Sunday, May 22, 2016

ಹಕ್ಕಿಜೋಡಿಗಳ ನಡುವೆ ಒಂಟಿ ಹಕ್ಕಿ.


ಹಿಮಮಣಿಗಳಂದದಲಿ......
ಮುನಿಸಿಕೊಂಡಿರಬಹುದೇ?



 ಇಳಿಸಂಜೆ. ಬಾಗಿಲ ಚೌಕಟ್ಟಿಗೊರಗಿ ಪಾರಿಜಾತ ಮರವನ್ನು ದಿಟ್ಟಿಸುತ್ತಿದ್ದೆ. ಸೂರ್ಯ ಮರೆಯಾಗಿ ಘಳಿಗೆ ಕಳೆದಿತ್ತು. ಪಾರಿಜಾತ ಮೊಗ್ಗು ಬಹು ಮೆಲ್ಲನೆ ಹವಳದ ದಂಟಿನೊಳಗಿನಿಂದ ತನ್ನ ಮುಖವನ್ನು ಹೊರಚಾಚುತ್ತಿತ್ತು. ಅದರ ಸುವಾಸನೆಗೆ ಹಾಗೆಯೇ ಕಣ್ಮುಚ್ಚಿದ್ದೆ. ನನ್ನ ಏಕಾಗ್ರತೆಯನ್ನು ಭಂಗ ಮಾಡಿದ್ದು, ಮರದ ಮೇಲಿನ ಪುಟ್ಟ ಜೋಡಿ ಹಕ್ಕಿಗಳು. ಅವು ಕಿಚ..ಪಿಚ ಎನ್ನುತ್ತಾ ಗೆಲ್ಲಿನಿಂದ ಗೆಲ್ಲಿಗೆ ಹಾರುತ್ತಿದ್ದವು. ಬಲು ಮುದ್ದಾದ ಅವುಗಳನ್ನು ಕ್ಯಾಮರಾದಲ್ಲಿ ಸೆರೆಯಾಗಿಸೋಣವೆಂದುಕೊಂಡು ಒಳಗೆ ಓಡಿ ಹೋಗಿ ಕ್ಯಾಮರಾ ತಂದು ಪೋಕಸ್ ಮಾಡತೊಡಗಿದೆ. ಅವು ಎಟ್ಟಿ ರಟ್ಟಿದಂತೆ [ಅರ್ಥವಾಗಲಿಲಿಲ್ವಾ..ಸಿಗಡಿ ಮೀನು ಚಲಿಸಿದಂತೆ] ರಟ್ಟುತ್ತಿದ್ದವೇ ಹೊರತು ಕ್ಯಾಮರಾ ಕಣ್ಣಿಗೆ ಬೀಳಲೇ ಇಲ್ಲ.

ವಿಷಣ್ಣ ಮನಸ್ಸಿನಿಂದ ಒಳಬಂದೆ. ಆದರೆ ಅವುಗಳ ಕಿಚಿಗುಟ್ಟುವಿಕೆಗೆ ಮನಸೋತಿತ್ತು. ಹಾಗಾಗಿ ಆಗಾಗ ಬಂದು ಅವುಗಳೇನು ಮಾಡುತ್ತಿವೆ ಎಂದು ನೋಡುತ್ತಲಿದ್ದೆ. ಕತ್ತಲಾವರಿಸುತ್ತಿತ್ತು. ಜೋಡಿ ಹಕ್ಕಿಯಲ್ಲಿ ಒಂದು ಹಕ್ಕಿ ನಮ್ಮ ಮನೆಯ ಕಿಟಿಕಿಯೆಡೆಗೆ ಬಾಗಿದ ಗೆಲ್ಲೊಂದರಲ್ಲಿ ಹಾರಿ ಕುಳಿತಿತು. ಮರದಲ್ಲಿ ಎಲ್ಲಿಯೋ ಕಿಚಪಚ ಮಾಡುತ್ತಿದ್ದ ಇನ್ನೊಂದು ಹಕ್ಕಿಯೂ ಸ್ವಲ್ಪ ಹೊತ್ತಿನಲ್ಲಿ ಅದರ ಪಕ್ಕದಲ್ಲಿ ಬಂದು ಕೂತಿತು. ಪಿಳಿ ಪಿಳಿ ಕಣ್ಣು ಬಿಡುತ್ತಾ ಕುಳಿತ ಈ ಜೋಡಿ ನನ್ನ ಕ್ಯಾಮರಾದಲ್ಲಿ ಸೆರೆಯಾಗುವುದು ಖಂಡಿತಾ ಅನ್ನುತ್ತಾ ಮತ್ತೆ ಕ್ಯಾಮರಾ ಕೈಗೆತ್ತಿಕೊಂಡೆ. ಅವು ನನ್ನ ಗಮನಿಸಿರಬೇಕು., ಮತ್ತೆ ಹಾರಿ ಹೋಗಿ ಮರದಲ್ಲಿ ಮರೆಯಾದವು.

ಜನುಮದ ಜೋಡಿ.
ಸುತ್ತಮುತ್ತ ಸಂಪೂರ್ಣ ಕತ್ತಲಾವರಿಸಿತು. ನಾನೀ ಹಕ್ಕಿಗಳನ್ನು ಮರೆತುಬಿಟ್ಟೆ. ಆದರೆ ಮಲಗುವ ಟೈಮ್ ನಲ್ಲಿ ಬಂದು ಪಾರಿಜಾತ ಗೆಲ್ಲಿನತ್ತ ನೋಡಿದೆ.ನಮ್ಮ ಮನೆಯ ಮುಂಬಾಗಿಲಿನ ಬೆಳಕಿನಲ್ಲಿ ಆ ಪುಟ್ಟ ಹಕ್ಕಿಗಳು ನಿಶ್ಚಿಂತೆಯಿಂದ ನಿದ್ದೆ ಮಾಡುತ್ತಿರುವುದು ಕಂಡಿತು. ಕ್ಯಾಮರಾ ತಂದು ಕ್ಲಿಕ್ ಮಾಡಿದೆ. ಪ್ಲಾಶ್ ಬೆಳಕು ಕಣ್ಣು ಕೋರೈಸಿತು. ಆ ಕ್ಷಣಕ್ಕೆ ತಪ್ಪು ಮಾಡಿದೆ ಅನ್ನಿಸಿತು. ಆದರೆ ಹಕ್ಕಿಗಳು ಮಿಸುಕಾಡಿರಲಿಲ್ಲ.
 ಈ ಅಪರಾಧಿಭಾವದಿಂದಲೇ ಪೇಸ್ಬುಕ್ ಗೆ ಬಂದೆ. ಈ ಘಟನೆಯನ್ನು ನನ್ನ ಸ್ಟೇಟಸ್ಸಾಗಿಸಿ, ನಾಳೆ ಈ ಹಕ್ಕಿಗಳು ಮತ್ತೆ ಬರಬಹುದೇ? ಎಂಬ ಪ್ರಶ್ನೆಯನ್ನು ನನ್ನ ಪ್ರೆಂಡ್ಸ್ ಮುಂದಿಟ್ಟೆ. ಅವರೆಲ್ಲಾ ಬರುವುದರ ಬಗ್ಗೆ ಅನುಮಾನ ವ್ಯಕ್ತಪಡಿಸಿದರು. ಆದ್ರೆ ಅವು ಮರುದಿನ ಬಂದು ನನ್ನನ್ನು ಅಪರಾಧಿಭಾವದಿಂದ ಮುಕ್ತ ಗೊಳಿಸಿದವು.

ಪೇಸ್ಬುಕ್ ಕಾರಣದಿಂದಾಗಿ ಆ ದಿನದ ನೆನಪು ನನಗಿದೆ. ಅದು ಕಳೆದ ವರ್ಷ ಸೆಪ್ಟಂಬರ ೨೯.
ಅಂದಿನಿಂದ ಈ ಹಕ್ಕಿಜೋಡಿಗಳು ನನ್ನ ಸಂಜೆಯ ಸಂಗಾತಿಗಳು. ಅವು ಮಳೆಯಲ್ಲಿ ನೆಂದಾಗ ಅವುಗಳಿಗಾಗಿ ಸೂರೊಂದು ಇಲ್ಲವೆಂದು ವ್ಯಥೆಪಡುತ್ತೇನೆ. ಸೂರು ಅಂದಾಗ ನೆನಪಾಯ್ತು ನೋಡಿ. ಒಂದು ರಾತ್ರಿ ಜೋರಾಗಿ ಮಳೆ ಬರುತ್ತಿತ್ತು. ಆಗ ನಾನು ಗಮನಿಸಿದೆ; ಆ ಜೋಡಿ ಒಂದು ದೊಡ್ಡ ಪಾರಿಜಾತದ ಎಲೆಯ ಅಡಿಯಲ್ಲಿ ಮುದುಡಿ ಕುಳಿತಿವೆ. ತಲೆಯನು ದೇಹದೊಳಗೆ ಹುದುಗಿಸಿಕೊಂಡ ಕಾರಣ ಒಂದು ಬಣ್ಣದ ಹತ್ತಿಯ ಉಂಡೆಯಂತೆ ಕಾಣಿಸುತ್ತಿವೆ. ಅವುಗಳ ಮೇಲೆ ಕುಳಿರುವ ನೀರ ಹನಿಗಳು ಲೈಟ್ ಬೆಳಕಿನಲ್ಲಿ ವಜ್ರದಂತೆ ಹೊಳೆಯುತ್ತಿವೆ. ಆಮೇಲಿನ ರಾತ್ರಿಗಳಲ್ಲಿ ನಾನು ಗಮನಿಸಿದಂತೆ ಅವು ತಪ್ಪದೆ ಅದೇ ಎಲೆಯ ಕೆಳಗೆ ರಾತ್ರಿ ಕಳೆಯುತ್ತಿದ್ದವು. 

ಬರುವೆಯೋ... ಬಾರೆಯೋ..!

ಹೀಗಿರುವಾಗ ಶರತ್ಕಾಲ ಬಂತು. ಹಸಿರೆಲೆಗಳು ಹಳದಿಯಾಗಿ ಎಲೆಯುದುರುವ ಕಾಲ. ಆ ಹಕ್ಕಿಗಳಿಗೆ ಮಾಡಿನಂತೆ ರಕ್ಷಾಕವಚವಾಗಿದ್ದ ಆ ಎಲೆಯೂ ಹಳದಿ ಬಣ್ಣಕ್ಕೆ ತಿರುಗತೊಡಗಿತು. ಹಕ್ಕಿಗಳು ಮುಂದೇನು ಮಾಡುತ್ತವೆ ಎಂಬ ಕುತೂಹಲ ನನಗೆ. ಒಂದು ದಿನ ನೋಡುತ್ತೇನೆ; ಆ ಹಕ್ಕಿಗಳು ಆ ಎಲೆಮಾಡನ್ನು ಬಿಟ್ಟು ಅದೇ ಗೆಲ್ಲಿನ ಇನ್ನೊಂದು ಎಲೆಯ ಮಾಡಿನಡಿಯಲ್ಲಿ ಕೂತಿವೆ. ನಂಗೆ ಸಮಾಧಾನವಾಯ್ತು, ಅವು ಇನ್ನೂ ನಮ್ಮ ಕಿಟಕಿಗೆ ಹತ್ತಿರವಾದವು. ಅವು ಜಾಗ ಬದಲಿಸಿದ ಮೂರ್ನಾಲ್ಕು ದಿನಗಳಲ್ಲೇ ಆ ಹಣ್ಣೆಲೆ ತೊಟ್ಟು ಕಳಚಿಕೊಂಡು ಬಿದ್ದು ಹೋಯ್ತು!

ಸವಿಗನಸೊಂದು ಕಾಡುತ್ತಿದೆ...


  
ನಾನು ಮನೆಯಲ್ಲಿದ್ದಾಗಲೆಲ್ಲಾ ಅವುಗಳ ಕಲರವಕ್ಕೆ ಕಿವಿ ತೆರೆದೇ ಇಟ್ಟಿರುತ್ತೇನೆ. ರಾತ್ರಿ ಇವುಗಳನ್ನು ನೋಡಿಯೇ ನಾನು ನಿದ್ರೆಗೆ ಜಾರುವುದು. ಬೆಳಿಗ್ಗೆ ಕರೆಕ್ಟಾಗಿ ಐದು ಘಂಟೆಗೆ ಚಿಲಿಪಿಲಿಗುಟ್ಟುತ್ತಾ ಎದ್ದು ಬಿಡುತ್ತವೆ, ನನ್ನನ್ನೂ ಎಬ್ಬಿಸುತ್ತವೆ. ಎದ್ದೊಡನೆ ಮುಂಬಾಗಿಲು ತೆರೆದು ಅವುಗಳು ಹಾರಿ ಹೋಗಿರುವುದುದನ್ನು ಖಾತ್ರಿ ಮಾಡಿಕೊಂಡು ಹಿಂಬಾಗಿಲು ತೆರೆದು ಅಲ್ಲಿರುವ ದೊಡ್ಡ ಮುತ್ತುಗದ ಮರದಲ್ಲಿ ಗೂಡು ಕಟ್ಟಿ ಸಂಸಾರ ಮಾಡಿಕೊಂಡಿರುವ ಹದ್ದುಗಳತ್ತ ನೋಟ ಹರಿಸುತ್ತೇನೆ.

ಅದೊಂದು ಒಲವಿನ ಸಂಸಾರ. ಸುಮಾರು ಆರು ತಿಂಗಳ ಕಾಲ ಆ ಜೋಡಿ ಒಂದೊಂದೇ ಕಡ್ಡಿಗಳನ್ನು ಕಚ್ಚಿ ತಂದು ಗೂಡು ಕಟ್ಟಿಕೊಳ್ಳುವುತ್ತಿರುವುದನ್ನು ನಾನು ನೋಡಿದ್ದೇನೆ. ಅವು ಮೊಟ್ಟೆಯಿಟ್ಟು ಮರಿ ಮಾಡುವುದನ್ನು ಕಾಯುತ್ತಿದ್ದ ನನಗೆ ಅವುಗಳ ಲಕ್ಷಣಗಳೇ ಕಾಣಿಸುತ್ತಿರಲಿಲ್ಲ. ಬದಲಾಗಿ ಅವುಗಳ ಭರ್ಜರಿ ಬಾಡೂಟದ ದರ್ಶನವಾಗುತ್ತಿತ್ತು.. ಹೀಗಿರುವಾಗ ಒಂದು ದಿನ ಅಕಸ್ಮತ್ತಾಗಿ ಗೂಡಿನಲ್ಲಿ ಮೂರು ಮರಿಗಳನ್ನು ಕಂಡೆ. ಅವೇನೂ ಇತರ ಹಕ್ಕಿಗಳಂತೆ ನನ್ನ ಕಣ್ಣಿಗೆ ಸುಂದರವಾಗಿಯೇನೂ ಕಂಡಿಲ್ಲ.ಮೈಮೇಲೆ ಅಲ್ಲಲ್ಲಿ ಬೆಳ್ಳಗಿನ ಕೂದಲುಗಳಿದ್ದ ಪ್ರೇತದ ಮರಿಗಳಂತೆ ಕಾಣಿಸಿದವು.

ನೀನೆನಗೆ ನಾನಿನಗೆ ಜೇನಾಗುವಾ...

ನೀವು ಹದ್ದುಗಳ ಬಗ್ಗೆ ಏನೇನೋ ಕೇಳಿರಬಹುದು. ಆದರೆ ಅವುಗಳು ತಮ್ಮ ಮರಿಗಳನ್ನು ಸಂರಕ್ಷಿಸುವ ವಿಧಾನವನ್ನು ಕಂಡಿದ್ದರೆ ಖಂಡಿತವಾಗಿಯೂ ಆಶ್ಚರ್ಯಚಕಿತರಾಗಿರಬಹುದು.  ತಾಯಿ ತಂದೆ ಇಬ್ಬರೂ ತಮ್ಮ ಮರಿಗಳಿಗೆ ಕೆಂಪಾದ ತಾಜಾ ಮಾಂಸದ ತುಣುಕನ್ನು ಸರದಿ ಮೇಲೆ ತಿನ್ನಿಸುತ್ತಿರುವುದನ್ನು ನಾನು ಬೆರಗಿನಿಂದ ನೋಡಿದ್ದೇನೆ ಎಂಥ ಪ್ರೀತಿಮಳೆಯದು! ಮಳೆ ಅಂದಾಗ ನೆನಪಾಯ್ತು ನೋಡಿ; ಒಂದು ದಿನ ಬೆಂಗಳೂರಿನಲ್ಲಿ ಧಾರಕಾರ ಮಳೆ ಸುರಿಯಿತು. ಆ ತಾಯಿ ತನ್ನ ಮರಿಗಳನ್ನು ರೆಕ್ಕೆಯಡಿ ಹುದುಗಿಸಿಕೊಂಡು ಸಂಜೆಯಿಂದ ಬೆಳಗಿನ ತನಕ ಅಲ್ಲಾಡದೆ ತೊಯ್ಯಿಸಿಕೊಳ್ಳುತ್ತಾ ಕುಳಿತಿದ್ದಾಳೆಂದರೆ ಅದೆಂಥ ಮಮತೆ ಇದ್ದೀತು. ನಾವು ಮನುಷ್ಯರು ತಾಯಿಯನ್ನು ದೈವತ್ವಕ್ಕೇರಿಸಿ ಹೊಗಳುತ್ತೇವೆ. ಆದರೆ ಎಲ್ಲಾ ತಾಯಾಂದಿರು ತಮ್ಮ ಸಂತಾನವನ್ನು ತಮ್ಮ ಪ್ರಾಣವನ್ನು ಪಣಕ್ಕಿಟ್ಟು ರಕ್ಷಿಸುತ್ತವೆ. ಆ ಮರಿಗಳು ಒಂದು ಕೊಂಬೆಯಿಂದ ಇನ್ನೊಂದು ಕೊಂಬೆಗೆ ಮೆಲ್ಲನೆ ನಡೆಯುತ್ತಾ, ಮಾರುದ್ದದ ರೆಕ್ಕೆಗಳನ್ನು ಬಡಿಯುತ್ತಾ ಹಾರುವುದನ್ನು ಕಲಿಯುತ್ತದ್ದು, ಬಿರು ಬೇಸಿಗೆಯಲ್ಲಿ ಮರದ ಟೊಂಗೆಗಳಲ್ಲಿ ಸರ್ಕಸ್ ಮಾಡುತ್ತಾ ಹಾರಾಟದ ತಾಲೀಮ್ ಅನ್ನು ನಡೆಸುತ್ತಿದ್ದುದು...ಎಲ್ಲವೂ ನನಗೆ ಸೋಜಿಗ. ಈ ರಣಬಿಸಿಲಿನಲ್ಲಿ ಅವುಗಳಿಗೆ ನೀರಡಿಕೆಯಾಗುತ್ತಿರಲಿಲ್ಲವೇ? ಇಲ್ಲಾಂತ ಕಾಣುತ್ತೆ, ಅವುಗಳ ದೇಹ ಪ್ರಕ್ರುತಿಯೇ ಹಾಗಿದ್ದಿರಬಹುದು!

ಅಮ್ಮಾ...ಅಮ್ಮಾ...
ಮೊನ್ನೆ ಜಡಿಮಳೆ ಬಂದಾಗ ಮರದತ್ತ ನೋಡಿದೆ. ಹಿಂದಿನ ವಾರ ಬಂದ ಮಳೆಗೆ ಒಣಗಿದ ಚಿಗುರಿಕೊಂಡಿದ್ದ ಮರ ಈಗ ಹಸಿರು ಹೊದ್ದು ನಿಂತಿತ್ತು. ಆದರೆ ಮರಿಗಳು ಕಾಣಿಸಲಿಲ್ಲ. ಈಗಲೂ ಕಾಣಿಸುತ್ತಿಲ್ಲ. ದಿನಾ ಸರತಿಯ ಮೇಲೆ ಮರಿಗಳನ್ನು ನೋಡಿಕೊಳ್ಳುತ್ತಿದ್ದ ಹದ್ದುಗಳು ಮಕ್ಕಳು ದೊಡ್ಡವರಾಗುತ್ತಿದ್ದಂತೆ ಗೂಡಲ್ಲಿರುವ ಸಮಯವನ್ನು ಕಡಿತಗೊಳಿಸುತ್ತಿದ್ದವು. ಈಗ ಅವುಗಳೂ ಕಾಣಿಸುತ್ತಿಲ್ಲ. ಮತ್ತೆ ಮರಿಯಿಡುವ ವೇಳೆಗೆ ಬರಬಹುದು.

ನಾನು ಮಾರ್ಚ್ ತಿಂಗಳಲ್ಲಿ ಈಶಾನ್ಯ ರಾಜ್ಯಗಳಿಗೆ ಪ್ರವಾಸ ಹೋಗಿದ್ದೆ. ಅಗೆಲ್ಲಾ ಪಾರಿಜಾತದ ಜೋಡಿ ಹಕ್ಕಿಗಳು ತಪ್ಪದೆ ಬರುತ್ತಿದ್ದು ಮರದಲ್ಲಿ ಇರುಳನ್ನು ಕಳೆಯುತ್ತಿದ್ದುವಂತೆ. ಅವುಗಳಿಗೆ ನಾನು ಕಾಣೆಯಾಗಿದ್ದುದರ ಬಗ್ಗೆ ದಿಗಿಲಾಗಿರಬೇಕು. ಯಾಕೆ ಇದನ್ನು ಹೇಳುತ್ತಿದ್ದೇನೆಂದರೆ ನಾನು ಬೆಂಗಳೂರಿಗೆ ಬಂದ ದಿನ ಸಂಜೆ ನನ್ನನ್ನು ಪಿಳಿ ಪಿಳಿ ನೋಡುತ್ತಿದ್ದವು. ಮತ್ತೆ ಒಂದೆರಡು ದಿನಗಳಲ್ಲಿ ಕಾಣೆಯಾದವು. ನಾನು ಸಂಜೆ ತಲೆಬಾಗಿಲಲ್ಲಿ ನಿಂತು ಪಾರಿಜಾತದ ಮರದಲ್ಲಿ ಅವುಗಳಿಗಾಗಿ ಹುಡುಕಾಡುತ್ತಿದ್ದೆ. ಕಾಣಿಸಲೇ ಇಲ್ಲ.

ಮಲಗು ಮಲಗು ಚಾರು ಲತೆಯೇ...ನಿನಗೂ ನೆರಳಿದೆ!
ಎರಡ್ಮೂರು ದಿನ ಕಳೆದಿರಬಹುದು, ಒಂದು ದಿನ ಬೆಳಿಗ್ಗೆ ಪಾರಿಜಾತ ಮರದಿಂದ ಕಿಚಪಿಚ ಸದ್ದು ಕೇಳಿಸಿತು. ನೋಡಿದರೆ ಅದೇ ಹಕ್ಕಿಗಳು ಗೆಲ್ಲಿನಿಂದ ಗೆಲ್ಲಿಗೆ ನೆಗೆಯುತ್ತಿವೆ [ಅದೇ ಹಕ್ಕಿಗಳಾ ಅಥವಾ ಆ ಜಾತೀಯ ಬೇರೆ ಹಕ್ಕಿಗಳಾ? ಗೊತ್ತಿಲ್ಲ]. ಕಳೆದುಕೊಂಡ ನಿಧಿ ಸಿಕ್ಕಷ್ಟೇ ಖುಷಿಯಾಯ್ತು. ಆದ್ರೆ ಆ ಖುಷಿ ಸಂಜೆ ಮರುಕಳಿಸಲಿಲ್ಲ. ಅವು ತಮ್ಮ ಮಾಮೂಲಿನ ಜಾಗದಲ್ಲಿರಲಿಲ್ಲ.ಅದು ಖಾಲಿಯಿತ್ತು. ಮರದಲೆಲ್ಲಾ ಕಣ್ಣಾಡಿಸಿದೆ ಕಾಣಲಿಲ್ಲ. ಈಗ ಎರಡ್ಮೂರು ದಿನದಿಂದ ಅಲ್ಲಿ ಒಂಟಿ ಹಕ್ಕಿಯೊಂದು ಕುಳಿತುಕೊಳ್ಳುತ್ತಲಿದೆ. ಅದರ ಜೊತೆ ಎಲ್ಲಿ ಹೋಗಿದೆಯೋ ಏನೋ! ಹಕ್ಕಿಗಳಲ್ಲಿ ತನ್ನ ಸಂಗಾತಿ ಜೀವಂತವಿರುವಾಗಲೇ ಇನ್ನೊಂದು ಹಕ್ಕಿಯನ್ನು ಹುಡುಕಿಕೊಳ್ಳುವುದಿಲ್ಲ ಎಂದು ಓದಿದ್ದೇನೆ. ಅಂದರೆ ಅದು ಸತ್ತು ಹೋಗಿರಬಹುದೇ? ಗೊತ್ತಿಲ್ಲ.

ನೀನೆಲ್ಲಿ ನಡೆದೆ ದೂರಾ....
ಯಾಕೋ ಏನೋ, ಒಮ್ಮೆ ಜತೆಯಾಗಿದ್ದು ಆಮೇಲೆ ಒಂಟಿಯಾದ ಯಾವ ಜೀವಿಯನ್ನು ಕಂಡರೂ ನನಗೆ ನೋವಾಗುತ್ತದೆ, ಮತ್ತು ಅದು ನಾನೇ ಆಗಿಬಿಡುತ್ತೇನೆ.

http://kannada.connectkannada.com/. ಅಂರ್ಜಾಲ ತಾಣದಲ್ಲಿ ನನ್ನ ಕಾಲಂ’ಚಲಿತ ಚಿತ್ತ’ ಆರಂಭವಾಗಿದೆ. ಅದಕ್ಕಾಗಿ ಬರೆದ ಮೊದಲ ಬರಹ]


0 comments: