ಅನುಮಾನಿಸಿದೆ; ಅವಮಾನಿಸಿದೆ.
ಪ್ರೀತಿಯೋ ಪ್ರೇಮವೋ ವಾಂಛೆಯೋ
ಗೊತ್ತಿಲ್ಲದ ಏನೋ ಒಂದು.
ಆವರಿಸಿ ಅಪ್ಪಳಿಸಿದ ರಬಸಕ್ಕೆ
ಆಕಾರವಿಲ್ಲದೆ ನರಳಿದ್ದೇನೆ.
ಆಕಾಶಕ್ಕೆ
ಸಹಸ್ರ ಸಹಸ್ರ ಬಾಹುಗಳ ಚಾಚಿ ಬೋರಿಟ್ಟು
ಅಳುತ್ತಿರುವಾಗ
ಮೋಟು ಬೀಡಿಗೆ ಬೆಂಕಿ ಹಚ್ಚಿ ಸುಖಿಸುತ್ತಿದ್ದೆ.
ನೀನು, ನನ್ನ ಆತ್ಮಕ್ಕಂತಿದ ದೂಳು.
ಪಾತಾಳಗಂಗೆಯಲ್ಲಿ ಈಜುತ್ತಿರುವವನಿಗೆ ಸುರಗಂಗೆಯ ಕನವರಿಕೆ.
ವೈತರಣಿಯಲ್ಲೂ ಜೀವ ಮೊಳಕೆಯೊಡೆದೀತೆ?
ಇದು ಕಾಲವಲ್ಲ; ಮಿಲನದ ಭೂಮಿಕೆಯಲ್ಲ.
ಆಳವಿದ್ದಲ್ಲೇ ತೆರೆಗಳೇಳುವುದು;
ನಾನೊಂದು ಶರಧಿ.
ಆಗಸದೆದೆಯಲ್ಲಿ ಬಚ್ಚಿಟ್ಟುಕೊಳ್ಳಬಲ್ಲೆ..
ನೀನು ಆಗಸವಾಗು.
ಅಣು ಅಣುವನ್ನೂ ಹೀರಿ ಜೀವಕೋಶವನ್ನೆಲ್ಲಾ ಬರಿದು ಮಾಡು.
ಆವರ್ತನದ ಕಂಪನಕ್ಕೆ
ಇಳೆ ಬಸಿರಾಗುತ್ತದೆ.
ಆತ್ಮ ಶುಭ್ರವಾಗುತ್ತದೆ.
2 comments:
ಹಂಗೇ. ಬರೀ ಫೇಸ್ಬುಕ್ಕಲ್ ಹಾಕಿದ್ರೆ ಆಗಲ್ಲ. ಬ್ಲಾಗ್ ಅಪ್ಡೇಟ್ ಮಾಡ್ಬೇಕು. ಆಗ ನಾವು ಉಷಾಕ್ಕ ಸೂಪರ್ ಅಂತೀವಿ. :-)
ಸುಶ್ರುತಾ,
ನಿನ್ನ ಕಾಮೆಂಟ್ ನೋಡಿ ಎಷ್ಟು ಖುಷಿಯಾಯ್ತು ಗೊತ್ತಾ?
ಅನಾಯಸವಾಗಿ ನನ್ನ ಮುಖದಲ್ಲೊಂದು ಮುಗುಳ್ನಗು ತೇಲಿ ಬಂತು.
ಹೌದು ಬ್ಲಾಗ್ ಬರೆದರೆ ಮಾತ್ರ ಒಂಥರಾ ಸಂತೃಪ್ತಿ ಸಿಗುತ್ತೆ. ಯಾಕೆಂದರೆ ಇಲ್ಲಿ ನಾವು ನಮಗಾಗಿ ಮಾತ್ರ ಬರಿತೀವಿ ಅಲ್ವಾ?
ಯಾರೂ ಓದದಿದ್ರೂ ಬೇಸರವಿಲ್ಲ.
ಓದಿ ಒಂದು ಸಾಲು ಬರೆದರೆ ನಮ್ಮೊಳಗಿನ ಖುಷಿ ಇನ್ನೊಂದು ವ್ಹೂರು ಅರಳಿಕೊಳ್ಳುತ್ತೆ.
ಥ್ಯಾಂಕ್ಸ್ ಹುಡುಗಾ. ಆದ್ರೆ ಇದು ಕವನವಾಗಿದೆಯೋ ಇಲ್ವೋ ಗೊತ್ತಿಲ್ಲ.
ಒಂದೇ ಉಸುರಿನಲ್ಲಿ ಬರೆದೆ. ಬರೆದಾದ ಮೇಲೆ ಹಗುರವಾದ ಭಾವನೆ ದಕ್ಕಿತು.
Post a Comment