Wednesday, September 24, 2008

ಬಳೆಗಾರ ಚೆನ್ನಯ್ಯನಂತಹ ಬ್ಯಾರಿಗಳು

ಅಡಿಕೆ ತೋಟಕ್ಕೆ ಗೊಬ್ಬರ ಖರೀದಿಗೆಂದು ಊರಿಗೆ ಹೋದವಳು ಇಂದು ತಿರುಗಿ ಬಂದೆ.

ಕಳೆದ ಸರ್ತಿ ರಾಸಾಯನಿಕ ಗೊಬ್ಬರ ಅಂದ್ರೆ, ಯೂರಿಯ, ಪೊಟಾಶ್, ರಾಕ್ ಫಾಸ್ಪೇಟ್ ಗಳನ್ನು ೧;೨;೩ರ ಪ್ರಮಾಣದಲ್ಲಿ ಮಿಕ್ಸ್ ಮಾಡಿ ಹಾಕಿದ್ದೆ. ನಾನು ಸಾವಯವಕೃಷಿಯ ಪರವಾಗಿದ್ದರೂ ಕಳೆದ ಬಾರಿ ರಾಸಾಯನಿಕ ಹಾಕುವುದು ಅನಿವಾರ್ಯವಾಗಿತ್ತು. ಯಾಕೆಂದರೆ, ನಾನು ಖರೀದಿಸಿದ ಆ ತೋಟಕ್ಕೆ ಕಳೆದ ಹತ್ತು ವರ್ಷಗಳಿಂದ ಗೊಬ್ಬರ ಹಾಕಿರಲಿಲ್ಲವಂತೆ. ಹಾಗಾಗಿ ಮರಗಳಿಗೆ ಒಮ್ಮೆ ಚೈತನ್ಯ ತುಂಬಲು ರಾಸಾಯನಿಕ ಗೊಬ್ಬರ ಕೊಡಲೇ ಬೇಕಾಗಿತ್ತು.

ಭಾನುವಾರ ಬೆಳಿಗ್ಗೆ ತೋಟದ ಮನೆ ತಲುಪಿ, ತೋಟವೆಲ್ಲಾ ಸುತ್ತಾಡಿ, ಗಿಡಮರಗಳ ಮೈದಡವಿ, ತುಂಬಿ ಹರಿಯುವ ಕಪಿಲೆಯ ಭೊರ್ಗೆರೆತಕ್ಕೆ ಬೆರಗಾಗುತ್ತ ಮನೆ ತಲುಪಿದಾಗ ಶಿವಾನಂದ ಹಂಡೆ ತುಂಬ ಬಿಸಿ ನೀರು ಕಾಯಿಸಿ ಇಟ್ಟಿದ್ದ. ಸ್ನಾನ ಮಾಡಿ ಬರುವುದರೊಳಗೆ ಅವನ ಹೆಂಡ್ತಿ ರೇಖಾ ಮನೆಯನ್ನು ಚೊಕ್ಕಟ ಮಾಡಿ ಟೀಗೆ ನೀರಿಡುತ್ತಿದ್ದಳು

ಟೀ ಕುಡಿದು ಲೋಕಸಂಚಾರಕ್ಕಾಗಿ ಟಿ.ವಿ ಅನ್ ಮಾಡಿದಾಗ ಲಾರಿ ಹಾರ್ನ್ ಕೇಳಿಸಿತು. ದೂರದಲ್ಲಿ ಮಮ್ಮದೆಬ್ಯಾರಿಯ ಲಾರಿ ಕಾಣಿಸುತ್ತಾ ಗೇಟಿನೊಳಗೆ ನುಸುಳಿ ಅಂಗಳದೊಳಗೆ ಬಂದೇಬಿಟ್ಟಿತು. ೮೦ ಚೀಲ ಅಂದರೆ ೪ಟನ್ ಗೊಬ್ಬರವನ್ನು ಅವರದೇ ಜನ ಕೊಟ್ಟಿಗೆಯಲ್ಲಿ ನೀಟಾಗಿ ಜೋಡಿಸಿಟ್ಟರು. ಟೀ ಮಾಡಿ ಕೊಟ್ಟರೆ ’ರಂಜಾನ್ ತಿಂಗಳಲ್ವಾ.. ಹಾಗಾಗಿ ಉಪವಾಸದಲ್ಲಿದ್ದೇವೆ’ ಎಂದು ನಗುತ್ತಲೇ ನಿರಾಕರಿಸಿದರು.

ಮೀನು, ಬೇವಿನ ಹಿಂಡಿ ಮತ್ತು ಎಲುಬಿನ ಪುಡಿಯ ಈ ಸಾವಯವ ಗೊಬ್ಬರ ಅಡಿಕೆ,ಕೊಕ್ಕೊ ಮತ್ತು ತೆಂಗಿನ ಮರಕ್ಕೆ ಅತ್ಯುತ್ತಮ ಗೊಬ್ಬರ .ಭೂಮಿಯಲ್ಲಿ ಸಮೃದ್ಧವಾಗಿ ಎರೆಹುಳು ಉತ್ಪತ್ತಿಯಾಗುತ್ತದೆ. ಇಂಥ ಗೊಬ್ಬರವನ್ನು ಇದೇ ಮಮ್ಮದೆಬ್ಯಾರಿ ಆ ಊರಿನ ಹಲವಾರು ಮನೆಗಳಿಗೆ ಹಲವಾರು ವರ್ಷಗಳಿಂದ ಪೂರೈಸುತ್ತಿದ್ದರು.

ಗೊಬ್ಬರದ ಬೆಲೆ ೩೦ ಸಾವಿರ ರೂಪಾಯಿಗಳಲ್ಲಿ ೧೦ ಸಾವಿರ ರೂಪಾಯಿಗಳನ್ನು ಮೊದಲ ಅಡಿಕೆ ಕೊಯ್ಲಿನ ನಂತರ ಕೊಡುವುದಾಗಿ ಹೇಳಿದಾಗ ಮಮ್ಮದೆಬ್ಯಾರಿ ’ಆಯ್ತು ಅಕ್ಕಾ.ದುಡ್ಡು ಎಲ್ಲಿ ಹೊಗುತ್ತೆ ಬಿಡಿ. ನೀವು ಚೆನ್ನಾಗಿ ಕೃಷಿ ಮಾಡಿ’ ಎಂದು ಶುಭ ಹಾರೈಸಿ ಲಾರಿ ಸ್ಟಾರ್ಟ್ ಮಾಡಿದರು.

ಈ ಘಟನೆಯನ್ನು ಯಾಕೆ ಹೇಳುತ್ತಿದ್ದೇನೆಂದರೆ ಈ ಬ್ಯಾರಿಗಳು ನಮ್ಮ ಕರಾವಳಿ ಜಿಲ್ಲೆಯ ಆರ್ಥಿಕ ಸುಧಾರಣೆಯ ಕೊಂಡಿಗಳು. ಆರ್ಥಿಕ ಸಂಕಷ್ಟದಲ್ಲಿರುವವರಿಗೆ ಮಳೆಗಾಲದಲ್ಲಿ ನೆರವು ನೀಡಿ ಫಸಲು ಬಂದ ಮೇಲೆ ಅದನ್ನು ಪಡೆದು ತಮ್ಮ ಸಾಲಕ್ಕೆ ವಜಾ ಮಾಡಿಕೊಳ್ಳುತ್ತಾರೆ. ನಮ್ಮ ಕರಾವಳಿಯ ಜನರು ಲೇವಾದೇವಿಗಾರರ ಬಡ್ಡಿಯ ವಿಷವರ್ತುಲದೊಳಗೆ ಸಿಕ್ಕಿ ಬೀಳದಿರಲು ಇದೂ ಒಂದು ಕಾರಣವಿರಬಹುದು.

ಜಾನಪದದಲ್ಲಿ ಬಳೆಗಾರ ಚೆನ್ನಯ್ಯ ಹೇಗೆ ಅಂಚೆಯಣ್ಣನ ಪಾತ್ರವನ್ನು ವಹಿಸುತ್ತಿದ್ದನೋ ಹಾಗೆಯೇ ಬ್ಯಾರಿಗಳು ಕರಾವಳಿಯಲ್ಲಿ ಸರಕು ಸಾಗಾಣಿಕೆಯ ಪಾತ್ರವನ್ನು ವಹಿಸುತ್ತಿದ್ದರು. ರುಚಿಕರವಾದ ಒಣಮೀನನ್ನು ಇಂದಿಗೂ ಹಳ್ಳಿ ಹಳ್ಳಿಗಳಿಗೆ ತಲಪಿಸುವವರು ಇವರೇ. ಸೇಕುಂಝ್ ಬ್ಯಾರಿ ತಂದು ಕೋಡುತ್ತಿದ್ದ ಓಲೆ ಬೆಲ್ಲದ ರುಚಿ ಇಂದು ಕೂಡ ನನ್ನ ನಾಲಗೆಯಲ್ಲಿದೆ. ನಮ್ಮೂರಿನಲ್ಲಿ ಈಗಲೂ ವ್ಯಾಪಾರಕ್ಕಾಗಿ ಬಂದ ಬ್ಯಾರಿಗಳಿದ್ದಾರೆ. ನಮ್ಮ ಅವರ ನಡುವಿನ ಸಂಬಂಧ,ವಿಸ್ವಾಸದಲ್ಲಿ ಬಹಳ ಬದಲಾವಣೆಯೇನು ಆದಂತಿಲ್ಲ.

ಎರಡ್ಮೂರು ದಶಕಗಳ ಹಿಂದಿನ ಘಟನಾವಳಿಗಳು ಇವು; ಪುತ್ತೂರಿಗೆ ವಯಾ ಪಂಜದ ಹಾದಿಯಲ್ಲಿ ಹೋದರೆ ಬೈತಡ್ಕ ಎಂಬ ಊರು ಸಿಗುತ್ತದೆ. ಅಲ್ಲಿನ ಸೇತುವೆ ದಾಟಿ, ಮೊದಲ ತಿರ್ಗಾಸಿನ ಬಲ ಬದಿಯಲ್ಲೊಂದು ಪಳ್ಳಿ[ಮಸೀದಿ] ಸಿಗುತ್ತದೆ. ’ಬೈತಡ್ಕ ಪಳ್ಳಿ’ ಎಂದೇ ಖ್ಯಾತಿಯನ್ನು ಪಡೆದಿರುವ ಆ ಮಸೀದಿ ತುಂಬಾ ಕಾರಣಿಕವಾದುದು ಎಂದುಸುತ್ತಮುತ್ತಲ ತಾಲೂಕಿನವರು ಹೇಳುತ್ತಿದ್ದರು. ಪುತ್ತೂರಿಗೆ ಹೋಗಿ ಬರುವ ಪ್ರತಿ ಬಸ್ಸು ಅಲ್ಲಿ ಒಂದರೆಗಳಿಗೆ ನಿಂತು ಅಥವಾ ನಿಧಾನಿಸಿ ಮುಂದಕ್ಕೆ ಸಾಗುತ್ತಿತ್ತು. ಜಾತಿ-ಮತ ಭೇದವಿಲ್ಲದೆ ಜನರು ಆ ಪಳ್ಳಿಯೆಡೆಗೆ ದುಡ್ಡನ್ನು ಕಿಟಿಕಿಯಿಂದ ಹಾಕಿ ಹರಕೆ ತೀರಿಸುತ್ತಿದ್ದರು.

ನನ್ನ ಅಜ್ಜಿಗೆ ಈ ಪಳ್ಳಿಯ ಮೇಲೆ ವಿಶೇಷ ನಂಬಿಕೆಯಿತ್ತು. ಆಕೆ ತುಂಬಾ ಕೋಳಿ ಸಾಕುತ್ತಿದ್ದಳು. ಚಳಿಗಾಲದಲ್ಲಿ ಸಹಜವಾಗಿ ಕೋಳಿಹೇನುಗಳಾಗುತ್ತಿದ್ದವು. ಬೈತಡ್ಕ ಪಳ್ಳಿಗೆ ಹರಕೆ ಹೇಳಿಕೊಂಡರೆ ಹೇನುಗಳೆಲ್ಲಾ ಮಂಗಮಾಯ ಎಂಬುದು ಭಕ್ತರ ನಂಬಿಕೆ.ನಾನು ಹತ್ತಾರು ವರ್ಷಗಳಿಂದ ಆ ದಾರಿಯಲ್ಲಿ ಹೊಗಿಲ್ಲ. ಬಹುಶಃ ಈಗ ಅಲ್ಲಿ ಬಸ್ಸು ನಿಲ್ಲಲಾರದು

ಹಾಗೆ ಭಾವಿಸಲು ಕಾರಣವಿದೆ. ಹುಟ್ಟಿದೂರಿನಿಂದ ದೂರವಿರುವ ನಾನು ಅಲ್ಲಿಯ ಆಗುಹೋಗುಗಳನ್ನು ತಿಳಿದುಕೊಳ್ಳುವ ಕಾರಣದಿಂದ ’ಸುದ್ದಿ ಬಿಡುಗಡೆ’ ಎಂಬ ಪತ್ರಿಕೆಯನ್ನು ತರಿಸುತ್ತೇನೆ. ಅದರಲ್ಲಿ ನಾಲ್ಕೈದಾದರು ಭಜರಂಗಿಗಳ ದರ್ಭಾರ್ ಇದ್ದೇ ಇರುತ್ತದೆ ಹೆಚ್ಚಾಗಿ ಅವರು ಮಾಡುವುದು ಪತ್ತೆದಾರಿಕೆ ಕೆಲಸವನ್ನು. ಒಂದು ಹಿಂದು ಯುವತಿ ಒಬ್ಬ ಯುವಕನೊಡನೆ ಆತ್ಮೀಯವಾಗಿ ಮಾತಾಡುವುದು ಕಂಡು ಬಂದರೆ ಆ ಯುವಕ ಯಾವ ಕೋಮಿನವನೆಂದು ಪತ್ತೆ ಹಚ್ಚುವುದು. ಅನ್ಯ ಕೋಮಿನವನೆಂದು ಗೊತ್ತಾದರೆ ಅವನಿಗೆ ಚೆನ್ನಾಗಿ ತದಕುವುದು. ತಾನೇನು ತಪ್ಪು ಮಾಡಿದೆನೆಂದು ಅವನು ಕಕ್ಕಾಬಿಕ್ಕಿಯಾಗುತ್ತಿರುವಾಗಲೇ ಅವನ ಶರ್ಟ್ ಹರಿದು ಕೆನ್ನೆ ಊದಿಕೊಂಡಿರುತ್ತದೆ.ದೂರದ ಊರಿನವರಾಗಿದ್ದರೆ ಅಲ್ಲಿಗೆ ಮೇಸೇಜ್ ಮುಟ್ಟಿಸುತ್ತಾರೆ. ಅಲ್ಲಿ ಅವರಿಗೆ ತಕ್ಕ ಪೂಜೆ ಅಲ್ಲಿಯ ಭಜರಂಗಿಗಳಿಂದ ಆಗುತ್ತದೆ. ಭಜರಂಗಿಗಳ ಇನ್ನೊಂದು ಕೆಲಸ; ದನ ಕಾಯುವುದು. ಎಲ್ಲಿಯಾದರು ಟ್ರಕ್ ಗಳಲ್ಲಿ ದನ ಕೊಂಡೊಯ್ಯುತ್ತಿರುವ ಸುದ್ದಿ ಸಿಕ್ಕಿದರೆ ಅಲ್ಲಿಗೆ ಹಾಜರು. ಬಡ ಸಾಬರು ಹಣ್ಣುಗಾಯಿ-ನೀರುಗಾಯಿ. ಈ ಸಣ್ಣ ಕಿಡಿ ಮುಂದೆ ಕೋಮುದಳ್ಳುರಿಯಾಗುತ್ತದೆ.

ಭಜರಂಗಿಗಳಿಗೆ ಗೊತ್ತಿಲ್ಲದಿರಬಹುದು; ಸಾಮೂಹಿಕವಾಗಿ ದನದ ಮಾಂಸ ತಿನ್ನುವುದನ್ನೇ ಒಂದು ಸಂಭ್ರಮವನ್ನಾಗಿಸಿ ಆಚರಿಸಿಕೊಳ್ಳುವ ವೈಚಾರಿಕ ಹಿಂದುಗಳು ನಮ್ಮ ನಡುವೆಯೇ ಇದ್ದಾರೆ. ಅವರನ್ನು ಯಾವ ಕೋಮಿಗೆ ಸೇರಿಸುತ್ತಿರಿ?

ಯಾವ ಧರ್ಮದಲ್ಲಿ ತನಗೆ ನೆಮ್ಮದಿ ಸಿಗುತ್ತದೆ; ಯಾವ ಆಹಾರವನ್ನು ತಿಂದರೆ ತನಗೆ ಹಿತ ಅನ್ನಿಸುತ್ತದೆ ಎಂಬುದು ವ್ಯಕ್ತಿಯ ವೆಯ್ಯಕ್ತಿಕ ಆಯ್ಕೆ. ಅದು ವೆಯ್ಯಕ್ತಿಕ ಮಟ್ಟದಲ್ಲೇ ಇದ್ದರೆ ಅದರಿಂದ ಯಾರಿಗೂ ಹಾನಿಯಿಲ್ಲ. ಅದು ಬಹಿರಂಗಗೊಂಡು ಸಾರ್ವತ್ರಿಕಗೊಂಡಾಗ ಘರ್ಷಣೆಗಳುಂಟಾಗುತ್ತವೆ. ಸಾಮಾಜಿಕ ನೆಮ್ಮದಿ ಕದಡುತ್ತದೆ.

Saturday, September 20, 2008

ಬರೆಯಬಾರದೆಂದಿದ್ದರೂ....ಬರೆದೆ

ನನ್ನ ಬ್ಲಾಗ್ ಬರಹಕ್ಕೆ ಪ್ರತಿಕ್ರಿಯಿಸುತ್ತ ರಾಮರವರು ’ಬಜರಂಗಿಗಳ ಪುಂಡಾಟದ ಬಗ್ಗೆ ಬರೆಯಿರಿ’ ಎಂದಿದ್ದರು. ಆ ಪುಂಡುಪೋಕರಿಗಳ ಪಡೆಯನ್ನು ನಿಯಂತ್ರಿಸಬೇಕಾದ ಸರಕಾರವೇ ತೆರೆಮರೆಯಲ್ಲಿ ಅದನ್ನು ಮುನ್ನಡೆಸುತ್ತಿರುವಾಗ ನಾವೇನು ಮಾಡಲು ಸಾಧ್ಯ? ಎಂದು ಅಸಹಾಯಕತೆಯಿಂದ ಮನಸ್ಸು ಕಂದು ಹೊಗಿತ್ತು. ಆದರೆ ಇಂದು ವಿಜಯಕರ್ನಾಟಕ ದಿನಪತ್ರಿಕೆಯಲ್ಲಿ ಪ್ರತಾಪಸಿಂಹ ಎಂಬ ಪತ್ರಕರ್ತರು ಬರೆದ ಅಂಕಣ ಬರಹವನ್ನು ಒದಿದಾಗ ಪ್ರತಿಕ್ರಿಯಿಸದೆ ಇರಲಾಗಲಿಲ್ಲ.
ಅವರ ಉವಾಚ ಇದು; ’ಅದು ಬಜರಂಗದಳವಿರಬಹುದು ಅಥವಾ ಇನ್ನಾವುದೇ ಸಂಘಟನೆ ಇರಬಹುದು. ಧರ್ಮದ ಅವಹೇಳನ ಮಾಡಿದಾಗ ಕಾನೂನನ್ನು ಕೈಗೆತ್ತಿಕೊಳ್ಳುವುದು ಸಹಜ.....’
’ಅವರು ಹಂಚುವ ಅವಹೇಳನಕಾರಿ ಪುಸ್ತಕಗಳನ್ನು ಮೊದಲು ಪಡೆದುಕೊಂಡು, ಅನಂತರ ಮೈಗೆ ಬಿಸಿ ಮುಟ್ಟಿಸಿ. ಆಧಾರ ಸಮೇತ ಪೋಲಿಸರಿಗೊಪ್ಪಿಸಿ.’
ಹೀಗೆ ಅಪ್ಪಣೆ ಕೊಡಿಸುವ ಪತ್ರಕರ್ತನ ಮನಸ್ಥಿತಿಯನ್ನು ಬಿಡಿಸಿ ಹೇಳುವ ಅವಸ್ಯಕತೆಯಿಲ್ಲ.
ಕ್ರಿಯೆಗೊಂದು ಪ್ರತಿಕ್ರಿಯೆ ಇದ್ದೇ ಇರುತ್ತದೆ. ಆದರೆ ವ್ಯಕ್ತಿಯೊಬ್ಬ ಪ್ರತಿಕ್ರಿಯಿಸುವುದಕ್ಕೂ, ಸಂಘಟನೆಯೊಂದು ಪ್ರತಿಕ್ರಿಯಿಸುವುದಕ್ಕೂ, ಸರಕಾರವೊಂದು ಪ್ರತಿಕ್ರಿಯಿಸುವುದಕ್ಕೂ ವ್ಯತ್ಯಾಸವಿದೆ. ಕರ್ನಾಟಕದ ಕೆಲವು ಭಾಗಗಳಲ್ಲಿ ಚರ್ಚ್ ಗಳ ಮೇಲೆ ನಡೆದ ಸೀರಿಯಲ್ ದಾಳಿಗಳ ಸಂದರ್ಭದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪನವರು ಕರ್ನಾಟಕದ ಮುಖ್ಯಮಂತ್ರಿಯಾಗಿ ವರ್ತಿಸಲಿಲ್ಲ. ಬಿಜೆಪಿ ಪಕ್ಷದ ವಕ್ತಾರರಂತೆ ವರ್ತಿಸಿದ್ದರು.
ಕುಮಾರಸ್ವಾಮಿಯಿಂದ ’ನಪುಂಸಕ’ ಎಂದು ಕರೆಯಿಸಿಕೊಂಡು, ಕೇಂದ್ರದಿಂದ ಒತ್ತಡ ಬಂದ ಮೇಲೆ ಈಗ ಕರ್ನಾಟಕದ ಮುಖ್ಯಮಂತ್ರಿಯಾಗಲು ಮನಸ್ಸು ಮಾಡಿದಂತಿದೆ. ಚರ್ಚ ಮೇಲೆ ದಾಳಿ ಕುರಿತಂತೆ ನ್ಯಾಯಾಂಗ ತನಿಖೆಗೆ ಆದೇಶ ನೀಡಲಾಗಿದೆ. ಶ್ರೀರಾಮ ಸೇನೆಯ ಮುಖಂಡ ಪ್ರಮೋದ ಮುತಾಲಿಕ್ ಬಂದನಕ್ಕೆ ವಾರಂಟ್ ಹೊರಡಿಸಲಾಗಿದೆ. ಚರ್ಚ್ ಗಳಿಗೆ ಬಿಗಿ ಬಂದೋಬಸ್ತು ನಿಡುವಂತೆ ಆದೇಶಿಸಲಾಗಿದೆ.
ಇವತ್ತು ಬೆಳಗಾವಿಯಲಿದ್ದ ಮುಖ್ಯಮಂತ್ರಿಗಳ ಮುಖ ಸುಟ್ಟ ಬದನೆಕಾಯಿಯಂತಿತ್ತು. ಸಿಡ ಸಿಡ ಎನ್ನುತ್ತಿದ್ದರು. ’ಬಿಜೆಪಿ ಶರವೇಗದಲ್ಲಿ ಬೆಳೆಯುತ್ತಿದೆ. ಅದನ್ನು ಸಹಿಸದ ಕಾಂಗ್ರೇಸ್ ಅಪಪ್ರಚಾರ ಮಾಡುತ್ತಿದೆ....ಕುಮಾರಸ್ವಾಮಿ ಸಂಯಮ ಕಳೆದುಕೊಂಡಿದ್ದಾರೆ...’ಎಂದೆಲ್ಲಾ ಹತಾಶರಾಗಿ ನುಡಿದರು.
ಅದು ನಿಜವಿದ್ದರೂ ಇರಬಹುದು. ಅದರೆ ಒಬ್ಬ ರಾಜಕೀಯ ಮುತ್ಸುದ್ಧಿಗೆ ಇತಿಹಾಸದ ಅರಿವಿರಬೇಕು. ಮುಖ್ಯಮಂತ್ರಿ ವಿರೇಂದ್ರಪಾಟೀಲರನ್ನು ಕೆಳಗಿಳಿಸಲು ಅವರದೇ ಪಕ್ಷದ ಜಾಫರ್ ಷರೀಫ್ ರಾಮನಗರ ಮತ್ತು ಚನ್ನಪಟ್ಟಣಗಳಲ್ಲಿ ಕೊಮುಗಲಭೆಯನ್ನು ಹುಟ್ಟುಹಾಕಿದ್ದು ಈಗ ಇತಿಹಾಸ. ಹಾಗಾಗಿ ಎರಡು ಅಲಗಿನ ಮೇಲಿನ ನಡಿಗೆಯಂತಿರಬೇಕು ಅಧಿಕಾರದ ಗದ್ದುಗೆ.
ಗೃಹಮಂತ್ರಿ ವಿಎಸ್ ಆಚಾರ್ಯರಂತೂ ನಿಜವಾದ ಅರ್ಥದಲ್ಲಿ ಕೌಟುಂಬಿಕ ಸಮಸ್ಯೆಗಳನ್ನು ಬಿಡಿಸುವುದರಲ್ಲಿ ನಿಷ್ಣಾತರು!
ಗೇಳೆಯರೇ, ನಾನು ನನ್ನ ಅಡಿಕೆ ತೋಟಕ್ಕೆ ಗೊಬ್ಬರ ಖರೀದಿಗೆಂದು ಊರಿಗೆ ಹೊರಟಿದ್ದೇನೆ. ಹಾಗಾಗಿ ಉಳಿದ ವಿಚಾರಗಳನ್ನು ಊರಿಂದ ಬಂದ ನಂತರ ಮಾತಡೋಣಾ ಆಗದೇ?

Wednesday, September 3, 2008

ಚೌತಿ ಎಂದರೆ.... ಬರಹ ಹಿಡಿಸುವುದು

ನಾನು ಅವಿಭಜಿತ ದಕ್ಷಿಣಕನ್ನಡ ಜಿಲ್ಲೆಯವಳು. ನಮ್ಮ ತಾಲೂಕಿನಲ್ಲಿ ಬ್ರಾಹ್ಮಣರ ಮನೆಯಲ್ಲಿ, ಅದು ಕೂಡ ಉಳ್ಳವರ ಮನೆಯಲ್ಲಿ ಮಾತ್ರಾ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸುತ್ತಿದ್ದರು. ಅದು ಖಾಸಗಿ ಮಟ್ಟದಲ್ಲಿ ಮಾತ್ರ. ಹಾಗಾಗಿ ಗಣೇಶ ನನಗೇನೂ ಇಷ್ಟದೈವವಲ್ಲ.ಆದರೂ ಗಣಪ ನನ್ನ ಭಾವಕೋಶದಲ್ಲಿನ ಒಂದು ಪ್ರಮುಖ ದೇವರು. ಚೌತಿ ಅಂದ್ರೆ ಗಣೇಶ ಚತುರ್ಥಿಯಂದು ನನಗೆ ನೆನಪಾಗುವುದು ನನ್ನ ಬಾಲ್ಯ.ಶಾಲೆಯಲ್ಲಿ ಆನೇಕ ರಾಷ್ಟೀಯ ಹಬ್ಬಗಳನ್ನು ಆಚರಿಸುತ್ತಾರೆ. ಆದರೆ ಸಾಂಸ್ಕ್ರತಿಕವಾಗಿ ಆಚರಿಸುವ ಹಬ್ಬವೆಂದರೆ ಬಹುಶಃ ಗಣೇಶ ಚತುರ್ಥಿ ಒಂದೇ. ಬೆಂಗಳೂರಿನಂತಹ ಪಟ್ಟಣಗಳಲ್ಲಿ ಶಾಲೆಗಳಲ್ಲಿ ಚೌತಿಯನ್ನು ಆಚರಿಸುವುದನ್ನು ನಾನು ನೋಡಿಲ್ಲ. ಕೇಳಿಲ್ಲ. ಚೌತಿ ನೆನಪಿರುವುದು ನನಗೆ ಎರಡು ಕಾರಣಗಳಿಗಾಗಿ. ಒಂದು; ಅಂದು ಪುಟ್ಟ ಮಕ್ಕಳಿಗೆ ಅಕ್ಷರಾಭ್ಯಾಸ ಆರಂಭಿಸುತ್ತಾರೆ. ಅಥವ ಬರಹ ಹಿಡಿಸುತ್ತಾರೆ. ಇನ್ನೊಂದು; ಮಕ್ಕಳಿಗೆಲ್ಲಾ ಅವಲಕ್ಕಿ ಪಂಚಕಜ್ಜಾಯವನ್ನು ಯಥೇಚ್ಚವಾಗಿ ಹಂಚುತ್ತಾರೆ. ಇದರಲ್ಲಿನ ಕೆಲವು ಸ್ವಾರಸ್ಯಕರ ಸಂಗತಿಗಳನಿಲ್ಲಿ ಹಂಚಿಕೊಳ್ಳುವುದು ನನ್ನ ಉದ್ದೆಶ. ದ.ಕ. ಸೆಖೆನಾಡದ್ದರಿಂದ ಬ್ರಾಹ್ಮಣರನ್ನು ಹೊರತುಪಡಿಸಿ ಉಳಿದವರೆಲ್ಲ ಸಂಜೆ ಸ್ನಾನ ಮಾಡುವುದು ರೂಢಿ. ಆದರೆ ಚೌತಿಯಂದು ಶಾಲಾಮಕ್ಕಳೆಲ್ಲ ಮುಂಜಾನೆಯೇ ಎದ್ದು ಸ್ನಾನ ಮಾಡಿ ಹೊಸ ಬಟ್ಟೆ ತೊಟ್ಟು ಶಾಲೆಗೆ ಬರುತ್ತಾರೆ. ಪ್ರತಿ ವಿದ್ಯಾರ್ಥಿಯೂ ಮೂರರಿಂದ ಐದು ಸೇರಿನಷ್ಟು ಅರಳನ್ನು ತರಬೇಕು. ಅನುಕೂಲವಿದ್ದವರು ಒಂದು ಬಾಳೆಗೋನೆಯನ್ನು ತರಬಹುದು. ಪಂಚಕಜ್ಜಾಯಕ್ಕೆ ಬೇಕಾದ ಬೆಲ್ಲವನ್ನು ಶಾಲಾವತಿಯಿಂದಲೇ ಖರೀದಿಸಲಾಗುತ್ತಿತ್ತು. ನಮ್ಮೂರಿನಲ್ಲಿ ಕಬ್ಬು ಬೆಳೆಯುವುದಿಲ್ಲ. ಹಾಗಾಗಿ ಪಂಚಕಜ್ಜಾಯಕ್ಕೆ ಅತ್ಯಗತ್ಯವಾಗಿ ಬೇಕಾದ ಕಬ್ಬು ಎಲ್ಲಿ ಸಿಗುತ್ತದೆಯೆಂದು ತಿಂಗಳುಗಳ ಮೊದಲೇ ಹೆಡ್ಮಾಸ್ತರರು ಹೊಂಚಿ ಇಟ್ಟಿರುತ್ತಿದ್ದರು. ಶಿಷ್ಟ ಭಾಷೆಯಲ್ಲಿ ವಿದ್ಯಾರಂಭವೆಂಬ ’ಬರಹ ಹಿಡಿಸುವ’ ಈ ವಿಶಿಷ್ಟ ಪದ್ಧತಿ ಈಗ ಮರೆಯಾಗಿದೆ. ಈಗ ಮಗು ಅಂಬೆಗಾಲಿಡಲು ಆರಂಭಿಸಿದಾಗಲೇ ಅದರ ಕೈಗೆ ಮೌಸ್ ಹಿಡಿಸುತ್ತಾರೆ. ಹಿಂದೆಲ್ಲಾ ಮಗುವನ್ನು ಶಾಲೆಗೆ ಸೇರಿಸಲು ಐದು ವರ್ಷ ಹತ್ತು ತಿಂಗಳು ತುಂಬಬೇಕಾಗಿತ್ತು. ಇದಕ್ಕೆ ಒಂದೆರಡು ವರ್ಷ ಮೊದಲು ಅದಕ್ಕೆ ಬರಹ ಹಿಡಿಸುತ್ತಿದ್ದರು. ಅದಕ್ಕಾಗಿ ಚೌತಿಯಂದು ಒಂದು ಸೇರು ಬೆಳ್ತಿಗೆ ಅಕ್ಕಿ-ಇಲ್ಲಿ ಒಂದು ವಿಷಯ ಹೇಳಬೇಕು, ಅಲ್ಲಿಯ ಜನಸಾಮನ್ಯರು ಊಟ ಮಾಡುವುದು ಕುಚ್ಚಲಕ್ಕಿ. ದೇವರು ಇದಕ್ಕಿಂತ ಸ್ವಲ್ಪ ಭಿನ್ನವಾಗಿರಬೇಕಲ್ಲ ಅದಕ್ಕಾಗಿ ದೇವರಿಗೆ ಬೆಳ್ತಿಗೆ ಅಕ್ಕಿ- ಇದರ ಜೊತೆ ಒಂದು ತೆಂಗಿನಕಾಯಿಯನ್ನು ತೆಗೆದುಕೊಂಡು ಮಗುವಿನ ಜೊತೆ ಶಾಲೆಗೆ ಬರಬೇಕು. ಊರ ಜನರು, ಉಪಾಧ್ಯಾಯರುಗಳು, ವಿದ್ಯಾರ್ಥಿವೃಂದ ಎಲ್ಲರೂ ಸೇರಿ ವಿಜೃಂಭಣೆಯಿಂದ ಆದಿ ದೈವವನ್ನು ಪೂಜಿಸುತ್ತಾರೆ. ನಂತರ ಮುಖ್ಯೋಪಧ್ಯಾಯರು ’ಬರಹ ಹಿಡಿಸುವವರು ಯಾರಾದರು ಇದ್ದರೆ ಬನ್ನಿ.’ ಎಂದು ಹೇಳುತ್ತಾ ಗಣೇಶನ ಮುಂದೆ ಚಕ್ಕಲ ಮಕ್ಕಲ ಹಾಕಿ ಕುಳಿತುಕೊಳ್ಳುತ್ತಾರೆ. ಮಗುವಿನ ಹಿರಿಯರು ತಂದ ಅಕ್ಕಿಯನ್ನು ದೇವರ ಮುಂದೆ ಒಂದಿಂಚು ದಪ್ಪದಲ್ಲಿ ಹರಡುತ್ತಾರೆ. ಮಗುವನ್ನು ಎತ್ತಿ ತಮ್ಮ ಎಡತೊಡೆಯ ಮೇಲೆ ಕುಳ್ಳಿರಿಸಿಕೊಳ್ಳುತ್ತಾರೆ. ಅದನ್ನು ಎಡಗೈಯಿಂದ ಬಳಸಿ ಮಗುವಿನ ತೋರುಬೆರಳನ್ನು ಅಕ್ಕಿಯ ಮೇಲಿಟ್ಟು ಓಂ ಎಂದು ಬರೆದು, ನಂತರ ಅದನ್ನು ಅಳಿಸಿ ಓಂ ಗಣೇಶಾಯ ನಮಃ ಎಂದು ಬರೆಯಿಸುತ್ತಾರೆ. ನಂತರ ಮಗು ತೊಡೆಯಿಂದಿಳಿದು ಗುರುಗಳಿಗೆ ನಮಸ್ಕರಿಸಿ ಗಣೇಶನಿಗೂ ವಂದಿಸಿ ಪ್ರಸಾಧ ಸ್ವೀಕರಿಸಲು ಸಾಲಿನಲ್ಲಿ ಅಪ್ಪನ ಜೋತೆ ಕುಳಿತುಕೊಳ್ಳುತ್ತದೆ. ನಮ್ಮ ಶಾಲೆಯ ಉಪಾಧ್ಯಾಯರುಗಳು ಜಾಣರು!. ಒಂದು ದೊಡ್ಡ ಅಂಡೆಯಲ್ಲಿ ಪಂಚಕಜ್ಜಾಯವನ್ನು ಯಾರಿಗೂ ಗೊತ್ತಾಗದಂತೆ ಎತ್ತಿಡುತ್ತಿದ್ದರು. ಮರುದಿನ ನಮಗೆಲ್ಲಾ ಅದನ್ನು ಹಂಚುತ್ತಿದ್ದರು. ಅದು ಎಷ್ಟಿರುತ್ತಿರುತ್ತೆಂದರೆ ನಮಗೆಲ್ಲ ಹೊಟ್ಟೆ ತುಂಬಿ ಮನೆಗೂ ಕೊಂಡೊಯ್ಯುತ್ತಿದ್ದೆವು. ನನಗೆ ಈಗಲೂ ನೆನಪಿದೆ; ನನಗೆ ಬರಹ ಹಿಡಿಸುವಾಗ ದೇವರಿಗೆ ದೊಡ್ಡ ತೆಂಗಿನಕಾಯಿಯನ್ನು ನಾನು ಇಟ್ಟಿದ್ದೆ. ಪೂಜೆ ಭಟ್ರಿಗೇಕೆ ದೊಡ್ಡ ಕಾಯಿ ಎಂದು ನಮ್ಮಪ್ಪ ಅದನ್ನು ಬದಲಾಯಿಸಿ ಸಣ್ಣ ಕಾಯಿ ಇಟ್ಟರು. ಪೂಜೆಯ ಅಕ್ಕಿ ಮತ್ತು ಕಾಯಿಯನ್ನು ಪೂಜೆ ಭಟ್ರೇ ಕೊಂಡೊಯ್ಯುತ್ತಿದ್ದರು. ಅದವರ ಹಕ್ಕು. ಅದೇ ಅವರ ಜೀವನಾಧಾರ. ನಾನು ಮತ್ತೆ ದೊಡ್ಡ ಕಾಯಿ ಇಡುತ್ತಿದ್ದೆ. ಭಟ್ರ ಕಾಯಿ ಅಂದ್ರೆ ಸಣ್ಣ ಕಾಯಿ ಇಡಲು ಬಿಡುತ್ತಿರಲಿಲ್ಲ. ಎಲ್ಲಾ ಮಕ್ಕಳು ಹೀಗೆ ಮಾಡುತ್ತಿದ್ದರಂತೆ. ನಾವು ಗೆಳೆಯರೆಲ್ಲ ಒಟ್ಟು ಸೇರಿ ಬಾಲ್ಯದ ಮೆಲುಕು ಹಾಕಿದಾಗ ಇಂತಹ ಹತ್ತಾರು ಘಟನೆಗಳು ನೆನಪಾಗುತ್ತಾವೆ. ಕೆಲವು ವಿಷಾಧಕ್ಕೆ, ಪಶ್ಚತ್ತಾಪಕ್ಕೆ ಕಾರಣವಾದರೆ ಇನ್ನು ಕೆಲವು ತುಟಿಯಂಚಿನಲ್ಲಿ ನಗು ಮೂಡಿಸುತ್ತವೆ.

Wednesday, August 27, 2008

ಬದುಕಬೇಕು....ಬದುಕಲೇಬೇಕು

ಬಹಳ ಹಿಂದೆ, ತಮ್ಮ ಅತ್ಯಂತ ಸಂಕಟದ ಘಳಿಗೆಯಲ್ಲಿ ಕೆ ರಾಮಯ್ಯ ಒಂದು ಮಾತು ಹೇಳಿದ್ದರು "ಅತ್ಮಹತ್ಯೆ’ಗೆ ನಾನು ಕೊಟ್ಟುಕೊಳ್ಳುವ ಕಾರಣಗಳು ’ಕಾರಣ’ಗಳೇ ಅಲ್ಲವೇನೋ ಎಂಬ ಗುಮಾನಿ ನನ್ನನ್ನು ಬದುಕುವಂತೆ ಮಾಡಿದೆ"ನನ್ನ ಅತ್ಯಂತ ದುಃಖದ, ಯಾತನೆಯ ಕ್ಷಣಗಳಲ್ಲಿ ಇದು ನನ್ನನ್ನು ಆತ್ಮವಿಮರ್ಶೆಗೆ ದೂಡುತ್ತದೆ. ನನ್ನನ್ನು ಮತ್ತೆ ಜೀವನ್ಮುಖಿಯಾಗುವಂತೆ ಪ್ರೇರ್‍ಎಪಿಸುತ್ತದೆ. ಮುಖ್ಯವಾಗಿ ನಾನು ಭೂತಕಾಲದೊಳಗೆ ಜಾರಿಬಿಡುತ್ತೇನೆ. ಗದ್ದೆ, ತೋಟ, ನದಿ, ಕಾಡುಗಳಲ್ಲಿ ಅಲೆದಾಡಿ ಅರಬ್ಬಿ ಸಮುದ್ರದ ನದಿಗುಂಟ ಹೆಜ್ಜೆ ಹಾಕುತ್ತೇನೆ. ಸೋಮೇಶ್ವರದ ರುದ್ರಪಾದೆಯ ಮೇಲೆ ಗಲ್ಲಕ್ಕೆ ಕೈಯೂರಿ ಕುಳಿತು ಅನಂತ ನೀಲಿ ಕಡಲನ್ನು ದಿಟ್ಟಿಸುತ್ತೇನೆ. ಬಂಡೆಗೆ ಅಪ್ಪಳಿಸುವ ದಡೂತಿ ತೆರೆಗಳು ತುಂತುರು ಹನಿಗಳಾಗಿ ಮುಖಕ್ಕೆ ಮುತ್ತಿಕ್ಕುತ್ತವೆ. ಹಾಗೆಯೇ ಕಣ್ಮುಚ್ಚಿ ಕಡಲ ಭೊರ್ಗೆರೆತಕ್ಕೆ ಕಿವಿಯಾಗುತ್ತೇನೆ. ಅದರ ಪಂಥಾಹ್ವಾನ ನನ್ನೊಳಗಿನ ಹೋರಾಟದ ಕೆಚ್ಚನ್ನು ಕೆರಳಿಸುತ್ತದೆ. ಕಣ್ತೆರೆದರೆ ನಿಜವಾಗಿಯೂ ನನ್ನಲೆನೋ ತುಂಬಿಕೊಂಡಂತೆ ಭಾಸವಾಗುತ್ತದೆ. ದೈನಂದಿನ ಕೆಲಸ ಕಾರ್ಯಗಳಲ್ಲಿ ಹುರುಪು ಕಾಣಿಸಿಕೊಳ್ಳುತ್ತದೆ. ನಿಜಕ್ಕೂ ಬದುಕೆಷ್ಟು ಸರಳ ಮತ್ತು ಸುಂದರ! ಆದರೂ ಆಳದಲ್ಲೊಂದು ಶೂನ್ಯ ಇದ್ದೇ ಇದೆ. ಬಹಳ ಭಾರಿ ನನಗೆ ಅನ್ನಿಸುವುದಿದೆ; ಎಲ್ಲರಿಗೂ ಅವರದೇ ಆದ ಗೆಳೆಯರ ಬಳಗವಿದೆ. ಆತ್ಮೀಯ ವರ್ತುಲವಿದೆ. ನನಗೇಕೆ ಆ ಭಾಗ್ಯವಿಲ್ಲ?ನಾನು ಅಂತರ್ಜಾತೀಯ ಮದುವೆ ಮಾಡಿಕೊಂಡಿದ್ದೇನೆ. ಗಂಡನ ಮನೆಯವರಿದ್ದಾರೆ ಕಷ್ಟಸುಖಕ್ಕೆ; ಆದರೆ ಆಪ್ತರಲ್ಲ. ನನ್ನ ತವರಿದೆ; ಆದರೆ ಮನ ಬಿಚ್ಚಿ ಎಲ್ಲವನ್ನೂ ಹೇಳಿಕೊಳ್ಳಲಾರೆ. ಯಾಕೆಂದರೆ ಇದು ನಾನು ಆಯ್ಕೆ ಮಾಡಿಕೊಂಡ ಬದುಕು. ಇದರ ಸೋಲು ಗೆಲುವುಗಳೆರಡೂ ನನ್ನದೇ. ಹಾಗಾಗಿ ಗೆಳೆತನಕ್ಕಾಗಿ ನಾನು ಹಪಹಪಿಸುತ್ತೇನೆ. ಈ ಹಪಹಪಿಕೆ ಎಲ್ಲರಲ್ಲೂ ಇರುತ್ತದೆ. ಆದರೂ ಯಾರಿಗೂ ಯಾರೂ ಸಿಗುವುದಿಲ್ಲ. ಯಾಕೆ ಹೀಗೆ? ಯಾವ ತರಂಗಾಂತರದಲ್ಲಿ ಟ್ಯೂನ್ ಮಾಡಿದರೆ ನಮಗೆ ಬೇಕಾದ ಗೆಳೆಯರು ಸಿಗಬಹುದು?. ಗೊತ್ತಿಲ್ಲ. ಹಾಗಾಗಿ ಸದ್ಯಕ್ಕೆ ತರಂಗಾಂತರಗಳು ಬ್ಲಾಗ್ ಗಳಲ್ಲಿ ಹರಿದಾಡುತ್ತಿವೆ. ಮೊದಲೆಲ್ಲ ನನ್ನ ಗೆಳೆಯರು, ಅವನ ಗೆಳೆಯರು ಎಂದು ಒಂದಷ್ಟು ಬಳಗ ನಮ್ಮ ಸುತ್ತಲಿತ್ತು. ಆದರೆ ಅವರು ಯಾರೂ ’ನಮ್ಮ’ ಗೆಳೆಯರಾಗಲಿಲ್ಲ. ತಪ್ಪು ನಮ್ಮಲ್ಲಿಯೇ ಇತ್ತು. ನಮ್ಮ ನಮ್ಮ ಪರಿಧಿಯೊಳಗೆ ಇದ್ದುಕೊಂಡೇ ವ್ಯವಹರಿಸಿದೆವು. ಇಲ್ಲೊಂದು ಸೂಕ್ಷವನ್ನು ಗಮನಿಸಬೇಕು; ಗಂಡನ ಗೆಳೆಯರು ಎಂದಿಗೂ ಪತ್ನಿಗೆ ಹತ್ತಿರದವರಾಗುವುದಿಲ್ಲ. ಒಂದುವೇಳೆ ಹತ್ತಿರದವರಾದರೆ ಗಂಡನ ’ಅಹಂ’ಗೆ ಪೆಟ್ಟು ಬೀಳುತ್ತದೆ. ಅವನಲ್ಲಿ ಸಂಶಯ, ಅಸಹನೆ ಹುಟ್ಟಿಕೊಳ್ಳುತ್ತದೆ. ದಾಂಪತ್ಯ ಬಿರುಕಿಗೆ ಇದುವೇ ಬೀಜವಾಗುತ್ತದೆ. ಇನ್ನು ಪತ್ನಿಯ ಗೆಳತಿಯರು ಅವನ ಭೌದ್ಧಿಕತೆಗೆ ಎಂದಿದ್ದರೂ ಕಡಿಮೆಯೇ ಎಂಬ ಭಾವನೆ ಗಂಡಂದಿರಲ್ಲಿದೆ. ಒಂಟಿಯಾಗಿಯೇ ಬದುಕುವುದು ನನಗೀಗ ರೂಢಿಯಾಗಿದೆ. ಅದು ನನ್ನ ಶಕ್ತಿ ಎಂಬುದು ನನಗೀಗ ಅರಿವಾಗಿದೆ. ಆ ಶಕ್ತಿ ಹೊರಚಿಮ್ಮುವುದಕ್ಕೂ ಒಂದು ಪ್ರೇರಣೆಯಿದೆ. ಅದನ್ನು ಇನ್ನೊಮ್ಮೆ ಹೇಳುತ್ತೇನೆ. ಸಂಪೂರ್ಣ ನೆಲ ಕಚ್ಚಿ ಹೋದೆ, ಉಸಿರಾಡುವುದೂ ಕಷ್ಟವಾಗುತ್ತಿದೆ ’ಸತ್ತುಹೋಗೋಣ’ ಎನಿಸಿದಾಗ ಕೆ. ರಾಮಯ್ಯರ ಮಾತುಗಳು ನೆನಪಾಗುತ್ತವೆ. ಮೈ ಕೊಡವಿ ಹೊಸ ಸವಾಲುಗಳನ್ನು ಎದುರಿಸಲು ಮನಸ್ಸು ಸಜ್ಜಾಗುತ್ತದೆ. ಒಂದು ದಾರಿ ಮುಚ್ಚಿದಾಗ ಹತ್ತು ದಾರಿಗಳು ತೆರೆದುಕೊಳ್ಳುತ್ತವೆ. ಒಂದನ್ನು ಆಯ್ಕೆ ಮಾಡಿಕೊಂಡು ನುಗ್ಗಿಬಿಡಬೇಕು; ದುಮ್ಮಿಕ್ಕಿ ಬಿಡಬೇಕು. ಸೋಲಾದರೂ ನಮ್ಮದೇ. ಗೆಲುವಾದರೂ ನಮ್ಮದೇ. ಸೋಲಿಗೆ ಬೇರೆಯವರತ್ತ ಬೊಟ್ಟು ತೋರಿಸಬಾರದು. ಅದು ನಮ್ಮ ಪ್ರಯತ್ನದಲ್ಲಿನ ವೈಪಲ್ಯ ಎಂದು ಭಾವಿಸಬೇಕು. ಗೆಲುವನ್ನು ಹೆಮ್ಮೆಯಿಂದ ಸ್ವೀಕರಿಸಬೇಕು. ಅದು ನಮ್ಮ ಸಾಧನೆ. ಒಮ್ಮೆ ಗೆಲುವಿನ ರುಚಿ ಅನುಭವಿಸಿ. ಅದು ನಿಮ್ಮ ಹಿಂದಿನ ಹತ್ತಾರು ಸೋಲುಗಳನ್ನು ಮರೆಸಿಬಿಡುತ್ತದೆ. ಆತ್ಮವಿಸ್ವಾಸವನ್ನು ಹೆಚ್ಚಿಸುತ್ತದೆ. ರಿಸ್ಕ್ ಗಳನ್ನು ತೆಗೆದುಕೊಳ್ಳುವಂತೆ ಹುರಿದುಂಬಿಸುತ್ತದೆ. ಅಪಾಯವನ್ನು ಎದುರಿಸುವುದರಲ್ಲೇ ಜೀವಚೈತನ್ಯ ಆಡಗಿದೆ. ಅದು ನಿಸರ್ಗಕ್ಕೂ ಪ್ರಿಯ. ಬರಹಕ್ಕೆ ಉಪದೇಶದ ಛಾಯೆ ಬಂದುಬಿಟ್ಟಿತೇ?. ಇಲ್ಲ ಗೆಳೆಯಾ, ಇದು ನನ್ನ ಅನುಭವ. ನನಗೆ ಅನ್ನಿಸಿದ್ದು ನಿಮಗೂ ಅನ್ನಿಸಬಹುದಲ್ಲವೇ? ಅನ್ನಿಸಬೇಕು; ಅದು ಸುರಗಿಗೆ ಇಷ್ಟ.

Saturday, August 9, 2008

ಬೇಡದ ತಾಯ್ತನ... ಬೇಡ

ಅಂಗವೈಕಲ್ಯದಿಂದ ಜನಿಸಲಿರುವ ಮಗು ತನಗೆ ಬೇಡ ಎಂಬ ಕಾರಣ ನೀಡಿ, ವೈದ್ಯಕೀಯ ಪುರಾವೆಗಳನ್ನು ಒದಗಿಸಿ, ತನಗೆ ಗರ್ಭಪಾತ ಮಾಡಿಸಿಕೊಳ್ಳಲು ಅನುಮತಿ ನೀಡಬೇಕೆಂದು ನ್ಯಾಯಾಲಯದ ಮೆಟ್ಟಲೇರಿದ ನಿಖಿತಾ ಮತ್ತು ಆಕೆಯ ಗಂಡ ಹರ್ಷಮೆಹತಾರ ಕೋರಿಕೆಯನ್ನು ಮುಂಬೈ ಹೈಕೋರ್ಟ್ ಆಗಸ್ಟ್ ೪ರ ಸೋಮವಾರ ತಳ್ಳಿ ಹಾಕಿದೆ।ನ್ಯಾಯಮೂರ್ತಿಗಳಾದ ಅರ್ ಎಮ್ ಎಸ್ ಖಾಂಡೆಪರ್ಕರ್ ಮತ್ತು ಅಮ್ಜದ್ ಸಯಿದ್ ರನ್ನೊಳಗೊಂಡ ವಿಭಾಗಿಯ ಪೀಠ ಈ ತೀರ್ಪು ನೀಡಿದೆ।

 ೧೯೭೧ರಲ್ಲಿ ಜಾರಿಗೆ ಬಂದಿದ್ದ ಮೆಡಿಕಲ್ ಟರ್ಮಿನೇಶನ್ ಅಫ್ ಪ್ರೆಗ್ನೆನ್ಸಿ ಕಾಯ್ದೆಯ ೩ ಮತ್ತು ೫ನೆಯ ಸೆಕ್ಷನ್ ತೀರ್ಪಿಗೆ ತಳಹದಿಯಾಗಿತ್ತು। ೧೯೭೧ರ ಕಾನೂನಿನ ಪ್ರಕಾರ ಗರ್ಭ ಧರಿಸಿದ ೨೦ ವಾರಗಳ ನಂತರ ಗರ್ಭಪಾತ ಮಾಡಿಸಿಕೊಳ್ಳುವಂತಿಲ್ಲ. ಆದರೆ ವಿಶೇಷ ಪರಿಸ್ಥಿತಿಯಲ್ಲಿ ೨೦ವಾರಗಳ ನಂತರವೂ ಗರ್ಭಪಾತ ಮಾಡಿಸಿಕೊಳ್ಳಲು ಈ ಕಾಯ್ದೆಯ ೩ ಮತ್ತು ೫ನೆಯ ಸೆಕ್ಷನಿನಲ್ಲಿ ಅವಕಾಶವಿದೆ. ಸೆಕ್ಷನ್ ೩ರಲ್ಲಿ ಮಗು ಅಂಗ ವೈಕಲ್ಯದಿಂದ ಹುಟ್ಟುವ ಸಂದರ್ಭವಿದ್ದರೆ, ಆ ಬಗ್ಗೆ ವೈಧ್ಯಕೀಯ ಪುರಾವೆಯಿದ್ದರೆ ಗರ್ಭಪಾತ ಮಾಡಿಸಬಹುದು. ಹಾಗೆಯೇ ಸೆಕ್ಷನ್ ೫ರ ಪ್ರಕಾರ ಬ್ರೂಣದ ಬೆಳವಣಿಗೆಯ ವೇಳೆ ಅಥವಾ ಹೆರಿಗೆಯ ಸಂದರ್ಭದಲ್ಲಿ ತಾಯಿ ಜೀವಕ್ಕೆ ಅಪಾಯವಿದ್ದು, ಅದಕ್ಕೆ ವೈಧ್ಯಕೀಯ ಪುರಾವೆಗಳಿದ್ದರೆ ಗರ್ಭಪಾತಕ್ಕೆ ಅನುಮತಿ ಇದೆ.
ನಿಖಿತಾ ೨೬ ವಾರಗಳ ಗರ್ಭವತಿ.ಆಕೆಗೆ ಎಮ್ ಟಿ ಪಿ ಕಾಯ್ದೆಯ ೩ ಮತ್ತು ೫ನೆಯ ಸೆಕ್ಷನ್ ಗಳು ಅನ್ವಯವಾಗುವುದಿಲ್ಲವೆಂದು ಕೋರ್ಟ್ ಹೇಳಿದೆ. ಹಾಗೆ ಹೇಳುವ ಮೊದಲು ಕೋರ್ಟ್, ಮುಂಬೈನ ಜೆ.ಜೆ ಹಾಸ್ಪಿಟಲ್ ನ ಪರಿಣಿತ ವೈದ್ಯ ತಂಡವೊಂದರಿಂದ ಬ್ರೂಣದ ಪರೀಕ್ಷೆ ನಡೆಸಿ ರಿಪೋರ್ಟ್ ತರಿಸಿಕೊಂಡಿತು. ಅದರಲ್ಲಿ ಮಗುವಿಗೆ ಹೃದಯ ತೊಂದರೆ ಇರುವುದು ನಿಜ,ಆದರೆ ಅಂಗವಿಕಲತೆಯ ಚಾನ್ಸ್ ಕಡಿಮೆ ಎಂದು ಅಡ್ಡ ಗೋಡೆಯ ಮೇಲೆ ದೀಪವಿಟ್ಟಂತೆ ಹೇಳಿದೆ. ಆದರೆ ಅಂಗವೈಕಲ್ಯ ಖಂಡಿತಾ ಉಂಟಾಗುತ್ತದೆ ಎಂದು ನಿಖಿತಾನ ಡಾಕ್ಟರ್ ನಿಖಿಲ್ ದಾತಾರ್ ಪುರಾವೆ ಒದಗಿಸಿದ್ದರು.
 ಸೆಕ್ಷನ್೫ರ ಪ್ರಕಾರ ಗರ್ಭ ಮುಂದುವರಿಯುವುದರಿಂದ ತಾಯಿ ಜೀವಕ್ಕೆ ಅಪಾಯವಿಲ್ಲ. ಹಾಗಾಗಿ ಗರ್ಭಪಾತಕ್ಕೆ ಅವಕಾಶವಿಲ್ಲ. ಒಂದು ವೇಳೆ ಅನುಮತಿ ಕೊಟ್ಟರೆ ಅದು ದಯಾಮರಣದ ರೂಪ ಪಡೆಯುತ್ತದೆ. ದಯಾಮರಣಕ್ಕೆ ನಮ್ಮ ದೇಶದಲ್ಲಿ ಅನುಮತಿಯಿಲ್ಲ.ಇತಿಹಾಸ ಸೃಷ್ಠಿಸಬಹುದಾಗಿದ್ದ ಈ ತೀರ್ಪಿನ ಬಗ್ಗೆ ಜನರಲ್ಲಿ ಮುಖ್ಯವಾಗಿ ಮಧ್ಯಮವರ್ಗದ ಮಹಿಳೆಯರಲ್ಲಿ ಕುತೂಹಲವಿತ್ತು. ತನ್ನ ಹಾಗೆ ಸಂದಿಗ್ಧ ಸ್ಥಿತಿಯಲ್ಲಿರುವ ಅನೇಕ ಮಹಿಳೆಯರಿಗೆ ಸಹಾಯವಾಗಬಹುದೆಂಬ ಉದ್ಧೇಶದಿಂದ ನಿಖಿತಾ, ೩೭ ವರ್ಷದ ಹಿಂದಿನ ಎಮ್.ಟಿ.ಪಿ ಕಾಯ್ದೆಗೆ ತಿದ್ದುಪಡಿ ತರಬೇಕೆಂದು ನ್ಯಾಯಾಲಯವನ್ನು ಕೋರಿಕೊಂಡಿದ್ದಳು. ಆದರೆ ಕಾನೂನಿಗೆ ತಿದ್ದುಪಡಿ ತರಬೇಕಾದ್ದು ಸಂಸತ್ತು ಎಂದು ನ್ಯಾಯಾಲಯ ನೆನಪಿಸಿದೆ. ನಿಖಿತಾಳ ಒಂದು ಕೇಸಿನ ಹಿನ್ನೆಲೆಯಲ್ಲಿ ಕಾನೂನಿಗೆ ತಿದ್ದುಪಡಿ ತರುವ ಆಲೋಚನೆಯಿಲ್ಲ, ಎಂದು ಕೇಂದ್ರ ಆರೋಗ್ಯ ಸಚಿವರಾದ ಅನ್ಬುಮಣಿ ರಾಮದಾಸ್ ಹೇಳಿದ್ದಾರ್‍ಎ. ಆದರೂ ಆ ಬಗ್ಗೆ ಎಲ್ಲಾ ಆಯಾಮಗಳಿಂದಲೂ ವಿಸ್ತ್ರತ ಚರ್ಚೆಯಾಗಲಿ ಎಂದಿದ್ದಾರೆ. ಕೋರ್ಟ್ ಮಾನವೀಯವಾಗಿ ವರ್ತಿಸಿತು. ತನ್ನ ಕೆಲಸವನ್ನು ಅತ್ಯಂತ ಸಮರ್ಪಕವಾಗಿ, ಜವಾಬ್ದಾರಿಯಿಂದ ನಿರ್ವಹಿಸಿತು.

 ಈಗ ಕೋರ್ಟಿನಾಚೆಗಿನ ಸಂಗತಿಗಳನ್ನು ನಾವು ಗಮನಿಸಬೇಕಾಗಿದೆ. ಒಬ್ಬ ತಾಯಿಯ ತಳಮಳವನ್ನು ಅರ್ಥಮಾಡಿಕೊಳ್ಳಬೇಕಾಗಿದೆ. ತೀರ್ಪು ಹೊರಬಿದ್ದೊಡನೆ ಸುದ್ದಿವಾಹಿನಿಗಳು ಇದನ್ನು ಬಿತ್ತರಿಸಿದವು. ಜನರ ಸಿಂಪತಿ ಪೂರ್ತಿಯಾಗಿ ನಿಖಿತಾ ಕಡೆಗಿತ್ತು. ಗರ್ಭವನ್ನು ಉಳಿಸಿಕೊಳ್ಳುವುದು, ಬಿಡುವುದು ದಂಪತಿಗಳಿಗೆ ಬಿಟ್ಟ ವಿಚಾರವೆಂದು ಬಹುತೇಕ ಎಲ್ಲರೂ ಅಭಿಪ್ರಾಯ ಪಟ್ಟರು. ಕೊಚ್ಚಿಯಿಂದ ಅನುರಾಧ ಎಂಬ ಮಹಿಳೆ ಪೋನ್ ಮಾಡಿ, ತಾನು ೭ನೇ ತಿಂಗಳಿನಲ್ಲಿ ಅಂದರೆ ೨೮ನೇ ವಾರದಲ್ಲಿ ಗರ್ಭಪಾತ ಮಾಡಿಸಿಕೊಂಡು ಈಗ ಅರೋಗ್ಯವಂತ ಮಗುವನ್ನು ಪಡೆದಿರುವುದಾಗಿ ಹೇಳಿಕೊಂಡಳು. ಸುದ್ದಿ ಚಾನಲ್ಲೊಂದು ಎಸ್ಸೆಮ್ಮೆಸ್ ಪೋಲ್ ನಡೆಸಿತು; ಶೇ೯೧ರಷ್ಟು ವಿಕ್ಷಕರು ನಿಖಿತಾ ಅಬಾರ್ಷನ್ ಮಾಡಿಸಿಕೊಳ್ಳಲಿ ಎಂದು ಅಭಿಪ್ರಾಯ ಪಟ್ಟರು. ಆದರೆ ಇಂಡಿಯನ್ ಮೆಡಿಕಲ್ ಅಸೋಷಿಯೆಷನ್ ಅಧ್ಯಕ್ಷರಾದ ಡಾ. ಅಜಯಕುಮಾರ್ ’ತಾಯಿಯೆಂದರೆ ತ್ಯಾಗದ ಸಿಂಬಲ್. ಹೀಗಾದರೆ ಒಬ್ಬ ತಾಯಿಗೂ ಇತರರಿಗೂ ಏನು ವ್ಯತ್ಯಾಸ ಬಂತು? ತಾಯಿ ಎಂದಿಗೂ ತಾಯಿಯೇ’ ಎಂದು ಟಿಪಿಕಲ್ ಗಂಡಸಿನಂತೆ ನುಡಿದರು.

 ನಿಜ, ತಾಯಿ ಎಂದೆಂದಿಗೂ ’ತಾಯಿ’ಯೇ. ಆಕಸ್ಮಿಕವಾಗಿ ತನಗೊಂದು ಅಂಗವೈಕಲ್ಯವುಳ್ಳ ಮಗು ಜನಿಸಿಬಿಟ್ಟರೆ ಅದನ್ನವಳು ನಿರಾಕರಿಸುವುದಿಲ್ಲ. ಅದನ್ನವಳು ವಿಷೇಶ ಕಾಳಜಿಯಿಂದ ನೋಡಿಕೊಳ್ಳುತ್ತಾಳೆ. ತನ್ನ ಜೀವ ತೇದಾದರೂ ಆ ಮಗು ಸ್ವಾವಲಂಬಿಯಾಗಿ ಮಾಡಲು ಶ್ರಮಪಡುತ್ತಾಳೆ. ಆದರೆ ತನಗೆ ಹುಟ್ಟಲಿರುವ ಮಗು ಅಂಗವೈಕಲ್ಯದಿಂದ ಕೂಡಿದೆ, ಎಂದು ಗೊತ್ತಾದಗಲೂ ಅವಳ್ಯಾಕೆ ಮಗುವನ್ನು ಉಳಿಸಿಕೊಳ್ಳಬೇಕು? ಮಗುವನ್ನು ಉಳಿಸಿಕೊಳ್ಳಿ ಎಂದು ಬೇರೆಯವರಿಗೆ ಹೇಳುವುದು ಸುಲಭ. ಅದರೆ ವಾಸ್ತವವನ್ನು ಎದುರಿಸುವುದು ಕಷ್ಟ. ಆಶಾವಾದಿಯಾಗಿರಬೇಕು, ನಿಜ. ಆದರೆ ನಾಳೆ ಒಳ್ಳೆಯಾದಾಗಲೂ ಬಹುದು ಎಂದು ಇವತ್ತು ರಿಸ್ಕ್ ತೆಗೆದುಕೊಳ್ಳುವುದು ಬುದ್ಧಿವಂತರ ಲಕ್ಷಣವಲ್ಲ. ತಾಯಿಯಾಗುವುದಕ್ಕೆ ಪೂರ್ವ ಸಿದ್ಧತೆ ಬೇಕು. ಅಧುನಿಕ ಮಹಿಳೆ ಆ ಬಗ್ಗೆ ಮುತುವರ್ಜಿ ವಹಿಸುತ್ತಾಳೆ. ಆಕೆಗೆ ತನ್ನ ತಾಯ್ತನವನ್ನು ಸಾರ್ಥಕಪಡಿಸಿಕೊಳ್ಳುವ ಕನಸಿದೆ. ಅರೋಗ್ಯವಂತ ಮಗುವನ್ನು ಪಡೆಯುವ ಬಯಕೆ ಇದೆ. ಇನ್ನೊಂದು ಚಾನ್ಸ್ ನೋಡಿಬಿಡೋಣ ಎಂದುಕೊಳ್ಳಲು ಹಿಂದಿನಂತೆ ಎರಡ್ಮೂರು ಹೆರಲು ಇಂದಿನ ಮಹಿಳೆ ಸಿದ್ದಳಿಲ್ಲ.

ಈಗ ವೈದಕಿಯ ಸವಲತ್ತುಗಳು ಹೆಚ್ಚಾಗಿವೆ. ಹಾಗಾಗಿ ಆರ್ಥಿಕವಾಗಿ ಸಬಲರಾಗಿದ್ದರೆ ಬ್ರೂಣದಲ್ಲಿನ ಕೆಲವು ನ್ಯೂನತೆಗಳನ್ನು ಗರ್ಬದಲ್ಲಿರುವಗಲೇ ಸರಿಪಡಿಸಿಕೊಳ್ಳಬಹುದು. ಸರಿಪಡಿಸಲಾಗದ ತೊಂದರೆಗಳಾದರೆ ಎಮ್.ಟಿ.ಪಿ ಮಾಡಿಸಿಕೊಳ್ಳುವುದು ತಪ್ಪೇನೂ ಅಲ್ಲ. ಬ್ರಿಟನಿನಲ್ಲಿ ಇದಕ್ಕೆ ೯ ತಿಂಗಳು ತುಂಬುವ ತನಕವೂ ಅವಕಾಶ್ ಇದೆ. ಚೀನಾದಲ್ಲಿ ೨೮ ವಾರಗಳ ತನಕ ಜಪಾನಿನಲ್ಲಿ ೨೪ ವಾರಗಳ ತನಕ ಎಮ್.ಟಿ.ಪಿ ಮಾಡಿಸಿಕೊಳ್ಳಲು ಅವಕಾಶ ಇದೆ. ಪ್ರತಿಯೊಂದು ವಿಷಯಕ್ಕೂ ಸಂಬಂಧಪಟ್ಟಂತೆ ಸಮಾಜದಲ್ಲೊಂದು ಒಳ ಪ್ರವಾಹ[ಅಂಡರ್ ಕರೆಂಟ್] ಇರುತ್ತದೆ. ಅದು ಬಹಳ ಸ್ಟ್ರಾಂಗಾದ ಸಮಾಜದ ವಿಲ್ ಪವರ್. ಅದು ಸಕಾರಾತ್ಮಕವಾಗಿರಬಹುದು ಇಲ್ಲವೇ ನಕಾರಾತ್ಮಕವಾಗಿರಬಹುದು. ಅದನ್ನು ಕಡೆಗಣಿಸಲು ಸಾಧ್ಯವಿಲ್ಲ. ಈ ಒಳಪ್ರವಾಹವೇ ಕಾನೂನು ಬಾಹಿರವಾಗಿ ಲಕ್ಷ ಲಕ್ಷ ಹೆಣ್ಣು ಬ್ರೂಣಗಳನ್ನು ಕೊಲೆ ಮಾಡಿದೆ. ಕೋಮು ಗಲಭೆಗಳ ದಳ್ಳುರಿಯಲ್ಲೂ ಮಾನವೀಯತೆ ಮೆರೆದಿದೆ. ಚುನಾವಣೆಯಲ್ಲಿ ರಾಜಕೀಯ ಲೆಖ್ಖಾಚಾರಗಳನ್ನೆಲ್ಲ ತಲೆಕೆಳಗು ಮಾಡಿದೆ. ಆ ವಿಲ್ ಪವರ್ ಈಗ ನಿಖಿತಾ ಪರವಾಗಿದೆ.ನಿಖಿತಾ ವಯಸ್ಸು ಈಗ ೩೧. ಅವಳ ಮುಂದೆ ನಿಡಿದಾದ ಬದುಕಿದೆ.ಅಂಗವಿಕಲತೆಯುಳ್ಳ ಮಗುವನ್ನು ಹೆತ್ತು ಅದನ್ನು ಪೋಶಿಸುವುದರಲ್ಲೆ ಬದುಕು ಕಳೆದು ಹೋಗಬೇಕಾಗಿಲ್ಲ.
ನಿಜ, ಹುಟ್ಟಲಿರುವ ಮಗುವಿನ ಚಿಕಿತ್ಸಾವೆಚ್ಚವನ್ನು ಭರಿಸಲು ಆಸ್ಪತ್ರೆಗಳು, ಸೇವಾಸಂಸ್ಥೆಗಳು ಮುಂದೆ ಬಂದಿವೆ. ಇಲ್ಲಿ ಗಮನಿಸಬೇಕಾದ್ದು; ಸಮಾಜಕ್ಕೊಂದು ಪ್ರದರ್ಶಕ ಗುಣವಿದೆ. ಈ ವಿಶಿಷ್ಟ ಗುಣ ಗಂಡಿನಲ್ಲಿಯೂ ಇರುತ್ತದೆ. ಹಾಗಾಗಿ ಆತ ಕೋರ್ಟಿಗೆ ಬರಬಲ್ಲ. ಆಸ್ಪತ್ರೆಗೆ ಬರಬಲ್ಲ.ಹೆರಿಗೆ ಕೋಣೆವರೆಗೂ ಬರಬಲ್ಲ. ಆದರೆ ದೇಹದ ಭಾಗವಾಗಿ ಮಗುವನ್ನು ಪೋಷಿಸಲಾರ, ತಾಯಿಯಂತೆ ಭಾವಕೋಶದ ಭಾಗವಾಗಿಸಿಕೊಳ್ಳಲಾರ. ಹಾಗಾಗಿ ಮಗುವನ್ನು ಬೆಳೆಸುವಲ್ಲಿ ಆಕೆ ಏಕಾಂಗಿ.

ಸಮಾಜ ಗುರುತಿಸಿದೆಯೋ ಇಲ್ಲವೋ ಗೊತ್ತಿಲ್ಲ. ನಾನಂತೂ ನನ್ನ ಸುತ್ತಮುತ್ತಲಿರುವ ತಾಯಂದಿರನ್ನು ಗಮನಿಸಿದ್ದೇನೆ. ಮಗುವನ್ನು ಬೆಳೆಸುವಲ್ಲಿ ಆಕೆ ಏಕಾಂಗಿ. ಕೆಲವು ಸಂದರ್ಭಗಳಲ್ಲಿ ಆಕೆ ಭಾವನಾತ್ಮಕವಾಗಿ ಕುಸಿದು ಹೋಗುವುದನ್ನು ನಾನು ಕಂಡಿದ್ದೇನೆ. ಅದೇ ಮಹಿಳೆ ದೃಢತೆಯಿಂದ ತಲೆಯೆತ್ತಿ ಬೀಗಿ ನಡೆಯುವುದನ್ನು ಕೂಡ ಗಮನಿಸಿದ್ದೇನೆ. ಮನಸ್ಸು ಮಾಡಿದರೆ ಆಕೆಗೆ ಯಾವುದೂ ಅಸಾಧ್ಯವಲ್ಲ. ಆದರೆ ವೈದ್ಯಕೀಯ ಅನುಕೂಲತೆಗಳಿದ್ದಾಗ ಯಾಕೆ ಸಂಕಷ್ಟಕ್ಕೆ ಸಿಲುಕಬೇಕು ಎಂಬುದು ಪ್ರಶ್ನೆ. ಕಾಲಕ್ಕೆ ಎಲ್ಲವನ್ನೂ ಮರೆಸುವ ಶಕ್ತಿಯಿದೆ. ಬೆಳೆದ ಮಗ ಸತ್ತದ್ದನ್ನೂ, ದಾಂಪತ್ಯಕ್ಕೆ ಕಾಲಿಡುವಾಗಲೇ ವೈದವ್ಯ ಪ್ರಾಪ್ತಿಯಾದದ್ದನ್ನೂ, ಆಪ್ತರ ಅಗಲಿಕೆಯನ್ನೂ ಕಾಲ ಕ್ರಮೇಣ ವಿಸ್ಮ್ರತಿಗೆ ತಳ್ಳಿ ಬಿಡಬಹುದು. ಆದರೆ ಎದುರಿಗಿರುವ ಕರುಳಬಳ್ಳಿ ಯಾತನೆಪಡುವುದನ್ನು ನೋಡುತ್ತಾ ಬದುಕುವುದು ಘೋರ ಶಿಕ್ಷೆಯೇ ಸರಿ. ಈ ಜಗತ್ತಿಗೆ ಕಣ್ಣು ಬಿಟ್ಟ ಪ್ರತಿಯೊಂದು ಪ್ರಾಣಿ ಪಕ್ಷಿ, ಗಿಡ ಮರ ಎಲ್ಲದರ ಬಗ್ಗೆಯೂ ನಮಗೆ ಅಕ್ಕರೆ ಇದೆ. ಮತ್ತು ಅದು ನಮಗಾಗಿಯೇ ಇದೆ ಎಂಬ ಸ್ವಾರ್ಥವೂ ಇದೆ. ಆದರೆ ಅಮೂರ್ತವಾದುದರ ಬಗ್ಗೆ ನಮಗೆ ಸ್ಪಷ್ಟ ಕಲ್ಪನೆ ಇರುವುದಿಲ್ಲ. ಕೂತುಹಲ ಇರುತ್ತದೆ. ಭ್ರೂಣವೊಂದು ಮಗುವಾಗಿ ಈ ಧರೆಗೆ ಬರುವುದು ಒಂದು ಸುಂದರ ಕಲ್ಪನೆ. ಅದು ಹಚ್ಚಿನ ಸಂದರ್ಭದಲ್ಲಿ ನಿಜವಾಗುತ್ತದೆ. ’ನಿಜ’ವಾಗುವ ಮೊದಲು ಅದೊಂದು ಕಲ್ಪನೆ ಅಷ್ಟೇ.

Saturday, August 2, 2008

ದಂತಗೋಪುರದಲ್ಲಿ ಸಾಹಿತ್ಯವೇ?

ಸಾಹಿತ್ಯದ ಉದ್ದೇಶವೇನು? ತನ್ನ ಹುಟ್ಟಿನಲ್ಲೇ ಅಂತರ್ಗತ ಮಾಡಿಕೊಂಡಿರುವ ಪ್ರಶ್ನೆ ಇದು.ಕಾಲಕ್ಕನುಗುಣವಾಗಿ ಇದಕ್ಕೆ ತಮಗೆ ಸರಿ ಕಂಡ ಉತ್ತರ ಕಂಡುಕೊಳ್ಳುತ್ತಲೇ ಇದ್ದಾರೆ.ಸಾಹಿತ್ಯ ಎನ್ನುವುದು ಯಾವಾಗಲೂ ಜನಸಾಮಾನ್ಯರ ಮಧ್ಯೆಯೇ ಹುಟ್ಟುತ್ತದೆ. ಮತ್ತು ಅದು ಅಲ್ಲಿಯೇ ಪ್ರಸರಣಗೊಳ್ಳುತ್ತದೆ. ಒಮ್ಮೊಮ್ಮೆ ಅದು, ಪಂಪ, ರನ್ನರಂತೆ ಪ್ರಭುಸಮ್ಮುಖದಲ್ಲಿ ಪ್ರಕಟಗೊಂಡರೂ ಅದರ ಗುಣವಿಶೇಶ ಕಾಂತ ಸಂಮಿತವೇ. ಈಗ ನನ್ನಲ್ಲಿ ಈ ಪ್ರಶ್ನೆ ಹುಟ್ಟಿಕೊಳ್ಳುದಕ್ಕೆ ಕಾರಣವಾದ ಘನ ಉದ್ಧೇಶ ಎನೆಂದರೆ, ಇತ್ತೇಚೆಗೆ ಪುಸ್ತಕ ಬಿಡುಗಡೆಗಳು ಪ್ರಭುಸಮ್ಮುಖವಾಗುತ್ತಿವೆ. ಲೇಖಕರು ಅಧಿಕಾರ ಗದ್ದುಗೆ ಹಿಡಿದವರ ಕೈಯಿಂದ ತಮ್ಮ ಪುಸ್ತಕ ಬಿಡುಗಡೆಗೊಳಿಸಲು ಹಾತೊರೆಯುತ್ತಾರೆ. ಇದರಿಂದ ಲೇಖಕರಿಗಾಗುವ ಲಾಭವೇನು? ಇವರೇನು ಆಸ್ಥಾನ ಸಾಹಿತಿಗಳೇ? ನಿನ್ನೆಯ ಉದಾಹರಣೆಯನ್ನೇ ನೋಡಿ; ನಿನ್ನೆ ಮುಖ್ಯಮಂತ್ರಿಗಳ ಗೃಹಕಛೇರಿ ’ಕೃಷ್ಣಾ’ದಲ್ಲಿ ಪತ್ರಕರ್ತರೊಬ್ಬರು ಬರೆದ ’ಬದಲಾದ ಭಾರತ’ಎಂಬ ಪುಸ್ತಕ ಬಿಡುಗಡೆಯಾಯ್ತು. ಬಿಡುಗಡೆ ಮಾಡಿದವರು ಮುಖ್ಯಮಂತ್ರಿ ಯೆಡಿಯೂರಪ್ಪನವರು. ಅತಿಥಿ, ಉನ್ನತ ಶಿಕ್ಷಣ ಸಚಿವರಾದ ಅರವಿಂದ ಲಿಂಬಾವಳಿ. ಇವರಿಬ್ಬರಿಗೆ ಸಾಹಿತ್ಯ ಅರ್ಥವಾಗುತ್ತದೆಯೇ? ಹೀಗೆ ಕನ್ನಡದ ಗಂಧಗಾಳಿ ತಿಳಿಯದ ರಾಜ್ಯಪಾಲರಿಂದ, ರಾಜಭವನದಲ್ಲಿಯೇ ಪುಸ್ತಕ ಬಿಡುಗಡೆ ಮಾಡಿಸುವ ಉದ್ಧಾಮ ಸಾಹಿತಿಗಳು ನಮ್ಮಲ್ಲಿದ್ದಾರೆ. ಕಲಾಕ್ಷೇತ್ರಕ್ಕೆ,ಎಡಿಎ ರಂಗಮಂದಿರಕ್ಕೆ,ಯವನಿಕಕ್ಕೆ ಹೋದಷ್ಟೇ ಸಲೀಸಾಗಿ ರಾಜಭವನಕ್ಕೆ, ಕೃಷ್ಣಾಕ್ಕೆ, ವಿಧಾನಸೌಧದ ಬಾಂಕ್ವಟ್ ಹಾಲ್ ಗೆ ಸಾಮಾನ್ಯ ಮನುಷ್ಯರು ಹೋಗಲು ಸಾಧ್ಯವೇ? ಪ್ರಭುಗಳ ಕೃಪಾಕಟಾಕ್ಷಕ್ಕಾಗಿ ಹಾತೊರೆಯುವ ಆಸ್ಥಾನ ಸಾಹಿತಿಗಳಿಗೆ ಮಾನ ಸನ್ಮಾನಗಳ ಮೇಲೆಯೇ ಕಣ್ಣು. ಇನ್ನು ಕೆಲವರಿರುತ್ತಾರೆ; ಅವರು ಒಂದಕ್ಷರ ಬರೆದವರಲ್ಲ. ಆದರೆ ಯಾರೋ ಮಹನೀಯರ ಬಗ್ಗೆ ಅಥವಾ ಅವರು ಬರೆದ ಗ್ರಂಥಗಳ ಬಗ್ಗೆ ಲೇಖನಗಳನ್ನು ಸಂಗ್ರಹಿಸುತ್ತಾರೆ. ನಂತರ ತಾವು ಸಂಪಾದಕರೆಂದು ಹೆಸರು ಹಾಕಿಸಿಕೊಂಡು ಪ್ರಕಟಿಸಿಬಿಡುತ್ತಾರೆ. ನಂತರ ಪ್ರಭುಗಳ ಕೈಯಲ್ಲಿ ಬಿಡುಗಡೆ ಮಾಡಿಸುತ್ತಾರೆ! ಕರ್ನಾಟಕದ ಲೈಬ್ರರಿಗಳನ್ನೊಮ್ಮೆ ಸುಮ್ಮನೆ ಹೊಕ್ಕು ಬನ್ನಿ. ರ್‍ಯಾಕ್ ಗಳಲ್ಲಿ ಸುಂದರವಾಗಿ ಜೋಡಿಸಿಟ್ಟ ಇಂತಹ ಪುಸ್ತಕಗಳೇ ಕಾಣಸಿಗುತ್ತದೆ. ಪುಸ್ತಕ ಪ್ರಕಾಶನ ಕೂಡ ಈಗ ಒಂದು ದಂದೆಯಾಗಿಬಿಟ್ಟಿಯಾಗಿದೆ. ಇಂತಹ ಅಸಂಖ್ಯ ಪುಸ್ತಕಗಳ ನಡುವೆ ಒಳ್ಳೆ ಪುಸ್ತಕ ಯಾವುದೆಂದು ಹುಡುಕುವುದೇ ಕಸ್ಟವಾಗಿಬಿಟ್ಟಿದೆ. ವಿಮರ್ಶೆ ನೋಡಿ ಪುಸ್ತಕ ಕೊಂಡರೆ ಸಿನೆಮಾ ವಿಮರ್ಶೆ ನೋಡಿ ಥಿಯೇಟರಿಗೆ ಹೋದಂತಾಗುತ್ತದೆ! ಲೇಖಕ ಹತ್ತಿರದವನಾಗಿದ್ದರೆ ವಿಮರ್ಶಕನಿಗೆ ಆ ಪುಸ್ತಕದಲ್ಲಿ ಅನೇಕ ಆಯಾಮಗಳು ಗೋಚರಿಸಿಬಿಡುತ್ತದೆ. ಸಿನೇಮಾ ಪತ್ರಕರ್ತನನ್ನು ’ಚೆನ್ನಾಗಿ’ ನೋಡಿಕೊಂಡರೆ ಸಿನೇಮಾ ಸೂಪರ್ ಆಗಿಬಿಡುತ್ತದೆ. ಇದು ಥಳುಕು ಬಳುಕಿನ ಪ್ರಪಂಚ. ಪ್ರದರ್ಶಕ ಗುಣ ಇದ್ದರೆ ಮಾತ್ರ ಮನ್ನಣೆ!

Thursday, July 17, 2008

ಪ್ರತ್ಯೇಕ ಕೃಷಿ ಬಜೇಟ್ ಬೇಕು

ರೈತರ ಆತ್ಮಹತ್ಯೆ ಸಮೂಹ ಸನ್ನಿಯ ರೂಪ ಪಡೆಯುತ್ತಲಿದೆ. ಹಿಂದೆಲ್ಲ ಮೊದಲ ಪುಟದಲ್ಲಿ ವರದಿಯಾಗುತ್ತಿದ್ದ, ಹೆಡ್ ಲೈನ್ಸ್ ನಲ್ಲಿ ಪ್ರಸಾರವಾಗುತ್ತಿದ್ದ ರೈತರ ಅತ್ಮಹತ್ಯೆಗಳು ಈಗ ಒಳಪುಟಗಳತ್ತ ಸರಿಯುತ್ತಲಿವೆ. ಮುಂದೊಂದು ದಿನ ಪೇಜ್ ತ್ರಿಯಲ್ಲೂ ಬರಬಹುದು. ಅಂದರೆ ರೈತರ ಆತ್ಮಹತ್ಯೆ ಪ್ರಯತ್ನಗಳು ಸಾಮಾನ್ಯ ಘಟನೆಗಳಾಗುತ್ತಿವೆ. ಅದು ಜನತೆಯಲ್ಲಿ ಯಾವ ತಲ್ಲಣವನ್ನೂ ಉಂಟು ಮಾಡುತ್ತಿಲ್ಲ. ಅವರು ಸಂವೇದನಾಶೂನ್ಯರಾಗುತ್ತಿದ್ದಾರೆ.ಜೂನ್ ೧೯ರಂದು ನಮ್ಮ ಕೃಷಿ ಸಚಿವ ರವೀಂದ್ರನಾಥ ಪತ್ರಕರ್ತರ ಪ್ರಶ್ನೆಗೆ ನೀಡಿದ ಉತ್ತರವನ್ನೇ ನೋಡಿ: ’ನಿನ್ನೆ ಸತ್ತವ ರೈತನಲ್ಲ. ಇವತ್ತು ರೈತ ಸತ್ತಿರುವ ಬಗ್ಗೆ ನನಗೇನೂ ಗೊತ್ತಿಲ್ಲ’ಒಬ್ಬ ಜವಬ್ದಾರಿಯುತ ಜನಪ್ರತಿನಿಧಿ ನೀಡುವ ಉತ್ತರವೇ ಇದು? ನಿನ್ನೆ ಸತ್ತವ ರೈತನಲ್ಲ ಎಂದು ಅವರು ಹೇಗೆ ನಿರ್ಧರಿಸಿದರು? ಅವರ ಸುತ್ತಮುತ್ತಲು ಇರುವ ಅಧಿಕಾರವ್ರ್‍ಅಂದ ಅವರಿಗೆ ಈಮಾಹಿತಿಯನ್ನು ನೀಡಿರಬೇಕು ಆಧಿಕಾರಶಾಹಿ ಎಂದೂ ರ್‍ಐತಪರವಾಗಿರಲಾರದು. ಆದರೆ ಜನಪ್ರತಿನಿಧಿಯೊಬ್ಬ ರೈತಪರವಾಗಿರಲೇ ಬೇಕು. ನಿನ್ನೆ ಸತ್ತ ಆ ರೈತ, ದಾವಣಗೆರೆ ಜಿಲ್ಲೆಯ ರಾಣೆಬೆನ್ನೂರು ತಾಲೂಕಿನ ಹಿರೇಬಿದರಿ ಗ್ರಾಮದ ಅಜ್ಜಪ್ಪ[೪೩]. ನಿಜ. ಆತ ಸರ್ಕಾರಿ ದಾಖಲೆಗಳ ಪ್ರಕಾರ ರೈತನಲ್ಲ. ಯಾಕೆಂದರೆ ಆತ ಬೇರೊಬ್ಬರ ಹೊಲವನ್ನು ಗುತ್ತಿಗೆಗೆ ಪಡೆದು ವ್ಯವಸಾಯ ಮಾಡುತ್ತಿದ್ದ.. ಅಂದರೆ ಬಗರ್ ಹುಕುಂ ಸಾಗುವಳಿ ಮಾಡುವವರು, ಗೇಣಿದಾರರು, ಕುಮ್ಕಿ, ಜಮ್ಮಬಾಣೆಗಳಲ್ಲಿ ವ್ಯವಸಾಯ ಮಾಡುವವರು ರೈತರಲ್ಲವೇ? ತಮ್ಮದೇ ಜಿಲ್ಲೆಯ, ತಮ್ಮ ಪಕ್ಕದ ಕ್ಷೇತ್ರದ ರೈತನೊಬ್ಬನ ಬಗ್ಗೆ ಕೃಷಿ ಸಚಿವರು ಇಂತಹ ಬೇಜವಾಬ್ದಾರಿ ಹೇಳಿಕೆ ನೀಡಬಹುದೇ? ಇವರು ಹೇಳಿಕೆ ನೀಡಿದ ಒಂದು ವಾರದ ಹಿಂದೆಯಷ್ಟೇ ಹಾವೇರಿ ಗೋಲಿಬಾರ್ ನಡೆದಿದೆ. ತನ್ನ ಖಾತೆಯ ಬಗ್ಗೆ ಬದ್ದತೆ ಇರುವ ಮಂತ್ರಿಯೊಬ್ಬರಿಗೆ ಮಾಹಿತಿಯನ್ನು ಪಡೆದುಕೊಳ್ಳಲು, ಪರಿಸ್ಥಿತಿಯನ್ನು ಅವಲೋಕಿಸಲು ಇಷ್ಟು ಕಾಲವಕಾಶ ಸಾಕು.ಇಂತಹದ್ದೊಂದು ಸಂದಿಗ್ಧಸ್ಥಿತಿಯಲ್ಲೇ ನಮಗೆ ಅರಿವಾಗುವುದು: ಕೃಷಿಕ್ಷೇತ್ರದ ಸಮಸ್ಯೆಗಳ ಆಳ-ಅರಿವು ಹೊಂದಿರುವ ವ್ಯಕ್ತಿಯೇ ಕೃಷಿ ಮಂತ್ರಿಯಾಗಿರಬೇಕೆಂದು. ಆದರೆ ನಮ್ಮ ದೇಶದ ಇತಿಹಾಸದಲ್ಲೇ ಶರದ್ ಪವಾರ್ ಒಬ್ಬರನ್ನು ಬಿಟ್ಟರೆ ಕೃಷಿ ಖಾತೆ ತನಗೇ ಬೇಕೆಂದು ಕೇಳಿ ಪಡೆದುಕೊಂಡ ಉದಾಹರಣೆ ಇಲ್ಲ. ಯಾಕೆಂದರೆ ಅದರಲ್ಲಿ ಯಾವುದೇ ಪಾಯಿದೆ ಇಲ್ಲ. ರೈತರ ಸಮಸ್ಯೆಗಳನ್ನೇ ಓಟು ಬ್ಯಾಂಕ್ ಗಳನ್ನಾಗಿಸಿಕೊಂಡು ಅಧಿಕಾರದ ಗದ್ದುಗೆ ಹಿಡಿಯುವ ಮಣ್ಣಿನ ಮಕ್ಕಳಿಗೆ ಕಂದಾಯ, ಗಣಿ, ಕೈಗರಿಕೆ, ಲೋಕೋಪಯೋಗಿ,, ಬೆಂಗಳೂರು ನಗರಾಭಿವದ್ಧಿ ಖಾತೆಗಳೇ ಬೇಕು. ಜನಸೇವೆಗೆ ಇದುವೇ ಮೋಕ್ಷಪಥ!ನಮಗೆ ಗೊತ್ತಿದೆ, ಮುಕ್ತ ಅರ್ಥಿಕ ನೀತಿಯಿಂದಾಗಿ ನಮ್ಮ ರೈತ ಅಭಿವ್ರದ್ಧಿಶಿಲ ದೇಶಗಳ ರೈತರೊಡನೆ ನೇರ ಸ್ಪರ್ದೆಯನ್ನು ಎದುರಿಸಬೇಕಾಗಿದೆ. ಅಂದರೆ ಮಾರುಕಟ್ಟೆಯಲ್ಲಿ ಅಸ್ಟೇಲಿಯದ ಸೇಬು, ಅಮೇರಿಕದ ಗೋದಿ, ಚೀನಾದ ರೇಶ್ಮೆ ಇತ್ಯಾದಿಗಳ ಜೊತೆ ನಮ್ಮ ರೈತ ಪೈಪೋಟಿ ಎದುರಿಸಬೇಕಾಗಿದೆ. ಅಲ್ಲಿ ಕೃಷಿಗೆ ಕೈಗಾರಿಕೆಯ ಸ್ಥಾನಮಾನ ಸಿಕ್ಕಿ ದೊಡ್ಡ ಪ್ರಮಾಣದಲ್ಲಿ ಉತ್ಪಾದನೆಯಾಗುತ್ತಿರುವುದರಿಂದ ಉತ್ಪಾದನ ವೆಚ್ಚ ಕಡಿಮೆಯಾಗುತ್ತದೆ.ಹಾಗಾಗಿ ವಿದೇಶಿ ಉತ್ಪನ್ನಗಳು ನಮ್ಮ ಮಾರುಕಟ್ಟೆಯಲ್ಲಿ ಕಡಿಮೆ ಬೆಲೆಗೆ ಸಿಗುತ್ತವೆ. ಜನ ಅದಕ್ಕೆ ಮುಗಿಬೀಳುತ್ತಾರೆ. ನಮ್ಮ ರೈತ ಏನು ಮಾಡಬೇಕು? ಇಲ್ಲಿ ಸರಕಾರ ’ತಾಯಿ’ಯ ಹಾಗೆ ವರ್ತಿಸಬೇಕು. ದುರ್ಬಲರಿಗೆ ವಿಶೇಶ ಕಾಳಜಿ ಅಗತ್ಯ. ವಿಶ್ವಬ್ಯಾಂಕ್ ಸ್ಪಷ್ಟವಾಗಿ ಹೇಳಿದೆ: ರೈತರಿಗೆ ಯಾವುದೇ ತೆರನಾದ ಸಬ್ಸಿಡಿ ನಿಡಬಾರದು. ಇದು ಸರಕಾರಕ್ಕೂ ಗೊತ್ತಿದೆ ಹಾಗಗಿಯೇ ಒಬ್ಬೊಬ್ಬ ಸಚಿವರು ಬಿನ್ನ ಭಿನ್ನ ಹೇಳಿಕೆ ನಿಡುತ್ತಿದ್ದಾರೆ. ಪ್ರಣಾಳಿಕೆಯಲ್ಲಿ ಹೇಳಿದ್ದೆಲ್ಲವನ್ನೂ ಜಾರಿಯಲ್ಲಿ ತರುವುದು ಕಷ್ಟವೆಂದು ಅವರಿಗೂ ಗೊತ್ತಿದೆ. ನಮ್ಮದು ಕೃಷಿಪ್ರಧಾನ ದೇಶ. ಇಲ್ಲಿಯ ಶೇ. ೭೦ರಷ್ಟು ಜನ ಕೃಷಿಕರು. ಹಾಗಾಗಿ ಕ್ರಷಿಕ್ಷೇತ್ರವನ್ನು ಗಂಬೀರ್‍ಅವಾಗಿ ಪರಿಗಣಿಸಬೇಕಾಗಿದೆ. ಈ ದೇಶಕ್ಕೊಂದು ಬಜೆಟ್ ಇದೆ.ಸಂಪರ್ಕಾಕ್ರಾಂತಿಯ ಹೆಸರಿನಲ್ಲಿ ಬ್ರಿಟೀಶರ ಕುರುಹಾಗಿ ಉಳಿದುಕೊಂಡಿರುವ ಪ್ರತ್ಯೇಕ ರೈಲ್ವೆ ಬಜೆಟ್ ಇದೆ. ಆದರೆ ಬಹುಸಂಖ್ಯಾತ ಜನರನ್ನು ಪ್ರತಿನಿಧಿಸುವ ಕೃಷಿ ಕ್ಷೇತ್ರಕ್ಕೆ ಪ್ರತ್ಯೇಕ ಬಜೆಟ್ [ಲ್ಲ. ಅದು ಇಂದಿನ ಅವಸ್ಯಕತೆಯಾಗಿದೆ. ಹಣಕಾಸು ಸಚಿವರು, ರೈಲ್ವೆ ಸಚಿವರು ಬ್ರ್‍ಈಫ್ ಕೇಸ್ ಹಿಡಿದು ಸಂಶತ್ ಪ್ರವೇಶಿಸಿ ಬಜೆಟ್ ಮಂಡಿಸುವುದನ್ನೇ ಜನ ಕಾತರದಿಂದ ಕಾಯುತ್ತಾರೆ. ಆ ಯೋಗ್ಯತೆ ಕೃಷಿ ಸಚಿವರಿಗೆ ಬರಬೇಕಾಗಿದೆ.ಪ್ರತ್ಯೇಕ ಕೃಷಿ ಬಜೆಟ್ ಮಂಡನೆಯಿಂದ ಏನಾಗುತ್ತದೆ? ’ನಿಮ್ಮೊಡನೆ ನಾವಿದ್ದೇವೆ. ಆತ್ಮವಿಶ್ವಾಸ ಕಳೆದುಕೊಳ್ಳಬೇಡಿ’ ಎಂಬ ಸ್ಪಷ್ಟ ಸಂದೇಶವನ್ನು ಸರಕಾರ ರವಾನಿಸಿದಂತಾಗುತ್ತದೆ. ಮುಖ್ಯವಾಗಿ ಆಖಾತೆಗೊಂದು ಗೌರವ ಬರುತ್ತದೆ.ಅದರ ತೂಕ ಹೆಚ್ಚುತ್ತದೆ. ತಮ್ಮನ್ನು ಗಂಭೀರವಾಗಿ ಪರಿಗಣಿಸಿದ್ದಾರೆ,ಆಡಳಿತ ಯಂತ್ರದಲ್ಲಿ ತಾವೂ ಕೂಡ ಪಾಲುದಾರರು ಎಂದು ಕೃಷಿಕ ಹೆಮ್ಮೆ ಪಡುತ್ತನೆ.ಅವನ ಆತ್ಮವಿಶ್ವಾಸ ಹೆಚ್ಚುತ್ತದೆ. ಕೃಷಿ ಬಜೆಟ್ ಇಂದಿನ ತುರ್ತು ಅವಸ್ಯಕತೆ. ದೊಡ್ಡ ಸಮುಹದ ದೊಡ್ಡ ಜವಾಬ್ದಾರಿ ಕೃಷಿ ಸಚಿವರ ಹೆಗಲ ಮೇಲಿದೆ. ಅವರು ಅನಿರ್ವಾಯವಾಗಿ ಬುದ್ಧಿ ಮತ್ತು ಹ್ರದಯದ ಮಧ್ಯೆ ಸಮನ್ವಯ ಸಾಧಿಸಲೇಬೇಕಾಗುತ್ತದೆ. ಕೆಲಸ ಮಡಲೇಬೇಕಾಗುತ್ತದೆ.ಪರಿಣಿತರ ಜೊತೆ ಚರ್ಚೆ,ಸಂವಾದ,ಅಧ್ಯಯನ ನಡೆಸಲೇ ಬೇಕು ಕೃಷಿ ಬಜೆಟ್ ಎರಡು ಹಂತಗಳಲ್ಲಿ ಜೊತೆ ಜೊತೆಯಾಗಿ ಜಾರಿಗೆ ಬರಬೇಕು ಮೊದಲನೆಯದಾಗಿ ರೈತರನ್ನು ಎಜ್ಯುಕೇಟ್ ಮಾಡುವುದು.ಅಂದರೆ ಅವರನ್ನು ವ್ರತ್ತಿಪರ ಬ್ಯುಸಿನೆಸ್ ಮೆನ್ ಆಗಿ ಪರಿವರ್ತಿಸುವುದು. ಪರಂಪರಾಗತವಾಗಿ ಆತನನ್ನು ಅನ್ನದಾತ,ನೇಗಿಲಯೋಗಿ, ದೇಶದ ಬೆನ್ನೆಲುಬು ಎಂದೆಲ್ಲ ಕರೆಯಲಾಗುತ್ತಿತ್ತು.ಆಗ ಅದು ಆತನ ತ್ಯಾಗ,ಸೇವೆ, ಸಹನೆಗೆ ಸಂದ ಮನ್ನಣೆಯಾಗಿತ್ತು. ಆದರೆ ಈಗ ಅದರಲ್ಲಿ ವ್ಯಂಗ್ಯ ಧ್ವನಿಸುತ್ತದೆ. ಹಿಂದಿನಿಂದಲೂ ನಮ್ಮ ರೈತ ಸ್ವಾವಲಂಬಿ.ಆತ ಬೀಜ, ಗೊಬ್ಬರ, ಕೀಟನಾಶಕಔಷಧಿ, ನೀರು, ದುಡ್ಡು ಯಾವುದಕ್ಕೂ ಯಾರನ್ನೂ ಅವಲಂಬಿಸಿದವನಲ್ಲ ಪ್ರತಿ ರೈತ ಒಬ್ಬ ಕೃಷಿ ವಿಜ್ನಾನಿಯೇ. ಆತನಿಗೆ ತನ್ನ ಜಮಿನೇ ಪ್ರಯೋಗಶಾಲೆ. ಹಾಗಾಗಿ ಅಕ್ಕ ಪಕ್ಕದ ಮನೆಗಳಲ್ಲೂ ಭಿನ್ನ ಭಿನ್ನವಾದ ಕೃಷಿ ಪದ್ದತಿಯಿತ್ತು. ರೈತ ಪ್ರಯೋಗಗಳಿಗೆ ಮುಕ್ತಮನಸ್ಸುಳ್ಳವನಾಗಿದ್ದನೆ ಎಂಬುದಕ್ಕೆ ಪಾಳೇಕರ್ ಮಾದರಿ ಕೃಷಿ ವಿಧಾನಕ್ಕೆ ಜನ ಮುಗಿಬೀಳುತ್ತಿರುವುದೇ ಸಾಕ್ಷಿಯಾಗಿದೆ. ಎರಡು ನಾಟಿದನವಿದ್ದರೆ ಸಾಕು, ಕೃಷಿ ತ್ಯಾಜ್ಯವನ್ನೇ ಬಳಸಿ ಅತ್ಯುತ್ತಮ ಫಸಲು ತೆಗೆಯಬಹುದು.ಇಂತಹ ಸಾವಯವ ಕೃಷಿ ಉತ್ಪನ್ನಗಳನ್ನು ಕೊಳ್ಳುವಂತೆ ’ಗ್ರಾಹಕ ಜಾಗ್ರತಿ’ ಆಂದೋಲನವನ್ನು ಹಮ್ಮಿಕೊಳ್ಳಬೇಕು. ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಳಸಿ ಬೆಳೆದ ಉತ್ಪನ್ನಗಳಿಗೂ ಇರುವ ವ್ಯತ್ಯಾಸವನ್ನು ಜನರಿಗೆ ತಿಳಿಸಿಕೊಡಬೇಕು. ಕಾರ್ಗಿಲ್,ಕೆಂಟಕಿ,ರಿಲೆಯನ್ಸ್ ಜೊತೆಗೆ ಸ್ಪರ್ದೆ ನೀಡುವಂತೆ ನಮ್ಮ ರೈತರನ್ನು ತಯಾರು ಮಾಡಬೇಕು. ಆರೋಗ್ಯ ಕಾಳಜಿ ಎನ್ನುವುದು ನಗರಸಂಸ್ಕ್ರತಿಯ ಇತ್ತೀಚೆಗಿನ ಗೀಳು. ಹಾಗಾಗಿ ಸಾವಯವ ಉತ್ಪನಗಳಿಗೆ ಭವಿಷ್ಯ ಇದ್ದೇಇದೆ. ಎರಡನೆಯದಾಗಿ ಮಾರುಕಟ್ಟೆ ವಿಭಾಗ. ಮೊತ್ತಮೊದಲನೆಯದಾಗಿ ದಲ್ಲಾಳಿಗಳನ್ನು,ಮಧ್ಯವರ್ತಿಗಳನ್ನು ದೂರವಿಡಬೇಕು ಎ.ಪಿ.ಎಮ್.ಸಿಯಲ್ಲಾದ ವೈಪಲ್ಯಗಳು ಇಲ್ಲಿ ಮರುಕಳಿಸಬಾರದು. ಸರಕಾರವೇ ಮಧ್ಯೆ ಪ್ರವೇಶಿಸಿ ಉತ್ಪನ್ನಗಳನ್ನು ಖರೀದಿ ಮಾಡಬೇಕು. ಅದಕ್ಕಾಗಿ ಬಹಳ ವ್ಯವಸ್ಥಿತವಾದ ಮಾರುಕಟ್ಟೆ ಜಾಲವನ್ನು ನೇಯಬೇಕಾಗುತ್ತದೆ. ಅದು ಬಹಳ ದೊಡ್ಡಮಟ್ಟದ ಉದ್ಯೋಗಸ್ರಷ್ಟಿಗೂಕಾರಣವಾಗುತ್ತದೆ. ಕೃಷಿ ಪಧವಿದರರನ್ನು ಇದರಲ್ಲಿ ತೊಡಗಿಸಿಕೊಳ್ಳಬಹುದು. ರೈತರ ಬಗ್ಗೆ ನಿಜವಾದ ಕಾಳಜಿ ಇರುವ ಚಿಂತಕರು, ಸಮಾಜ ಸೇವಕರು,ರೈತಮುಖಂಡರ ದೊಡ್ಡ ಪಡೆಯೇ ಇದೆ. ಅವರನ್ನು ಇದರ ಗೌರವ ಕಣ್ಗಾವಲು ಪಡೆಯನ್ನಾಗಿ ನೇಮಿಸಿಕೊಳ್ಳಬಹುದು. ಇದರ ಜೊತೆಗೆ ಮೌಲ್ಯವರ್ಧಕ ಉತ್ಪನ್ನಗಳ ತಯಾರಿಕೆಯಲ್ಲಿ [ನಂದಿನಿ ಉತ್ಪನ್ನಗಳಂತೆ] ಸರಕಾರವೇ ನೇರವಾಗಿ ಭಾಗಿಯಾಗಬೇಕು. ಟೊಮೇಟವನ್ನು ರಸ್ತೆಗೆ ಸುರಿಯುವುದರ ಬದಲು ಕೆಚಪ್ ತಯಾರಿಕಾ ಘಟಕಗಳನ್ನು ಸ್ಥಾಪಿಸಲಿ. ಕೊಲ್ಡ್ ಸ್ಟೊರೇಜ್ ಗಳನ್ನು ಹೆಚ್ಚಿಸಲಿ. ಇದರ ಜೊತೆಗೆ ರೈತರಿಗೆ ಕೆಲವು ಸೇವೆಗಳನ್ನು ಸರಕಾರ ಒದಗಿಸಬೇಕು. ರಾಜಕಾರಣಿಗಳಿಗೆ ವಿಧಾನಸೌಧ ಇದೆ,ಶಾಸಕರ ಭವನ ಇದೆ. ಅಧಿಕಾರಶಾಹಿಗಳಿಗೆ ವಿಕಾಸಸೌಧ ಇದೆ. ಬಹುಮಹಡಿ ಕಟ್ಟಡ ಇದೆ. ರೈತರಿಗೆ ಏನಿದೆ? ಬೆಂಗಳೂರಿನಲ್ಲಿ ಒಂದು ರೈತಭವನದ ಅವಸ್ಯಕತೆ ಇದೆ. ಎಲ್ಲಾ ಜಿಲ್ಲೆಗಳ ರೈತರೂ ಇಲ್ಲಿ ಬಂದು ನಿರ್ಧಿಷ್ಟ ಅವಧಿಗೆ ತಂಗುವ ವ್ಯವಸ್ಥೆಯಿರಲಿ. ಪ್ರತಿ ಜಿಲ್ಲೆಯ ಬೆಳೆ ವೈವಿದ್ಯತೆಯನ್ನು ತೋರಿಸುವ ಎಕ್ಸ್ ಭಿಷನ್ , ಭಿತ್ತಿಚಿತ್ರಗಳ ಡಿಸ್ ಪ್ಲೇ ಇರಲಿ. ಗುಲ್ಬರ್ಗ ಜಿಲ್ಲೆಯ ಕೃಷಿ ಅನುಭವವನ್ನು ಮೈಸುರು ಜಿಲ್ಲೆಯ ರೈತ ಹಂಚಿಕೊಳ್ಳಲಿ. ಹಾಗೆ ಮಾಡುವುದರಿಂದ ಬಾಂಧವ್ಯ ಬೆಳೆಯುತ್ತದೆ. ಕಾವೇರಿ-ಕ್ರಷ್ಣೆಯರು ಒಂದಾಗುತ್ತಾರೆ. ಅದರಲ್ಲೊಂದು ಸೆಮಿನಾರ್ ಹಾಲ್ ಇರಲಿ. ನಿರಂತರ ಚರ್ಚಗೋಷ್ಟಿಗಳು, ಸಂವಾದಗಳು ಅಲ್ಲಿ ನಡೆಯುತ್ತಿರಲಿ. ದೇಶದ ಎಲ್ಲಾ ಭಾಗದ ರೈತರು ಅಲ್ಲಿ ಒಟ್ಟು ಸೇರಿ ವಿಚಾರ ವಿನಿಮಯ ಮಾಡಿಕೊಳ್ಳಲಿ. ಕೆ.ಎ.ಎಸ್ ಗ್ರೇಡಿನ ಅಧಿಕಾರಿಯೊಬ್ಬರು ಅದರ ಉಸ್ತುವಾರಿ ನೋಡಿಕೊಳ್ಳಲಿ. ಇಷ್ಟನ್ನು ಮಾಡಿಕೊಟ್ಟರೂ ಸಾಕು ರೈತ ಖುಷಿ ಪಡುತ್ತಾನೆ. ’ರೈತಭವನ’ ತನ್ನದೆಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾನೆ. ಅರುವತ್ತು ವರ್ಷ ಮೆಲ್ಪಟ್ಟ ರೈತನಿಗೆ ಮಾಶಾಸನ ಕೊಡುತ್ತದೆಯೆಂದು ಸರಕಾರ ಪ್ರಕಟಿಸಿದೆ. ಅದರ ಜೊತೆಗೆ ಎಲ್.ಟಿಸಿ ಸೌಲಭ್ಯ ದೊರಕಲಿ. ಇತ್ತೀಚೆಗೆ ಕೃಷಿಭೂಮಿಯಲ್ಲಿ ಉತ್ಪಾದನೆ ಕುಂಟಿತಗೊಂಡಿದೆ. ಮುಂದಿನ ದಿನಗಳಲ್ಲಿ ;ಆಹಾರ ಬಧ್ರತೆ’ ಎಂಬುದು ದೊಡ್ಡ ಸವಲಾಗಿ ಕಾಡಲಿದೆ. ಹಾಗಾಗಿ ಕೃಷಿಕ್ಶೇತ್ರವನ್ನು ’ಇಂಡಸ್ಟ್ರಿ’ ಎಂದು ಪರಿಗಣಿಸಿ, ಕೈಗಾರಿಕೆಗೆ ಕೊಡುವಎಲ್ಲ ಸವಲತ್ತುಗಳನ್ನು ನೀಡಿ ಕುಟುಂಬವನ್ನು ಕೈಗಾರಿಕೆಯ ಕನಿಷ್ಟ ಘಟಕ ಎಂದು ಘೋಷಿಸಬೇಕು,ಕ್ರಷಿಯಲ್ಲಿ ಮಾತ್ರ ಆಹಾರ ಬಧ್ರತೆ ಮತ್ತು ಉದ್ಯೋಗ ಬಧ್ರತೆ ಎರಡೂ ಇದೆ. ಈ ಸ್ವಾವಲಂಬಿ ಕ್ಷೇತ್ರವನ್ನು ಸ್ವಲ್ಪ ಒತ್ತು ಕೊಟ್ಟು ಮೇಲೆತ್ತಿದರೆ ನಮ್ಮ ರೈತರ ಹಸಿರು ಶಾಲು ಕುತ್ತಿಗೆಗೆ ಕುಣಿಕೆಯಾಗುವುದರ ಬದಲು ಯಶಸ್ಸಿನ ಪತಾಕೆಯಗುತ್ತದೆ ಎಂದು ರೈತ ಮುಖಂಡರಾದ ಕೆ.ಟಿ.ಗಂಗಾಧರ್ ಹೇಳುತ್ತಾರೆ. ಪ್ರೋ.ನಂಜುಂಡಸ್ವಾಮಿಯವರು ರೈತ ನಾಯಕರು ವಿದಾನಸಭೆಯೊಳಗೆ ಕುಳಿತುಕೊಳ್ಳುವ ಕನಸು ಕಂಡಿದ್ದರು . ನಾವು ಕೃಷಿಗೆ ಸ್ವಾಯತ್ತತೆ ಬರುವ ಕನಸನ್ನು ಕಾಣುತ್ತಿದ್ದೇವೆ. ನಮ್ಮ ಕೃಷಿ ಸಚಿವರು ಕೃಷಿ ಬಜೇಟ್ ನ ಬ್ರೀಫ್ ಕೇಸ್ ಹಿಡಿದು ವಿದಾನಸೌಧದ ಮೆಟ್ಟಲುಗಳನ್ನೆರುವ ಕನಸು ಕಾಣುತ್ತಿದ್ದೇವೆ. ರೈತರ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮುಖ್ಯಮಂತ್ರಿಗಳು ಅದನ್ನು ನನಸು ಮಾಡಲಿ.
{ಪ್ರಮುಖ ದಿನಪತ್ರಿಕೆಗಳು ಈ ಲೀಖನವನ್ನು ಪ್ರಕಟಿಸಲಿಲ್ಲ. ಹಾಗಾಗಿ ಇಲ್ಲಿ ಪ್ರಕಟವಾಗಿದೆ.}