ದೇವರಿಗೆ ನಾವು ಬೇಡವಾದರೆ ನಮಗೂ ಆ ದೇವರು ಬೇಡ ಅಷ್ಟೇ!
ಬಹುಸಂಸ್ಕ್ರುತಿಯ ದೇಶ ನಮ್ಮದು. ಇಲ್ಲಿ ಬಹು ಆರಾಧನಾ
ಪದ್ಧತಿಯಿದೆ. ಶಿಷ್ಟ ಆಚರಣೆಯಿದ್ದಂತೆ ಅಷ್ಟೇ ಪ್ರಭಲವಾದ ಪರಿಶಿಷ್ಟ ಆಚರಣೆಗಳು ಇವೆ. ಇಲ್ಲಿ ಅಸಂಖ್ಯ ದೇವರುಗಳು ಹುಟ್ಟುತ್ತವೆ, ಸಾಯುತ್ತವೆ ಅಥವಾ
ಕಾಲಾನುಕ್ರಮದಲ್ಲಿ ಹಿನ್ನೆಲೆಗೆ ಸರಿಯುತ್ತವೆ. ವೇದಕಾಲದಲ್ಲಿ ಪೂಜಿಸಲ್ಪಡುತ್ತಿದ್ದ ದೇವತೆಗಳು
ಈಗ ಅಸ್ತಿತ್ವದಲಿಲ್ಲ. ಈಗಿರುವ ದೇವರುಗಳು ಮುಂದೂ ಇರುತ್ತವೆ ಎಂದೂ ಹೇಳಲಾಗದು.
ಕಾಲಧರ್ಮಕ್ಕನುಗುಣವಾಗಿ ದೇವತೆಗಳೂ ಹುಟ್ಟಿಕೊಳ್ಳುತ್ತವೆ. ಒಂದೆರಡು ವರ್ಷಗಳ ಹಿಂದೆ
ಕರ್ನಾಟಕವನ್ನು ಬಹುವಾಗಿ ಬಾಧಿಸಿದ ಚಿಕುನುಗುನ್ಯಾ ಕಾಯಿಲೆಯನ್ನು ಗುಣಪಡಿಸುವುದಕ್ಕಾಗಿ
ಬೇಡಿಕೊಳ್ಳಲು ಆಆ ಕಾಯಿಲೆಗೊಬ್ಬಳು ಅಧಿ ದೇವತೆಯನ್ನು ಸ್ರುಷ್ಟಿಸಿ ಅವಳಿಗೆ ಕೀಲಮ್ಮ ಎಂದು
ಹೆಸರಿಟ್ಟು ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಜನ ನೆರೆದು ಪೂಜಿಸಿದ್ದನ್ನು ಬಿಜಾಪುರದ ಊರೊಂದರಲ್ಲಿ
ನಾನು ಸ್ವತಃ ಖಂಡಿದ್ದೇನೆ.
ಗಮನಿಸಿ ನೋಡಿ, ನಮ್ಮ ದೇಶದಲ್ಲಿ ಗಂಡು ದೇವರ ಸಂಖ್ಯೆ
ಬಹ್ ಕಡಿಮೆ. ಆದರೆ ಅಸಂಖ್ಯ ಶಕ್ತಿ ದೇವತೆಯರಿದ್ದಾರೆ. ನಮ್ಮ ಪುರಾಣ ಹಾಗೂ ಜಾನಪದ ಪರಂಪರೆಯಲ್ಲಿ
’ಆ ದಿನಗಳಲ್ಲಿ’ ಮಹಿಳೆಯರನ್ನು ದೂರವಿಟ್ಟ ಉದಾಹರಣೆ ನನಗೆ ನೆನಪಾಗುತ್ತಿಲ್ಲ.. ತನ್ನನ್ನು ರಾಜಸಭೆಗೆ ಕರೆದೊಯ್ಯಲು ದುಶ್ಯಾಸನ ಬಂದಾಗ
ತಾನು ’ಆ ದಿನಗಳಲ್ಲಿ’ ಇರುವುದಾಗಿ ದ್ರೌಪಧಿ ಹೇಳಿರುವುದು ಮಹಾಭಾರತದ ಸಭಾಪರ್ವದಲ್ಲಿ
ಉಲ್ಲೇಖಿತವಾಗಿದೆ. ಅನುಮಾನವೇ ಇಲ್ಲ. ದೇವರು ಮಾನವನ ಕಲ್ಪನೆಯಲ್ಲಿ ಹುಟ್ಟಿರುವುದು..ಮತ್ತು
ಅದನ್ನು ಪುರುಷನೇ ಸ್ರುಷ್ಟಿಸಿದ್ದಾನೆ ಎಂಬುದು ನನ್ನ ಬಲವಾದ ನಂಬಿಕೆ . ಹಾಗಾಗಿ ಕೆಲವು ಪುರುಷ
ದೇವರುಗಳನ್ನು ನೋಡಲು ಮಹಿಳೆಯರಿಗೆ ನಿರ್ಭಂದವಿದೆ. ದೇವರ ಬ್ರಹ್ಮಚರ್ಯಕ್ಕೆ ಧಕ್ಕೆಯಾಗಬಹುದು ಎಂಬ
ಭಯವೇ? ಹೀಗೆ ಹೇಳುವಾಗ ಮೊನ್ನೆ ಮೊನ್ನೆ ಚಿಕ್ಕಲೂರು ಜಾತ್ರೆಯಲ್ಲಾದ ಘಟನೆಯೊಂದನ್ನು ನಿಮ್ಮ
ಗಮನಕ್ಕೆ ತರುತ್ತೇನೆ. ನಮ್ಮ ಟೀವಿ ಚಾನಲ್ ನ ಅಯಂಕರ್ ಕೂದಲನ್ನು ಸ್ವಚ್ಛಂದವಾಗಿ ಬೆನ್ನ ಮೇಲೆ
ಹರಡಿಕೊಂಡಿದ್ದಳು. ಆಗ ಸಿದ್ದಪ್ಪಾಜಿಯ ಗದ್ದುಗೆಯ ಟ್ರಸ್ಟಿಗೆ ಸೇರಿದ ಮಹಿಳೆಯೊಬ್ಬರು ಆಕೆಯ
ಹತ್ತಿರಕ್ಕೆ ಬಂದು ’ನೀನು ತುಂಬಾ ಸುಂದರಿಯಾಗಿದ್ದೀಯಾ..ಹೀಗೆ ಕೂದಲು ಬಿಚ್ಚಿಕೊಂಡಿರಬೇಡ. ನಮ್ಮ
ಸಿದ್ದಾಪ್ಪಾಜಿಯ ಮನಸು ಚಂಚಲಗೊಳ್ಳಬಹುದು’ ಎಂದರು. ನಾವು ತಮಾಶೆಗೆ ಆಕೆ ಹೇಳಿರಬಹುದು ಎಂದು
ಅಂದುಕೊಂಡರೆ ಹಾಗಿರಲಿಲ್ಲ ಅದು ನಿಜವೇ ಆಗಿತ್ತು. ನಮ್ಮ ಅಯಂಕರ್ ಕೂದಲಿಗೆ ಕ್ಲಿಪ್ ಹಾಕಿಕೊಂಡರು.
ಹೀಗಿದೆ ಆಸ್ತಿಕರ ಮನಸ್ಸು.
ಗುಡಿ
ಗುಂಡಾರಗಳಲ್ಲಿ ನೆಲೆಗೊಂಡಿರುವ ಕ್ಯಾಲೆಂಡರಿನ ದೇವರುಗಳ ದರ್ಶನ ಮಾಡಬೇಕೆಂದರೆ ಅದಕ್ಕೆ
ಮನುಷ್ಯನಿರ್ಮಿತ ಅನೇಕ ಕಟ್ಟುಪಾಡುಗಳಿರುತ್ತವೆ. ಆ ಚೌಕಟ್ಟುಗಳನ್ನು ಮೀರುವುದು ಸುಲಭವಲ್ಲ. ಅದಕ್ಕೆ ಎಂಟೆದೆ
ಬೇಕು. ಪ್ರಜ್ನಾಪೂರ್ವಕವಾಗಿ ಅದನ್ನೊಮ್ಮೆ
ದಾಟಿಬಿಟ್ಟರೆ ದಶದಿಕ್ಕುಗಳೂ ನಮ್ಮದೇ, ನಾವು ನಡೆದದ್ದೇ ದಾರಿ.
[ ವಿಶ್ವವಾಣಿ ಪತ್ರಿಕೆಗಾಗಿ ಬರೆದ ಲೇಖನ.]
1 comments:
ಉತ್ತಮ ವಿಚಾರಧಾರೆ. ಪ್ರಶ್ನಿಸುವ ಮನೋಧರ್ಮ ಹಾಗು ಮನೋಧೈರ್ಯ ಎಲ್ಲರಿಗೂ ಬರಬೇಕು. ರವೀಂದ್ರನಾಥ ಠಾಕೂರರ ಗೀತೆಯ ಕೆಲವು ಸಾಲುಗಳು ನೆನಪಾದವು:
Where the clear stream of reason has not lost its way into the dreary desert sand of dead habit;
Where the mind is lead forward by thee into ever-widening thought and action-
Into that heaven of freedom, my Father, let my country awake.
Post a Comment