ಇಂಗ್ಲೆಂಡಿಗೆ ಹೋಗುವ ನಿರ್ಧಾರ ತೆಗೆದುಕೊಂಡದ್ದು ತೀರಾ ಆಕಸ್ಮಿಕವಾಗಿ. ನಮ್ಮ ಮಗಳು ಅಲ್ಲಿಯ ಗೋಲ್ಡ್ ಸ್ಮಿತ್ ಕಾಲೇಜಿನಲ್ಲಿ ’ಕಲ್ಚರಲ್ ಸ್ಟಡಿ’ ಯಲ್ಲಿ ಸ್ನತಕೋತ್ತರ ಪದವಿ ಓದುತ್ತಿದ್ದಳು. ಹಾಗಾಗಿ ಅವಳ ಗ್ರಾಜುವೇಶನ್ ಡೇ ಸಮಾರಂಭಕ್ಕೆ ನನ್ನನ್ನು ಅಹ್ವಾನಿಸಿದ್ದಳು. ಯುರೋಪ್ ಟೂರ್ ಮಾಡುವ ಬಗ್ಗೆ ನಾನು ಯೋಚಿಸಿದ್ದುಂಟು. ಆದರೆ ಯುರೋಪ್ ಟೂರ್ ಆಯೋಜಕರು ಸಾಮಾನ್ಯವಾಗಿ ಇಂಗ್ಲೆಂಡ್ ನ್ನು ತಮ್ಮ ಲಿಸ್ಟ್ ನಲ್ಲಿ ಸೇರಿಸುವುದಿಲ್ಲ. ಹಾಗಾಗಿ ಮಗಳ ಗ್ರಾಜುವೇಶನ್ ನೆಪದಲ್ಲಿ ಇಂಗ್ಲೆಂಡ್ ಸುತ್ತಿ ಬರುವುದು ಎಂದು ತೀರ್ಮಾನಿಸಿ ಅಲ್ಲಿಗೆ ಹಾರಿದೆ. ಇದು ನನ್ನ ಮೊದಲ ವಿದೇಶ ಪ್ರವಾಸವಾಗಿತ್ತು.
ಶೇಕ್ಸ್ಪಿಯರ್ ಬಾಳಿ ಬದುಕಿದ್ದ ಮನೆ |
ಇಂಗ್ಲೆಂಡ್, ಸದಾ ಮಳೆ ಸುರಿಯುವ ಶೀತ ಪ್ರದೇಶ. ಜೂನ್
ಜುಲೈ ಹೊರತು ಪಡಿಸಿ ವರ್ಷದ ಎಲ್ಲಾ ತಿಂಗಳುಗಳಲ್ಲಿ ಮೈ ತುಂಬಾ ಬೆಚ್ಚನೆಯ ಉಣ್ಣೆ ಬಟ್ಟೆಗಳನ್ನು
ಹೊದ್ದುಕೊಂಡು ಓಡಾಡುವ ಜನರು. ಇಂತಹ ದೇಶಕ್ಕೆ ಕಡು ಚಳಿಗಾಲದಲ್ಲಿ ಹೊರಡುವುದೆಂದಾಗ ಇದ್ದ ಅಲ್ಪ
ಸಮಯದಲ್ಲೇ ಸಾಕಷ್ಟು ಪೂರ್ವ ತಯಾರಿ ನಡೆಸಿದ್ದೆ.
ಇದಕ್ಕೆ ನನ್ನ ಹಿಮಾಲಯ ಪ್ರವಾಸದ ಅನುಭವ ನೆರವಿಗೆ ಬಂದಿತ್ತು. ಅರುಣಾಚಲ ಪ್ರದೇಶದ ತವಾಂಗ್
ಮಿಲಿಟರಿ ಕ್ಯಾಂಪಿನಲ್ಲಿ ಖರೀದಿಸಿದ್ದ ಬೆಚ್ಚನೆಯ ಥರ್ಮಲ್ ಒಳಉಪಡುಗಳು ನನ್ನ ಟ್ರಾವಲ್ ಬ್ಯಾಗ್
ಸೇರಿದವು.
ಅರಬ್ ಎಮಿರೇಟ್ಸ್ ವಿಮಾನ ಲಂಡನ್ನಿನ ಗ್ಯಾಟಿವಿಕ್ ವಿಮಾನ
ನಿಲ್ದಾಣದಲ್ಲಿ ಅಲ್ಲಿಯ ಕಾಲಮಾನದ ಪ್ರಕಾರ ಬೆಳಿಗ್ಗೆ ಆರೂವರೆಗೆ ಇಳಿಯುತ್ತಿರುವಾಗ ವಿಮಾನದ
ಕ್ಯಾಪ್ಟನ್ ಹೇಳುತ್ತಿದ್ದ, ಇಲ್ಲೀಗ ಮೈನಸ್ ಎರಡು ಡಿಗ್ರಿ ತಾಪಮಾನ ಇದೆಯೆಂದು. ಸಣ್ಣಗೆ
ನಡುಗುತ್ತಲೇ ಅಲ್ಲಿಳಿದು ಸ್ವಲ್ಪ ದೂರ ನಡೆದು ಅಲ್ಲಿನ ಇಂಟರ್ಲಿಂಕ್ ರೈಲಿನಲ್ಲಿ ಹತ್ತಿರ ಕ್ಯೂಬ್
ಸ್ಟೇಷನ್ [ ಕ್ಯೂಬ್ ಅಂದ್ರೆ ನಮ್ಮ ಮೆಟ್ರೋ ರೈಲಿನಂತೆ ನಗರ ಸಂಪರ್ಕಸಾರಿಗೆಗಳು] ಹಿಡಿದು ನಾವು
ಅನಲೈನ್ ಬುಕ್ ಮಾಡಿದ್ದ ಹೋಟೀಲ್ ಇರುವ ಜಾನ ಕೆನ್ಸಿಂಗ್ಟನ್ ಗೆ ಬಂದೆವು.
ಇಲ್ಲಿ ಒಂದು ಮಾತು ಹೇಳಬೇಕು. ಸಾಮಾನ್ಯವಾಗಿ ಲಂಡನ್
ಪ್ರವಾಸ ಎಂದರೆ ಲಂಡನ್ ನಗರದ ಪ್ರವಾಸವೇ ಆಗಿಬಿಡುತ್ತದೆ. ತಿಂಗಳಿಡೀ ಸುತ್ತಾಡಿದರೂ ಹಲಾವರು
ಪ್ರಮುಖ ಸ್ಥಳಗಳು ನೋಡಲಾಗದೆ ಉಳಿದುಬಿಡುತ್ತವೆ. ಅಷ್ಟೊಂದು ಪ್ರವಾಸಿ ತಾಣಗಳು ಇಲ್ಲಿವೆ. ಯಾಕೆಂದರೆ ಇದೊಂದು ಐತಿಹಾಸಿಕ ನಗರ. ಆದರೆ
ನನ್ನ ದ್ರುಷ್ಟಿ ಲಂಡನ್ನಿಂದಾಚೆಯೂ ಇತ್ತು. ಪ್ರಮುಖವಾಗಿ ವಿಶ್ವವಿಖ್ಯಾತ ನಾಟ್ಕಕಾರ
ಶೇಕ್ಸಿಪಿಯರನ ಜನ್ಮಭೂಮಿಯನ್ನು ನೋಡಬೇಕೆಂಬ ಹೆಬ್ಬಯಕೆಯಿತ್ತು. ಎದೆಲ್ಲವೂ ಕೇವಲ ಹನ್ನೆರಡು
ದಿನಗಳೊಳಗೆ ಪೂರೈಸಿಕೊಳ್ಳಬೇಕಾಗಿತ್ತು. ಹಾಗಾಗಿ ಶೇಕ್ಸ್ ಪಿಯರನ ಕಾರ್ಯಕ್ಷೇತ್ರವಾಗಿದ್ದ
ಲಂಡನ್ನಿನ ಥೇಮ್ಸ್ ನದಿಯ ದಂಡೆಯ ಮೇಲಿನ ಶೇಕ್ಸ್ಪಿಯರ್ ಗ್ಲೋಬ್ ಅನ್ನು ಮೊದಲನೆ ದಿನವೇ ನೋಡಿ
ಮುಗಿಸಿದೆ.
ಶೇಕ್ಸ್ಪಿಯರ್ ಹುಟ್ಟಿದ್ದು ಲಂಡನ್ನಿನಿಂದ ೧೩೩ ಕಿ.ಮೀ
ದೂರದಲ್ಲಿರುವ ಸ್ಟ್ಯಾಟ್ ಫರ್ಡ್ ಅಪೊನ್ ಎವನ್ ಎಂಬ ಪುಟ್ಟ ನಗರದಲ್ಲಿ. ಇಂಗ್ಲೆಂಡಿನ ನೆಲದಲ್ಲಿ
ನಿಂತು ನೋಡಿದರೆ ಅದೊಂದು ಚಿಕ್ಕ ಪೇಟೆ. ಇದು ಎವನ್ [Avon] ಎಂಬ ನದಿ ದಂಡೆಯ ಮೇಲಿದೆ. ಸ್ಟ್ಯಾಟ್ ಫರ್ಡ್ ಅವನ್ ಗೆ
ಹೋಗುವ ದಾರಿಯಲ್ಲಿಯೇ ಆಕ್ಸ್ಪರ್ಡ್ ಯೂನಿವರ್ಸಿಟಿ ಸಿಗುತ್ತದೆ. ಲಂಡನ್ನಿನಿಂದ ಅಲ್ಲಿಗೆ ಹೋಗುವ
ದೂರ ೮೩ ಕಿ.ಮೀ. ಹೀಗಿರುವಾಗ ಜಗತ್ತಿನ ಎಲ್ಲಾ ಶಿಕ್ಷಣಾರ್ಥಿಗಳ ಹಂಬಲದ ಗಮ್ಯಸ್ಥಳವಾದ
ಅಕ್ಸ್ಪರ್ಡ್ ಗೆ ಬೇಟಿ ಕೊಡದಿದ್ದರೆ ಹೇಗೆ? ಹಾಗಾಗಿ ಅಲ್ಲಿಗೂ ಹೋದೆ.. ಇಲ್ಲಿ ನಿಮಗೆ ಮತ್ತೊಂದು
ಮಾಹಿತಿಯನ್ನು ನೀಡಬೇಕು.ಲಂಡನ್ ಸೇರಿದಂತೆ ಇಂಗ್ಲೆಂಡಿನ ಎಲ್ಲಾ ಪ್ರಮುಖ ನಗರಗಳಲ್ಲಿ
ಪ್ರವಾಸಿಗಳಿಗೆಂದೇ Hop-on Hop –off ಎಂಬ ಬಸ್
ಪ್ರದಕ್ಷಿಣೆಯ ವ್ಯವಸ್ಥೆಯಿದೆ. ಮಹಡಿ ಬಸ್ ಇದು. ಇಂಗ್ಲೆಂಡಿನ ವಿಶಿಷ್ಠತೆಗಳಲ್ಲಿ ಮಹಡಿ ಬಸ್
ಕೂಡಾ ಒಂದು. ಹದಿನೆಂಟು ಪೌಂಡ್ ಅಂದರೆ ಸರಿಸುಮಾರು ಸಾವಿರದ ಏಳನೂರು ರೂಪಾಯಿ ಪಾವತಿಸಿದರೆ ನಗರದ
ಪ್ರಮುಖ ಪ್ರೇಕ್ಷಣೆಯ ಸ್ಥಳಗಳನ್ನು ಆಡಿಯೋ ವಿವರಣೆಯ ಸಹಿತ ನಿಮ್ಮನ್ನು ಹೊತ್ತು ಇದು ರೌಂಡ್
ಹೊಡೆಯುತ್ತದೆ. ಪ್ರವಾಸಿಗರು ತಮಗೆ ಬೇಕಾದಲ್ಲಿ ಇಳಿದು ಅಲ್ಲಿಯ ಜಾಗಗಳನ್ನು ನೋಡಿ ಇನ್ನೊಂದು
ಹಾಫ್ ಅನ್ ಬಸ್ಸು ಹತ್ತಿಕೊಳ್ಳಬಹುದು.
ಇಡೀ ಅಕ್ಸ್ಪರ್ಡ್ ಅನ್ನು ಹಾಫ್ ಆನ್ ಬಸ್ಸಿನಲ್ಲಿ
ತಿರುಗಾಡಿ ಮಧ್ಯಾಹ್ನ ರೈಲಿನಲ್ಲಿ ಸ್ಟ್ಯಾಟ್ ಫರ್ಡ್ ಅಪೊನ್ ಗೆ ಬಂದಾಗ ಘಂಟೆ ಏಳುಮುಕ್ಕಾಲು
ಆಗಿತ್ತು. ಆಕ್ಸ್ಪರ್ಡ್ ನಲ್ಲಿ ಅನಲೈನ್ ನಲ್ಲಿ
ಲಾಡ್ಜ್ ಗಾಗಿ ಹುಡುಕಾಡಿದಾಗ ನಮ್ಮ ಬಜೇಟ್ ಗೆ ಹೊಂದಿಕೆಯಾಗಿದ್ದು ಟ್ರಾವಲ್ ಲಾಡ್ಜ್ ಒಂದೇ.
ಅಲ್ಲಿ ಒಂದು ದಿನಕ್ಕೆ ಏಳು ಸಾವಿರ ರೂಪ್ಯಾಗಳಷ್ಟು ಬಾಡಿಗೆಯಿತ್ತು.. ಆದರೆ ಮೊದಲೇ ಬುಕ್
ಮಾಡಿದ್ದರೂ ರಾತ್ರಿ ಏಳು ಘಂಟೆಯ ಒಳಗೆ ಬಾರದಿದ್ದರೆ ಬಾಗಿಲು ತೆರೆಯುವುದಿಲ್ಲ ಮತ್ತು ದುಡ್ಡು
ವಾಪಾಸು ಕೊಡುವುದಿಲ್ಲ ಎಂದು ನಮೂದಾಗಿತ್ತು. ಹಾಗಾಗಿ ಮುಂಗಡ ಬುಕ್ ಮಾಡಿರಲಿಲ್ಲ. ಹಾಗಿದ್ದರೂ
ಖಾಸಗಿ ಮನೆಯಂತಿದ್ದ ಆ ಲಾಡ್ಜನ ಕರೆಘಂಟೆ ಒತ್ತಿದೆವು. ’ಕ್ಷಮಿಸಿ. ನಾವು ಬಾಗಿಲು
ತೆಗೆಯುವುದಿಲ್ಲ....’ಎನ್ನುವ ಧ್ವನಿಮುದ್ರಿತ ವಿವರಣೆ ಕೇಳಿಸಿತು. ಹಾಗಾಗಿ ಚಾನ್ಸ್ ತೆಗೆದುಕೊಂಡು ಬಂದು ನಾವು ಮಂಗ
ಆಗಿದ್ದೆವು. ಅದು ಪುಟ್ಟ ಪಟ್ಟಣ. ವಸತಿಗಾಗಿ ಅಲ್ಲಿ ಇಲ್ಲಿ ಅಲೆದಾಡಿ ಸುಸ್ತಾಗಿ ಕೊನೆಗೆ
ಒಂದು ಮಹಿಳೆ ನಡೆಸುತ್ತಿರುವ ಹೋಂ ಸ್ಟೇಯಂತಹ ಗೆಸ್ಟ್ ಹೌಸ್ ನಲ್ಲಿ ದುಬಾರಿ ಬೆಲೆ ತೆತ್ತು
ಬೆಚ್ಚನೆಯ ಆಶ್ರಯ ಪಡೆದೆವು. ಮೈನಸ್ ೪-೫ ಡಿಗ್ರಿ ತಾಪಮಾನದಲ್ಲಿ ಬೀದಿ ಬೀದಿ ಅಲೆದ ನಮ್ಮನ್ನು
ನೀವೊಮ್ಮೆ ಕಲ್ಸಿಕೊಳ್ಳಿ.
ಅವನ್ ನದಿ |
ಹೊರಗೆ ಕೊರೆಯುವ ಚಳಿಯಿದ್ದರೂ ಅಲ್ಲಿಯ ನಿಯಮದಂತೆ ಹತ್ತು ಘಂಟೆಗೆ ಚೆಕ್ ಔಟ್ ಆಗಿ ಶೇಕ್ಸ್ಪಿಯರ್ ಅಂಬೆಗಾಲಿಟ್ಟ ಜಾಗಕ್ಕೆ ಬಂದೆವು. ಅಲ್ಲಿ ನಿಜವಾದ ಅರ್ಥದಲ್ಲಿ ಶೇಕ್ಸ್ ಪಿಯರ್ ಜೀವಂತವಾಗಿದ್ದಾನೆ. ಎಲ್ಲೆಲ್ಲೂ ಅವನದೇ ಹೆಸರಿನ ಉದ್ಯಾನವನಗಳು, ಕಾಫಿಶಾಪ್ ಗಳು, ಹೋಟೇಲುಗಳು, ಪುಸ್ತಕದಂಗಡಿಗಳು . ಒಟ್ಟಿನಲ್ಲಿ ಶೇಕ್ಸ್ಪಿಯರನ ಸ್ಪರ್ಶವಿಲ್ಲದ ಯಾವುದೇ ಜಾಗ ಅಲ್ಲಿರಲಿಲ್ಲ. ಅದರಲ್ಲೂ ಅವನು ಹುಟ್ಟಿದ ಮನೆಯೆದುರಿನ Henley Street ಅಂತೂ, ಸರ್ವಂ ಶೇಕ್ಸಿಪಿಯರ್ ಮಯಂ. ಜಗತ್ತಿನಾದ್ಯಂತದಿಂದ ಬರುವ ಪ್ರವಾಸಿಗರು ಒಂದೂವರೆ ಸಾವಿರದಷ್ಟು ಪ್ರವೇಶ ಶುಲ್ಕವನ್ನು ನೀಡಿ ಮಹಾನ್ ನಾಟಕಕಾರನ ಜನ್ಮ ಸ್ಥಳವನ್ನು ಕಂಡು ಸಾರ್ಥಕ್ಯ ಭಾವವನ್ನು ಪಡೆಯುತ್ತಿದ್ದರು.. ಹದಿನಾರನೇ ಶತಮಾನದಲ್ಲಿ ಬಾಳಿ ಬದುಕಿದ ಜಗಮಾನ್ಯನಾದ ಆ ನಾಟಕಾರನ ಬಗ್ಗೆ ಇಂಗ್ಲೀಶರಿಗೆ ಬಲು ಹೆಮ್ಮೆ, ಅವನು ಅವರ ರಾಷ್ಟ್ರೀಯ ಕವಿ.
ಶೇಕ್ಸ್ ಪಿಯರನ ಜನ್ಮಸ್ಥಳದ ಉಸ್ತುವಾರಿಯನ್ನು ಶೇಕ್ಸ್
ಪಿರಿಯನ್ ಬರ್ತ್ ಪ್ಲೇಸ್ ಟ್ರಸ್ಟ್ ನೋಡಿಕೊಳ್ಳುತ್ತಿದೆ. ಮನೆ ಆಯಾತಾಕರದಲ್ಲಿದ್ದು ಎರಡು ಮಹಡಿಗಳನ್ನು
ಹೊಂದಿದೆ, ಹಲವು ಕೋಣೆಗಳಿವೆ. ಮರದ ಹಲಗೆಗಳ ಒಳಾವರಣವಿದ್ದು ಅಲ್ಲಿಯ ಹವಾಮಾನಕ್ಕೆ ತಕ್ಕಂತೆ
ಅಗ್ಗಿಷ್ಟಿಕೆಯೊಂದಿಗೆ ಬೆಚ್ಚಗಿನ ವಾತಾವರಣವಿದೆ. ನಾನು ಒಳಗೆ ಹೋದಾಹ ಪ್ರತಿಕೋಣೆಯಲ್ಲೂ ಇಬ್ಬರು
ಶಾಲಾ ಹುಡುಗಿ ಮತ್ತು ಹುಡುಗ ಆ ರೂಮಿನ ಮಹತ್ವದ ಬಗ್ಗೆ ಪ್ರವಾಸಿಗರಿಗೆ ಟಿಪ್ಪಣಿಯನ್ನು
ನೀಡುತ್ತಿದ್ದರು. ಅವನು ಹುಟ್ಟಿದ ಕೋಣೆ, ಮಲಗಿದ ಹಾಸಿಗೆ. ತೊಟ್ಟಿಲು, ತರುಣನಾಗಿದ್ದಾಗ ಮಲಗಿದ್ದ
ಜಾಗ, ಡೈನಿಂಗ್ ಹಾಲ್. ಅಡುಗೆ ಮನೆ ಎಲ್ಲವನ್ನೂ ಆ ಪುಟ್ಟ ಮಕ್ಕಳು ಬಾಯಿಪಾಠ ಮಾಡಿಕೊಂಡು
ತಪ್ಪಿದಾಗ ಕೈಯ್ಯಲ್ಲಿದ್ದ ಟಿಪ್ಪಣಿ ನೋಡಿಕೊಂಡು ಹೇಳುತ್ತಿದ್ದುದ್ದನ್ನು ಕಂಡು ಖುಷಿಗೊಂಡು
ಇಂಗ್ಲೀಷಿನ ಶಿಷ್ಟಾಚಾರದಂತೆ ನಾನೂ ಕೂಡಾ ’ಥ್ಯಾಂಕ್ಯೂ’ ಅಂದಾಗ ಅವರು ಕೂಡಾ ಹೂವಿನಂತೆ
ನಗುತ್ತಿದ್ದರು.ಶೇಕ್ಸ್ ಪಿಯರ್ ತಂದೆ ಮಾಡುತ್ತಿದ್ದ ಚರ್ಮದ ಉದ್ಯೋಗದ ಬಗ್ಗೆ ವಯಸ್ಸಾದ
ವ್ಯಕ್ತಿಯೊಬ್ಬರು ಸ್ವತಃ ತಂದೆಯ ವೇಶ ಧರಿಸಿ ಪ್ರಾತ್ಯಕ್ಷಿತೆ ನೀಡುತ್ತಿದ್ದರು. ವ್ಯಾಪಾರಿ
ಉದ್ದೇಶದ ಕಾರಣಕ್ಕಾಗಿಯೇ ಇರಬಹುದು ನಿರ್ಗಮನ ಶೇಕ್ಪ್ಪಿಯರನ ಗಿಪ್ಟ್ ಸೆಂಟರಿನ ಮೂಕವೇ ಇತ್ತು ಹಾಗಾಗಿ ನಾನೂ ಒಂದೆರಡು ವಸ್ತುಗಳನ್ನು ಖರೀದಿ ಮಾಡಿದೆ.
ಅಲ್ಲಿಂದ ಒಂದರ್ಧ ಕಿ.ಮೀ ದೂರದಲ್ಲಿ ಆತ ಮದುವೆಯಾಗಿ
ಸಂಸಾರ ಹೂಡಿದ್ದ ಜಾಗವೂ ಇದೆ. ಬರ್ತ್ ಪ್ಲೇಸ್ ಟಿಕೇಟಿನಲ್ಲಿ ಅಲ್ಲಿಗೂ ಹೋಗಬಹುದಾಗಿತ್ತು. ಅಲ್ಲಿ
ಶೇಕ್ಸ್ ಪಿಯರನ ನಾಟ್ಕಗಳ ಒಂದೆರಡು ವಾಕ್ಯಗಳನ್ನು ಕೆತ್ತಿದ ಫಲಕಗಳು, ಪಾತ್ರಗಳ ಶಿಲ್ಪಗಳನ್ನೊಳಗೊಂಡ
ಆಕರ್ಷಕ ಉದ್ಯಾನವಿತ್ತು. ಪಕ್ಕದಲ್ಲಿ ಒಂದು ಚಿಕ್ಕ ಮ್ಯೂಸಿಯಂ ಇತ್ತು. ಇದನ್ನು ಬಿಟ್ಟರೆ ಅಲ್ಲಿ
ಆಕರ್ಷಕವಂತಹದ್ದೇನೂ ಕಾಣಿಸಲಿಲ್ಲ. ಆದರೆ ಅಲ್ಲಿಯೇ ಪಕ್ಕದಲ್ಲಿ ಪುರಾತನವಾದ ಚರ್ಚ್ ಒಂದು ಇತ್ತು.
ಇದರ ಬಗ್ಗೆ ಆತ ತನ್ನ ಬರಹಗಳಲ್ಲಿ ಉಲ್ಲೇಖಿಸಿದ ಹಾಗೆ
ನೆನಪು. ಅಲ್ಲಿಂದ ಮುಂದೆ ನಡೆಯುತ್ತಾ ಹೋದಂತೆಲ್ಲಾ ಆತ ಬಾಲ್ಯದದಲ್ಲಿ ಓದಿದ ಶಾಲೆ ಸಿಕ್ಕಿತು.
ಅಲ್ಲಿಗೂ ಪ್ರವೇಶ ಶುಲ್ಕವಿತ್ತು.
ಇಲ್ಲಿ ಚಿರನಿದ್ರೆಯಲ್ಲಿ ಮಲಗಿದ್ದಾನೆ,ಶೇಕ್ಸ್ ಪಿಯರ್ |
ಅವನ್ ನದಿಯ ದಂಡೆಯುದ್ದಕ್ಕೂ ಶೇಕ್ಸ್ ಪಿಯರನ ಹೆಸರಿನ
ಉದ್ಯಾನ ಹರಡಿಕೊಂಡಿತ್ತು. ಅಲ್ಲೊಂದು ಪುಟ್ಟ ಥಿಯೇಟರ್ ಇದೆ. ಹೋಟೇಲ್ ನ ಹಾಗೆ ಕಾಣುವ ಎರಡು
ದೊಡ್ಡ ಕಟ್ಟಡಗಳಿವೆ. ಜನ ತಮ್ಮ ಪ್ರೀತಿಯ ನಾಯಿ ಹಿಡಿದುಕೊಂಡು ವಾಕಿಂಗ್ ಹೋಗುತ್ತಿದ್ದರು. ನದಿಯಲ್ಲಿ ಹಂಸಗಳ ಜೊತೆ ವಿವಿಧ ರೀತಿಯ ಹಕ್ಕಿಗಳು
ವಿಹರಿಸುತ್ತಿದ್ದವು. ನನ್ನನ್ನು ನೋಡಿ ತೇಲುತ್ತಾ ಬಂದು ತಿನ್ನಲು ಕೊಡು ಎಂಬತೆ ಜೋರಾಗಿ ಕ್ಕೆ
ಕ್ಕೆ ಎಂದು ಗಲಾಟೆ ಮಾಡತೊಡಗಿದವು. ದೊಡ್ಡ ದೊಡ್ಡ ಹಕ್ಕಿಗಳ ಕಾಲಿಗೆ ಗುರುತುಪಟ್ಟಿಯನ್ನು
ಕಟ್ಟಲಾಗಿತ್ತು.
ಉದ್ಯಾನವನದ ಇನ್ನೊಂದು ಬದಿಯಲ್ಲಿ ಕೊಳವಿತ್ತು ಅದರ ಮೇಲ್ಪದರ ಹೆಪ್ಪುಗಟ್ಟಿತ್ತು. ಎಳೆಬಿಸಿಲಿಗೆ ಮೈಯ್ಯೊಡ್ಡಿ ಅದರ ಮೇಲೆ ಕುಳಿತ್ತಿದ್ದ ಹಕ್ಕಿಗಳು ಚಿಲಿಪಿಲಿಗುಟ್ಟುತ್ತಾ ಹಾಗೊಮ್ಮೆ ಈಗೊಮ್ಮೆ ಜಾರುವಾಟ ಆಡುತ್ತಿದ್ದವು. ಇದರಿಂದ ಸ್ಪೂರ್ತಿಗೊಂಡ ನಾನು ಪಕ್ಕದಲ್ಲಿದ್ದ ಕಲ್ಲೊಂದನೆತ್ತಿ ನೀರಿನತ್ತ ಒಗೆದೆ. ಅದು ಟಣ್ ಅಂತ ಶಬ್ದ ಮಾಡುತ್ತಾ ಬೆಳ್ಳನೆಯ ಟಿಸಿಲುಗಳಾದವು. ತಲೆಯೆತ್ತಿ ಸುತ್ತಮುತ್ತ ನೋಡಿದರೆ ಸ್ವಲ್ಪ ದೂರದಲ್ಲಿ ವ್ರುತ್ತಾಕಾರದಲ್ಲಿ ನಿಲ್ಲಿಸಲಾಗಿದ್ದ . ಹ್ಯಾಮ್ಲೆಟ್, ಲೇಡಿ ಮ್ಯಾಕ್ಬ್ಯಾತ್, ಕಿಂಗ್ ಲಿಯರ್. ಮ್ಯಾಕ್ ಬೆತ್...ಮುಂತಾದವರ ಪ್ರತಿಮೆಗಳೆಲ್ಲಾ ಕಾಣಿಸುತ್ತಿದ್ದವು. ಎಡಕ್ಕೆ ತಿರುಗಿದರೆ ನಸು ಬಾಗಿದ ಮುಖದ ತರುಣ ಶೇಕ್ಸ್ಪಿಯರ್ ಎಡಗೈನಲ್ಲಿ ಸುರುಳಿ ಸುತ್ತಿರುವ ಎಂತಹದ್ದನ್ನೋ ಎದೆಗವಚಿಕೊಡು ಬಲಗೈಯನ್ನು ನನ್ನೆಡೆಗೆ ಚಾಚಿ ಮುಗುಳ್ನಗುತ್ತಿರುವಂತೆ ಕಾಣಿಸುತ್ತಿತ್ತು. ಸುರುಳಿ ಸುತ್ತಿದ್ದು ಅವನ ಬರೆದ ಹಾಳೆಗಳೋ ಅಥವಾ ಪ್ರಶಸ್ತಿಫಲಕಗಳೋ ಸ್ಪಷ್ಟವಾಗಿ ಕಾಣಿಸಲಿಲ್ಲ!
ಉದ್ಯಾನವನದ ಇನ್ನೊಂದು ಬದಿಯಲ್ಲಿ ಕೊಳವಿತ್ತು ಅದರ ಮೇಲ್ಪದರ ಹೆಪ್ಪುಗಟ್ಟಿತ್ತು. ಎಳೆಬಿಸಿಲಿಗೆ ಮೈಯ್ಯೊಡ್ಡಿ ಅದರ ಮೇಲೆ ಕುಳಿತ್ತಿದ್ದ ಹಕ್ಕಿಗಳು ಚಿಲಿಪಿಲಿಗುಟ್ಟುತ್ತಾ ಹಾಗೊಮ್ಮೆ ಈಗೊಮ್ಮೆ ಜಾರುವಾಟ ಆಡುತ್ತಿದ್ದವು. ಇದರಿಂದ ಸ್ಪೂರ್ತಿಗೊಂಡ ನಾನು ಪಕ್ಕದಲ್ಲಿದ್ದ ಕಲ್ಲೊಂದನೆತ್ತಿ ನೀರಿನತ್ತ ಒಗೆದೆ. ಅದು ಟಣ್ ಅಂತ ಶಬ್ದ ಮಾಡುತ್ತಾ ಬೆಳ್ಳನೆಯ ಟಿಸಿಲುಗಳಾದವು. ತಲೆಯೆತ್ತಿ ಸುತ್ತಮುತ್ತ ನೋಡಿದರೆ ಸ್ವಲ್ಪ ದೂರದಲ್ಲಿ ವ್ರುತ್ತಾಕಾರದಲ್ಲಿ ನಿಲ್ಲಿಸಲಾಗಿದ್ದ . ಹ್ಯಾಮ್ಲೆಟ್, ಲೇಡಿ ಮ್ಯಾಕ್ಬ್ಯಾತ್, ಕಿಂಗ್ ಲಿಯರ್. ಮ್ಯಾಕ್ ಬೆತ್...ಮುಂತಾದವರ ಪ್ರತಿಮೆಗಳೆಲ್ಲಾ ಕಾಣಿಸುತ್ತಿದ್ದವು. ಎಡಕ್ಕೆ ತಿರುಗಿದರೆ ನಸು ಬಾಗಿದ ಮುಖದ ತರುಣ ಶೇಕ್ಸ್ಪಿಯರ್ ಎಡಗೈನಲ್ಲಿ ಸುರುಳಿ ಸುತ್ತಿರುವ ಎಂತಹದ್ದನ್ನೋ ಎದೆಗವಚಿಕೊಡು ಬಲಗೈಯನ್ನು ನನ್ನೆಡೆಗೆ ಚಾಚಿ ಮುಗುಳ್ನಗುತ್ತಿರುವಂತೆ ಕಾಣಿಸುತ್ತಿತ್ತು. ಸುರುಳಿ ಸುತ್ತಿದ್ದು ಅವನ ಬರೆದ ಹಾಳೆಗಳೋ ಅಥವಾ ಪ್ರಶಸ್ತಿಫಲಕಗಳೋ ಸ್ಪಷ್ಟವಾಗಿ ಕಾಣಿಸಲಿಲ್ಲ!
[ ಇವತ್ತಿನ [ ಪೆಭ್ರವರಿ ೫ .೨೦೧೭] ಸಂಯುಕ್ತ ಕರ್ನಾಟಕ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಬರಹ ]
3 comments:
ಶಾಲಾ ಪಠ್ಯ ಪುಸ್ತಕದಲ್ಲಿ ಇಂಗ್ಲಿಷ್ ಎಂದು ಶುರುವಾದಾಗ ಶೇಕ್ಸಪೀಯರ್ ಪ್ರಭಾವ ಶುರುವಾಗಿದ್ದು. ರೋಮಿಯೋ ಜೂಲಿಯೆಟ್, ಹ್ಯಾಮ್ಲೆಟ್, ಜೂಲಿಯಸ್ ಸೀಸರ್ ಇವೆಲ್ಲಾ ಓದುವಾಗ ಅವನ ಪ್ರಭಾವಕ್ಕೆ ಒಳಗಾಗಿದ್ದು ಇತ್ತು.
ನಿಮ್ಮ ಪ್ರವಾಸಿ ಲೇಖನದಲ್ಲಿ, ನಮ್ಮನ್ನು ದುಡ್ಡು ಕಾಸಿಲ್ಲದೆ ಹಾಗೆಯೇ ಕರೆದೊಯ್ದಿರಿ.
ಚಿಕ್ಕ ಚಿಕ್ಕ ವಿಷಯಗಳನ್ನು ವಿವರಿಸಿರುವ ರೀತಿ ಸೊಗಸಾಗಿದೆ. ನಿಮ್ಮ ಲೇಖನವನ್ನು ಯಾರಾದರೂ ನಮ್ಮ ಮುಂದೆ ಓದುತ್ತಾ ಇರುವಾಗ, ನಾವು ಕಣ್ಣುಮುಚ್ಚಿ ಕುಳಿತರೆ ಅಕ್ಷರಶಃ ಅವನ ಜನುಮ ಭೂಮಿಯ ಪ್ರಯಾಣ ನಮಗೂ ಆಗುತ್ತದೆ.
ಸೂಪರ್ ಲೇಖನ ಮೇಡಂ .. ನಿಮ್ಮ ಇಂಗ್ಲೆಂಡ್ ಪ್ರವಾಸ ಮುಂದಿನ ತುಣುಕು ಬರುವುದಾದರೆ ಕಾಯುವವರಲ್ಲಿ ನಾ ಕೂಡ ಇದ್ದೇನೆ.
ಲೇಡಿ ಮ್ಯಾಕ್‍ಬೆಥ್ ಪ್ರತಿಮೆಯಲ್ಲಿ, ಅವಳು ಸೀರೆ ಉಟ್ಟ ಹಾಗೆ ತೋರುತ್ತಿದೆಯಲ್ಲ? ಇದು ಆಗಿನ ಕಾಲದ ಹೆಂಗಸರ ಉಡುಪು ಎಂದುಕೊಳ್ಳಬಹುದೆ?
ಥ್ಯಾಂಕ್ಸ್ ಶ್ರೀಕಾಂತ್ ಮಂಜುನಾಥ್, ಖಂಡಿತಾ ಇನ್ನೂ ಕೆಲವು ಲೇಖನ ಬರೆಯುವ ಇರಾದೆ ಇದೆ.
ಸುನಾಥ ಕಾಕ, ನಿಮ್ಮ ಅನಿಸಿಕೆ ನಿಜ. ನನಗೂ ಅದು ಮೊದಲ ನೋಟಕ್ಕೆ ಸೀರೆಯಂತೆಯೇ ಭಾಸವಾಯ್ತು. ಆದರೆ ಅವಳ ಕಣ್ಣ ತೀಕ್ಷಣತೆಗೆ ಉಡುಪು ಮಸುಕಾಯ್ತು!
Post a Comment