Thursday, May 12, 2016

ಮತ್ಸ್ಯಗಂಧಿಯ ಪ್ರಲಾಪ.

ಅದೊಂದು ಹೆಂಗಸು. ಅದರ ಪರಿಚಯ ನನಗಿರಲಿಲ್ಲ. ಆದರೆ ಅಲ್ಲಿ ಇಲ್ಲಿ ನೋಡಿ ಗೊತ್ತಿತ್ತು. ಹಾಗಾಗಿ ಎದುರು ಸಿಕ್ಕಾಗ ಒಂದು ನಗುವಿನ ವಿನಿಮಯ ಆಗುತ್ತಿತ್ತು.
ಒಂದು ದಿನ ಅದು ಅದ್ಯಾವುದೋ ಕಾರ್ಯಕ್ರಮಕ್ಕೆ ಪರಊರಿಗೆ ಹೋಗಿ ಬಂತು.
ಅಲ್ಲಿ ಅದೇನಾಯ್ತೋ ಗೊತ್ತಿಲ್ಲ. ಅದರ ವರಸೆಯೇ ಬದಲಾಯ್ತು. ಮೈ ಮೇಲೆ ಭೂತ ಮೆಟ್ಟಿಕೊಂಡವಳವಂತೆ ವಿಚಿತ್ರವಾಗಿ ವರ್ತಿಸಲು ಆರಂಭಿಸಿತು. ಕಂಡ ಕಂಡವರ ಮೇಲೆಲ್ಲ ಹರಿ ಹಾಯಲು ಆರಂಭಿಸಿತು.
ಅದೊಂದು ಊರು. ಅಲ್ಲೊಂದು ಜಾತ್ರೆ ನಡೆಯುತ್ತಿತ್ತು. ಈ ಯಮ್ಮ ಅಲ್ಲಿಗೆ ಎಂಟ್ರಿ ಕೊಟ್ಟಿತು. ಅಲ್ಲಿದ್ದವರನ್ನೆಲ್ಲಾ ತಾನಾಗಿಯೇ ಮಾತಾಡಿಸಲಾರಂಭಿಸಿತು. ಜನ ತಮಗೆ ತಿಳಿದಂತೆ ಅವಳು ಕೇಳಿದ ಪ್ರಶ್ನೆಗಳಿಗೆಲ್ಲಾ ಉತ್ತರ ಕೊಡುತ್ತಿದ್ದರು.. ಮಾತು ಮುಂದುವರಿಸಿದಂತೆಲ್ಲಾ ಆಕೆ ಒಂದು ಜಾತಿಯ ಬಗ್ಗೆ ವಿಶೇಷ ಮುತುವರ್ಜಿಯಿಂದ ಉತ್ಸಾಹದಿಂದ ಮಾತನಾಡುತ್ತಿದ್ದುದು ಅಲ್ಲಿದ್ದವರ ಗಮನಕ್ಕೆ ಬಂತು.. ಪ್ರೇಕ್ಷಕರಲ್ಲಿ ಒಬ್ಬಾಕೆ.’ನೀವು ಯಾವ ಪೈಕಿ ಜನ ? ಎಂದು ಪ್ರಶ್ನಿಸಿದಳು.
ಈಕೆ ನಿಗೂಢವಾಗಿ ನಕ್ಕಳು. ಕೇಳಿದವಳೂ ಅದನ್ನು ತಿಳಿದುಕೊಳ್ಳುವ ಉತ್ಸಾಹ ತೊರಲಿಲ್ಲ. ಕೊನೆಕೊನೆಗೆ ಅವಳಿಗೆ ಜಾತೀಯ ಭೂತ ಮೆಟ್ಟಿಕೊಂಡಿದೆ. ಶ್ರೇಷ್ಠತೆಯ ವ್ಯಸನ ಅಂಟಿಕೊಂಡಿದೆ ಅಂತ ಎಲ್ಲರಿಗೂ ಗೊತ್ತಾಗಿ ಹೋಯ್ತು. ಜನ ತಂತಮ್ಮ ಕೆಲಸ-ಬೊಗಸೆಯಲ್ಲಿ ಮೈ ಮರೆತರು
ಕೆಲದಿನಗಳು ಕಳೆದವು .
ಆ ಗಯ್ಯಾಳಿ ಹೆಂಗಸು ಒಂದು ಮರದಡಿಯಲ್ಲಿ ಕೂತಿದ್ದಳು. ಒಂದಷ್ಟು ಜನ ಅವಳ ಸುತ್ತ ನೆರೆದಿದ್ದರು. ವೇದಿಕೆಯಲ್ಲಿ ಒಬ್ಬಾತ ಗಂಟಲು ಹರಿದುಕೊಳ್ಳುವಂತೆ ಕಿರುಚಿ ಮಾತಾಡುತ್ತಿದ್ದ. ಅವರೆಲ್ಲಾ ಆತ ಹೇಳುವುದನ್ನು ಗಲ್ಲಕ್ಕೆ ಕೈಯಿಟ್ಟು ಕೇಳುತ್ತಿದ್ದರು. ಆತ ಮಾತಿನ ಮಧ್ಯೆ ದೂರದಲ್ಲಿದ್ದ ಅ ಅಲೆಮಾರಿ ಹೆಂಗಸಿನತ್ತ ನೋಡಿದ. ಗಲ್ಲಕ್ಕೆ ಕೈಯ್ಯಿಟ್ಟು ಅವನ ಮಾತುಗಳನ್ನು ಕೇಳುತ್ತಿದ್ದ ಆ ಅಲಿಮಾರಿಯ ಪಕ್ಕ ಒಂದು ಬುಟ್ಟಿಯಿತ್ತು. ಪ್ಲಾಸ್ಟಿಕ್ ಹಾಳೆಯಿಂದ ಅದನ್ನು ಮುಚ್ಚಲಾಗಿತ್ತು, ಅಲೆಮಾರಿ ಹೆಂಗಸನ್ನು ನೋಡಿದ ಗಯ್ಯಾಳಿ ಹೆಂಗಸು ತನ್ನ ಸುತ್ತಮುತ್ತ ಕುಳಿತಿದ್ದ ಪಟಾಲಂಗೆ ಏನೋ ಹೇಳಿದಳು. ಅವರೆಲ್ಲಾ ಅಲೆಮಾರಿ ಹೆಂಗಸನ್ನು ನೋಡಿ ಅಟ್ಟಹಾಸದಿಂದ ನಗಲು ಆರಂಭಿಸಿದರು. ದೂರದಲ್ಲಿದ್ದ ಅವಳಿಗೆ ಇವರೆಲ್ಲಾ ಜೋರಾಗಿ ನಗುತ್ತಿದ್ದಾರೆಂದು ಗೊತ್ತಾಯಿತು. ಆದರೆ ಯಾಕೆ ನಗುತ್ತಿದ್ದರೆಂದು ಅರ್ಥವಾಗಲಿಲ್ಲ.
ಅಲೆಮಾರಿ ಹೆಂಗಸಿಗೆ ಮುಂದಕ್ಕೆ ಹೋಗಲು ಅದೊಂದೇ ದಾರಿಯಿದ್ದುದ್ದು. ಅಲ್ಲಿ ಆ ಪಟಲಾಂ ದಾರಿಗಡ್ಡವಾಗಿ ಕೂತಿತ್ತು. ಹಾಗಾಗಿ ತಲೆಯ ಮೇಲೆ ಸೆರಗು ಹೊದ್ದು ಅದರ ಮೇಲೆ ಬುಟ್ಟಿಯಿಟ್ಟು ಅವರು ಕೂತಿದ್ದ ಮರದಡಿಯ ಕಾಲು ದಾರಿಯತ್ತ ಹೆಜ್ಜೆ ಹಾಕತೊಡಗಿದಳು. ಅಲ್ಲಿದ್ದ ಕೆಲವರು ’ಎಲ್ಲಿಗೆ ಹೊರಟ್ಟಿದ್ದಿಯಾ? ತಲೆಯ ಮೇಲೇನಿದೆ?ಯಾವ ಜಾತಿ ನಿಂದು’ ಎಂದು ಒಬ್ಬಾರದಮೇಲೆ ಒಬ್ಬರು ಪ್ರಶ್ನೆಗಳ ಸುರಿಮಳೆಗೆಯ್ದರು.
ಅವಳು ಅವರನ್ನೆಲ್ಲಾ ಒಮ್ಮೆ ನೋಡಿದಳು. ಯಾವ ಪ್ರಶ್ನೆಗೆ ಮೊದಲು ಉತ್ತರಿಸಬೇಕೇಂದು ಗೊಂದಲಕ್ಕೆ ಬಿದ್ದು ತಲೆಯ ಮೇಲಿನ ಬುಟ್ಟಿ ಸರಿ ಮಾಡಿಕೊಂಡಳು. ಆಗ ಈ ಗಯ್ಯಾಳಿ ಹೆಂಗಸು ತಾನು ನಿಮ್ಮೆಲ್ಲರಿಗಿಂತ ಭಿನ್ನ ಎಂಬಂತೆ ತನ್ನ ಗುಂಪಿನವರತ್ತ ಕುತ್ಸಿತ ನಗುವೊಂದನ್ನು ಬೀರಿ ಸೊಂಟದ ಮೇಲೆ ಕೈಯ್ಯಿಟ್ಟು ’ ಆ ಬುಟ್ಟಿಯಲ್ಲೇನಿದೆ? ತೋರಿಸು’ ಎಂದು ಅಪ್ಪಣೆ ಕೊಟ್ಟಳು.
‘ಅದರಲ್ಲಿ ನನ್ನ ಬದುಕಿದೆ’
’ಓಹೋ..ನಿನ್ನ ಬದುಕು ಬುಟ್ಟಿಯಲ್ಲಿ ಮದುರಿಕೊಂಡು ಮಲಗಿದೆಯಾ?’ ಎನ್ನುತ್ತಾ ಆಕೆ ಗುಂಪಿನೆಡೆಗೆ ’ಹೆಂಗಿದೆ ನನ್ನ ಬಾಣ?’ ಎಂಬಂತೆ ನೋಡಿದಳು. ಅವರು ಅವಳನ್ನು ಉತ್ತೇಜಿಸುವಂತೆ’ ಕುನ್ನಿ’ಎಂದು ಬೆರಳಲೇಡಿಸುತ್ತಾ ಕಿಸಕ್ಕನೆ ನಕ್ಕರು. ಅವಳು ಮತ್ತಷ್ಟು ಎತ್ತರಕ್ಕೇರಿ ಇವಳ ಬುಟ್ಟಿಗೆ ಕೈ ಹಾಕಿದಳು. ಈ ಜಗ್ಗಾಟದಲ್ಲಿ ಅವಳ ಬುಟ್ಟಿಯಲ್ಲಿದ್ದ ಮೀನೆಲ್ಲ ಇವಳ ತಲೆ ಮೇಲೆ ಚೆಲ್ಲಿ ಮೈಯ್ಯನ್ನು ಸವರಿಕೊಂಡು 
ನೆಲ ಸೇರಿ ಹೊರಳಾಡತೊಡಗಿದವು.
ದೂರದಲ್ಲಿ ಎಲ್ಲಿಯೋ ಇದ್ದ ನಾಯಿಗಳು ಬೊಗಳುತ್ತಾ ಇವರಿದ್ದೆಡೆಗೆ ಓಡಿ ಬರುತ್ತಿರುವುದು ಕಣ್ಣು ಕಿವಿಗಳಿಗೆ ನಾಟಿ ಇವಳು ಗಟ್ಟಿಯಾಗಿ ಕಣ್ಮುಚ್ಚಿಕೊಂಡಳು..
ಈಗ ಗಯ್ಯಾಳಿ ಕಂಡ ಕಂಡವರೆಲ್ಲಾ ಹೇಳಿಕೊಂಡು ತಿರುಗುತ್ತಿದ್ದಾಳೆ; ’ಅವಳು ನನ್ನ ತಲೆ ಮೇಲೆ ಮೀನಿನ ಬುಟ್ಟಿ ಎತ್ತಿ ಹಾಕಿದಳು.ಈಗ ಮೈಮೇಲೆಲ್ಲಾ ಮೀನುಗಳು ಓಡಾಡುತ್ತಿವೆ. ಗುಳು ಗುಳು ಎಂದು ಸದ್ದು ಮಾಡುತ್ತಿವೆ. ಬೇಕಾದ್ರೆ ನೀವೇ ಆಲಿಸಿ ನೋಡಿ’ ಅಂತ ತಲೆಯನ್ನು ಓರೆ ಮಾಡಿ ಕಿವಿಗೆ ಅಂಗೈಯನ್ನು ಅರ್ಧ ಮರೆ ಮಾಡಿ ಆಲಿಸುತ್ತಾಳೆ. ನೀವು ಕೂಡಾ ಆಲಿಸಿ ಅಂತ ಅಕ್ಕಪಕ್ಕದವರನ್ನು ಕರೆಯುತ್ತಾಳೆ. 
ಜನ ಹೌದೌದು ಅಂತ ತಲೆಯಾಡಿಸುತ್ತಾ ಅವಳ ಮೈಯ ಮೀನಗಂಧವನ್ನು ಅಸ್ವಾಧಿಸುತ್ತಾರೆ.!

0 comments: