ಕಳೆದ ವಾರವಿಡೀ ಬೆಂಗಳೂರು ನಗರದಲ್ಲಿ ಮುತ್ತು ಅರ್ಥಾತ್
ಕಿಸ್ ಸುದ್ದಿಯಲ್ಲಿತ್ತು.
ನಾನಾಗ ಬೆಂಗಳೂರಿನಲ್ಲಿರಲಿಲ್ಲ. ಹಿಮಾಲಯಕ್ಕೆ
ಮುತ್ತಿಕ್ಕಲು ಚಾರಣಕ್ಕೆ ತೆರಳಿದ್ದೆ.
ಅಲ್ಲಿಂದ ಬಂದಮೇಲೆ ಇದೇನಿದು ಪ್ರಳಯಾಂತಕ ಸುದ್ದಿ ಅಂತ
ಪೇಸ್ಬುಕ್ ಸೇರಿದಂತೆ ಅಂತರ್ಜಾಲಕ್ಕೊಂದು ಸುತ್ತು ಹಾಕಿ ಬಂದೆ.
ಕೆಲವು ಪತ್ರಿಕೆಗಳನ್ನು, ಅಂಕಣಗಳನ್ನು ಓದಿದೆ.
’ಕಿಸ್ ಅಫ್ ಲವ್’’ ಭಯಂಕರ ಸುದ್ದಿ ಮಾಡಿತ್ತು; ಅದು
ನೈತಿಕ ಪೋಲಿಸ್ ಗಿರಿಯ ವಿರುದ್ಧದ ಪ್ರತಿಭಟನೆ ಎಂಬುದು ಗೊತ್ತಾದರೂ ಎಲ್ಲಿಯೂ ಅದರ ಸ್ವರೂಪದ ಬಗ್ಗೆ ಸ್ಪಷ್ಟ ಮಾಹಿತಿ
ದೊರೆಯಲಿಲ್ಲ. ಹಾಗಾಗಿ ನಾನು ಯೂಟ್ಯೂಬ್ ಎಂಬ ವಿಷುವಲ್ ಕೊಳಕ್ಕೆ ದುಮುಕಿದೆ. ಅಲ್ಲಿ ಸಿಕ್ಕ
ಪ್ರಥಮ ಮಾಹಿತಿ ಪ್ರಕಾರ ಅದು ಪ್ರಣಯೋನ್ಮಾದದ [ಇರೋಟಿಕ್ ಲವ್] ಮುತ್ತಾಗಿತ್ತು. ಅಂತಹ ಬಹಿರಂಗ
ಮುತ್ತಿಗೆ ಈ ಕಾಲಘಟ್ಟದಲ್ಲಿ ನಾಗರಿಕ ಸಮಾಜದಿಂದ ಬೆಂಬಲ ನಿರೀಕ್ಷಿಸುವುದು ಸಾಧ್ಯವಿಲ್ಲದ ಮಾತು.
ಆದರೆ...
ನಾನು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯವಳು. ಅಲ್ಲಿ
ಮೋರಲ್ ಪೋಲಿಸಿಂಗ್ ಹೇಗೆ ನಡೆಯುತ್ತಿದೆಯೆಂಬುದರ ಬಗ್ಗೆ ನನಗೆ ಅಲ್ಪಸ್ವಲ್ಪ ಜ್ನಾನವಿದೆ. ಹಾಗಾಗಿ
ಮೋರಲ್ ಪೋಲಿಸಿಂಗ್ ವಿರುದ್ಧ ಯಾವುದೇ ರೀತಿಯ ಪ್ರತಿಭಟನೆ ನಡೆದರೂ ಅದಕ್ಕೆ ನನ್ನ ಬೆಂಬಲವಿದ್ದೇ ಇದೆ.
ಅದರೆ ’ಕಿಸ್ ಆಪ್ ಲವ್’ ಬಗ್ಗೆ..?
ಕೇರಳದಲ್ಲಿ ಹುಟ್ಟಿದ್ದ ಈ ಪ್ರತಿಭಟನೆ ರಾಷ್ಟ್ರದಾದ್ಯಂತ ಸುದ್ದಿ ಮಾಡಿತ್ತು. ಇದಕ್ಕೆ
ಬೆಂಗಳೂರಿನ ಯುವ ಜನತೆಯೂ ಹೊರತಾಗಲಿಲ್ಲ. ಆದರೆ ಬೆಂಗಳೂರಿನಲ್ಲಿ ರಚಿತ ತನುಜಾ ಎಂಬಾಕೆಯ
ನೆತ್ರುತ್ವದಲ್ಲಿ ನಡೆಯಲುದ್ದೇಶಿಸಿದ್ದ ’ಕಿಸ್ ಅಪ್ ಲವ್’ ಪ್ರತಿಭಟನೆಗೆ ಸರಿಯಾದ ರೂಪರೇಷೆಗಳಿರಲಿಲ್ಲ.
ಹಾಗಿದ್ದರೂ ಅದಕ್ಕೆ ಸರಕಾರದಿಂದ ಯಾವುದೇ ವಿರೋಧವಿರಲಿಲ್ಲ. ಆದರೆ ಪೋಲಿಸ್ ಇಲಾಖೆ ಅನುಮತಿಯನ್ನು
ನೀಡಲಿಲ್ಲ. ಮುತಾಲಿಕ್ ಮತ್ತು ಅವರ ಸಮಾನಾಸಕ್ತ ಸಂಘಟನೆಗಳು ಇದನ್ನು ಬಲವಾಗಿ ವಿರೋಧಿಸಿದ್ದವು. ಆ
ಕಾರಣದಿಂದಲೋ ಏನೋ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ದ್ರುಷ್ಟಿಯಿಂದ ನಗರ ಪೋಲಿಸ್ ಆಯುಕ್ತರು
ಪ್ರತಿಭಟನೆಗೆ ಅವಕಾಶ ನೀಡಲಿಲ್ಲ.
ಪ್ರತಿಭಟನೆಯನ್ನು ನಾವು ಹಿಂತೆಗೆದುಕೊಂಡಿಲ್ಲ. ಮುಂದೆ
ಸೂಕ್ತ ಬದಲಾವಣೆಯೊಂದಿಗೆ ಮತ್ತೆ ಬರುತ್ತೇವೆ ಎಂದು ಇದರ ಆಯೋಜಕರು ಹೇಳಿದ್ದಾರೆ. ಬರಲಿ, ಪ್ರಜಾಪ್ರಭುತ್ವ
ವ್ಯವಸ್ಥೆಯನ್ನು ಒಪ್ಪಿಕೊಂಡ ನಮ್ಮ ದೇಶದಲ್ಲಿ ಪ್ರತಿಭಟನೆಯೆಂಬುದು ಸಾಂವಿಧಾನಿಕ ಹಕ್ಕು. ಆದರೆ ಆ
ಹಕ್ಕನ್ನು ಚಲಾಯಿಸುವಾಗ ಕೆಲವು ಕರ್ತವ್ಯಗಳೂ ಅದರೊಳಗೆ ಮಿಳಿತವಾಗಿರುತ್ತದೆ.
ಈಗ ಮುತ್ತಿನ ಮೋಹ ಕತೆಯ ಜಾಲಕ್ಕೆ ಬರೋಣ.
ಮುತ್ತಿಕ್ಕುವುದು ಪ್ರೀತಿಯ ಸಂಕೇತ, ಅದರಲ್ಲಿ
ಅನುಮಾನವಿಲ್ಲ. ಅಂತಹ ಪ್ರೀತಿಯನ್ನೇ ಪ್ರತಿಭಟನೆಯ ಸಂಕೇತವಾಗಿ, ದ್ವೇಷದ ಅಸ್ತ್ರವಾಗಿ
ಬಳಸಿಕೊಳ್ಳಬಹುದೆ? ಯಾಕಿಲ್ಲ. ಮಹಾಭಾರತವನ್ನೇ ಉದಾಹರಣೆಯನ್ನಾಗಿ ತೆಗೆದುಕೊಳ್ಳಿ. ಗಾಂಧಾರಿ
ಧ್ರುತರಾಷ್ಟ್ರನನ್ನು ಮದುವೆಯಾಗಿ ಹಸ್ತಿನಾಪುರಕ್ಕೆ ಬರುತ್ತಾಳೆ. ಆಕೆಯ ಜೊತೆ ತಮ್ಮನಾದ ಶಕುನಿಯು ಬರುತ್ತಾನೆ. ಇಲ್ಲಿ
ಬಂದಾಗ ಆತನಿಗೆ ತಿಳಿಯುತ್ತದೆ, ತನ್ನ ಭಾವ ಹುಟ್ಟು ಕುರುಡನೆಂದು. ಆತನಿಗೆ ಹೀಗೆ ಸುಳ್ಳು ಹೇಳಿ
ತನ್ನ ಪ್ರಿಯ ತಂಗಿಯನ್ನು ಹಸ್ತಿನಾಪುರದ ಸೊಸೆಯನ್ನಾಗಿಸಿದ ಬೀಷ್ಮನ ಮೇಲೆ ಅಸಾಧ್ಯವಾದ ಕೋಪ ಬಂದು
ಈ ವಂಶದ ಮೇಲೆ ಸೇಡು ತೀರಿಸಿಕೊಳ್ಳಬೇಕೆಂದು ಮನದಲ್ಲಿಯೇ ಸಂಕಲ್ಪ ಮಾಡಿ ಇಲ್ಲಿಯೇ ಉಳಿದು
ಬಿಡುತ್ತಾನೆ. ತಾಯ್ನಾಡಿಗೆ ಹಿಂದಿರುಗುವುದೇ ಇಲ್ಲ. ತನ್ನ ಸೋದರಳಿಯಂದಿರನ್ನು ಅಪಾರವಾಗಿ
ಪ್ರೀತಿಸುತ್ತಾ ಅವರ ಮನದಲ್ಲಿ ದಾಯಾದಿ ಮತ್ಸರವನ್ನು ತುಂಬುತ್ತಾ ಹೋಗುತ್ತಾನೆ. ಆ ವಿಷಬೀಜವೇ
ಮಹಾಭಾರತ ಸಂಗ್ರಾಮಕ್ಕೂ ಕಾರಣವಾಗಿ ಕುರುಕುಲವೇ ನಿರ್ನಾಮವಾಗಿ ಹೋಗುತ್ತದೆ.
ಚಾಣಕ್ಯನ ಕಾಲದಲ್ಲಿ ವಿಷಕನ್ಯೆಯರ ಪ್ರಸ್ತಾಪ ಬರುತ್ತದೆ.
ಅವರದು ಮ್ರುತ್ಯು ಚುಂಬನ.
ಪ್ರತಿಭಟನೆ ಹೇಗೆ ಬೇಕಾದರೂ ಇರಬಹುದು..ಅನ್ಯರ, ಮುಖ್ಯವಾಗಿ
ಈ ವಿಷಯಕ್ಕೆ ಸಂಬಂಧಪಟ್ಟವರ ಗಮನ ಸೆಳೆಯುವುದೇ ಅದರ ಉದ್ದೇಶವಾಗಿರುತ್ತದೆ. ಕಿಸ್ ಅಫ್ ಲವ್ ಹಿನ್ನೆಲೆಯಲ್ಲಿ ನಾನು ೨೦೦೮ರಲ್ಲಿ
ಮಣಿಪುರದ ಮಹಿಳೆಯರು ನಡೆಸಿದ ಬೆತ್ತಲೆ ಪ್ರತಿಭಟನೆಯನ್ನು ನೋಡಿದೆ. ತಮ್ಮ ಮೇಲೆ ಭಾರತೀಯ ಸೈನಿಕರು
ನಡೆಸುತಿದ್ದ ರೇಪ್ ಮತ್ತು ಲೈಂಗಿಕ ದೌರ್ಜ್ಯನ್ಯವನ್ನು ವಿರೋಧಿಸಿ ನಡೆಸಿದ ಅಂದೋಲನವಾಗಿತ್ತದು.ಈ
ಎರಡೂ. ಪ್ರತಿಭಟನೆಯ ಉದ್ದೇಶದಲ್ಲಿ ಅಂತಹ ವ್ಯತ್ಯಾಸವೇನೂ ನನಗೆ ತೋರಲಿಲ್ಲ. ಮಣಿಪುರದ ಮಹಿಳೆಯರು
ಸಂಪೂರ್ಣ ಬೆತ್ತಲಾಗಿದ್ದರು. ಅವರ ಮುಂಬದಿಯನ್ನು ಪ್ರತಿಭಟನಾ ಬ್ಯಾನರ್ ಗಳು ಮರೆ ಮಾಡಿದ್ದವು.
ಆದರೆ ಹಿಂಬದಿ ಕ್ಯಾಮಾರಗಳಿಗೆ ಮುಕ್ತವಾಗಿತ್ತು. ಅದು ಅಂತರಾಷ್ಟ್ರೀಯ ಮಟ್ಟದಲ್ಲಿ ದೊಡ್ಡ ಸುದ್ದಿ
ಮಾಡಿತ್ತು. ಯುಟ್ಯೂಬ್ ನಲ್ಲಿರುವ ಇದರ ಕ್ಲಿಪಿಂಗ್ಸ್ ಗಳನ್ನು ನೋಡಿದರೆ ಆ ಸ್ತ್ರೀಯರ ಆಕ್ರಂದನ,
ಪ್ರತಿಭಟನೆಯ ಕಾವು ನಮ್ಮ ಎದೆಯಾಳಕ್ಕೂ ಇಳಿಯುತ್ತದೆ..
ಆದರೆ ಈ ಕಿಸ್ ಅಫ್ ಲವ್?
ಮುತ್ತಿಕ್ಕಿದ ಮಾತ್ರಕ್ಕೇ ಶಾಪವಿಮೋಚನೆಗೊಂಡ ಕಪ್ಪೆ
ರಾಜಕುಮಾರನ ಕಥೆಯನ್ನು ನೀವು ಕೇಳಿಯೇ ಇರುತ್ತೀರಿ.
ಇಂಥ
ಜೀವ ಚೈತನ್ಯದ ಸಂಕೇತವಾದ ಮುತ್ತಿನ ಮೂಲಕವೇ
ನೈತಿಕ ಪೋಲಿಸ್ ಗಿರಿಯನ್ನು ವಿರೋಧಿಸುವ ಆಲೋಚನೆಯೇ ವಿನೂತವಾದುದು. ಮತ್ತು ಮೋಹಕವಾದುದು. ಅದರೆ ನಾವಿಲ್ಲಿ
ತಿಳಿದುಕೊಳ್ಳಬೇಕಾದುದು.ಮುತ್ತಿಕ್ಕುವ ಕ್ರಿಯೆಗೆ ಹಲವು ಆಯಾಮಗಳಿವೆ; ಸಂಕೇತಗಳಿವೆ.
ಬೆತ್ತಲೆಯೆಂಬುದು ನಿರ್ವಾಣವನ್ನು ಸೂಚಿಸುತದೆ.
ಅಧ್ಯಾತ್ಮದ ನೆಲೆಯಲ್ಲಿ ಬೆತ್ತಲೆಯೂ ಪೂಜನೀಯವಾದುದು. ಅಧ್ಯಾತ್ಮದ ಆವರಣದಿಂದ ಹೊರಬಂದರೆ ಎರಡು
ವ್ಯಕ್ತಿಗಳ ಖಾಸಗಿ ಆವರಣದಲ್ಲಿ ಅದು ಶ್ರುಂಗಾರಮಯ. ಅದರೆ ಅದೇ ನಾಗರಿಕ ಸಮಾಜದೆದುರಿನಲ್ಲಿ ಬೆತ್ತಲೆ
ಪ್ರದರ್ಶನವೆಂಬುದು ಅಶ್ಲೀಲ. ಅದು ನೋಡುವ ಕಣ್ಣುಗಳ ಮೇಲೆ ನಿಧಾರಿತವಾಗುತ್ತದೆ. ಲೈಂಗಿಕ ವರ್ತನೆಗಳೆಲ್ಲವೂ
ಅಶ್ಲೀಲತೆಯೊಡನೆ ಥಳಕು ಹಾಕಿಕೊಂಡಿರುತ್ತದೆ.
ಸಾರ್ವಜನಿಕವಾಗಿ ಮುತ್ತಿಕ್ಕುವುದು ತಪ್ಪೇ? ಯಾಕೆ
ತಪ್ಪಾಗುತ್ತದೆ. ಖಂಡಿತಾ ತಪ್ಪಲ್ಲ.ಅದರೆ ಯಾರು, ಎಲ್ಲಿಗೆ ಮುತ್ತಿಕ್ಕುತ್ತಾರೆ ಅದು ಮುಖ್ಯ.
ಯಾಕೆಂದರೆ ಮುತ್ತಿಕ್ಕುವ ಕ್ರಿಯೆ ಹಲವು ಅರ್ಥಗಳನ್ನು ಧ್ವನಿಸುತ್ತದೆ.
ಮುತ್ತಿಕ್ಕುವುದು ಅಂದರೇನು? ಅದು ಇಬ್ಬರು ವ್ಯಕ್ತಿಗಳ
ನಡುವಿನ ಸಾಮೀಪ್ಯವನ್ನು, ಸ್ಪರ್ಶವನ್ನು ಹೇಳುತ್ತದೆ. ಪ್ರೇಮಿಗಳಲ್ಲಾದರೆ ಅದು ಪ್ರಣಯದ ಸಂಕೇತ
ದೈಹಿಕ ಮಿಲನದ ಕೀಲಿ ಕೈ. ಆದರೆ ಅದಕ್ಕೂಮೀರಿ ಅದು ಮನಸು ಹರಿಯುವ ಪ್ರಕ್ರಿಯೆ. ಏಕಾಂತದಲ್ಲಿ ಅದು
ಶ್ರುಂಗಾರಮಯ.. ಅದುವೇ ಬಹಿರಂಗಗೊಂಡು ವಿಪ್ರಲಂಭ ಶ್ರುಂಗಾರವಾದಾಗ ಅದು
ಅಸಭ್ಯತೆಯೆನಿಸಿಕೊಳ್ಳುತ್ತದೆ. ಅಶ್ಲೀಲವೂ ಎನಿಸಬಹುದು.ಅಂದರೆ ಶೀಲ-ಅಶ್ಲೀಲವೆಂಬುದು ನೋಡುವ
ನೋಟದಲ್ಲಿರುತ್ತದೆ, ನಮ್ಮ ನಡವಳಿಕೆಯಲ್ಲಿರುತ್ತದೆ.
ಕೆಲವು ಉದಾಹರಣೆಗಳ ಮೂಲಕ ಇದನ್ನು ಇನ್ನೂ ಸ್ಪಷ್ಟವಾಗಿ
ಹೇಳಬಹುದೆನಿಸುತ್ತದೆ. ಹೇಳಬಹುದೆನಿಸುತ್ತದೆ. ಒಂದು ಸುಂದರವಾದ ಹೂವಿನಂತಹ ಮಗು ಅಂಬೆಗಾಲಿಡುತ್ತಾ
ನನ್ನೆದುರು ಹಾದು ಹೋದರೆ ನಾನು ಮಂಡಿಯೂರಿ ಕುಳಿತು ತೋಳು ಚಾಚಿ ಅ ಮಗುವನ್ನು ನನ್ನೆದೆಗೆ
ಒತ್ತಿಕೊಳ್ಳುತ್ತೇನೆ. ಹಗುರವಾಗಿ ಅದರ ಕೆನ್ನೆಗೆ ನನ್ನ ತುಟಿ ಸಾಗಿಸುತ್ತೇನೆ. ಆದರೆ ಒಂದು
ವರ್ಷದವರೆಗಿನ ಯಾವುದೇ ಮಗುವನ್ನು ತುಟಿಯಿಂದ ಮುತ್ತಿಕ್ಕಿದ ನೆನಪು ನನಗಿಲ್ಲ. ಅದರ ಕೆನ್ನೆಗೆ
ನನ್ನ ಕೆನ್ನೆ ತಾಗಿಸುವ ಅಭ್ಯಾಸ ಮಾತ್ರ ನನ್ನಲ್ಲಿದೆ. ಅದು ಕೂಡಾ ಅಪರೂಪ. ಮೂಗು ಮುಟ್ಟಿ, ಕೂದಲು
ಸವರಿ ಮಾತಾಡಿಸುವುದೇ ಹೆಚ್ಚು. ಎಳೆಯ ಮಕ್ಕಳ ತ್ವಚೆ ತುಂಬಾ ಸೂಕ್ಷ್ಮವಾಗಿರುತ್ತೆ. ಅದಕ್ಕೆ ನಮ್ಮ
ಉಸಿರು, ಎಂಜಲು ಕೂಡಾ ಹಾನಿ ತರಬಲ್ಲದು.
ಹಾಗೆಯೇ ತೀರಾ ಆತ್ಮೀಯರಾದ ಹುಡುಗರು ಸಿಕ್ಕಿದಾಗ ಅವರ
ಬೆನ್ನಿಗೊಂದು ಗುದ್ದಿ, ಭುಜ ತಟ್ಟಿ, ತಲೆ ಮೊಟಕಿ ಮಾತಾಡಿಸುವ ಅಭ್ಯಾಸವೂ ನನ್ನಲ್ಲಿದೆ. ಗುರುಸ್ಥಾನದಲ್ಲಿರುವವರ
ಕಾಲನ್ನು ,ಕೈಯ್ಯನ್ನು ಚುಂಭಿಸುವ ಹಾಗೆಯೇ ಅಂಥ ಎತ್ತರದ ಸ್ಥಾನದಲ್ಲಿರುವವರು ಕಿರಿಯರ ನೆತ್ತಿಯನ್ನು
ಆಘ್ರಾಣಿಸಿ ಹಣೆಯನ್ನು ಮುತ್ತಿಕ್ಕುವ ಕ್ರಮವೂ ಇದೆ.
ಇಬ್ಬರು ಪರಿಚಿತ ವ್ಯಕ್ತಿಗಳು ಪರಸ್ಪರ ಎದುರಾದಾಗ
ಹಗುರವಾಗಿ ಅಪ್ಪಿಕೊಂಡು ಸ್ವಾಗತಿಸುವುದು ಈಗ ನಾಗರಿಕ ನಡವಳಿಕೆಯೇ ಆಗಿದೆ.. ಹಾಗೆಯೇ ಅವರು ತೀರಾ
ಆತ್ಮೀಯರಾಗಿದ್ದರೆ ಹಗುರವಾಗಿ ಚುಂಬಿಸುವುದು ಕೂಡ ಸಾಮಾನ್ಯವಾಗಿದೆ.
ಅದರೆ ನನಗದು ಮುಜುಗರದ ವಿಷಯ, ಇನ್ನೊಬ್ಬರ ಸ್ಪರ್ಶಕ್ಕೆ
ನಾವು ನಿಲುಕುವುದು, ತೆರೆದುಕೊಳ್ಳುವುದು ತೀರಾ ಖಾಸಗಿ ವಿಷಯ. ನಾನು ಯಾರ ಕೈಯ್ಯನ್ನು ಬೇಕಾದರೂ
ಕುಲುಕಬಲ್ಲೆ. ಆದರೆ ಸಾರ್ವಜನಿಕವಾಗಿ ಯಾರನ್ನಾದರೂ ಅಪ್ಪಿಕೊಳ್ಳಬೇಕಾಗಿದ್ದಲ್ಲಿ ಅವರು ನನ್ನ
ಆತ್ಮ ಸಂಬಂಧಿಯಾಗಿರಬೇಕು.
ಮುತ್ತೆಂಬುದನ್ನು ಆತ್ಮದ ಬೆಸುಗೆಯೆಂದು ನಾನು
ಪರಿಗಣಿಸುತ್ತೇನೆ.ಅದಕ್ಕೆ ಎರಡು ಮನಸ್ಸುಗಳು ಒಂದಾಗಿರಬೇಕು. ಅದಕ್ಕೆ ಪೂರ್ವಸಿದ್ಧತೆ ಬೇಕಾಗಿಲ್ಲ.
ಅದು ಆಕ್ಷಣದಲ್ಲಿ ಘಟಿಸಬಹುದಾದ ಮೋಹಕ ಮಿಂಚು. ನನಗೀಗಲೂ ನೆನಪಿದೆ..ನಾನಂದು ಮಾನಸಿಕವಾಗಿ
ಜರ್ಜಳಿತಳಾಗಿದ್ದೆ. ಅತು ಅತ್ತು ಬಸವಳಿದಿದ್ದೆ. ತುಂಬಾ ದೂರದಲ್ಲಿದ್ದ ಹಾಸ್ಟೇಲ್ ಗೆ ಹೋಗುವ
ಸ್ಥಿತಿಯಲ್ಲಿರಲಿಲ್ಲ. ಕತ್ತಲಾಗಿತ್ತು. ಇಂದು ನನ್ನ ರೋಂ ನಲ್ಲಿ ಮಲಗು ಎಂದ ಆತ. ನನಗೆ ಹಾಸಿಗೆಗೆ
ಮೈ ಚೆಲ್ಲಿದ್ದರೆ ಸಾಕೆನಿಸಿತ್ತು. ಹಾಸಿಗೆಯೂ ಆ ಪುಟ್ಟ ರೂಮಿನಲ್ಲಿರಲಿಲ್ಲ. ಪ್ಲಾಸ್ಟಿಕ್ ವೈರ್
ನ ಮಂಚವೊಂದು ಗೋಡೆ ಬದಿಯಲ್ಲಿತ್ತು. ಅದಕ್ಕೊಂದು ಜಮಖಾನ ಹಾಸಿತ್ತು. ನಾನಲ್ಲಿ ಬಿದ್ದುಕೊಂಡೆ. ಆತ
ಇನ್ನೊಂದು ಗೋಡೆಯ ಬದಿಯಲ್ಲಿದ್ದ ಚಿಟ್ಟೆಯಂತಹ ಎತ್ತರದ ಜಾಗದಲ್ಲಿ ಚಾಪೆ ಹಾಸಿಕೊಂಡು ಮಲಗಿದ.
ಮತ್ತೆ ಅಂದು ನಡೆದ ಕಹಿ ಘಟನೆಯತ್ತ ಮಾತು ಹೊರಳಿತು...ಆತ ಎಷ್ಟು ಸಮಾಧಾನದ ಮಾತುಗಳಾಡಿದನೆಂದರೆ
ನಾನು ನನಗರಿವಿಲ್ಲದೆ ಎದ್ದು ಹೋಗಿ ಮಲಗಿದ್ದ ಅವನ ಕೆನ್ನೆಗೊಂದು ಕ್ರುತಜ್ನತೆಯ ಮುತ್ತಿಟ್ಟೆ...ಆಮೇಲೆ ಬಂದು ಮಲಗಿದವಳಿಗೆ ಬೆಳಿಗ್ಗೆ ಅವನ ಮನೆಯ ಓನರ್ ಹುಡುಗಿ
ಟಿ ಕುಡಿಯಲು ಎಬ್ಬಿಸಿದಾಗಲೇ ಎಚ್ಚರವಾಗಿದ್ದು.
’ಅವತ್ತು ನೀನು ನನ್ನನ್ನು ಯಾಕೆ ಹಾಳು ಮಾಡಿಲ್ಲ..ನಾನಾದರೂ ಎಂತಹ ದಡ್ಡನಿದ್ದೆ’ ಎಂದು ಈಗಲೂ
ಅವನು ನನ್ನನ್ನು ಗೋಳು ಹೊಯ್ದುಕೊಳ್ಳುತ್ತಾನೆ.
ಇದನ್ನೆಲ್ಲಾ ಯಾಕೆ ಹೇಳುತ್ತಿದ್ದೇನೆಂದರೆ
ಮುತ್ತಿಕ್ಕುವುದು ಎಂಬುದು ಪೂರ್ವನಿರ್ಧಾರಿತವಲ್ಲ. ಅದು ಅಕ್ಷಣದಲ್ಲಿ ಘಟಿಸುವಂತಹದ್ದು..ಒಂದು
ವೇಳೆ ಸಾರ್ವಜನಿಕವಾಗಿ ಯಾರದರೂ ನನ್ನನ್ನು ಮತ್ತು ನನ್ನ ಸಂಗಾತಿಯನ್ನು ಅವಮಾನಿಸಿದರೆ, ನಮ್ಮ ನಡವಳಿಕೆಯನ್ನು ಅನೈತಿಕವೆಂದು ಜರೆದು
ನೈತಿಕ ಪೋಲಿಸ್ ಗಿರಿಯನ್ನು ನಮ್ಮ ಮೇಲೆ ಹೇರಿದರೆ ಸಮಾಜ ಯಾವುದನ್ನು ಅನೈತಿಕವೆಂದು ಹೇಳುತ್ತದೆಯೋ
ಅದನ್ನು ಆ ಕ್ಷಣದಲ್ಲಿ ಮಾಡಬಹುದೆನೋ..ಗೊತ್ತಿಲ್ಲ. ಆದರೆ ಅದಕ್ಕಾಗಿಯೇ ಒಂದು
ಕಾರ್ಯಕ್ರಮವೇರ್ಪಡಿಸಿ ಮಾಡುವುದು...ಉಹೂಂ ಸಾಧ್ಯವಿಲ್ಲ.
[’ಸ್ವತಂತ್ರ’ ವಾರ ಪತ್ರಿಕೆಗಾಗಿ ಬರೆದ ಲೇಖನ]
4 comments:
ಸುರಗಿ ನಮಸ್ತೆ
ನಿಮ್ಮ ಈ ಬರಹ ನನ್ನ ಸ್ತ್ರೀ ಜಾಗೃತಿ ಪತ್ರಿಕೆಗೆ ಬಳಸಿಕೊಳ್ಳಲಾ, ಹೌದಾದರೆ ನಿಮ್ಮ ವಿಳಾಸ ನನ್ನ ಇ ಮೇಲ್ ಗೆ ಕಳಿಸಿ.
ಸಂಪಾದಕರು, ಸ್ತ್ರೀ ಜಾಗೃತಿ ಮಾಸಪತ್ರಿಕೆ, ಸಂ.೩೩, ಸುಮುಖ ರೆಸಿಡೆನ್ಸಿ, ೩ನೇ ಅಡ್ಡರಸ್ತೆ,
೧ನೇ ಮುಖ್ಯರಸ್ತೆ, ಗವೀಪುರಂ ಬಡಾವಣೆ,
ಬೆಂಗಳೂರು-೫೬೦ ೦೧೯ ದೂ: 080-26600022/
ಜಂಗಮವಾಣಿ : 9448945367
Email:sthree.jagruthi@gmail.com
ಸುರಗಿ ನಮಸ್ತೆ
ನಿಮ್ಮ ಈ ಬರಹ ನನ್ನ ಸ್ತ್ರೀ ಜಾಗೃತಿ ಪತ್ರಿಕೆಗೆ ಬಳಸಿಕೊಳ್ಳಲಾ, ಹೌದಾದರೆ ನಿಮ್ಮ ವಿಳಾಸ ನನ್ನ ಇ ಮೇಲ್ ಗೆ ಕಳಿಸಿ.
ಸಂಪಾದಕರು, ಸ್ತ್ರೀ ಜಾಗೃತಿ ಮಾಸಪತ್ರಿಕೆ, ಸಂ.೩೩, ಸುಮುಖ ರೆಸಿಡೆನ್ಸಿ, ೩ನೇ ಅಡ್ಡರಸ್ತೆ,
೧ನೇ ಮುಖ್ಯರಸ್ತೆ, ಗವೀಪುರಂ ಬಡಾವಣೆ,
ಬೆಂಗಳೂರು-೫೬೦ ೦೧೯ ದೂ: 080-26600022/
ಜಂಗಮವಾಣಿ : 9448945367
Email:sthree.jagruthi@gmail.com
ವೈಯಕ್ತಿಕ ಹಾಗು ಸಾಮಾಜಿಕ ನಡೆವಳಿಕೆಗಳಿಗೆ ಅನೇಕ ಆಯಾಮಗಳು ಉಂಟು. ಈ ಆಯಾಮಗಳ ಒಂದು ವಿವರಣೆಯನ್ನು ನೀಡುವ ನಿಮ್ಮ ಲೇಖನವು ಪ್ರಶಂಸನೀಯವಾಗಿದೆ.
ಪ್ರತಿಭಟನೆಗಳಿಗೆ ನೈತಿಕ ಉದ್ಧೇಶವಿರಬೇಕು. ಆಗಲೇ ಜನ ಸಾಮಾನ್ಯರೂ ಅದಕ್ಕೆ ಬೆಂಬಲ ಸೂಚಿಸುವುದು. ಯಾರದೋ ವಿರುದ್ಧ ಕತ್ತಿ ಮಸೆಯಲು ಹಮ್ಮಿಕೊಳ್ಳುವ ಇಂತಹ ಪ್ರತಿಭಟನೆಗಳು ಅರ್ಥವಿಹೀನ ಮತ್ತು ನೈತಿಕ ಪೊಲೀಸ್ಗಿರಿಗಿಂತಲೂ ಅಪಾಯಕಾರಿ.
Post a Comment