Monday, March 12, 2012

ಪ್ರಕೃತಿ ಸಂಸ್ಕೃತಿಗಳ ನಡುವಿನ ವಿಕೃತಿ



ಪ್ರಕೃತಿಯಿಂದ ಸಂಸ್ಕೃತಿಯೆಡೆಗಿನ ಮಾನವನ ಪಯಣಕ್ಕೆ ಸುದೀರ್ಘವಾದ ಇತಿಹಾಸವಿದೆ. ಅದು ನಾಗರೀಕತೆಯ ಇತಿಹಾಸ. ಪ್ರಕೃತಿ ಎಂದರೆ ”ಇರುವುದು’.ಅದು ನೈಜವಾದುದು,ಸಹಜ ಸ್ಥಿತಿಯಲ್ಲಿರುವುದು. ಸಂಸ್ಕೃತಿ ಎಂದರೆ ’ಆಗುವುದು’ ಅದು ಬುದ್ಧಿವಿಕಾಸಕ್ಕೆ ಸಂಬಂಧಿಸಿದ್ದು. ಅದು ಮಾನಸಿಕ ಪಕ್ವತೆ. ಪ್ರಕೃತಿಯಲ್ಲಿದ್ದಾಗ ಮನುಷ್ಯನಿಗೆ ಮಾನದ ಕಲ್ಪನೆ ಇರಲಿಲ್ಲ. ಹಾಗಾಗಿ ಅವನಿಗೆ ಮುಚ್ಚಿಕೊಳ್ಳುವುದರ ಅವಶ್ಯಕತೆ ಕಾಣಲಿಲ್ಲ. ಆದರೆ ಸಂಸ್ಕೃತಿಯನ್ನು ರೂಢಿಸಿಕೊಳ್ಳುತ್ತಾ ಹೋದ ಮಾನವ ತನ್ನ ದೇಹದ ಕೆಲವು ಅಂಗಗಳನ್ನು ಮುಚ್ಚಿಕೊಳ್ಳುತ್ತಾ ಹೋದ. ಅದು ಮತ್ತೆ ಪ್ರದೇಶ ಮತ್ತು ಕಾಲಕ್ಕನುಗುಣವಾಗಿ ಬದಲಾಗುತ್ತಾ ಹೋಗಿದೆ. ಹಾಗಾಗಿಯೇ ಅವರು ರೂಪಿಸಿಕೊಂಡ ಸಂಸ್ಕೃತಿ ಕೂಡಾ ಭಿನ್ನಭಿನ್ನವಾಗಿಯೇ ಇರುವುದನ್ನು ನಾವಿಂದಿಗೂ ಕಾಣಬಹುದು.
ಕೆಲವು ಧರ್ಮ ಸಂಸ್ಕೃತಿಗಳಲ್ಲಿ ಮುಚ್ಚಿಕೊಳ್ಳುವುದೇ ಶ್ರೇಷ್ಟತೆಯೆನಿಸಿದರೆ ಇನ್ನು ಕೆಲವು ಸಂಸ್ಕೃತಿಯಲ್ಲಿ ಬಿಚ್ಚಿಕೊಳ್ಳುವುದು ಅಂದರೆ ನಿರ್ವಾಣವೂ ಪೂಜನೀಯ.ಹಾಗೆಯೇ ಬಿಚ್ಚಿದ್ದನ್ನು ಕಲೆಯ ಹೊದಿಕೆಯಡಿ ತೋರಿಸಿದರೆ ಅದು ಸೌಂದರ್ಯೋಪಾಸನೆ.
ಇಷ್ಟಕ್ಕೂ ಸಂಸ್ಕೃತಿ ಅಂದ್ರೆ ಏನು? ಸಂಸ್ಕೃತಿ ಅಂದ್ರೆ ನಾವು ಬದುಕುವ ವಿಧಾನ; ನಮ್ಮ ನಡೆ-ನುಡಿ, ಆಚಾರ-ವಿಚಾರ,ನಂಬಿಕೆ-ಮೌಲ್ಯಗಳು ಇವೆಲ್ಲವುಗಳ ಒಟ್ಟು ಮೊತ್ತವೇ ಸಂಸ್ಕೃತಿ ಆಗಿರುತ್ತದೆ. ಆದಿಮಾನವನನ್ನು ಕೃಷಿಯ ಕೈಂಕರ್ಯಕ್ಕೆ ಹಚ್ಚಿ ಅವನನ್ನು ಕುಟುಂಬಕ್ಕೆ ಬಂದಿಸಿ ಅವನಿಗೆ ನಾಗರೀಕತೆಯನ್ನು ಕಲಿಸಿ ಸಮಾಜದ ಮೌಲ್ಯ ವಿನ್ಯಾಸ ಮಾಡಿದಾಕೆ ಮಹಿಳೆ. ಅಂಥ ಮಹಿಳೆ ಎಂದೂ ಕೂಡಾ ತನ್ನ ಅಂಗಾಂಗಗಳನ್ನು ಪ್ರದರ್ಶನಕ್ಕಿಟ್ಟವಳಲ್ಲ. ಬಲಾತ್ಕಾರದಿಂದ ಆಕೆಯನ್ನು ಬೆತ್ತಲೆಗೊಳಿಸಿದವನು ಪುರುಷ. ಅದಕ್ಕೆ ಮೊದಲ ಉದಾಹರಣೆ ನಮಗೆ ಸಿಗುವುದು ಮಹಾಭಾರತದಲ್ಲಿ.
ಅದು ಹಸ್ತಿನಾಪುರದ ರಾಜಸಭೆ.. ದ್ರೌಪದಿಯನ್ನು ದುಶ್ಯಾಸನ ಬೆತ್ತಲೆಗೊಳಿಸಲು ಪ್ರಯತ್ನಿಸುತ್ತಿದ್ದಾನೆ. ದುರ್ಯೋಧನ ಆಕೆಯತ್ತ ನೋಡಿ ತನ್ನ ತೊಡೆಯನ್ನು ತೋರಿಸಿ’ ಬಾ ಇಲ್ಲಿ ಕುಳಿತುಕೋ’ ಎಂದು ಕುಹಕವಾಡುತ್ತಾನೆ. [ಆತ ತೋರಿಸಿದ್ದು ತೊಡೆಯನ್ನಲ್ಲ ಇನ್ನೇನನ್ನೋ.. ಎಂಬ ವಾದವೂ ಇದೆ.] ಭೀಷ್ಮ, ದ್ರೋಣ, ಕೃಫ, ಶಕುನಿ, ವಿಧುರ ಮುಂತಾದವರೆಲ್ಲಾ ಷಂಡರಂತೆ ತಲೆ ತಗ್ಗಿಸಿಕೊಳ್ಳುತ್ತಾರೆ. ಕುರುಡ ಧೃತರಾಷ್ಟ್ರ ’ಇಲ್ಲೇನಾಗುತ್ತಿದೆ, ಇಲ್ಲೇನಾಗುತ್ತಿದೆ’ ಎನ್ನುತ್ತಾ ತಡಬಡಾಯಿಸುತ್ತಾನೆ. ದೃತರಾಷ್ಟ್ರನ ಪ್ರಶ್ನೆಗೆ ಉತ್ತರಿಸುವವರು ಯಾರು?
ಈಗಲೂ ಅಷ್ಟೇ. ಅಂದಿನ ರಾಜಸಭೆಯ ಹಾಗೆ ಪೋಲಿಸರು, ವಕೀಲರು ಮತ್ತು ಮಾಧ್ಯಮಗಳು ಒಟ್ಟಾಗಿ ಕನ್ನಡದ ಸಂಸ್ಕೃತಿಯ ಮಾನಬಂಗ ಮಾಡುತ್ತಿದ್ದಾರೆ. ರಾಜಕಾರಣಿಗಳು ತೊಡೆ ತಟ್ಟಿ ನಗುತ್ತಿದ್ದಾರೆ. ಮುಖ್ಯಮಂತ್ರಿಗಳು ದೃತರಾಷ್ಟ್ರನ ರೀತಿಯಲ್ಲಿ ಕಕ್ಕಾಬಿಕ್ಕಿಯಾಗಿದ್ದಾರೆ.
ಇದನ್ನು ಸಂಸ್ಕೃತಿಯೊಡನೆ ವಿಕೃತಿಯ ಮುಖಾಮುಖಿ ಎನ್ನಬಹುದು. ಇಲ್ಲಿ ವಿಕೃತಿ ಸಮೂಹದೊಂದಿಗೆ ಬಂದಿದೆ ಅದರ ಪರಾಕಾಷ್ಠೆಯನ್ನು ಯೂಟ್ಯುಬ್ ನ ವಿಡಿಯೋ ತುಣುಕೊಂದರಲ್ಲಿ ಕಂಡೆ. ಅದರಲ್ಲಿ ದೃಶ್ಯ ಮಾಧ್ಯಮದ ಪೋಟೋಗ್ರಾಪರ್ ಒಬ್ಬ ಒಂದು ಕೈಯ್ಯಲ್ಲಿ ಚಾನಲ್ ಲೋಗೋ ಹಿಡಿದುಕೊಂಡು ಇನ್ನೊಂದು ಕೈಯ್ಯಲ್ಲಿ ಪ್ಯಾಂಟಿನ ಜಿಪ್ ಎಳೆದು ತನ್ನ ಗುಪ್ತಾಂಗವನ್ನು ತೋರಿಸಲೆತ್ನಿಸುತ್ತಾ ಎದುರಿಗಿದ್ದವರನ್ನು ರೊಚ್ಚಿಗೆಬ್ಬಿಸುವ ರೀತಿಯಲ್ಲಿ ಏನನ್ನೋ ಹೇಳುತ್ತಿದ್ದಾನೆ. ಆತನ ಹಿಂದೆ ಕ್ಯಾಮಾರಮ್ಯಾನ್ ಗಳ ದಂಡೇ ಇದೆ. ಅದನ್ನು ಯೂ ಟ್ಯೂಬ್ ಗೆ ಯಾರು ಅಪ್ಲೋಡ್ ಮಾಡಿದ್ದಾರೆ ಎಂಬುದು ಮುಖ್ಯವಲ್ಲ. ಅಲ್ಲಿ ವ್ಯಕ್ತವಾಗುತ್ತಿರುವ ಭಾವ ಯಾವುದು ಎಂಬುದು ಮುಖ್ಯ.
ಯಾವಾಗಲೂ ಅಷ್ಟೆ. ಸಂಸ್ಕೃತಿ ಮತ್ತು ವಿಕೃತಿ ಮುಖಾಮುಖಿಯಾದಾಗ ಸಂಸ್ಕೃತಿಯೇ ಮುಖ ತಿರುಗಿಸಿಕೊಳ್ಳುತ್ತದೆ. ಇಲ್ಲಿ ಆತ ಯಾರ ಎದುರಿಗೆ ನಿಂತು ಹಾಗೆ ವರ್ತಿಸಿದನೋ ಅವರನ್ನು ನಾನು ಸಂಸ್ಕೃತಿಯ ನೆಲೆಯಲ್ಲಿಟ್ಟು ತೂಗುತ್ತಿಲ್ಲ. ಸಂಸ್ಕೃತಿಯ ನೆಲೆಯಲ್ಲಿರುವವರು ನಾವು ಜನಸಾಮಾನ್ಯರು; ಮತದಾರರು. ಇದಕ್ಕೊಂದು ಉದಾಹರಣೆಯನ್ನು ಕೊಡುತ್ತೇನೆ. . ನಮ್ಮ ಊರಿನಲ್ಲಿ ಗದ್ದೆಗೆ ನೀರುಣಿಸಲು ಪಕ್ಕದ ಹೊಳೆಯೊಂದಕ್ಕೆ ಊರವರೆಲ್ಲಾ ಸೇರಿ ಕಟ್ಟ ಅಂದ್ರೆ ಚೆಕ್ ಡ್ಯಾಂ ನಿರ್ಮಿಸಿಕೊಂಡಿದ್ದರು. ನೀರು ಹರಿದು ಬರುವ ಕಾಲುವೆಯ ಬದಿಯ ಮೊದಲ ಗದ್ದೆ ಒಬ್ಬ ಶ್ರೀಮಂತನದಾಗಿತ್ತು. ಆತ ಸರದಿಯನ್ನೂ ಮೀರಿ ತನ್ನ ಗದ್ದೆಗೆ ನೀರುಣಿಸಿಕೊಳ್ಳುತ್ತಿದ್ದುದರಿಂದ ಕಾಲುವೆಯ ಕೊನೆಯಲ್ಲಿರುವ ಮೋನಪ್ಪನ ಗದ್ದೆಗೆ ಸರಿಯಾಗಿ ನೀರೇ ಬರುತ್ತಿರಲಿಲ್ಲ. ಆತ ತನ್ನ ಗದ್ದೆಗೆ ನೀರು ಸಾಕಾಗುತ್ತಿಲ್ಲ ಎಂದು ಹೇಳಿದರೂ ಶ್ರೀಮಂತ ಕ್ಯಾರೇ ಅನ್ನುತ್ತಿರಲಿಲ್ಲ.. ಒಂದು ದಿನ ಬೆಳಿಗ್ಗೆ ಆತ ಆ ಶ್ರೀಮಂತ ಬರುವುದನ್ನೇ ಕಾದು ಕುಳಿತ. ದೂರದಲ್ಲಿ ಶ್ರೀಮಂತ ಬರುವುದನ್ನು ಕಂಡ ಈತ ತನ್ನ ಕೌಪೀನವನ್ನು ಬಿಚ್ಚಿ ಚೆಕ್ ಡ್ಯಾಂನ ಕಿಂಡಿಯಲ್ಲಿ ನಿಂತ. ಅಲ್ಲಿ ಮೋನಪ್ಪನನ್ನು ಆ ಸ್ಥಿತಿಯಲ್ಲಿ ಕಂಡ ಆ ಶ್ರೀಮಂತ ಮತ್ತೆಂದೂ ನೀರು ಬಿಡಲು ಬರಲೇ ಇಲ್ಲ. ಇದನ್ನು ನಾನು ಚಿಕ್ಕಂದಿನಲ್ಲಿ ಮೋನಪ್ಪನ ಬಾಯಿಂದಲೇ ಕೇಳಿದ್ದೇನೆ.
ಅಂದು ಆ ಅನಕ್ಷರಸ್ತ ಮೋನಪ್ಪ ಮಾಡಿದ್ದಕ್ಕೂ ಇಂದು ಈ ಮಾಧ್ಯಮದ ವ್ಯಕ್ತಿ ತನ್ನಂಗವನ್ನು ತೋರಿಸಿದ್ದಕ್ಕೂ ನನಗೆ ಯಾವ ವ್ಯತ್ಯಾಸವೂ ಕಾಣುತ್ತಿಲ್ಲ. ಪರಿಣಾಮ ಒಂದೇ. ಸಂಸ್ಕೃತಿಯೆದುರಿಗೆ ವಿಕೃತಿಯ ವಿಜೃಂಬಣೆ. ಇಲ್ಲಿ ಒಂದು ಮಾತನ್ನು ಹೇಳಬೇಕು. ಸಂಸ್ಕೃತಿಯನ್ನು ವಿರೋಧಿಸುವವನಿಗೆ ಸೈದ್ಧಾಂತಿಕ ತಳಹದಿ ಇದ್ದರೆ ಅದು ಬಂಡಾಯ ಎನಿಸಿಕೊಳ್ಳುತ್ತದೆ. ಅದನ್ನು ಸಮಾಜ ಕ್ರಮೇಣ ಮಾನ್ಯ ಮಾಡುತ್ತದೆ. ಆದರೆ ಹುಂಬತನದಿಂದ ಮಾಡಿದ್ದರೆ ಅದನ್ನು ಸಮಾಜ ತಕ್ಷಣ ತಿರಸ್ಕರಿಸುತ್ತದೆ. ಮೋನಪ್ಪನದು ಬಂಡಾಯ. ಆ ಮಾಧ್ಯಮದ ವ್ಯಕ್ತಿಯದು ಹುಂಬತನ.
ಶಬ್ದವೊಂದು ನಮ್ಮ ಕಿವಿಗೆ ಬಿದ್ದೊಡನೆ ಅದಕ್ಕೆ ಸಂಬಂಧಿಸಿದ ಚಿತ್ರಗಳು ಚಿತ್ತಭಿತ್ತಿಯಲ್ಲಿ ಹಾದು ಹೋಗುವುದು ಸಾಮಾನ್ಯ. ಇಲ್ಲಿಯವರೆಗೂ ಬಿಚ್ಚುವುದು ಎಂದರೆ ಕೆಲವು ಬಿಚ್ಚಮ್ಮ ಸೆಲೆಬ್ರಿಟಿಗಳ ಚಿತ್ರ ನನ್ನ ಕಣ್ಮುಂದೆ ಬರುತ್ತಿತ್ತು. ಈಗ ನನ್ನ ಕಣ್ಮುಂದೆ ಚಾನಲ್ಲೊಂದರ ಲೋಗೋ ಹಿಡಿದು ಪ್ಯಾಂಟ್ ಜಿಪ್ ಬಿಚ್ಚುತ್ತಿರುವ ಆ ಕ್ಯಾಮಾರ ಮ್ಯಾನ್ ಕಣ್ಮುಂದೆ ಬರುತ್ತಾನೆ. ಇದು ಸಂಸ್ಕೃತಿಯೋ ವಿಕೃತಿಯೋ ಅರ್ಥವಾಗದ ಗೊಂದಲದಲ್ಲಿ ನಾನಿದ್ದೇನೆ.
[ ವಿಜಯಕರ್ನಾಟಕದ ನನ್ನ ಕಾಲಂ ’ಅನುರಣನ’ದಲ್ಲಿ ಪ್ರಕಟವಾದ ಲೇಖನ ]

2 comments:

ರಾಘವೇಂದ್ರ ಜೋಶಿ said...

ಉಷಾ ಮ್ಯಾಡಂ,ನಿಮ್ಮ ಈ ಲೇಖನ ಮತ್ತು ವಿ.ಕ.ದ 'ಅನುರಣನ' ಕಾಲಂನಲ್ಲಿನ ಬರಹಕ್ಕೂ ಕೊಂಚ ವ್ಯತ್ಯಾಸ ಕಂಡುಬಂತು.ಬಹುಶಃ ಮಾಧ್ಯಮದವರಿಗೆ ನಿಮ್ಮ ಕಹಿಸತ್ಯ ನುಂಗಲಾರದ ತುತ್ತಾಗಿ ಕಂಡಿರಬಹುದು.ಹಾಗಾಗಿ ಎಡಿಟ್ ಆಗಿರಲೂಬಹುದು. :-) ಅದೇನೇ ಇರಲಿ,ಮೊನ್ನೆ ನಡೆದುಹೋದ ವಕೀಲ-ಪತ್ರಕರ್ತರ ಜಗಳ ಈಗ ದಿನಕ್ಕೊಂದು ಆಯಾಮಕ್ಕೆ ತಿರುಗಿಕೊಳ್ಳುತ್ತಿದೆ."ಇನ್ನು ಮುಂದೆ ಮಾಧ್ಯಮದವರ ಯಾವುದೇ ಕೇಸುಗಳಿಗೆ ಸಂಬಂಧಪಟ್ಟಂತೆ ಯಾರೂ ವಕಾಲತ್ತು ನಡೆಸಕೂಡದು.." ಅಂತ ವಕೀಲರ ಸಂಘ ತೀರ್ಮಾನಿಸಿದೆ.ಹಾಗಂತ ಒಂದು ಕಡೆ ಸಂಘದ ಅಧ್ಯಕ್ಷರೇ ಅಧೀಕೃತ ಹೇಳಿಕೆ ನೀಡುತ್ತಿದ್ದರೆ ಇನ್ನೊಂದು ಕಡೆ ನ್ಯಾಯಮೂರ್ತಿಗಳು ಇವರುಗಳ ವರ್ತನೆಯಿಂದ ಗರಂ ಆಗುತ್ತಿದ್ದಾರೆ.
ಇನ್ನು,ಮಾಧ್ಯಮದವರೂ ವಕೀಲ ಸಮೂಹದ ಬಗ್ಗೆ ಯಾವ್ಯಾವ ರೀತಿಯಲ್ಲಿ suppress ಮಾಡಬೇಕೆಂದು ಯೋಚಿಸುತ್ತಿರಲೂಬಹುದು.ಇಲ್ಲೊಂದು ಮುಖ್ಯಪ್ರಶ್ನೆ ಎದುರಾಗುತ್ತಿದೆ: ಹೀಗೆ ಇವರೆಲ್ಲ ಪರಸ್ಪರ 'ಖಾಂದಾನೀ ದ್ವೇಷ'ವಿದ್ದವರಂತೆ ಒಬ್ಬರಿಗೊಬ್ಬರು ಹಣಿಯುವದನ್ನೇ ಕೆಲಸವಾಗಿಸಿಕೊಂಡರೆ,ಎಲ್ಲೋ ಕೆಲವು ತಲೆಕೆಟ್ಟ ವಕೀಲರ ಮತ್ತು ಮತಿಗೆಟ್ಟ ಪತ್ರಕರ್ತರ ರುಬಾಬಿಗೆ ಇಡೀ ಎರಡು ಸಮುದಾಯಗಳೇ ಪರಸ್ಪರ ಚಿಕ್ಕಮಕ್ಕಳಂತೆ ಚಂಡಿ ಹಿಡಿದರೆ- ಇವರ ನಿಜ 'Professionalism' ಎತ್ತ ಹೋಯಿತು?ಇದರಿಂದ ಸೊಸೈಟಿಗೆ ಯಾವ ಮೆಸೇಜು ರವಾನೆಯಾಗುತ್ತಿದೆ? ನಾಳೆ ಇನ್ಯಾವುದೋ ಇಂಥ ಕಿರಿಕಿರಿ ನಡೆದು ಇನ್ಯಾವುದೋ ವೈದ್ಯರ ಸಮೂಹ, ಇನ್ಮುಂದೆ ನಾವ್ಯಾರೂ 'ಇಂತಿಂಥವರಿಗೆ' ಶುಶ್ರೂಷಣೆ ಮಾಡೋದಿಲ್ಲ ಅಂತ ಘೋಷಣೆ ಮಾಡಿದರೆ ಏನು ಗತಿ ಅಂತ ಯೋಚಿಸಿ ತಲೆಕೆಟ್ಟುಹೋಯಿತು..

sunaath said...

ಮೇಡಮ್,
`ನಾಗರಿಕ’ ಜಗತ್ತು ಯಾವ ಕಾಲದಲ್ಲೂ ಸ್ತ್ರೀಪರ ಸಂಸ್ಕೃತಿಯನ್ನು ತೋರಿಸಿಲ್ಲ. ಭೀಷ್ಮ, ದ್ರೋಣ ಮೊದಲಾದವರು ದ್ರೌಪದಿಯ ವಸ್ತ್ರಾಪಹರಣದಲ್ಲಿ ತಪ್ಪನ್ನು ಕಂಡವರಲ್ಲ. ಸತ್ಯ ಏನೆಂದರೆ, ದಾಸಿಯರ ದುರ್ಬಳಕೆ ಮಹಾಭಾರತದ ಕಾಲದಿಂದಲೂ ನಡೆದು ಬಂದಿದೆ. ಇದು ನಮ್ಮ ‘ಘನತೆವೆತ್ತ ಭಾರತೀಯ ಸಂಸ್ಕೃತಿ’!