ಏಳು ಸಮುದ್ರಗಳ ನಡುವೆಯೊಂದು ದ್ವೀಪ. ಅಲ್ಲಿ ಬಂಧನದಲ್ಲಿರುವ ರಾಜಕುಮಾರಿ. ಅವಳನ್ನು ಬಿಡಿಸಿಕೊಂಡು
ಬರಲು ಹೊರಟ್ ರಾಜಕುಮಾರ್. ಅವನು ಎದುರಿಸುವ ಸಂಕಷ್ಟಗಳು...ಇದೆಲ್ಲಾ ಬಾಲ್ಯದಲ್ಲಿ ನಾವು
ಕಣ್ಣರಳಿಸಿಕೊಂಡು ಕೇಳುತ್ತಿದ್ದ ರಮ್ಯ ಕಥೆ. ಆ
ರಾಜಕುಮಾರಿ ನಾನಾಗಿದ್ದರೆ? ಆ ದ್ವೀಪಕ್ಕೆ ಹೋಗಲು ಸಾಧ್ಯವಾಗಿದ್ದರೆ?
ಹೌದು, ಕನಸುಗಾರರ. ಸಾಹಸಿಗಳ. ಏಕಾಂತಪ್ರಿಯರ ಮನಸ್ಸನ್ನು
ಸೆಳೆಯುವ ನಿಗೂಡಶಕ್ತಿ ದ್ವೀಪಗಳಿಗಿದೆ; ಸಮುದ್ರಕ್ಕಿದೆ; ಸಮುದ್ರದಂತಹ ನದಿಗಿದೆ.
ಬ್ರಹ್ಮಪುತ್ರವೆಂಬ ಉನ್ಮತ್ತ ನದಿಯ ಕಾಂತಶಕ್ತಿ ಇನ್ನೂ ವಿಸ್ತಾರವಾದದ್ದು. ಅಂತಹ ಕಾಂತಶಕ್ತಿಯಿಂದ
ಸೆಳೆಯಲ್ಪಟ್ಟು ನಾನು ಮಜೂಲಿ ಎಂಬ ದ್ವೀಪಕ್ಕೆ ಹೋದೆ. ನನ್ನ ಪ್ರವಾಸದ ಪಟ್ಟಿಯಲ್ಲಿ ಮಜೂಲಿಯ
ಹೆಸರಿರಲಿಲ್ಲ. ನನ್ನ ಗಮ್ಯ ಬ್ರಹ್ಮಪುತ್ರ ಎಂಬ ಮಹಾನದಿಯ ಚೊಚ್ಚಲ ಉತ್ಸವ ’ ನಮಾಮಿ
ಬ್ರಹ್ಮಪುತ್ರ’ವನ್ನು ನೋಡುವುದಾಗಿತ್ತು ಆದರೆ ನಾನವನ ಮಗುವಿನ ಮೋಹದಲ್ಲಿ ಬಿದ್ದೆ.!
ಹೌದು! ಮಾಜೂಲಿ ಬ್ರಹ್ಮಪುತ್ರ ಸ್ರುಜಿಸಿದ ದ್ವೀಪ. ಜಗತ್ತಿನಲ್ಲಿಯೇ
ನದಿಯೊಂದು ಹುಟ್ಟು ಹಾಕಿದ ಅತ್ಯಂತ ದೊಡ್ಡ
ದ್ವೀಪವಿದು. ಹಾಗೆಂದು ಗಿನ್ನಿಸ್ ಬುಕ್ ನಲ್ಲಿಯೂ ದಾಖಲಾಗಿದೆ.
ಸತ್ರದೊಳಗಿನ ಮೂಲದೇವರು ಕೃಷ್ಣ. |
ಬ್ರಹ್ಮಪುತ್ರ ಅಸ್ಸಾಂ ಜನತೆಯ ಜೀವಚೈತನ್ಯವೂ ಹೌದು,
ಕಣ್ಣೀರಿನ ನದಿಯೂ ಹೌದು. ೧೯೭೦ರಲ್ಲಿ ಸಂಭವಿಸಿದ ಭೀಕರ ನೆರೆಯಲ್ಲಿ ಸುಮಾರು ಮೂರು ಲಕ್ಷದಿಂದ ಐದು
ಲಕ್ಷದಷ್ಟು ಜನರು ಸತ್ತಿರಬಹುದೆಂದು ಅಂದಾಜು ಮಾಡಲಾಗಿದೆ. ಕಳೆದ ವರ್ಷ ಈ ನದಿಯಲ್ಲಿ ನೆರೆ ಬಂದು
ಕಾಜೀರಂಗ ನ್ಯಾಷನಲ್ ಪಾರ್ಕ್ ಮುಳುಗಿ ಅಸಂಖ್ಯಾತ ಪ್ರಾಣಿಗಳು ಕೊಚ್ಚಿ ಹೋಗಿದ್ದವು.
ಬ್ರಹ್ಮಪುತ್ರನ ಪುಟ್ಟ ಮಗು ಮಾಜುಲಿ. ಇದಕ್ಕಿರುವುದು
ಕೇವಲ ನಾಲ್ಕು ಶತಮಾನಗಳ ಇತಿಹಾಸ.ಇದರ ಹುಟ್ಟಿನ ಕಥೆ ಕೇಳಿ;
ಮಾಜುಲಿ ಅಂದರೆ ಅಸ್ಸಾಮಿ ಭಾಷೆಯಲ್ಲಿ ಸಮಾನಂತರವಾಗಿ
ಹರಿಯುವ ಎರಡು ನದಿಗಳ ನಡುವಿನ ಭೂಮಿ ಎಂದರ್ಥ. ಈಗ ನಮಗೆ ಗೋಚರವಾಗುವ ಮಾಜುಲಿ ದ್ವೀಪ ಹಿಂದೊಮ್ಮೆ
ಬ್ರಹ್ಮಪುತ್ರನ ಒಡಲೊಳಗಿತ್ತು. . ಡಿಬಾಂಗ್ ಮತ್ತು
ಬ್ರಹ್ಮಪುತ್ರ ನದಿಗಳು ಪರಸ್ಪರ ೧೯೦ ಕಿ.ಮೀ ದೂರದಲ್ಲಿ ಸಮಾನಂತರವಾಗಿ ಹರಿಯುತ್ತಿದ್ದವು. ಅದು
೧೭೫೦ ರ ಸಮಯ.ಸತತ ಹದಿನೈದು ದಿನಗಳ ಕಾಲ ಮಳೆ ಸುರಿಯಿತು. ಜೊತೆಗೆ ಆ ಪ್ರದೇಶದಲ್ಲಿ ಭೂಕಂಪನವೊಂದು
ಸಂಭವಿಸಿತು. ಎರಡೂ ನದಿಗಳು ಹುಚ್ಚೆದ್ದು ಕುಣಿದು ತಮ್ಮ ತಮ್ಮ ಪಾತ್ರಗಳ ಮೇರೆ ಮೀರಿ ಹರಿದು
ಒಂದನ್ನೊಂದು ಅಪ್ಪಿಕೊಂಡವು. ಆವರಿಬ್ಬರೂ ಸೇರಿ ಬಳುಕಿದ ಜಾಗದಲ್ಲಿ ಭೂಭಾಗವೊಂದು
ನಿರ್ಮಾಣವಾಯ್ತು, ಅದುವೇ ಮಜೂಲಿ ದ್ವೀಪ.
ಸತ್ರದ ಹೊರಮೈ |
ಇದೇ ವರ್ಷ ಮಾರ್ಚ್
೩೧ರಿಂದ ಏಪ್ರಿಲ್ ೪ ರತನಕ ಅಸ್ಸಾಂನಲ್ಲಿ ’ನಮಾಮಿ ಬ್ರಹ್ಮಪುತ್ರ’ ಉತ್ಸವ ನಡೆಯಿತು. ಅದರಲ್ಲಿ
ಭಾಗವಹಿಸುವುದಕ್ಕಾಗಿ ಅಸ್ಸಾಂನ ರಾಜಧಾನಿ ಗೌಹಾಟಿಗೆ ಹೋಗಿದ್ದೆ. ಈ ಹಿಂದೆ ಕಾಶ್ಮೀರದ ಲಡಾಕ್
ನಲ್ಲಿ ನಡೆಯುತ್ತಿರುವ ’ಸಿಂಧು ಉತ್ಸವ’ ವನ್ನು ನೋಡಿದ್ದೆ. ಹಾಗಾಗಿ ಇದನ್ನೂ ನೋಡುವ ಬಯಕೆ
ಹುಟ್ಟಿತ್ತು. ಆದರೆ ಈ ಬಾರಿ ಅಸ್ಸಾಂಗೆ ವಾಡಿಕೆಯ ಮೊದಲೇ ಮಳೆಗಾಲ ಆರಂಭವಾದಂತಿತ್ತು.
ಉದ್ಘಾಟನೆಯಂದು ಆರಂಭವಾದ ಮಳೆ ಸಮಾರೋಪದ ತನಕ ಎಡೆಬಿಡದೆ ಸುರಿಯಿತು. ಬ್ರಹ್ಮಪುತ್ರದ ದಂಡೆಯ ಮೇಲೆ
ನಿರ್ಮಿಸಿದ ಮುಖ್ಯ ವೇದಿಕೆಯಲ್ಲಿ ಒಂದೇ ಒಂದು ಸಾಂಸ್ಕ್ರುತಿಕ ಕಾರ್ಯಕ್ರಮವೂ ನಡೆಯಲಿಲ್ಲ. ನಾನು
ಮತ್ತು ನನ್ನ ಪ್ರೆಂಡ್ ಹೊರಗೆ ಸುರಿಯುತ್ತಿದ್ದ ಮಳೆಯನ್ನು ನೋಡುತ್ತಾ ಬೆಂಗಳೂರಿನ ರಣಬಿಸಿಲನ್ನು
ನೆನಪಿಸಿಕೊಳ್ಳುತ್ತಾ ಎರಡು ದಿನ ಕಳೆದವು. ರಿಟರ್ನ್ ಟಿಕೇಟ್ ಬುಕ್ ಆಗಿದ್ದ ಕಾರಣದಿಂದ ಅಲ್ಲಿಯೇ
ಉಳಿಯುವುದು ಅನಿವಾರ್ಯವಾಗಿತ್ತು. ಎರಡನೆಯ ರಾತ್ರಿ ಗೂಗಲ್ ನಲ್ಲಿ ಸರ್ಚ್ ಮಾಡುತ್ತಾ ಗೌಹಾಟಿಯ ಸುತ್ತಮುತ್ತ ಯಾವುದಾದರೂ ಪ್ರೇಕ್ಷಣಿಯ
ಸ್ಥಳವಿದೆಯೇ ಎಂದು ಹುಡುಕಾಡತೊಡಗಿದೆವು. ಆಗ ಸಿಕ್ಕಿದ್ದೇ ಈ ಮಜೂಲಿಯೆಂಬ ಸ್ವರ್ಗ. ಸರಿ
ಬ್ಯಾಗನ್ನು ಹೋಟೇಲ್ ನಲ್ಲೇ ಬಿಟ್ಟು ಬ್ಯಾಕ್ ಪ್ಯಾಕ್ ಏರಿಸಿಕೊಂಡು ರಾತ್ರಿ ಬಸ್ಸಿನಲ್ಲಿ
ಕುಳಿತೆವು.
ಸತ್ರದ ಪ್ರವೇಶ ದ್ವಾರ. |
ನಮ್ಮ ಗ್ರಹಚಾರ
ನೆಟ್ಟಗಿರಲಿಲ್ಲ. ಮಧ್ಯರಾತ್ರಿಯಲ್ಲಿ ಯಾವುದೋ ಊರಲ್ಲಿ ಬಸ್ಸು ಕೆಟ್ಟು ನಿಂತಿತು. ಡ್ರೈವರ್
ರಿಪೇರಿ ಮಾಡಿದ, ಬಸ್ಸು ಮುಂದೆ ಹೋಗುತ್ತಿತ್ತು. ಮತ್ತೆ ಕೆಟ್ಟು ನಿಲ್ಲುತ್ತಿತ್ತು..ಮತ್ತೆ
..ಮತ್ತೆ..
ಆದಿವಾಸಿಗಳ ಗುಡಿಸಲು |
ಮಜೂಲಿ ಬಸ್
ನಿಲ್ದಾಣ್ದಲ್ಲಿ ಇಳಿದ ಜಾಗದಲ್ಲಿ ಪುಟ್ಟ ಕಟ್ಟಡದ ಮಹಡಿ ಮೇಲೊಂದು ಊಟದ ಹೋಟೇಲಿತ್ತು. ಆ ಹೋಟಿಲಿನ
ಓನರ್ ಒಬ್ಬ ನಗುಮೊಗದ ಯುವಕ, ಕಲ್ಕತ್ತಾದವನಂತೆ, ಅತ್ಯಂತ ಆದರದಿಂದ ಬಿಸಿ ಬಿಸಿಯಾದ ರುಚಿಯಾದ ಊಟ
ಬಡಿಸಿದಾಗ ಆತನೊಬ್ಬ ದೇವದೂತನಂತೆ ನಮಗೆ ಕಂಡ. ಯಾಕೆಂದರೆ ಕಳೆದ ರಾತ್ರಿಯಲ್ಲಿ ಯಾವುದೋ ಊರಿನಲ್ಲಿ
ಒಂದು ಮೀನು ಪ್ರೈ ತಿಂದಿದ್ದು ಬಿಟ್ಟರೆ ಏನನ್ನೂ
ತಿಂದಿರಲಿಲ್ಲ. ಬ್ಯಾಗಲಿದ್ದ ಬಿಸ್ಕತ್ತು, ಕುರುಕಲು ತಿಂಡಿಗಳು ಬೀಮನ ಹೊಟ್ಟೆಗೆ ಕಾಸಿನ
ಮಜ್ಜಿಗೆಯಾಗಿದ್ದವು. ನಮ್ಮೊಡನೆ ನಮ್ಮ ಡ್ರೈವರ್ ಕೂಡಾ ಉಪವಾಸವಿದ್ದ. ಅಷ್ಟು ಅಡೆತಡೆಗಳಾದರೂ
ತಮಾಶೆಯಾಗಿ ಹರಟುತ್ತಾ ಇದ್ದ ಕೆಲವೇ ಮಂದಿ ಪ್ರಯಾಣಿಕರನ್ನು ಉಲ್ಲಾಸದಿಂದಿಡಲು
ಪ್ರಯತ್ನಿಸುತ್ತಿದ್ದ ಅವರ ನೆನಪು ಊಟ ಮಾಡುತ್ತಿರುವಾಗ ಕಾಡಿತು.
ಇದು ತುಲಸಿ ಮರದ ದಿಮ್ಮಿಯಂತೆ! |
ತುಲಸಿ ಮರ! |
ಅಲ್ಲಿಯ
ಮೂಲನಿವಾಸಿಗಳು ಸರಳಾತಿ ಸರಳರು. ಸ್ಥಳೀಯವಾಗಿ
ಹೇರಳವಾಗಿ ಸಿಗುವ ಬಿದಿರಿನಿಂದ ಕಟ್ಟಿರುವ ತಟ್ಟಿ ಮನೆಗಳು. ಅವು ನೆಲದಿಂದಲೇ ಗೋಡೆಯೆಬ್ಬಿಸಿ
ಕಟ್ಟಿದ ಮನೆಗಳಲ್ಲ ; ಸದಾ ನೀರಲ್ಲಿ ಮುಳುಗುವ ಪ್ರದೇಶವಾದ ಕಾರಣ ಎತ್ತರದ ಕಂಬಗಳ ಮೇಲೆ ಮನೆ
ಕಟ್ಟಿಕೊಂಡಿರುತ್ತಾರೆ. ಕಳೆದ ವರ್ಷದಿಂದ ಇದು ಜಿಲ್ಲೆಯಾಗಿ ಪರಿವರ್ತನೆಗೊಂಡಿರುವುದರಿಂದ ಇಲ್ಲಿ
ಪೋಲಿಸ್, ನ್ಯಾಯಾಲಯ, ಜಿಲ್ಲಾಧಿಕಾರಿ ಕಚೇರಿಯೂ ಸೇರಿದಂತೆ ಎಲ್ಲಾ ಸರಕಾರಿ ಕಚೇರಿಗಳು, ಸ್ಕೂಲ್
ಕಾಲೇಜುಗಳೂ ಇವೆ. ಚಿಕ್ಕದಾದ ಮೂರ್ನಾಲ್ಕು ಪೇಟೆಗಳಿವೆ. ಈಗ ಅಸ್ಸಾಂ ರಾಜ್ಯದ ಮುಖ್ಯಮಂತ್ರಿಯಾಗಿರುವ ಸಬ್ರಾನಂದ ಸೋನುವಾಲ ಈ
ಜಿಲ್ಲೆಗೆ ಸೇರಿದವರು.
ಕೇಂದ್ರ ಸರಕಾರವು ಪ್ರೆಂಚ್ ಸರಕಾರದ ಸಹಯೋಗದಲ್ಲಿ
ಇದನ್ನು ಕಾರ್ಬನ್ ಮುಕ್ತ ಜಿಲ್ಲೆಯಾಗಿಸಲು ಯೋಜನೆಗಳನ್ನು ಹಾಕಿಕೊಂಡಿದೆ. ಹಾಗಾದಲ್ಲಿ ಅದು ನಮ್ಮ
ದೇಶದ ಮೊದಲ ಕಾರ್ಬನ್ ಮುಕ್ತ ಜಿಲ್ಲೆಯೆನಿಸಲಿದೆ..
ಮಾಜೂಲಿ ಜನರಿಗೆ
ವ್ಯವಸಾಯವೇ ಮುಖ್ಯ ವ್ರುತ್ತಿ. ಭತ್ತ ಬಹುಮುಖ್ಯ ಬೆಳೆ. ಇಲ್ಲಿ ನೂರಕ್ಕೂ ಹೆಚ್ಚಿನ ಭತ್ತದ
ತಳಿಗಳಿವೆ. ಯಾವುದೇ ರಾಸಾಯನಿಕಗಳನ್ನು ಉಪಯೋಗಿಸದೆ ಸಂಪೂರ್ಣ ಸಾವಯವ ಪದ್ಧತಿಯಲ್ಲಿ ಬೇಸಾಯ
ಮಾಡುತ್ತಾರೆ. ಡೈರಿ, ಕುಂಬಾರಿಕೆ, ಕೈಮಗ್ಗ ನೇಕಾರಿಕೆ ಇತರ ಉಪಉದ್ಯೋಗಗಳು. ಸಾಲ್ಮರ ವಿಲೇಜ್
ನಲ್ಲಿ ಕೈಗಳಿಂದಲೇ ಮಡಕೆ ಮತ್ತು ಮುಖವಾಡಗಳನ್ನು ತಯಾರಿಸುವ ಕುಶಲಕರ್ಮಿಗಳಿದ್ದಾರೆ. ಈ
ಕಲೆಗಾರಿಕೆಯ ಬಗ್ಗೆ ಅರ್ಕ್ಯಾಲಾಜಿಸ್ಟ್ ಗಳು ಆಳವಾದ ಸಂಶೋಧನೆಗಳನ್ನು ಮಾಡುತ್ತಿದ್ದಾರೆ. ಅವರ
ಪ್ರಕಾರ ಇದು ಹರಪ್ಪಾ ಮೊಹೆಂಜದಾರೋ ನಾಗರಿಕತೆಯ ನಡುವಿನ ಮಿಸ್ಸಿಂಗ್ ಲಿಂಕ್ ಎನ್ನುತ್ತಾರೆ.
ಮಜೂಲಿ ವೈಷ್ಣವಪಂಥದ
ಆರಾಧನ ಭೂಮಿಯಾಗಿರುವ ಕಾರಣದಿಂದಾಗಿ ಹೋಳಿ\ ರಾಸಲೀಲಾ ಈ
ದ್ವೀಪದ ಸಂಭ್ರಮದ ಹಬ್ಬ. ಇಲ್ಲಿಗೆ ಹಲವು ಜಾತೀಯ ಅಪರೂಪದ ಪಕ್ಷಿಗಳು ಬರುತ್ತವೆ. ಈ ಕಾರಣದಿಂದ
ಪಕ್ಷಿಪ್ರಿಯರಿಗೂ ಇದು ಆಕರ್ಷಕ ಜಾಗ. ಇಲ್ಲಿ ಅಪರೂಪದ ಔಷಧಿಯ ಸಸ್ಯಗಳೂ ಇವೆ.
ನಮ್ಮಲ್ಲಿ ಸಮಯ ಬಹಳ
ಕಮ್ಮಿ ಇತ್ತು. ಹಾಗಾಗಿ ಮಜೂಲಿಯಲ್ಲಿ ನಡೆಯುತ್ತಿದ್ದ ನಮಾಮಿ ಬ್ರಹ್ಮಪುತ್ರಾ ಉತ್ಸವನ್ನು
ಕಾರಿನಲ್ಲೇ ನೋಡುತ್ತಾ ಪೆರ್ರಿ ನಿಲ್ಲುವ ಜಾಗಕ್ಕೆ ಬಂದೆವು. ಹಾಗೆ ಬರುತ್ತಿರುವಾಗ ಗೊತ್ತಾಯ್ತು,
ಬ್ರಹ್ಮಪುತ್ರಾದ ಹರವು ಎಷ್ಟು ದೊಡ್ಡದೆಂದು. ನದಿ ಬೀಚ್ ಮೇಲೆಯೇ ನಾವು ಆರು ಕಿಮೀ ಬಂದೆವು.
ಪೆರ್ರಿ ನಿಲ್ಲುವ ಜಾಗದಲ್ಲಿ ಟೀ ಸ್ಟಾಲ್, ಪ್ಯಾನ್ಸಿ ಸ್ಟೋರ್ ಸೇರಿದಂತೆ ಹಲವಾರು
ಅಂಗಡಿಗಳಿದ್ದವು. ಪೆರ್ರಿಯಲ್ಲಿ ಬಂದ ಜನರನ್ನು ಕರೆದೊಯ್ಯಲ್ಲು ಹತ್ತರು ವಾಹನಗಳು ನಿಂತಿದ್ದವು.
ಮಜೂಲಿಗೆ ಬರುವಾಗ
ಕೊಂಕಣ ಸುತ್ತಿ ಮೈಲಾರಕ್ಕೆ ಬಂದ ಹಾಗೆ ಬಂದಿದ್ದೆವು. ಹೋಗುವಾಗ ಬ್ರಹ್ಮಪುತ್ರನ ಒಡಲಲ್ಲಿ
ಓಲಾಡುತ್ತಾ ತೇಲಾಡುತ್ತಾ ಮೌನವಾಗಿ ಸಾಗುತ್ತಿದ್ದೆವು. ನಿಮಿಟಿ ಘಾಟ್ ಎಂಬ ನದಿ ಬಂದರು ತಲುಪಲು
ಎರಡುವರೆ ಘಂಟೆಯ ನದಿ ಪಯಣ. ಆಗಾಗ ನೀಲ ಆಗಸದತ್ತ ನೋಟ ಬೀರುತ್ತಾ ದಿಗದಂಚಿನಲ್ಲಿ ಎಲ್ಲಾದರೂ ಭೂಮಾತೆ
ಬ್ರಹ್ಮಪುತನನ್ನು ಆಲಂಗಿಸುತ್ತಿರುವ ದ್ರುಶ್ಯ ಕಾಣಸಿಗಬಹುದೇ ಅಂತ ಕ್ಯಾಮಾರದಲ್ಲಿ ಕಣ್ಣಿಟ್ಟು
ಕೂತೆ. ನಿರಾಶೆಯಾಯ್ತು.. ನೀರು ಎಲ್ಲೆಲ್ಲೂ
ನೀರು.. ಹಿಂದೆ ತಿರುಗಿದರೆ ಮಜೂಲಿ ಬರಬರುತ್ತಾ ಚುಕ್ಕೆಯಾಗಿ ನೀರಿನಲ್ಲಿ ಲೀನವಾಯ್ತು.
0 comments:
Post a Comment