ಅಂತೂ ಮಮತಾ ದೀದಿ ತಮ್ಮ ಹಠ ಸಾಧಿಸಿಯೇ ಬಿಟ್ಟರು.
ಮಮತಾ ಬ್ಯಾನರ್ಜಿಯದು ಸರ್ವಾಧಿಕಾರದ ಧೋರಣೆಯೇ?
ಹೌದು ಎನ್ನಲೇ ಬೇಕಾಗುತ್ತದೆ. ಆಕೆ ಹಾಗಿರಲಿಲ್ಲ. ಸರಳ ವ್ಯಕ್ತಿತ್ವದ, ಜನಪರ ಕಾಳಜಿಯ, ಎಲ್ಲರ ಬಾಯಿಯಿಂದ ’ದೀದಿ’ ಎಂದು ಕರೆಯಿಸಿಕೊಳ್ಳುತ್ತಿದ್ದ ಆಕೆ ತನ್ನ”ಪೊರೆಯುವ’ ಗುಣದಿಂದಾಗಿ. ರಾಜಕೀಯೇತರ ಕಾರಣಗಳಿಂದಲೂ ರಾಜಕೀಯದಲ್ಲಿ ಆಸಕ್ತಿ ಇರದವರ ಬಾಯಿಯಿಂದಲೂ ”ತಮ್ಮವಳು’ ಎಂದು ಅನ್ನಿಸಿಕೊಂಡಿದ್ದರು. ಆದರೆ….
ರೈಲ್ವೆ ಸಚಿವರಾಗಿದ್ದ ದಿನೇಶ್ ತ್ರಿವೇದಿ ಮಾಡಿದ್ದಾದರೂ ಏನು? ದೇಶದ ಹಿತದೃಷ್ಟಿಯಿಂದ, ನಷ್ಟದತ್ತ ಚಲಿಸುತ್ತಿರುವ ರೈಲ್ವೆ ಇಲಾಖೆಯನ್ನು ಲಾಭದತ್ತ ಮುನ್ನಡೆಸಲು ಕಿ.ಮೀ.ಗೆ ಹತ್ತು ಪೈಸೆ ದರವನ್ನು ಹೆಚ್ಚಿಸಿದ್ದು. ಇದನ್ನು ಜನಸಾಮಾನ್ಯರು ವಿರೋಧಿಸಲಿಲ್ಲ. ಆದರೆ ದೀದಿ ಕೆರಳಿ ಬಿಟ್ಟರು. ದಿನೇಶ್ ಗೆ ’ರಾಜೀನಾಮೆ ಬಿಸಾಕಯ್ಯ’ ಎಂದು ತಾಕೀತು ಮಾಡಿದರು. ಜನಸಾಮಾನ್ಯರಲ್ಲಿ ಇದ್ದ ದೂರದೃಷ್ಟಿ, ಉದಾರತೆ ಒಬ್ಬ ರಾಜಕಾರಣಿಯಲ್ಲಿ ಇರದಾಯಿತೇ? ಅಷ್ಟು ಸಂಕುಚಿತ ಮನಸ್ಸೇ ಆಕೆಯದೇ?
ಇಷ್ಟಕ್ಕೂ ದಿನೇಶ್ ತ್ರಿವೇದಿ ಯಾರು? ತಮ್ಮದೇ ಪಕ್ಷವಾದ ’ತೃಣಮೂಲ ಕಾಂಗ್ರೇಸ್’ ನ ಪ್ರತಿನಿಧಿಸುತ್ತಿರುವ ಸಚಿವರು. ಅಂತವರನ್ನು ನಿರ್ಧಾಕ್ಷಿಣ್ಯವಾಗಿ, ಯಾವುದೇ ಮುಲಾಜಿಲ್ಲದೆ ಕಿತ್ತೊಗೆಯಬೇಕೆಂದು ಆಕೆ ಬಯಸಿದಾಗ ನನಗೆ ನೆನಪಾಗಿದ್ದು ಅಡಿಗರ”ಭೂಮಿಗೀತ’ದ ಈ ಸಾಲುಗಳು.
’’ತಾಯಿಗೂ ಮಿಗಿಲಾಗಿ ಎದೆಗವಚಿಕೊಂಡಳೋ;
ತಿರುತಿರುಗಿ ತನ್ನ ಬಸಿರಲ್ಲಿಟ್ಟು ನವೆದಳೋ;
ಹಕ್ಕಿ ಕೊರಳನು ಹಿಚುಕಿ ಲಾಲಿ ಹಾಡಿದಳು;
ಸಸಿಕೊರಳ ಕೊಯ್ದು ತಿಂಡಿಯನು ತಿನಿಸಿದಳು.”
ಪೊರೆಯುವ ತಾಯಿಯೇ ಹಿಂಸಿಸುವ ಕ್ರೂರಿಯೂ ಆದಲ್ಲಿ ಮಕ್ಕಳ ಪಾಡೇನು?
ಮಮತಾ ಬ್ಯಾನರ್ಜಿಯೆಂಬ ಒಬ್ಬ ಮಹಿಳಾ ರಾಜಕಾರಣಿಯ ಬಗ್ಗೆ ಸಂಬಂಧಿಸಿದಂತೆ ಈ ಮಾತನ್ನು ನಾನು ಹೇಳುತ್ತಿಲ್ಲ. ರಾಜಕೀಯ ರಂಗದಲ್ಲಿ ಮುಂಚೂಣಿಯಲ್ಲಿರುವ ಕೆಲವು ಮುಖ್ಯ ಮಹಿಳೆಯರು ಹೃದಯಹೀನರಂತೆ ವರ್ತಿಸುತ್ತಿರುವುದೇಕೆ?
ಮಮತಾ ಬ್ಯಾನರ್ಜಿ, ಮಾಯಾವತಿ, ಜಯಲಲಿತಾ, ಉಮಾಭರತಿ, ನಮ್ಮ ರಾಜ್ಯಕ್ಕೆ ಬಂದರೆ ಶೋಭಾ ಕರಂದ್ಲಾಜೆ- ಇವರೆಲ್ಲಾ ನನಗೆ ಮಹಿಳೆಯರಂತೆ ಕಾಣಿಸುವುದೇ ಇಲ್ಲಾ. ಯಾಕೆಂದರೆ ಇವರಲ್ಲಿ ಮಹಿಳಾ ಸಂವೇದನೆಯೇ ಇಲ್ಲಾ. ಇವರೆಲ್ಲಾ ಪುರುಷ ಮನಸ್ಥಿತಿಯ ಮಹಿಳಾ ರಾಜಕಾರಣಿಗಳು. ಹಾಗಾಗಿ ಇವರನ್ನು ಮಹಿಳಾ ರಾಜಕಾರಣಿಗಳೆಂದು ಪ್ರತ್ಯೇಕಿಸುವ ಅಗತ್ಯವೇ ಇಲ್ಲ. ಇವರು ರಾಜಕಾರಣಿಗಳು ಅಷ್ಟೇ.
ಮೇಲೆ ಪ್ರಸ್ತಾಪಿಸಿದ ಮಹಿಳೆಯರಲ್ಲಿ ಇರುವ ಒಂದು ಸಾಮ್ಯತೆಯನ್ನು ಗಮನಿಸಿದ್ದೀರಾ? ಅವರೆಲ್ಲಾ ಮದುವೆಯಾಗದವರು; ಕುಮಾರಿಯರು. ತಾಯ್ತನದ ಅನುಭವವಿಲ್ಲದವರು. ನಮ್ಮೆಲ್ಲರ ಗಮನಕ್ಕೆ ಬಂದಂತೆ ಮಮತಾ ಬ್ಯಾನರ್ಜಿಯನ್ನು ಹೊರತುಪಡಿಸಿ ಉಳಿದವರೆಲ್ಲಾ ಪುರುಷ ಸಂಪರ್ಕದಲ್ಲಿರುವವರು. ಆ ಸಂಪರ್ಕದ ಗೋಜಲುಗಳೇ ಅವರೆಲ್ಲರನ್ನು ಕಠಿಣ ಹೃದಯಿಗಳನ್ನಾಗಿ ಮಾಡಿರಬಹುದೇ? ಮಮತಾ ಬ್ಯಾನರ್ಜಿಯ ಮನದಲ್ಲಿ ಪ್ರೇಮದ ನವಿರು ಭಾವಗಳನ್ನು ಮೂಡಿಸಲು ಯಾವೊಬ್ಬ ಪುರುಷನಿಗೂ ಯಾಕೆ ಸಾಧ್ಯವಾಗಿಲ್ಲ? ಅಥವಾ ಅವರೂ ಕೂಡಾ ಪ್ರೇಮ ವಂಚಿತರಾಗಿ ಈ ಪರಿಯ ಕಾಠಿಣ್ಯಕ್ಕೆ ಪಕ್ಕಾಗಿರಬಹುದೇ?
ಒಟ್ಟಿನಲ್ಲಿ ಇವರೆಲ್ಲಾ ಸಂಸಾರವನ್ನು ಕಟ್ಟಿಕೊಂಡವರಲ್ಲಾ, ಮುನ್ನಡೆಸಿದವರಲ್ಲಾ. ಹಾಗಾಗಿಯೇ ಇವರಲ್ಲಿ ಮಾತೃತ್ವದ ಭಾವನೆಗಳು ಜಾಗೃತಗೊಳ್ಳಲಿಲ್ಲವೇ? ಬೇಕಾದರೆ ಇವರ ಭಾಷಣಗಳನ್ನು ಒಮ್ಮೆ ಕೇಳಿ ನೋಡಿ; ಏರುಧ್ವನಿಯಲ್ಲಿ ಕಿರುಚುವ, ಪ್ರತಿಸ್ಪರ್ಧಿಗಳನ್ನು ಮಾತುಗಳಲ್ಲೇ ರೊಚ್ಚಿಗೆಬ್ಬಿಸುವ ವೈಖರಿಯನ್ನು ನೋಡಿದರೆ ಇವರನ್ನು ಸ್ತ್ರೀಯರೆಂದು ಪರಿಗಣಿಸಲು ಸಾಧ್ಯವೇ?. ಜಯಲಲಿತಾ ಏರು ಧ್ವನಿಯಲ್ಲಿ ಕಿರುಚದಿದ್ದರೂ ಅವರ ಮಾತುಗಳು ಕತ್ತಿಯ ಅಲುಗಿನಂತೆ ಇರಿಯುವುದಿಲ್ಲವೇ? ಮಮತಾ ಬ್ಯಾನರ್ಜಿ ಸ್ವಕೇಂದ್ರಿತ ವ್ಯಕ್ತಿತ್ವ ಹೊಂದಿರುವುದು ಅವರ ಬಹುದೊಡ್ಡ ನೂನ್ಯತೆಯಾಗಿದ್ದರೆ ಉಳಿದವರೆಲ್ಲಾ ಭ್ರಷ್ಟಾಚಾರದ ಮೂಟೆಗಳೇ.
ಮೇಲಿನ ಮಹಿಳಾಮಣಿಗಳ ಮನೋಭಾವಕ್ಕೆ ಹೊಂದಿಕೊಳ್ಳುವ ಇನ್ನೊಬ್ಬ ಪ್ರಭಾವಿ ಮಹಿಳಾ ರಾಜಕಾರಣಿಯಿದ್ದಾರೆ. ಅವರೇ ಸುಷ್ಮಾ ಸ್ವರಾಜ್. ಅವರು ಸಂಸಾರವನ್ನು ಕಟ್ಟಿಕೊಂಡವರು. ಆದರೂ ಅವರು ಪುರುಷರಂತೆ ಯೋಚಿಸುವುದು ಮಾತ್ರವಲ್ಲ ಅದಕ್ಕೂ ಒಂದು ಹೆಜ್ಜೆ ಮುಂದೆ ಹೋಗಿ ಪುರುಷ ಪರವಾಗಿ ಷಡ್ಯಂತರಗಳನ್ನೂ ಮಾಡಬಲ್ಲ ಶಕ್ತಳೀಕೆ.
ಇವರೆಲ್ಲರ ಮಧ್ಯೆ ಮಾತೃಹೃದಯದ ಇಬ್ಬರು ಮಹಿಳೆಯರು ನನ್ನ ಕಣ್ಣಿಗೆ ಗೋಚರಿಸುತ್ತಾರೆ. ಅವರು ಕಾಂಗ್ರೇಸಿನ ಅಧ್ಯಕ್ಷೆ ಸೋನಿಯಾ ಗಾಂಧಿ ಮತ್ತು ದೆಹಲಿಯ ಮುಖ್ಯಮಂತ್ರಿ ಶೀಲದೀಕ್ಷಿತ್. ಒಬ್ಬ ತಾಯಿಯಲ್ಲಿರಬೇಕಾದ ಸಹನೆಯ ಗುಣ ಇವರಲ್ಲಿದೆ. ಶೀಲ ದೀಕ್ಷಿತ್ ಸತತ ಮೂರನೆಯ ಬಾರಿ ದಿಲ್ಲಿಯ ಮುಖ್ಯಮಂತ್ರಿ ಗಾದಿಯನ್ನೇರಿದವರು. ಕಾಂಗ್ರೇಸಿನಲ್ಲಿ ಸೋನಿಯಾಗೆ ಪರ್ಯಾಯ ನಾಯಕರಿಲ್ಲ. ಇವರಿಬ್ಬರೂ ಸಂಸಾರವನ್ನು ಕಟ್ಟಿಕೊಂಡವರು ಎಂಬುದಿಲ್ಲಿ ಮುಖ್ಯವಾದುದು.
ಪ್ರಕೃತಿ ನಮ್ಮನ್ನು ಹೆಣ್ಣಾಗಿ ಸೃಷ್ಟಿಸಿದೆ. ಅದರ ಬಗ್ಗೆ ನಮಗೆ ಅಭಿಮಾನ ಗೌರವಗಳಿರಬೇಕು. ಪುರುಷ ಪ್ರಧಾನ ಸಮಾಜ ನಮ್ಮ ಮೇಲೆ ಹೇರಿರುವ ಕಟ್ಟುಪಾಡುಗಳನ್ನು ವಿರೋಧಿಸೋಣ. ಅದನ್ನು ಮೀರುವ ಪ್ರಯತ್ನ ಮಾಡೋಣ. ಆದರೆ ಪುರುಷರಂತೆ ಆಗಲು ಹೊರಟರೆ ಅವರಲ್ಲಿ ಮತ್ತು ನಮ್ಮಲ್ಲಿ ಏನು ವ್ಯತ್ಯಾಸ ಉಳಿಯುತ್ತದೆ?
ಅಧಿಕಾರಕ್ಕಾಗಿ ಹಪಹಪಿಸುತ್ತಿರುವ ಯಡಿಯೂರಪ್ಪನವರ ಬೆನ್ನಿಗೆ ನಿಂತಿರುವ ಶೋಭಾ ಕರಂದ್ಲಾಜೆ ಕಳೆದ ವಾರ ತಾನೇ ’ನಾವೆಲ್ಲಾ ಸಂಗೊಳ್ಳಿ ರಾಯಣ್ಣ’ರಾಗಬೇಕು ಎಂದು ಗುಡುಗಿದ್ದರು. ಈಕೆಯಲ್ಲಿ ಮತ್ತು ಯಡಿಯೂರಪ್ಪನವರಲ್ಲಿ ಹೊರನೋಟದ ವ್ಯತ್ಯಾಸ ಬಿಟ್ಟರೆ ಇನ್ಯಾವ ವ್ಯತ್ಯಾಸವೂ ನನಗೆ ಕಾಣುತ್ತಿಲ್ಲ.
ಮೊನ್ನೆ ಮೊನ್ನೆ ನಮ್ಮ ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪನವರು ತಮ್ಮ ಹುಟ್ಟುಹಬ್ಬವನ್ನು ಆಚರಿಸಿಕೊಂಡರು. ಅಂದು ಅವರು ದೃಷ್ಟಿಹೀನರಾದ ಮಕ್ಕಳಿಗೆ ಚಾಕುವಿನಲ್ಲಿ ಕೇಕ್ ತಿನ್ನಿಸಿದ ರೀತಿಯನ್ನು ದೃಶ್ಯ ಮಾಧ್ಯಮದಲ್ಲಿ ನೋಡಿ ಒಂದು ಕ್ಷಣ ನಡುಗಿ ಹೋದೆ. ಹೆಣ್ಣಿನ ಅಂತಃಕರಣವಿಲ್ಲದ, ಮಾತೃತ್ವದ ಸ್ಪರ್ಶವಿಲ್ಲದ ಯಾವ ಅಧಿಕಾರವೂ ಎಂದಿದ್ದರೂ ಅಪಾಯಕಾರಿಯೇ.!
[ ವಿಜಯಕರ್ನಾಟಕದ ’ಅನುರಣನ’ ಕಾಲಂನಲ್ಲಿ ಪ್ರಕಟವಾದ ಲೇಖನ ]
2 comments:
ಉಷಾ ಮೇಡಮ್,
ನಿಮ್ಮ ಅಭಿಪ್ರಾಯದ ಮೇರೆಗೆ, ಹೆಣ್ಣು ಹಾಗು ಗಂಡಿನಲ್ಲಿ instinctual difference ಇದೆ ಎಂದಾಯ್ತು. ನನಗೇನೋ ಇದು ಸರಿ ಎನ್ನಿಸುವದಿಲ್ಲ. ಗಂಡು ಹಾಗು ಹೆಣ್ಣಿನ ನಡುವೆ ಕಾಣಿಸುವ ಮಾನಸಿಕ ಭಿನ್ನತೆಗೆ social conditioningಏ ಕಾರಣ ಎಂದು ನನಗೆ ಅನಿಸುತ್ತದೆ.
ನಿಮ್ಮ ಲೇಖನ ಓದಿದೆ. ಯಾರೂ ಕೀಳಲ್ಲ.ಮೇಲೂ ಇಲ್ಲ. ಎಲ್ಲರೂ ಸಮಾನರೆ. ಅವರವರ ನಡವಳಿಕೆ ತಕ್ಕಡಿಯಲ್ಲಿ ತೂಗಿಸುವಂತಹದ್ದು. ಅದಕ್ಕೆ ತಕ್ಕ ಉದಾಹರಣೆಯನ್ನು ಲೇಖನದ ಆಯ್ದ ಅಲ್ಲಲ್ಲಿ ನೋಡಿದೆ.
ಪುರುಷ ಪ್ರಧಾನ ಸಮಾಜ ನಮ್ಮ ಮೇಲೆ ಹೇರಿರುವ ಕಟ್ಟುಪಾಡುಗಳನ್ನು ವಿರೋಧಿಸೋಣ. ಅದನ್ನು ಮೀರುವ ಪ್ರಯತ್ನ ಮಾಡೋಣ. ಆದರೆ ಪುರುಷರಂತೆ ಆಗಲು ಹೊರಟರೆ ಅವರಲ್ಲಿ ಮತ್ತು ನಮ್ಮಲ್ಲಿ ಏನು ವ್ಯತ್ಯಾಸ ಉಳಿಯುತ್ತದೆ? ನಿಮ್ಮ ಮಾತನ್ನು ಮನಸಾರೆ ಮೆಚ್ಚುತ್ತೇನೆ.
ನನ್ನಲ್ಲಿ ಕೆಲವು ಪ್ರಶ್ನೆಗಳು ಶಾಲೆಯ ತರಗತಿ ಕೋಣೆಯಲ್ಲಿ ಕುಳಿತ ಬಾಲಕನಂತೆ ಏಳುತ್ತಿವೆ. ಮನೆಯಲ್ಲಿ ಅಮ್ಮ ಬೆಳಿಗ್ಗೆ ಶಾಲೆಗೆ ಬರುವ ತಲೆಗೆ ಎಣ್ಣೆ ಹಾಕಿ ಬುತ್ತಿ ಕಟ್ಟಿಕೊಟ್ಟ ನೆನಪು. ಅದೇ ದಿನ ಶಾಲೆಯಿಂದ ಮನೆಗೆ ಹೋದಾಗ " ಏನೋ ಪಾಠವೆಲ್ಲಾ ಸರಿಯಾಗಿ ಓದಿದ್ದೀಯೇನೋ? ಓದಿದ ಪಾಠ ಬಾ ಇಲ್ಲಿ ಹೇಳು?" ಎಂದ ಅಪ್ಪನ ಪ್ರಭುತ್ವದ ಕೋಪ, ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದಾಗ ಹೆಚ್ಚೆನಿಸಿತು. ಮಾನವನ ಕಟ್ಟು ಕಟ್ಟಳೆಗಳನ್ನು ನಿರ್ಧರಿಸಲು ಪ್ರಕೃತ್ತಿಗೆ ಹಕ್ಕಿದೆ. ಅದೇ ರೀತಿ ಹೆಣ್ಣು ಜಗತ್ತು ಗಂಡಿನ ಜಗತ್ತಿಲ್ಲದೆ ಅಪೂರ್ಣ. ಅದೇ ರೀತಿ ಗಂಡಿನ ಜಗತ್ತು ಹೆಣ್ಣಿನ ಜಗತ್ತಿಲ್ಲದೆ ಅಪೂರ್ಣ. ಇಲ್ಲ ಗಂಡಿಲ್ಲದೆಯೋ ಹೆಣ್ಣು ಬದುಕುತ್ತೇನೆ ಅನ್ನೋದು ತಾಯ್ತನಕ್ಕೆ ಸಡ್ಡು ಹೊಡೆಯುವ ಪ್ರಶ್ನೆ. ಆಗಸದಿಂದ ಬೆಂಕಿ ಮಳೆ ಸುರಿಯುವಾಗ ಈ ರೀತಿಯ ಮಾತನ್ನು ಧರಣಿ ಹೇಳಿದರೆ ನಭೋ ಮಂಡಲದಲ್ಲಿ ಕಿಂಚಿತ್ತು ಜೀವ ರೇಣುವಿಗೆ ಅವಕಾಶವಿಲ್ಲ. ಪ್ರಭುತ್ವ ಅನ್ನೋದು ಮಾತೃತ್ವಕ್ಕೂ ಉಂಟು. ಪಿತೃತ್ವಕ್ಕೂ ಉಂಟು. ಅದಿಲ್ಲದೆ ಮುದ್ದಿಸಿದ ಮಕ್ಕಳು ಹೆತ್ತವರನ್ನು ಭಿಕ್ಷಾಟನೆಗೆ ಬಿಡುವಾಗ ನಮ್ಮಂತವರು ಪತ್ರಿಕೆಗಳಲ್ಲಿ ಹಾಕಿ ಹೆತ್ತಕರುಳಿನ ಬಗ್ಗೆ ಅನುಕಂಪ ಸೂಚಿಸುವುದು ಮಾತ್ರ ಪುಟ ತುಂಬಿಸುವ ಕೆಲಸ.
Post a Comment