Saturday, March 10, 2018

ಶ್ರೀಲಂಕಾದಲ್ಲಿ ಸಂಘರ್ಷ ಮತ್ತು ಸಹಿಷ್ಣುತೆ.







ಶ್ರೀಲಂಕಾದಲ್ಲಿ ಬೌದ್ಧರಿಗೂ ಮುಸ್ಲಿಂರಿಗೂ ಸಂಘರ್ಷ ಉಂಟಾಗಿ ಅಲ್ಲಿ ತುರ್ತುಪರಿಸ್ಥಿತಿ ಘೋಷಣೆಯಾಗಿದೆ. ೧೯೭೧ರಲ್ಲಿ ಶ್ರೀಲಂಕಾ ತಮಿಳರು ಮತ್ತು ಸೇನೆಯ ನಡುವೆ ಸಂಘರ್ಷವೇರ್ಪಟ್ಟ ಸಮಯದಲ್ಲಿ ದಶಕಗಳ ಕಾಲ ತುರ್ತುಪರಿಸ್ಥಿ ಹೇರಲಾಗಿತ್ತು. ಈಗ ಮತ್ತೆ ಹತ್ತು ದಿನಗಳ ತುರ್ತುಪರಿಸ್ಥಿತಿ ಬಂದಿದೆ. ಇಂಟರ್ನೆಟ್ ಸ್ಥಗಿತಗೊಳಿಸಿ ಎಲ್ಲಾ ರೀತಿಯ ಸೋಷಿಯಲ್ ಮೀಡಿಯಾಗಳನ್ನು ಬ್ಯಾನ್ ಮಾಡಿದೆ.

ತುರ್ತುಪರಿಸ್ಥಿಗೆ ಕಾರಣವಾಗಿದ್ದು ಒಂದು ಸಾಧಾರಣ ಘಟನೆ. ಪೆಭ್ರವರಿ ೨೨ರಂದು ಕ್ಯಾಂಡಿಯಲ್ಲಿ ಕುಮಾರಸಂಘಿಯೆಂಬ ಟ್ರಕ್ ಡ್ರೈವರ್ ಗಾಡಿ ಓಡಿಸುತ್ತಿದ್ದ. ಹಿಂದಿನಿಂದ ಒಂದು ಅಟೊ ಬರುತ್ತಿತ್ತು. ಈತ ಅವನಿಗೆ ದಾರಿಬಿಡಲಿಲ್ಲ. ಇಬ್ಬರಿಗೂ ಜಗಳ ಹತ್ತಿಕೊಂಡಿತು. ಅದು ಮುಸ್ಲಿಂ ಪ್ರಾಬಲ್ಯದ ಪ್ರದೇಶ. ಹತ್ತಾರು ಮುಸ್ಲಿಮರು ಸೇರಿಕೊಂಡು ಕುಮಾರಸಂಘಿಯನ್ನು ಥಳಿಸಿದರು. ಆತ ಸತ್ತು ಹೋದ. ಆತನ ಶವದ ಮೆರವಣಿಗೆಯ ಸಮಯದಲ್ಲಿ ಬೌದ್ಧರು ಸಿಕ್ಕ ಸಿಕ್ಕ ಮುಸ್ಲಿಮರ ಮೇಲೆ ಏರಿ ಹೋದರು. ಅವರ ಮನೆ ಅಂಗಡಿಗಳನ್ನು ಸುಟ್ಟು ಹಾಕಿದರು. ಮಸೀದಿಗಳಿಗೆ ಹಾನಿ ಉಂಟು ಮಾಡಿದರು. ಪರಿಸ್ಥಿತಿ ಬಿಗಾಡಾಯಿಸಿತು. ಸೇನೆ ಮತ್ತು ಪೋಲಿಸರು ಮಧ್ಯೆ ಪ್ರವೇಶಿಸಿದರು.  ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ತುರ್ತುಪರಿಸ್ಥಿತಿ ಘೋಷಣೆ ಮಾಡಿದರು.

ಕಳೆದ ವಾರ ನಾನು ಅಲ್ಲಿದ್ದೆ. ತಮ್ಮ ಧರ್ಮದ ವಿಷಯವಾಗಿ ಅಲ್ಲಿನ ಜನರು ಎಷ್ಟು ಸೂಕ್ಷ್ಮಮತಿಗಳು ಎಂಬುದಕ್ಕೆ  ಒಂದು ಪ್ರತ್ಯಕ್ಷ ಘಟನೆಯನ್ನು ಹೇಳುತ್ತೇನೆ.

ನಮ್ಮ ಪ್ರವಾಸಿ ತಂಡ ಭಾರತಕ್ಕೆ ಮರಳಲು ಕೊಲೊಂಬೋದ ಭಂಡಾರೆನಾಯಿಕೆ ಇಂಟರ್ ನ್ಯಾಷನಲ್ ವಿಮಾನ ನಿಲ್ಡಾಣದ ಚಿಕ್ ಇನ್ ಕೌಂಟರ್ ನಲ್ಲಿ ನಿಂತಿದ್ದೆವು.  ಸರತಿ ಸಾಲಿನಲ್ಲಿ ನಮ್ಮ ಸಹ ಪ್ರವಾಸಿಗರಾದ ನಮ್ಮ ಕನ್ನಡದ ಹಿರಿಯ ನಟ ಅಶೋಕ್ ರವರ ಅಣ್ಣ ಮತ್ತು ಅತ್ತಿಗೆ ಕೂಡಾ ಇದ್ದರು. ನಮ್ಮ ಪಕ್ಕದ ಸಾಲಿನಲ್ಲಿದ್ದ ಮೂರ್ನಾಕು ಜನ ಬೌದ್ಧಬಿಕ್ಕುಗಳು ಪರಸ್ಪರ ಗುಸುಗುಸು ಮಾತಾಡುತ್ತಾ ಆಗಾಗ ಅಶೋಕರ ಅತ್ತಿಗೆಯನ್ನು ನೋಡುತ್ತಿರುವುದನ್ನು ಗಮನಿಸಿದೆ.
ನಾವೆಲ್ಲ ಬುದ್ಧ ಹುಟ್ಟಿದ ನಾಡಿನವರು. ಹಾಗಾಗಿ ಅಭಿಮಾನದಿಂದ ನಮ್ಮನ್ನವರು ನೋಡುತ್ತಿರಬಹುದೆಂದು ಒಳಗಿಂದೊಳಗೆ ಹೆಮ್ಮೆಯಿಂದ ಬೀಗುತ್ತಲಿದ್ದೆ.. ಆದರೆ ಇದ್ದಕ್ಕಿದ್ದಂತೆ ಮೂರ್ನಾಲ್ಕು ಜನ ಸೆಕ್ಯೂರಿಟಿ ಗಾರ್ಡಗಳು ಆಕೆಯಿದ್ದೆಡೆಗೆ ಬಂದುನಮ್ಮ ಜೊತೆ ಬನ್ನಿ ಎಂದು ಕರೆದಾಗ ಅವರ ಜೊತೆ ನಾವು ಕೂಡಾ ತಬ್ಬಿಬ್ಬುಗೊಂಡೆವು. ಗಂಡ ಹೆಂಡತಿಯರಿಬ್ಬರೂ ಚಕಿತಗೊಳ್ಳುತ್ತಲೇ ಅವರನ್ನು ಹಿಂಬಾಲಿಸಿದರು. ನಾವೆಲ್ಲಾ ಯಾಕಾಗಿರಬಹುದು? ಎಂದು ಕಾತರದಿಂದ ಅವರು ಹಿಂದಿರುಗಿ ಬರುವುದನ್ನೇ ಕಾಯುತ್ತಿದ್ದೆವು. ಆಕೆ ಹಿಂದಿರುಗಿ ಬರುತ್ತಲೇ ತನ್ನ ಲಗ್ಗೇಜ್ ಬ್ಯಾಗನ್ನು ತಡಕಾಡುತ್ತಾ ಅದರಿಂದ ಒಂದು ಚೂಡಿದಾರ್ ಟಾಪ್ ಎತ್ತಿಕೊಂಡು ಲೇಡಿಸ್ ರೆಸ್ಟ್ ರೂಮ್ ನತ್ತ ಹೋದರು. ನಾವು ಪ್ರಶ್ನಾರ್ಥಕ ಚಿಹ್ನೆಯಿಂದ ಆಕೆಯ ಗಂಡನೆಡೆ ನೋಡಿದಾಗ ಅವರು ಹೇಳಿದರು; ತಮ್ಮ ಪತ್ನಿ ಬುದ್ಧನ ಚಿತ್ರಗಳಿದ್ದ ಟಾಪ್ ಹಾಕಿಕೊಂಡಿದ್ದು ಅಲ್ಲಿಯ ಬಹುಸಂಖ್ಯಾತ ಬೌದ್ಧರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟುಮಾಡುವಂತಿತ್ತಂತೆ. ಹಾಗಾಗಿ ಬದಲಾಯಿಸಲು ಹೇಳಿದರಂತೆ. ನಿಜ ಬೌದ್ಧರಿಗೆ ಬುದ್ಧ ದೇವರಿದ್ದಂತೆ. ಅತನ ಚಿತ್ರಗಳಿರುವ ಮೇಲುಡುಗೆಯನ್ನು ವಿದೇಶಿಯ ಹೆಣ್ಣುಮಗಳೊಬ್ಬಳು ತೊಟ್ಟಾಗ ಅವರು ಅಕ್ಷೇಪಿಸುವುದು ಸಹಜವಾಗಿತ್ತು.

 ದೇವರ ವಿಷಯದಲ್ಲಿ ನಾವು ಭಾರತೀಯರು ಉದಾರಿಗಳು, ನಮ್ಮಲ್ಲಿ ಮೂವತ್ತಮೂರು ಕೋಟಿ ದೇವತೆಗಳಿದ್ದಾರೆ, ಅವರನ್ನು ನಾವು ಬೇಕಾದಂತೆ ಬಳಸಿಕೊಳ್ಳುತ್ತೇವೆ. ಅವರ ಟ್ಯಾಟು ಹಾಕಿಸಿಕೊಳ್ಳುತ್ತೇವೆ, ನಾವು ಉಡುವ ವಸ್ತ್ರಗಳಲ್ಲಿ ದೇವರ ಚಿತ್ರಗಳಿದ್ದರೆ ನಮಗದು ಅಕ್ಷೇಪಾರ್ಹವಲ್ಲ, ಗಣೇಶ, ಶಿವ,  ಶ್ರೀಕೃಷ್ಣರಂತೂ ಸರ್ವಾಂತರ್ಯಾಮಿಗಳು. ಅದರೆ ವಿದೇಶಿಗರು ಇವರನ್ನು ಬೇಕಾಬಿಟ್ಟಿಯಾಗಿ ಬಳಸಿಕೊಂಡಾಗ ನಮ್ಮಿಂದಲೂ ಪ್ರತಿಭಟನೆ ವ್ಯಕ್ತವಾದುದುಂಟು. ಬುದ್ಧ ನಮ್ಮ ನಾಡಿನಲ್ಲೇ ಹುಟ್ಟಿದರೂ ಆತ ನಮ್ಮವನಾಗಿಯೇ ಉಳಿದಿಲ್ಲ. ಆ ಕಾರಣದಿಂದಲೇ ಇರಬಹುದು, ಅವನ ಚಿತ್ರವನ್ನೂ ನಾವು ಸಹ ಬೇಕಾಬಿಟ್ಟೆಯಾಗಿ ಉಪಯೋಗಿಸುತ್ತಿದ್ದೀವೆನೋ ಎಂಬ ಶಂಕೆ ಶ್ರೀಲಂಕಾದ ಏರ್ಪೋರ್ಟ್ ಘಟನೆಯಿಂದ ನನ್ನಲ್ಲಿ ಮೂಡಿದೆ.

 ನಮ್ಮ ಬೆಂಗಳೂರಿನಲ್ಲಿ ನಡೆಯುವ ಬಹುತೇಕ ಕರಕುಶಲವಸ್ತು ಪ್ರದರ್ಶನಗಳಲ್ಲಿ ಬುದ್ಧನ ಚಿತ್ರಗಳಿರುವ ಸೀರೆ, ಕುಪ್ಪಸ, ಶರ್ಟ್, ಕಿವಿಯೋಲೆ, ಪೆಂಡೆಂಟ್ ಎಲ್ಲವೂ ದೊರೆಯುತ್ತದೆ. ಚಿತ್ರಕಲಾ ಪರಿಶತ್ತಿನಲ್ಲಾದ ಕರಕುಶಲ ಮೇಳದಲ್ಲಿ ಖರೀದಿಸಿದ ಒಂದು ಚೂಡಿದಾರ್ ಟಾಪ್ ನನ್ನಲ್ಲೂ  ಇದೆ. ಬುದ್ಧನ ಮೇಲಿನ ಪ್ರೀತಿ, ಆರಾಧನೆಗಳಿಂದ ಖರೀದಿಸಿದ್ದೆ. ಬಹುಶಃ ಇನ್ನದನ್ನು ನಾನು ಧರಿಸಲಾರೆ!

ಭಾರತಕ್ಕೆ ನೇತು ಬಿದ್ದಿರುವ ನೀರಿನ ಬಿಂದುವಿನಂತಿರುವ ಪುಟ್ಟ ದ್ವೀಪ ರಾಷ್ಟ್ರ. ಶೀಲಂಕಾ. ೧೯೮೮ರ ಜನಗಣತಿಯಂತೆ ಇಲ್ಲಿಯ ಒಟ್ಟು ಜನಸಂಖ್ಯೆಯಲ್ಲಿ  ಶೇ. ೯೩ರಷ್ಟು ಜನರು ಸಿಂಹಳೀಯ ಬುದ್ದಿಸ್ಟ್ ಆಗಿದ್ದರು. ೨೦೧೧ರ  ಜನಗಣತಿಗೆ ಬರುವಾಗ ಆ ಸಂಖ್ಯೆ ಶೇ ೭೦.೧೯ಕ್ಕೆ ಇಳಿದಿತ್ತು. ಉಳಿದವರಲ್ಲಿ ೧೨.೬ ಹಿಂದುಗಳು. ೯.೭ ಮುಸ್ಲೀಮರು ಮತ್ತು ೭.೪ ರಷ್ಟು ಕ್ರಿಶ್ಚಿಯನ್ನರು ಇದ್ದಾರೆ. ಏರುತ್ತಿರುವ ಮುಸ್ಲಿಮ್ ಜನಸಂಖ್ಯೆಯ ಬಗ್ಗೆ ಬೌದ್ಧರಲ್ಲಿ ಈಗ ಅಸಮಧಾನ ಮೂಡುತ್ತಿದೆ. ಹಾಗಾಗಿ ಅಲ್ಲಲ್ಲಿ ಚಿಕ್ಕಪುಟ್ಟ ಸಂಘರ್ಷಗಳು ಈ ಹಿಂದೆಯೂ ನಡೆಯುತ್ತಿದ್ದವು. ಅಂಪಾರವೆಂಬ ಪ್ರದೇಶದಲ್ಲಿ ಮುಸ್ಲಿಮರು ತಿಂಡಿ ತಿನಿಸುಗಳ ಮಳಿಗೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಸುತ್ತಿದ್ದಾರೆ. ಅವರು ಸಿಂಹಳಿ ಬೌದ್ಧರಿಗೆ ಆಹಾರದಲ್ಲಿ ನಿರ್ವೀರ್ಯರಾಗುವಂತ ಔಷಧಿಗಳನ್ನು ಬೆರೆಸಿ ಅವರ ಜನಸಂಖೆಯನ್ನು ನಿಯಂತ್ರಿಸಿಸುತ್ತಾರೆ, ಆ ಮೂಲಕ ತಮ್ಮ ಸಂಖ್ಯಬಲವನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಅವರು ಕುಟುಂಬಯೋಜನೆಯನ್ನು ಪಾಲಿಸುತ್ತಿಲ್ಲ ಎಂಬುದು ಸಿಂಹಳೀಯರ ಆರೋಪ. ಬರ್ಮಾದಿಂದ ಓಡಿ ಬಂದ ರೋಹಿಂಗಾ ಮುಸ್ಲಿಮರು ಶ್ರೀಲಂಕಕ್ಕೆ ನುಗ್ಗುತ್ತಿದ್ದಾರೆ, ಮುಸ್ಲಿಮರ ಸಂಘಟನೆಗಳಿಗೆ ಸೌದಿ ಅರೇಬಿಯಿಂದ ಹಣ ಬರುತ್ತಿದೆ ಎಂಬ ಆರೋಪದೊಂದಿಗೆ ಅಲ್ಲಿ ಮುಸ್ಲಿಮ್ ದ್ವೇಷ ಒಳಗಿನ ಕಿಚ್ಚಾಗಿ ಉರಿಯುತ್ತಿದೆ. ಈಗ ಅಲ್ಲಿ ಬುರ್ಕಾಗಳೂ, ದಾಡಿಗಳು ಕಾಣಿಸಿಕೊಳ್ಳಲು ಶುರುವಾಗಿದೆ.

ಈಗಿನ ಶ್ರೀಲಂಕಾಕ್ಕೆ ಬೌದ್ಧಧರ್ಮ ಹೇಗೆ ಬಂದಿಳಿಯಿತು ಎಂದು ಇತಿಹಾಸದತ್ತ ಕಣ್ಣು ಹೊರಳಿಸಿದಾಗ ಸಿಗುವುದೇ ಮೌರ್ಯ ಸಾಮ್ರಟ ಅಶೋಕನ ಚರಿತ್ರೆ. ಅದು ಕ್ರಿ.ಫು ಮೂರನೇ ಶತಮಾನ, ಕಳಿಂಗ ಯುದ್ಧದ ಭೀಕರತೆಯಿಂದ ಕನಲಿ ಹೋದ ಅಶೋಕ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧದರ್ಮವನ್ನು ಅಂಗೀಕರಿಸುತ್ತಾನೆ. ಧರ್ಮಪ್ರಚಾರಕ್ಕಾಗಿ ತನ್ನ ಮಕ್ಕಳಾದ ಸಂಘಮಿತ್ರೆ ಮತ್ತು ಮಹೇಂದ್ರರನ್ನು ಸಿಂಹಳಕ್ಕೆ ಕಳುಹಿಸುತ್ತಾನೆ. ಅಶೋಕನ ಸಮಕಾಲೀನನಾದ ದೊರೆ ದೇವನಾಂಪ್ರಿಯ ಟಿಸ್ಸಾ ಅವರಿಗೆ ಆಶ್ರಯನ್ನು ನೀಡಿದ. ಅವರು  ಧರ್ಮಪ್ರಚಾರವನ್ನು ಮಾಡುತ್ತಾ ಅಲ್ಲಿಯೇ ಕೊನೆಯುಸಿರೆಳೆಯುತ್ತಾರೆ.  ಆ ಅಣ್ಣತಂಗಿಯರಿಬ್ಬರೂ ಅಲ್ಲಿಗೆ ಬರುವ ಮೊದಲು ಶ್ರೀಲಂಕಾ ಹೇಗಿತ್ತು?

ವಿದೇಶಿ ಪ್ರವಾಸಿಗರು ಕಂಡಂತೆ ಅಲ್ಲಿ ಪ್ರಕೃತಿಯ ಆರಾಧನೆಯಿತ್ತು.  ನಿಗೂಢ ಶಕ್ತಿಗಳಲ್ಲಿ ನಂಬುಗೆಯಿತ್ತು, ಆತ್ಮ, ಪುನರ್ಜನ್ಮಗಳಲ್ಲಿ ನಂಬಿಕೆಯಿತ್ತು. ಸತ್ತವರನ್ನು ಪೂಜಿಸುತ್ತಿದ್ದರು. ಮುಖ್ಯವಾಗಿ ಯಕ್ಷ-ಯಕ್ಷಿಣಿಯರ ಆರಾಧನೆಯಿತ್ತು. ಈಗ ಕ್ಯಾಂಡಿಯಲ್ಲಿ ಪ್ರತಿದಿನವೂ ವಿದೇಶಿ ಪ್ರವಾಸಿಗರನ್ನು ದೃಷಿಯಲ್ಲಿಟ್ಟುಕೊಂಡು ಕಲ್ಚರಲ್ ಶೋ ನಡೆಯುತ್ತಿದೆ. ಅಲ್ಲಿ ಕಲಾವಿದರು ಬಳಸುವ ಮುಖವಾಡಗಳು, ವಾದ್ಯಪರಿಕರಗಳು, ವಸ್ತ್ರವಿನ್ಯಾಸ, ಬಳಸುವ ಬಣ್ಣಗಳು- ಇವೆಲ್ಲವುಗಳಲ್ಲಿ ಬೌದ್ಧಪೂರ್ವದ ಸಿಂಹಳೀಯ ಸಂಸ್ಸ್ಕೃತಿಯನ್ನು ಕಾಣಬಹುದು.  ಆ ಕಾಲಕ್ಕೆ ಮೂಲನಿವಾಸಿಗಳ ಜೊತೆ ಸಾಕಷ್ಟು ಸಂಖ್ಯೆಯಲ್ಲಿ ಜೈನರೂ ಇದ್ದರು. ಆದರೆ ಈಗ ಅವರು ನಾಮಾವಶೇಷವಾಗಿದ್ದಾರೆ.

ರಾಮಾಯಣದ ಹೆಜ್ಜೆ ಗುರುತುಗಳನ್ನು ಹುಡುಕುತ್ತಾ ಒಂದು ಕಾಲದಲ್ಲಿ ರಾವಣನ ಸ್ವರ್ಣಲಂಕೆಯೆಂದು ಕರೆಯಿಸಿಕೊಂಡಿದ್ದ ಶ್ರೀಲಂಕಾಗೆ ಹೋದವಳು ನಾನು. ಆದರೆ ಹೋದೆಡೆಯಲೆಲ್ಲಾ ನಮಗೆ ಕಂಡಿದ್ದು ರಾಮಾಯಣದ ಘಟನೆಗಳು ನಡೆಯಿತ್ತೆನ್ನಲಾದ ಜಾಗಗಳಲ್ಲಿ ನಿರ್ನಾಮಗೊಂಡಿರುವ ದೇವಾಲಯದ ಅವಶೇಷಗಳು, ಮತ್ತು ಅವುಗಳ ಅಸ್ತಿಭಾರದಲ್ಲಿಯೇ ಅರಳಿರುವ ಬೌದ್ಧಚೈತ್ಯಾಲಯಗಳು.
 ಶ್ರೀರಾಮಚಂದ್ರನು ವಿಭಿಷಣನಿಗೆ ಪಟ್ಟಾಭೀಷೇಕ ಮಾಡಿದನೆಂಬ ನಂಬಲಾದ ಕೆಲಿನಿಯಾ ಟೆಂಪಲ್ ಗೆ ಹೋದರೆ ಅಲ್ಲೇನಿದೆ? ಅದೀಗ ಬೌದ್ಧರ ಬಹುಮುಖ್ಯ ಆರಾಧನಕೇಂದ್ರ. ಪ್ರಾಚೀನ ಮಂದಿರವಿರಬಹುದೆಂದು ತೋರುವ ಎತ್ತರದ ಗೋಡೆಗಳ ಮೇಲೆಲ್ಲಾ ಸಸ್ಯಜನ್ಯ ಬಣ್ಣಗಳಿಂದ ಮಾಡಿದ ಚಿತ್ತಾರಗಳು. ವಿಶಾಲವಾದ ಪ್ರವೇಶಧ್ವಾರವನ್ನು ಪ್ರವೇಶಿಸಿ ನೀಲತಾವರೆಗಳಿಂದ ಅಲಂಕೃತನಾದ ಬುದ್ಧನಿಗೆ ಪ್ರದಕ್ಷಿಣೆ ಹಾಕಿ ಬರುತ್ತಿರುವಾಗ ಎಡ ಬದಿಯ ಗೋಡೆಯಲ್ಲಿ ಕೆತ್ತಿದ ಕೊಳಲನ್ನುದೂತ್ತಿರುವ ಗೋಪಾಲ ಕೃಷ್ಣ .. ವಿಭಿಷಣನನ್ನು ಹುಡುಕಲೇ ಬೇಕೆಂದು ಕಣ್ಣು ಕಿರಿದುಗೊಳಿಸಿ ಆ ಬಿರು ಬಿಸಿಲಿನಲ್ಲಿ ಬರಿಗಾಲಿನಲ್ಲಿ ದೇವಸ್ಥಾನ ಪೌಳಿಯುದ್ದಕ್ಕೂ ಸುತ್ತು ಹಾಕುತ್ತಿರುವಾಗ ಗರ್ಭಗುಡಿಯಲ್ಲಿರುವ ಬುದ್ಧನ ಹಿಂಬದಿಗೆ ಸರಿಯಾಗಿ ಬರುವಂತೆ ಪಟ್ಟಾಭಿಷೇಕದ  ಚಿತ್ರವನ್ನು ಕೆತ್ತಿದ್ದನ್ನು ಕಂಡೆ. 

ನಮ್ಮ ಮುಂದಿನ ಪ್ರವಾಸದುದ್ದಕ್ಕೂ ನಮಗೆ ಇಂತಹದೇ ಅನುಭವಗಳಾದವು. ಸೀತೆಯ ಅಗ್ನಿ ಪ್ರವೇಶ ನಡೆಯಿತ್ತೆನ್ನಲಾದ  ಲಿಟ್ಲ್ ಇಂಗ್ಲೆಂಡ್ ಎಂದು ಕರೆಯುವ ನೌರಾ ಎಲಿಯಾದ ದುವೊಂಪುಲಾ, ರಾವಣನ ಅರಮನೆ ಇತ್ತೆನ್ನಲಾದ ಸಿಗೇರಿಯಾ, ಕಟಿಗ್ರಾಮದ ಸುಪ್ರಸಿದ್ಧ ಸುಬ್ರಹ್ಮಮಣ್ಯ ಸ್ವಾಮಿ ದೇವಾಲಯ, ಎಲ್ಲಾ ಎಂಬಲ್ಲಿರುವ ರಾವಣನ ಪುರಾತನ ಗುಹೆ, ರಾವಣ ತನ್ನ ಒಂದು ತಲೆಯನ್ನು ಶಿವನಿಗರ್ಪಿಸಿದ ಎಂದು ನಂಬಿರುವ ಟ್ರಿಂಕಮಲೆಯ ತ್ರಿಕೋನೇಶ್ವರ ದೇವಾಲಯ. ಕ್ಯಾಂಡಿಯಲ್ಲಿರುವ ಬುದ್ಧ ಹಲ್ಲನ್ನು ಇಟ್ಟಿರುವ ಬುದ್ಧ ಟೂತ್ ರಿಕ್ ಟೆಂಪಲ್, ಅಶೋಕನ ಮಕ್ಕಳಾದ ಸಂಘಮಿತ್ರೆ ಮತ್ತು ಮಹೇಂದ್ರ ಚಿನ್ನದ ಪಾತ್ರೆಯಲ್ಲಿ ತಂದ ಬುದ್ಧನಿಗೆ ಜ್ನಾನೋದಯವಾದ ಬೋಧಗಯಾದ ಬೋಧಿವೃಕ್ಷದ ರೆಂಬೆಯನ್ನು ಊರಿದ ಮತ್ತೆ ಅಲ್ಲಿಯೇ ಅವ್ರು ಮಾಹಾನಿರ್ವಾಣವಾದ ಅನುರಾಧಪುರ ಸೇರಿದಂತೆ ಎಲ್ಲಿಯೂ ನಮಗೆ ರಾಮಾಯಣದ ಪುರಾತನ ಕುರುಹಗಳು ದೊರೆಯುವುದಿಲ್ಲ. ಅದೆಲ್ಲವೂ ಬೌದ್ಧ ಮಂದಿರಗಳಾಗಿವೆ, ಹುಡುಕಿದರೆ ಹಿಂದೂ ಧರ್ಮದ ಕೆಲವು ಕುರುಹುಗಳನ್ನಷ್ಟೇ ಅಲ್ಲಿ ಕಾಣಬಹುದು.

ನಿಜ, ಒಬ್ಬ ದೊರೆ ತನ್ನ ಸಾಮ್ರಾಜ್ಯ ವಿಸ್ತರಣೆ ಮಾಡಿದಾಗ ಅಲ್ಲಿಯ ಕಟ್ಟಡಗಳನ್ನು ನಾಶಪಡಿಸಿ, ಅಲ್ಲಿಯ ಸಂಸ್ಕೃತಿಯನ್ನು ಹತ್ತಿಕ್ಕಿ ತನ್ನದೇ  ಛಾಪನ್ನು ಒತ್ತುವುದು, ಅಲ್ಲಿಯ ಜನರನ್ನು ಮತಾಂತರಗೊಳಿಸುವುದನ್ನು ನಾವು ಇತಿಹಾಸದುದ್ದಕ್ಕೂ ಓದುತ್ತಾ ಬಂದಿದ್ದೇವೆ. ಅದು ಒಪ್ಪಿತ ಸತ್ಯ. ಇದು ಧರ್ಮಗಳಿಗೂ ಅನ್ವಯವಾಗುತ್ತದೆ. 
 ಬೌದ್ಧರು ಶಾಂತಿಪ್ರಿಯರು, ಕರುಣಾಳುಗಳು, ಅಧ್ಯಾತ್ಮದೆಡೆ ದೃಷ್ಟಿ ನೆಟ್ಟವರು ಎಂಬುದನ್ನು ನಾವು ಚರಿತ್ರೆಯಲ್ಲಿ ಓದಿದ್ದೇವೆ. ಅವರು ಕತ್ತಿಯ ಮೊನೆಯಲ್ಲಿ ಸಾಮ್ರಜ್ಯಗಳನ್ನು ಗೆದ್ದವರಲ್ಲ . ಪ್ರೀತಿಯಿಂದಲೇ ತಮ್ಮ ಧರ್ಮವನ್ನು ಜಗತ್ತಿನೆಲ್ಲೆಡೆ ಪಸರಿಸಿದವರು. ಆದರೆ ಮಯ್ನಮಾರು ನಡೆಯುತ್ತಿರುವ ರೋಹಿಂಗ್ಯಾ ಮುಸ್ಲಿಮರ ಮಾರಣ ಹೋಮ ನೋಡಿದರೆ ಹಾಗೆನ್ನಿಸುವುದಿಲ್ಲ. ಶ್ರಿಲಂಕಾವೂ ಆ ಸಾಲಿಗೆ ಸೇರುತ್ತದೆಯಾ?

 ಶಾಂತಿ ಮತ್ತು ಸಹಬಾಳ್ವೆಯನ್ನು ಭೋದಿಸಬೇಕಾಗಿದ್ದ, ಬೋದಿಸಿದ್ದನ್ನು ಆಚರಣೆಯಲ್ಲಿ ತರಬೇಕಾಗಿರುವ ಧರ್ಮಗಳು ಉಗ್ರತ್ವದ ರಕ್ತಸಿಕ್ತ [ಮಿಲಿಟೆಂಟ್] ಹಾದಿಯನ್ನು ತುಳಿಯುತ್ತಿದೆಯಾ? ಸಿರಿಯದಲ್ಲಾಗುತ್ತಿರುವ ಹಸುಕಂದಮ್ಮಗಳ, ನಾಗರಿಕರ ಪೈಶಾಚಿಕ ಹತ್ಯೆಗಳನ್ನು ನೋಡುತ್ತಿದ್ದರೆ, ಹೌದು ಎಂದು ಉತ್ತರಿಸಲೇಬೇಕಾಗಿದೆ. ಇದಕ್ಕೆ ಪರಿಹಾರವೇನು? ಗೊತ್ತಿಲ್ಲ, ಬೆಳೆಯುತ್ತಿರುವ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತಂದು, ಸಂಪತ್ತನ್ನು ಕೂಡಿಡುವ ಲಾಲಸೆಯನ್ನು ಬಿಟ್ಟು ಪ್ರೀತಿ ಹಂಚಿಕೊಂಡು ಬಾಳಿದರೆ ಪರಿಸ್ಥಿತಿ ಸುಧಾರಿಸಬಹುದೇನೋ! ಅದೂ ಸರಿಯಾಗಿ ಗೊತ್ತಾಗುತ್ತಿಲ್ಲ.

[ ೧೧.೩.2018ರ ಉದಯವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಬರಹ]



0 comments: