ಬೋಳು ಮರದಡಿಯಲ್ಲಿ ನಿಂತಿದ್ದೆವು.
ಮಾತಿನ ಸೇತುವೆ ಶಿಥಿಲಗೊಳ್ಳುತ್ತಿತ್ತು.
ಅವನಂದ; ನಿನ್ನಲ್ಲೂ ಇದೆ ಅಲ್ಪಸ್ವಲ್ಪ ಒಳ್ಳೆತನ.
ಕಣ್ಣು ಮಂಜಾಯಿತು, ತಲೆ ತಗ್ಗಿಸಿದೆ.
ಮರು ಮಾತಾಡಲಿಲ್ಲ.
ಓಡಿ ಹೋಗಿ ಏರು ಹಾದಿಯಲ್ಲಿ ನಡೆಯುತ್ತಿರುವ ಮಕ್ಕಳನ್ನು
ಕೂಗಿ ಕರೆದೆ.
ಹಿಂತಿರುಗಿದವು, ಎರಡು ಹೆಜ್ಜೆ ಹಿಂದೆ ಬಂದು ”ಏನಮ್ಮಾ?’
ಅಂದವು
ಏನಿಲ್ಲಾ.. ಅಂದು ಸ್ವಲ್ಪ ಹೊತ್ತು ಅಲ್ಲೇ ನಿಂತೆ.
ಮತ್ತೆ ಮತ್ತೆ ಹಿಂತಿರುಗಿ ನೋಡುತ್ತಾ ನಡಿಗೆ
ಮುಂದುವರಿಸಿದವು.
ಅಂಗೈ ನೋಡಿಕೊಂಡೆ; ಒದ್ದೆಯಾಗಿತ್ತು..
ಸಿರಿವಂತರ ನಾಲಗೆಯೆಂಬುದು ಎರಡಲುಗಿನ ಕತ್ತಿ.
ಕತ್ತರಿಸಲು ನಿಂತವರಿಗೆ ನಾನದರೇನು..ನೀನಾದರೇನು?
ಹಿಂದೊಬ್ಬ ರಸ್ತೆಯಲ್ಲೇ ಕಾಲಪ್ಪಳ್ಳಿಸಿದ್ದ.
ಮತ್ತೆ ಮನದಂಗಳಕ್ಕೆ ಬಂದು ಹೇಳಿದ್ದ ’ನೀನೆಷ್ಟು
ಒಳ್ಳೆಯವಳು!’
ಹಾಗನ್ನುತ್ತಲೇ ಕಾಲನ ತೆಕ್ಕೆಯಲಿ ಕರಗಿಹೋದ.
ಈಗ ಇವನು ಹೇಳುತ್ತಿದ್ದಾನೆ., ನಿನ್ನಲ್ಲೂ ಇದೆ
ಅಲ್ಪಸ್ವಲ್ಪ ಒಳ್ಳೆತನ.
ಇಬ್ಬರೂ ಅಕ್ಷರ ಸ್ನೇಹಿತರು; ಕಂಡಿಲ್ಲ ಮಾತಾಡಿಲ್ಲ.
ಯಾರ ಮಾತನ್ನು ನಂಬುವುದು?
ಎದೆ ಮೇಲೆ ಕೈಯಿಟ್ಟು ಕ್ಷಣಕಾಲ ಕಣ್ಮುಚ್ಚಿದೆ.
ಒಳಗಿನ ಆಕಾಶಕ್ಕೆ ಯಾವ ಅಳತೆಗೋಲಿನ ಹಂಗು?
ಆದರೂ ಒಂದು ಸಣ್ಣ ಚಲನೆ ನನ್ನನ್ನೀಗ ಆಳುತ್ತಿದೆ!
ಒಳಗಿನ ಆಕಾಶಕ್ಕೆ ಯಾವ ಅಳತೆಗೋಲಿನ ಹಂಗು?
ಆದರೂ ಒಂದು ಸಣ್ಣ ಚಲನೆ ನನ್ನನ್ನೀಗ ಆಳುತ್ತಿದೆ!
4 comments:
ಮಾತನ್ನು ನಂಬುವುದು ಎಂದರೆ ಅಳೆಯಲಾಗದ ಮನದಾಳ ತಿಳಿದಂತೆ ಭ್ರಮಿಸುವುದು.. ಒಮ್ಮೊಮ್ಮೆ ಕೆಲವು ಮಾತುಗಳು ನಿಜವೆನಿಸಿದಾಗ ಮನದಾಳ ತಿಳಿದಂತ ಭ್ರಮೆ, ಅದು ಸುಳ್ಳಾದಾಗ ಸೋಲು
ತುಂಬ ಉತ್ತಮ ಕವನ.
ಬದುಕೇ ಎರಡಲುಗಿನ ಕತ್ತಿ!
"ಸಿರಿವಂತರ ನಾಲಗೆಯೆಂಬುದು ಎರಡಲುಗಿನ ಕತ್ತಿ.
ಕತ್ತರಿಸಲು ನಿಂತವರಿಗೆ ನಾನದರೇನು..ನೀನಾದರೇನು?"
ಇದಂತೂ ಸರ್ವಕಾಲಿಕ ಸತ್ಯ...
shared at:
https://www.facebook.com/groups/191375717613653?view=permalink&id=435285689889320
ನಿಮ್ಮ ಮೂವರ ಕಾಮೆಂಟ್ ನೋಡಿ ಖುಷಿಯಯ್ತು.ಅದರಲ್ಲಿಯೂ ಸುನಾಥ ಕಾಕರ ಪ್ರೋತ್ಸಾಹ ಕಂಡು ಈ ಕವನವನ್ನು ಪೇಸ್ ಬುಕ್ ನಲ್ಲಿ ಹಂಚಿಕೊಂಡೆ.
ಮೂವರಿಗೂ ಮತ್ತೊಮ್ಮೆ ಧನ್ಯವಾದಗಳು.
Post a Comment