ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ
ಪ್ರಗತಿಶೀಲ ಮನಸ್ಸುಗಳು ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ
ಮಾತಾಡಲು ಮುಂದಾದಾಗ ಅವರಿಗೆ ಉಗ್ರ ಹಿಂದುತ್ವವಾದಿಗಳು ಎಸೆಯುವ ಲೇವಡಿಯ ಹಾಗು ಬೆದರಿಕೆಯ
ಪ್ರಶ್ನೆಗಳು ಎರಡು; ಒಂದು, ಮುಸ್ಲಿಮ್ ಉಗ್ರವಾದಿಗಳು ಕಾಶ್ಮೀರಿ ಪಂಡಿತರ ಮೇಲೆ ಹಲ್ಲೆ ಮಾಡಿ, ಅವರ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿ,
ಆಸ್ತಿಪಾಸ್ತಿ ದೋಚಿ ಅವರನ್ನು ಹುಟ್ಟಿದೂರಿನಿಂದ ಓಡಿಸುವಾಗ ನೀವು ಕಾಂಗಿಗಳು ಎಲ್ಲಿದ್ದೀರಿ? ಆಗ
ಯಾಕೆ ನೀವು ಕಣ್ಣೀರು ಹರಿಸಿಲ್ಲ?. ಇನ್ನೊಂದು, ಕೊರೆಯುವ ಚಳಿಯಲ್ಲಿ ಗಡಿಕಾಯುತ್ತಾ ನಮ್ಮ ದೇಶವನ್ನು ರಕ್ಷಿಸುವ ಸೈನಿಕರ ಬಗ್ಗೆ ನೀವೆಂದಾದರೂ
ಕಣ್ಣಿರು ಹಾಕಿದ್ದೀರಾ?
ಅಂತಹ ಕೇಸರಿ ಕನ್ನಡಕದಾರಿಗಳು ಈಗ ಕಕ್ಕಾಬಿಕ್ಕಿಯಾಗಿದ್ದಾರೆ.
ಯಾಕೆಂದರೆ ಕಠಾರದಲ್ಲಿ ಎಂಟು ವರ್ಷದ ಪುಟ್ಟ ಮಗುವಿನ ಮೇಲಾದ ಪೈಶಾಚಿಕ ಅತ್ಯಾಚಾರ ಮತ್ತು ಕೊಲೆಯ
ಪ್ರಕರಣದಲ್ಲಿ ಅರೋಪಿಗಳ ಸ್ಥಾನದಲ್ಲಿ ನಿಂತ ಎಂಟೂ ಜನರು ಹಿಂದುಗಳು. ಅದು ಅಲೆಮಾರಿ ಬಿಕ್ರವಾಲ್ ಸಮುದಾಯಕ್ಕೆ ಸೇರಿದ ಮುಸ್ಲಿಮ್
ಮಗು, ಅತ್ಯಾಚಾರದ ಅರೋಪಿಗಳಿಗೆ ಕಾನೂನಿನ ಕುಣಿಕೆ ಹಾಕಲು ಪಣತೊಟ್ಟವರು ಎರಡು ಜನ. ಅವರೇ ಈ
ಪ್ರಕರಣದ ತನಿಖಾ ದಳದ ಮುಖ್ಯಸ್ಥರಾದ ರಮೇಶ್ ಕುಮಾರ್ ಮತ್ತು ಅಸಿಫಾ ಪರ ವಕೀಲಾರಾದ ದೀಪಿಕಾಸಿಂಗ್.
ಇವರಿಬ್ಬರೂ ಕಾಶ್ಮೀರ ಪಂಡಿತರು. ಒಂದುವೇಳೆ ನಾಳೆ
ಅರೋಪಿಗಳ ಅಪರಾಧ ಸಾಬೀತಾಗಿ ಅವರೆಲ್ಲ ನೇಣುಗಂಬವನ್ನೇರಿದರೆ ಅದರ ಪೂರ್ಣ ಶ್ರೇಯಸ್ಸು ಸಲ್ಲ
ಬೇಕಾದದ್ದು ಈ ಇಬ್ಬರು ಕಾಶ್ಮೀರಿ ಪಂಡಿತರಿಗೇ
ಈ ಪ್ರಕರಣದ ವಿರುದ್ಧವಾಗಿ ಕೆಲಸ ಮಾಡಲು ಇವರಿಗೆ ಪ್ರಭಲವಾದ
ಕಾರಣಗಳಿದ್ದವು.ಆದರೆ ಅವರು ಹಾಗೆ ಮಾಡಲಿಲ್ಲ. ಕಾರಣವೇನಂದರೆ ಅವರು ಮಾನವಪ್ರೇಮಿಗಳಾಗಿದ್ದರು
ನ್ಯಾಯನಿಷ್ಠರಾಗಿದ್ದರು. ಸತ್ಯದ ಪರವಾಗಿದ್ದರು . ಇವರಿಬ್ಬರು ತೆಗೆದುಕೊಂಡ ಗಟ್ಟಿ ನಿಲುವು
ಭಾರತೀಯರು ಮತ್ತು ಕಾಶ್ಮೀರಿ ಮುಸ್ಲಿಮರ ನಡುವಿನ ಸಂಘರ್ಷವನ್ನು ಭವಿಷ್ಯದಲ್ಲಿ ಹೊಸ
ದ್ರುಷ್ಟಿಕೋನದಿಂದ ನೋಡಲು ಸಾಧ್ಯವಾಗಬಹುದು.
ವರ್ತಮಾನದಲ್ಲಿ ಮುಸ್ಲಿಂರೇ ಬಹುಸಂಖ್ಯಾತರಾಗಿರುವ ಭಾರತದ
ಏಕೈಕ ರಾಜ್ಯ ಜಮ್ಮು ಕಾಶ್ಮೀರ. ಇದಕ್ಕೆ ವಿಶೇಶ ಸ್ಥಾನಮಾನವಿದೆ. ಭಾರತದ ಭಾಗವಾಗಿದ್ದರೂ ತನ್ನದೇ
ಪ್ರತ್ಯೇಕತೆಯನ್ನು ಹೊಂದಿರುವ ರಾಜ್ಯವದು. ಆದರೆ ಅದರ ಇತಿಹಾಸದತ್ತ ಕಣ್ಣು ಹೊರಳಿಸಿದರೆ ಈಗಿನ
ಮುಸ್ಲಿಮರು ಹಿಂದೆ ಹಿಂದುಗಳೇ ಆಗಿದ್ದರು ಎಂಬುದು ಗೊತ್ತಾಗುತ್ತದೆ.
ಈಗ ಅಲ್ಪಸಂಖ್ಯಾತರಾಗಿರುವ ಕಾಸ್ಮೀರಿ ಪಂಡಿತರು ಕಾಶ್ಮೀರ
ಕಣಿವೆಯ ಮೂಲನಿವಾಸಿಗಳು. ಅಲ್ಲಿಯ ಜನರು ಬೌದ್ಧ ಮತ್ತು ಹಿಂದು ಧರ್ಮದ
ಅನುಯಾಯಿಗಳಾಗಿದ್ದರು. ೧೨ನೇ ಶತಮಾನದಲ್ಲಿ
ಇಲ್ಲಿಗೆ ಮುಸ್ಲಿಮರು ಆಗಮಿಸಿದರೆಂದು ಇತಿಹಾಸಕಾರರು ಹೇಳುತ್ತಾರೆ. ಆಗ ಅಳ್ವಿಕೆಕೆಯಲ್ಲಿದ್ದ
ಹಿಂದೂ ರಾಜರು ಅವರ ಧರ್ಮಪ್ರಸಾರಕ್ಕೆ ಅಡ್ಡಿಯೇನು ಉಂಟುಮಾಡಲಿಲ್ಲ. ಆದರೆ ಹದಿನಾಲ್ಕನೇ
ಶತಮಾನಕ್ಕಾಗುವಾಗ ಅದೊಂದು ಪ್ರಭಲಧರ್ಮವಾಗಿ ಪ್ರವರ್ಧಮಾನ ಬಂತು. ಈನಡುವೆ ಮುಸ್ಲಿಮ್ ಧರ್ಮದವರು
ರಾಜರೂ ಆದರು. ಆದರೂ ಹಿಂದು ಮುಸ್ಲಿಮರು ಸೌಹಾರ್ಧತೆಯಿಂದಲೇ ಬದುಕಿದ್ದರು. ಹಿಂದೆಯೂ ಅವರು ಅನ್ಯಧರ್ಮಿಯರೊಡನೆ ಸೌಹಾರ್ಧತೆಯಿಂದ
ಬದುಕಿದವರು. ಸ್ಥಳೀಯ ಸಂಸ್ಕ್ರುತಿಯೊಡನೆ ಮುಸ್ಲಿಮರ ಕಲಾಕೌಶಲ್ಯವು ಸೇರಿಕೊಂಡು
ಕರಕುಶಲವಸ್ತುಗಳಿಗೆ ಹೊಸತೊಂದು ಮೆರಗು ಬಂದು ಇಲ್ಲಿಯ ಪಿಂಗಾಣಿವಸ್ತುಗಳು. ಶಾಲು, ಕಾರ್ಪೆಟ್,
ಮುಂತಾದ ನೇಕಾರಿಯ ವಸ್ತುಗಳು ಜಗದ್ವಿಖ್ಯಾತಿಯನ್ನು ಪಡೆದುಕೊಂಡವು. ಇದೊಂದು ಪ್ರವಾಸಿಕೇಂದ್ರವಾಗಿ
ಬೆಳೆಯತೊಡಗಿತು.
೧೮೧೯ರಲ್ಲಿ ಕಾಶ್ಮೀರ ಮತ್ತೆ ಸಿಖ್ಖ್ ದೊರೆ ಮಹಾರಾಜ
ರಂಜಿತ್ ಸಿಂಗ್ ತೆಕ್ಕೆಗೆ ಬಂದಾಗ ಆತ ಕೆಲವು ಮುಸ್ಲಿಂ ವಿರೋಧಿ ಕಾನೂನುಗಳನ್ನು ಜಾರಿಗೆ ತಂದ.
ರಾಜ್ಯದ ಉನ್ನತಸ್ಥಾನಗಳಲ್ಲಿ ಕಾಶ್ಮೀರಿ ಪಂಡಿತರ ನೇಮಕವಾಯ್ತು. ಅದುವರೆಗೆ ಇದ್ದ ಸೌಹಾರ್ಧಮಯ
ವಾತಾವರಣ ಕದಡಿ ಹೋಯ್ತು. ಆಗಿನ ಕಾಶ್ಮೀರದ ಸ್ಥಿತಿಯನ್ನು ಬ್ರಿಟೀಶ್ ಕೌನ್ಸಿಲ್ ಸದಸ್ಯನೂ,
ಬಾರತದಲ್ಲಿ ಅಧಿಕಾರಿಯೂ,ಪ್ರವಾಸಿ ಲೇಖಕನೂ ಆದ ಲಾರೆನ್ಸ್ ತನ್ನ ಪುಸ್ತಕದಲ್ಲಿ ದಾಖಲಿಸಿದ್ದಾನೆ.
ಹಾಗೆಯೇ ಗೌಶಾನಾಥ್ ಕೌಲ್ ಎಂಬ ಲೇಖಕ ತನ್ನ
’ಕಾಶ್ಮೀರ’ ಎಂಬ ಪುಸ್ತಕದಲ್ಲಿ ಮುಸ್ಲಿಮರ ದಯಾನೀಯ ಸ್ಥಿತಿಯ ಬಗ್ಗೆ ಬರೆಯುತ್ತಾ ಶೇ ೯೦ರಷ್ಟು
ಮುಸ್ಲಿಮರ ಆಸ್ತಿಪಾಸ್ತಿ ಹಿಂದೂ ಲೇವಾದೇವಿಗಾರರ ವಶದಲ್ಲಿದ್ದು ಅವರು ತೀರ ಬಡತನದ ಬದುಕನ್ನು
ಸಾಗಿಸುತ್ತಲಿದ್ದಾರೆ ಎಂದು ದಾಖಲಿಸಿದ್ದಾನೆ. ಇದು
ಇತಿಹಾಸ.
ಆದರೆ ಆಮೇಲೆ ಭಾರತ ವಿಭಜನೆಯಾಯ್ತು. ಧರ್ಮದ ಆಧಾರದ ಮೇಲೆ
ಮುಸ್ಲಿಮರ ರಾಜ್ಯ ಉದಯವಾಯ್ತು. ಕಾಶ್ಮೀರ ನಮ್ಮದೇ ಅನ್ನುತ್ತಾ ಪಾಕಿಸ್ತಾನಿಯರು ಗಡಿಯೊಳಗೆ
ನುಸುಳಿ ಬರಲು ಆರಂಭವಾಯ್ತು. ಭಾರತ ಸರಕಾರವೂ ಕಾಶ್ಮೀರದ ಅಬಿವ್ರುದ್ಧಿಯ ಬಗ್ಗೆ ಅಸಡ್ಡೆಯಿಂದಲೇ
ನಡೆದುಕೊಂಡಿತ್ತು. ಕ್ರಮೇಣ ಅಲ್ಲಿ ಪ್ರತ್ಯೇಕ ದೇಶದ ಕೂಗು ಕ್ಷೀಣವಾಗಿ ಕೇಳಲಾರಂಭಿಸಿತು.ಅದಕ್ಕೆ
ನಮ್ಮ ದಾಯಾದಿ ದೇಶ ಪಾಕಿಸ್ತಾನ ಕುಮ್ಮಕ್ಕು ಕೊಡಾಲಾರಂಭಿಸಿತು. ಅಲ್ಲಿಂದ ಮುಂದಿನ ಇತಿಹಾಸ
ಎಲ್ಲರಿಗೂ ಗೊತ್ತಿರುವಂತಹದೇ. ಭೌಗೋಳಿಕವಾಗಿ ಸ್ವರ್ಗದ ತುಣುಕಿನಂತಿದ್ದ ಕಾಶ್ಮೀರದ ಮೇಲೆ
ಹಕ್ಕುಸ್ಥಾಪನೆಮಾಡುವುದಕ್ಕಾಗಿ ಪಾಕಿಸ್ತಾನವು ಮುಸ್ಲಿಂ ಉಗ್ರವಾದಿಗಳಿಗೆ ಕುಮ್ಮಕ್ಕು ನೀಡಿ
ಶಸ್ತ್ರಾಸ್ತ್ರಗಳನ್ನು ಯಥೇಚ್ಚವಾಗಿ ಪೂರೈಸತೊಡಗಿತು. ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಭಾರತ
ಅದರ ಮೇಲೆ ೧೯೭೧ರಲ್ಲಿ ಯುದ್ಧಸಾರಿತು. ಪಾಕಿಸ್ತಾನದ ಒಂದು ಭಾಗವನ್ನು ಕಿತ್ತು ಬಾಂಗ್ಲಾದೇಶ ಮಾಡಿತು.
ಪಾಕಿಗಳ ಮನದಲ್ಲಿ ಇದು ಆಳವಾದ ಗಾಯ ಮಾಡಿತು. ಪರಿಣಾಮವಾಗಿ ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳು
ಹೆಚ್ಚಾದವು. ಅವರ ಗುರಿ ಈಗಾಗಲೇ ಅಲ್ಪಸಂಖ್ಯಾತರಾಗಿರುವ ಕಾಶ್ಮೀರಿ ಪಂಡಿತರ ಮೇಲೆ ಬಿತ್ತು.
ಅವರಿಗೆ ಕಿರುಕುಳ ಕೊಡಲು ಆರಂಭಿಸಿದರು.
ಈ ವೇಳೆಗಾಗಲೇ ಜಗತ್ತಿನಾದ್ಯಂತ ಉಗ್ರಗಾಮಿಗಳಿಗೆ ಸಂವಾದಿ
ಪದವಾಗಿ ಮುಸ್ಲಿಂ ಪದ ಎಲ್ಲೆಡೆ ಪ್ರಚಲಿತವಾಗಿತ್ತು. ಹಿಜ್ಬುಲ್ ಮುಜಾಯಿದ್ , ಅಲ್ಖೈದಾ ಮುಂತಾದ
ಸಂಘಟನೆಯ ಜೊತೆ ಪಾಕಿಸ್ತಾನ ನೇರ ಸಂಬಂಧ ಸಂಬಂಧ ಹೊಂದಿರುವುದು ಜಗಜ್ಜಾಹೀರವಾಗಿತ್ತು. ಅದು
೧೯೮೯-೯೦ರ ಸಮಯ ಒಂದು ರಾತ್ರಿ ಜಿಹಾದಿಗಳು
ಕಾಶ್ಮೀರ ಪಂಡಿತರಿಗೆ, ’ ಮತಾಂತರವಾಗಬೇಕು, ಇಲ್ಲವೇ ಎರಡು ದಿನಗಳಲ್ಲಿ ಊರು ಬಿಡಬೇಕು’
ಎಂದು ಎಚ್ಚರಿಕೆ ನೀಡಿದರು. ಕಾಶ್ಮೀರಿ ಪಂಡಿತರು ತಮ್ಮ ಜನ್ಮಭೂಮಿಯನ್ನು ಬಿಟ್ಟು
ಉಟ್ಟಬಟ್ಟೆಯಲ್ಲಿ ಅಲ್ಲಿಂದ ಓಡಿ ಬಂದರು. ಹಾಗೇ ಬಂದವರಿಗೆ ಭಾರತ ಸರಕಾರವು ದೆಹಲಿ ಮತ್ತು
ಜಮ್ಮುವಿನಲಿ ತಾತ್ಕಲೀಕ ಡೇರೆಗಳಲ್ಲಿ ಇರಿಸಿತು. ಆದರೆ ಪರಿಸ್ಥಿತಿ ತಿಳಿಯಾದಾಗ ತಾವು ತಮ್ಮ
ತಾಯ್ನಾಡಿಗೆ ಮರಳಿ ಹೋಗುವೆವೆಂಬ ಆಶಾಭಾವನೆಯಲ್ಲಿ ಈಗಾಗಲೇ ಹದಿನೆಂಟು ವರ್ಷಗಳು ಸರಿದು ಹೋಗಿವೆ.
ಆ ಶೀತಪ್ರದೇಶದಿಂದ ಬಂದ ಬಹಳಷ್ಟು ಮಂದಿ ದೆಹಲಿಯ ಬಿಸಿಲಭೇಗೆಯನ್ನು ಸಹಿಸಿಕೊಳ್ಳಲಾರದೆ
ಮರಣವನ್ನಪ್ಪಿದ್ದಾರೆ. ಕೆಲವು ಪಂಡಿತರು ನಮ್ಮ ಬೆಂಗಳೂರಿನಲ್ಲಿಯೂ ನೆಲೆಸಿದ್ದಾರೆ. ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳಿಗೆ ಬೆದರಿ ತಮ್ಮ ಎಲ್ಲಾ ಅಸ್ತಿಪಾಸ್ತಿಯನ್ನು, ಸಾವಿರಾರು ವರ್ಷಗಳ ತಮ್ಮ ಭವ್ಯಪರಂಪರೆಯ ನೆನಪುಗಳನ್ನು ಅಲ್ಲಿಯೇ ಹುಗಿದಿಟ್ಟು ರಾಷ್ಟ್ರ ರಾಜಧಾನಿಗೆ ಓಡಿ ಬಂದ ಜನಾಂಗವದು. ಅವರ ಆಸ್ತಿಪಾಸ್ತಿಯನ್ನು ಮುಸ್ಲಿಮರು ದೋಚಿದರು. ಸುಟ್ಟುಹಾಕಿದರು. ಭೂಮಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಅಲ್ಲೇ ಉಳಿದ ಹೆಣ್ಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿದರು, ಗಂಡಸರನ್ನು ಬರ್ಬರವಾಗಿ ಕೊಂದರು.
ಕಾಶ್ಮೀರಿ ಪಂಡಿತರ ಬಗ್ಗೆ ನಮಗೆ ಗೊತ್ತಿದ್ದ ವಿಚಾರ
ಇಷ್ಟು.ಆದರೆ ಈಗ ರಮೇಶ್ ಕುಮಾರ್ ಮತ್ತು ದೀಪಿಕಾಸಿಂಗ್ ತಮ್ಮ ನಡೆಯಿಂದ ಕೊಡುತ್ತಿರುವ ಸಂದೇಶವೇ
ಬೇರೆ; ಇತಿಹಾಸವನ್ನು ಕೇವಲ ಇತಿಹಾಸವನ್ನಾಗಿಯೇ ನೋಡಬೇಕು. ಇತಿಹಾಸದಲ್ಲಾದ ತಪ್ಪುಗಳಿಗೆ
ವರ್ತಮಾನದಲ್ಲಿ ನಿಂತು ಪ್ರತಿಕಾರಕ್ಕೆ ಮುಂದಾಗಬಾರದು.
.ಅಲ್ಲಿ ಜನವರಿಯಲ್ಲಿ ಆ ಮಗುವಿನ ಮೇಲೆ ಅತ್ಯಾಚಾರವೆಸಗಿ
ಕೊಲೆ ಮಾಡಲಾಗಿದೆ. ಏಪ್ರಿಲ್ ನಲ್ಲಿ ಕೊಲೆಯಾದ ಮಗುವಿನ ತಂದೆ ಮಹಮ್ಮದ್ ಅಕ್ಬರ್ ಜೊತೆ ಲಾಯರ್
ದೀಪಿಕಾಸಿಂಗ್. ಕೋರ್ಟಿಗೆ ಹಾಜರಾಗಿದ್ದಾಳೆ. ಅಂದರೆ ಎರಡು ತಿಂಗಳು ಆಕೆ ಮಗುವಿನ ಹೆತ್ತವರನ್ನು
ಭೇಟಿ ಮಾಡಿ ಮೊಕ್ಕದ್ದಮೆ ಹೂಡಲು ಮನವೊಲಿಸಿದ್ದಾಳೆ ಅಸಿಫಾ ಪರವಾಗಿ ಕೋರ್ಟ್ನಲ್ಲಿ ರಿಟ್ ಪಿಟಿಷನ್
ಹಾಕಿದ್ದಾಳೆ. ಅತ್ಯಾಚಾರ ಮತ್ತು ಕೊಲೆಯ ಆರೋಪ ಹೊತ್ತವರು ಹಿಂದುಗಳೆಂದೂ ಗೊತ್ತಾಗಿ ಅವರ ಪರವಾಗಿ
ರಾಜಕೀಯ ಮತ್ತು ವಕೀಲರುಗಳ ಒತ್ತಡ ಬಂದಾಗಲೂ ಅವರ ತಮ್ಮ ಸತ್ಯ ಮತ್ತು ನ್ಯಾಯನಿಷ್ಟುರತೆಯನ್ನು
ಬಿಟ್ಟುಕೊಡಲಿಲ್ಲ. ಅವರಲ್ಲಿ ಕಿಂಚಿತ್ತಾದರೂ ಸೇಡಿನ ಮನೋಭಾವವಿದ್ದಿದ್ದರೆ ಇದು
ಸಾಧ್ಯವಾಗುತ್ತಿರಲಿಲ್ಲ. ಮಾನವಹಕ್ಕುಗಳ ಹೋರಾಟಗಾರ್ತಿಯೂ, ಸ್ವತಃ ’ವಾಯ್ಸ್ ಫಾರ್ ರೈಟ್ಸ್’ ಎಂಬ
ಸ್ವಯಂಸೇವಾಸಂಘಟನೆಯ ಸಂಸ್ಥಾಪಕಿಯೂ ಆದ ದೀಪಿಕಾಸಿಂಗ್ ಮತ್ತು ನಿಶ್ಕಳಂಕ ಟ್ರಾಕ್ ರೆಕಾರ್ಡ್
ಹೊಂದಿರುವ ಪೋಲಿಸ ಅಧಿಕಾರಿ ರಮೇಶ್ ಕುಮಾರ್ ಜಲ್ಲಾ ಈ ಕ್ಷಣಕ್ಕೆ ಹೊಸ ಯುಗದ ಹರಿಕಾರರಾಗಿ
ಕಾಣುತ್ತಿದ್ದಾರೆ . ಯಾವಾಗಲೂ ಅಷ್ಟೇ. ಪರಸ್ಪರ ಕತ್ತಿ ಮಸೆಯುತ್ತಿದ್ದ ಎರಡು ಗುಂಪುಗಳು
ಅಸ್ತ್ರ್ಗಳನ್ನು ಕೆಳಗೆ ಹಾಕಿ ಪ್ರೀತಿಯ ಅಪ್ಪುಗೆಗಾಗಿ ತೋಳು ಚಾಚಲು ಮುಂದಾದರೆ ಅಲ್ಲಿ
ಪ್ರಾಣವಾಯು ಸುಳಿದಾಡುತ್ತದೆ.
ಅತ್ತ ಕಾಶ್ಮೀರದಲ್ಲೂ ಮಾನವತೆಯ ಜಲವೊಂದು ಒಸರುತ್ತಿದೆ.
ಅದೂ ಕೂಡಾ ಅಸಿಫಾ ಪ್ರಕರಣ ನಡೆದ ಮೇಲೆ ಪೆಭ್ರವರಿ ಮಧ್ಯಭಾದಲ್ಲಿ ಶಿವರಾತ್ರಿ ಆಚರಣೆಯ ಶುಭ
ಸಂದರ್ಭದಲ್ಲಿ ನಡೆದಿದೆ ಎಂಭುದು ಆಶಾದಾಯಕ ಬೆಳವಣಿಗೆ. ಜೈಬರ್ ಅಹಮ್ಮದ್ ಎಂಬ ಕಾಶ್ಮೀರಿ ಯುವಕ
ಪೇಸ್ಬುಕ್ ಪೇಜ್ ಆರಂಭಿಸಿ, ನಾವು ೨೮ ವರ್ಷಗಳ ಹಿಂದೆ ನಮ್ಮ ಸಹಪಾಥಿಗಳನ್ನು, ಹಳೆಯ ಗೆಳೆಯರನ್ನು,
ನಮ್ಮ ನೆರೆಹೊರೆಯವರನ್ನು, ನಮ್ಮ ಕುಟುಂಬ ಸ್ನೇಹಿತರನ್ನು ಕಳೆದುಕೊಂಡಿದ್ದೇವೆ. ಅವರ ಬಗ್ಗೆ ಯಾವ
ಸಮಚಾರವೂ ಇಲ್ಲ. . ಈಗ ಅವರನ್ನು ನಾವು ಹುಡುಕೋಣ ಮತ್ತೆ ಒಂದಾಗಿ ಬಾಳೋಣ. ಅದಕ್ಕಾಗಿ ಸಹಾಯ
ಮಾಡಿ’’ ಎಂದು ಬರೆದುಕೊಂಡಿದ್ದಾನೆ. ಮಾತ್ರವಲ್ಲ. ಕಾಶ್ಮೀರಿ ಮುಸ್ಲಿಮರು ಕಾಶ್ಮೀರಿ ಪಂಡಿತರಿಗೆ
ಶಿವರಾತ್ರಿಯ ಶುಭಾಶಯಪತ್ರಗಳನ್ನು [ಹಿರಾತ್ ಮುಬಾರಕ್] ರವಾನಿಸಿದ್ದಾರೆ.
ಈ ಪೇಜಿಗೆ
ವಿಸಿಟ್ ಕೊಟ್ಟ ಅನೇಕರು ಕಾಶ್ಮೀರಿ ಮುಸ್ಲಿಮರ ಈ ನಡೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ ಕಾಮೆಂಟ್
ಗಳನ್ನು ಹಾಕಿದ್ದಾರೆ. ಮುಖ್ಯವಾಗಿ ಆಲ ಪಾರ್ಟೀಸ್ ಹುರಿಯತ್ ಕಾನ್ಫರೆನ್ಸ್ ನ [ APHC
] ಮುಖ್ಯಸ್ಥರಾದ ಮಿರ್ವಾಝಿ ಉಮರ್ ಫಾರೂಕ್ ಹಿರಾತ್
ಶುಭಾಶಯಗಳನ್ನು ಹೇಳುತ್ತಾ ಕಾಶ್ಮೀರಿ
ಪಂಡಿತರನ್ನು ಉದ್ದೇಶಿಸಿ’ ನೀವೆಲ್ಲಾ ತಾಯ್ನಾಡಿಗೆ ಮರಳಿ ಬನ್ನಿ. ನಾವೆಲ್ಲಾ ಮತ್ತೆ ಒಟ್ಟಾಗಿ
ಬಾಳೋಣ’ ಎಂಬ ಸಂದೇಶವನ್ನು ಕಳುಹಿಸಿದ್ದಾರೆ.
ಒಳ್ಳೆಯದು ಎಲ್ಲಾ ಕಡೆಯಿಂದಲೂ ಹರಿದು ಬರಲಿ. ಆಗ
ಉತ್ತಮವಾದ ಫಲವೇ ದೊರಕುತ್ತದೆ.
[ ಕಾಶ್ಮೀರದ ಕಟುವಾದಲ್ಲಿ
ಬಕ್ರೆವಾಲ್ ಬುಡಗಟ್ಟಿನ ಎಂಟುವರ್ಷದ ಬಾಲಕಿಯ ಮೇಲೆ ನಡೆದ ರೇಪ್ ಮತ್ತು ಮರ್ಡರ್ ಕೇಸನ್ನು ಲಾಯರ್ ದೀಪಿಕಾ ಸಿಂಗ್ ತಾನಾಗಿಯೇ
ಕೈಗೆತ್ತಿಕೊಂಡು ನ್ಯಾಯಾಲಯದಲ್ಲಿ ಬಾಲಕಿಯ ತಂದೆಯ ಪರವಾಗಿ ವಕಾಲತ್ತು ವಹಿಸಿಕೊಂಡಾಗ ಮತ್ತು ತನಿಖಾಧಿಕಾರಿಯಾಗಿ
ರಮೇಶ್ ಕುಮಾರ ಜಲ್ಲಾ ಅಧಿಕಾರ ವಹಿಸಿಕೊಂಡಾಗ ಏಪ್ರೀಲ್ ನಲ್ಲಿ ಈ ಲೇಖನ ಬರೆದೆ. ಯಾವುದೋ ಹುಕ್ಕಿನಲ್ಲಿ
ದಿನಪತ್ರಿಕೆಯೊಂದಕ್ಕೆ ಕಳುಹಿಸಿಬಿಟ್ಟೆ. ಆದರೆ ಪ್ರಕಟವಾಗಲಿಲ್ಲ.
ಈಗ ಅತ್ಯಾಚಾರ ಅರೋಪಿಗಳ ಮೇಲೆ ಮೇಲೆ ಚಾರ್ಜ್ ಶೀಟ್ ಹಾಕಲಾಗಿದೆ. ಲಾಯರ್ ದೀಪಿಕಾ ಸಿಂಗ್ ರಾಜವತ್ ಗೆ ಇಂಡಿಯನ್ ಮರ್ಚೆಂಟ್ಸ್ ಚೇಂಬರ್
ಅಫ್ ಕಾಮರ್ಸ್ ಮತ್ತು ಇಂಡಸ್ತ್ರಿ ಲೇಡಿಸ್ ವಿಂಗ್ ‘ವರ್ಷದ ಮಹಿಳೆ’ ಎಂಬ ಬಿರುದನ್ನು ಕೊಟ್ಟು ಸನ್ಮಾನಿಸಿದೆ. ಆದರೆ ಬಿಜೆಪಿ ಸರಕಾರದಲ್ಲಿ ಫಾರೆಸ್ಟ್ ಸಚಿವರಾಗಿದ್ದ ಲಾಲ್
ಸಿಂಗ್ ಮತ್ತು ಇಂಡಸ್ಟ್ರಿ ಸಚಿವರಾದ ಚಂದ್ರ ಪ್ರಕಾಶ್
ರೇಪ್ ಆರೋಪ ಹೊತ್ತವರ ಪರ್ವಾಗಿ ಬೀದಿಗಿಳಿದು ಮೆರವಣಿಗೆ ಮಾಡಿದ್ದರು.
ಹಾಗಾಗಿ ಈ ಲೇಖನವನ್ನು
ಬ್ಲಾಗ್ ಗೆ ಹಾಕಬೇಕೆನಿಸಿತು ]
0 comments:
Post a Comment