ನಮಗೆಲ್ಲಾ ಗೊತ್ತಿದೆ; ನವೆಂಬರ್ ತಿಂಗಳೆಂದರೆ ಕರ್ನಾಟಕ
ರಾಜ್ಯೋತ್ಸವದ ಮಾಸವೆಂದು. ಅದರೆ ಈ ತಿಂಗಳಿಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಒಂದು
ವಿಶೇಷವಿದೆ. ಅದುವೇ ‘ ನ್ಯಾಷನಲ್ ನಾವೆಲ್ ರೈಟಿಂಗ್ ಮಂತ್’. ಇದು ಕಾದಂಬರಿ ಬರೆಯುವ
ತಿಂಗಳಂತೆ !
ಏನು ಹಾಗಂದರೆ ಅಂತ ಪ್ರಶ್ನಿಸುತ್ತಿದ್ದೀರಾ?
ಇದು ಅಂತರ್ಜಾಲದಲ್ಲಿ ಸ್ರುಜನಶೀಲ ಬರವಣಿಗಾಗಿ ಹುಟ್ಟಿಕೊಂಡ
ಒಂದು ವೇದಿಕೆ. ಅದರ ಹೆಸರು ’ನ್ಯಾನೋ ರೈಮೋ’
ಅಂದರೆ National writing month” ಈ ಅಂತರ್ಜಾಲ
ವೇದಿಕೆಯನ್ನು charis Baty ಎಂಬ ಹವ್ಯಾಸಿ ಪತ್ರಕರ್ತನೊಬ್ಬ ೧೯೯೯ರ ಜುಲೈ ೨೧ರಂದು ಸನ್
ಪ್ರಾನ್ಸಿಸ್ಕೊದಲ್ಲಿ ಆರಂಭಿಸಿದ. ಆ ವರ್ಷ ಈ ಅನ್ಲೈನ್ ವೇದಿಕೆಯಲ್ಲಿ ೨೧ ಕಾದಂಬರಿ
ಬರಹಕಾಂಕ್ಷಿಗಳು ತಮ್ಮ ಹೆಸರು ನೊಂದಾಯಿಸಿಕೊಂಡಿದ್ದರು. ಹವಾಮಾನ ಏರುಪೇರು ಕಾರಣಗಳಿಂದಾಗಿ ಮರುವರ್ಷ ಈ ಕಾರ್ಯಗಾರವನ್ನು ನವೆಂಬರ್ ತಿಂಗಳಿಗೆ
ಬದಲಾಯಿಸಲಾಯ್ತು. ಮತ್ತು ನ್ಯಾನೋ ರೈಮ್ ಚಟುವಟಿಕೆಗಳಿಗಾಗಿ ಸ್ವಂತ ವೆಬ್ಸೈಟ್ ಅನ್ನು ಲಾಂಚ್ ಮಾಡಿತು.
ಮರುವರ್ಷ ಈ ಕಾರ್ಯಗಾರದಲ್ಲಿ ಎರಡು ಲಕ್ಷ ಜನ ಭಾಗವಹಿಸಿದ್ದರೆಂದರೆ ಜನರಲ್ಲಿ ಬರೆಯುವ ಹಸಿವು
ಎಷ್ಟಿದೆಯೆಂಬುದರ ಅರಿವಾಗಬಹುದು. ನಾವಿಲ್ಲಿ ಗಮನಿಸಬೇಕಾಗಿರುವುದು ಇವರೆಲ್ಲಾ ಸಣ್ಣಪುಟ್ಟ ಕಥೆ
ಲೇಖನ ಬರೆಯಲು ಹೊರಟವರಲ್ಲ, ಕಾದಂಬರಿ ಬರೆಯಲು ಮುಂದಾದವರೆಂಬುದು ಮುಖ್ಯ.
ಪ್ರತಿಯೊಬ್ಬರ ಬದುಕಿನಲ್ಲಿಯೂ ಹಲವಾರು ಕಥೆಗಳಿರುತ್ತವೆ.
ಹೆಪ್ಪುಗಟ್ಟಿದ ಕಾವ್ಯವಿರುತ್ತದೆ. ಅದನ್ನೆಲ್ಲಾ ಜಗತ್ತಿನೆದುರು ಅಕ್ಷರಗಳಲ್ಲಿ ತೆರೆದಿಡುವ
ಸಾಮರ್ಥ್ಯ ಎಲ್ಲರಿಗೂ ದಕ್ಕಿರುವುದಿಲ್ಲ. ಅಂತವರು ಇಲ್ಲಿ ತಮ್ಮ ಸಾಮರ್ಥ್ಯವನ್ನು ಅಳೆದು ತೂಗಿ
ನೋಡಲು ಒಂದು ಅವಕಾಶವಿದೆ. ನಾನು ಕೂಡಾ ಅಂತ ಪ್ರಯತ್ನವೊಂದನ್ನು ಮಾಡಲು ಮುಂದಾಗಿ ನನ್ನ ಹೆಸರನ್ನು
ನೊಂದಾಯಿಸಿಕೊಂಡೆ. ಮತ್ತು ಮೊದಲ ದಿನದ ಒಂದು ಸಾವಿರ ಪದಗಳನ್ನು ಇದಕ್ಕಾಗಿಯೇ ನಾನು ರಚಿಸಿಕೊಂಡ
ಬ್ಲಾಗ್ ನಲ್ಲಿ ಅಪ್ಡೇಟ್ ಮಾಡಿ ಬಂದು ಈ ಲೇಖನವನ್ನು ಬರೆಯಲು ಮುಂದಾದೆ. ಭಯಂಕರ ಸೋಮಾರಿಯಾದ ನಾನು
ಇದನ್ನು ಯಾಕೆ ಬರೆಯಲು ಹೊರಟೆ ಅಂದರೆ ಕನ್ನಡದವಳಾದ ನನಗೆ ನವೆಂಬರ್ ಅನ್ನೋದು ಕನ್ನಡದ ತಿಂಗಳು.
ಸಾವಿರಾರು ಮೈಲಿ ದೂರದಲ್ಲಿರೋ ಅವರ್ಯಾರೋ ನವೆಂಬರ್ ಅನ್ನು ’ಕಾದಂಬರಿ ತಿಂಗಳು’ ಅಂತ
ಮಾಡಬೇಕಾದ್ರೆ ನಾವ್ಯಾಕೆ ನವೆಂಬರ್ ತಿಂಗಳನ್ನು ”ಕನ್ನಡ ಕಾದಂಬರಿ ತಿಂಗಳು’ ಅಂತ ಮಾಡಬಾರದು? ಆ ಮೂಲಕ ನವೆಂಬರ್ ತಿಂಗಳಿನಲ್ಲಿ
ಅಂತರ್ಜಾಲದಲ್ಲಿ ಕನ್ನಡ ಮನಸ್ಸುಗಳೆಲ್ಲವನ್ನೂ ಒಟ್ಟು ಮಾಡಿಕೊಂಡು ಸ್ರುಜನಶೀಲ ಬರವಣಿಗಳನ್ನು
ಆರಂಭಿಸಬಾರದು ಎನ್ನುತ್ತಾ ನ್ಯಾನೋರೈಮಿನ ವೆಬ್ ಸೈಟನ್ನು ಸಂಪರ್ಕಿಸಿ. ಪ್ರಾದೇಶಿಕ ಭಾಷೆಯಲ್ಲಿ
ಬರೆಯಬಹುದೇ ಎಂದು ಮಿಂಚಂಚೆಯನ್ನು ರವಾನಿಸಿದೆ. ಅದಕ್ಕೆ ಮರು ಉತ್ತರ ಬರುವ ಮೊದಲೇ ಆಂತರ್ಜಾಲವನ್ನು ಜಾಲಾಡಿ ಪ್ರಾದೇಶಿಕ ಭಾಷೇಯಲ್ಲಿಯೂ
ಬರೆಯಬಹುದೆಂಬುದನ್ನು ಮಾಹಿತಿಯನ್ನು ಪಡೆದುಕೊಂಡು ರೈಮೋದ ವೆಬ್ ಸೈಟಿನ ಮಾರ್ಗದರ್ಶನದಲ್ಲಿ ವರ್ಡ್
ಪ್ರೆಸ್ಸ್ ನಲ್ಲಿ ಬ್ಲಾಗ ರಚಿಸಿದೆ. ಮೊದಲ ಪೋಸ್ಟ್ ಆಗಿ ’ಅವಳು ಯಾರು’ ಎಂಬ ಪೋಸ್ಟ್ ಅಪ್ಡೇಟ್
ಮಾಡಿದೆ. ಇನ್ನೂ ನಿರಂತರವಾಗಿ ಮೂವತ್ತು ದಿನ ದಿನಕ್ಕೊಂದರಂತೆ ಮೂವತ್ತು ಪೋಸ್ಟ್ ಗಳನ್ನು
ಅಪ್ಡೇಟ್ ಮಾಡಬೇಕು.
ನ್ಯಾನೋ ರೈಮ್ ಗೆ ಬರೆಯಲು ಒಂಚೂರು ನಿಯಮಾವಳಿಗಳಿವೆ.
ಮೊದಲನೆಯಾದಾಗಿ ರೈಮೋದ ವೆಬ್ಸೈಟಿಗೆ ಲಾಗಿನ್ ಆಗಬೇಕು. ಅಲ್ಲಿ ತಮ್ಮ ಬಗೆಗಿನ ಮತ್ತು ತಾವು
ಬರೆಯಲಿರುವ ಕಾದಂಬರಿಯ ವಸ್ತುವಿನ ಬಗ್ಗೆ ಪುಟ್ಟ ಟಿಪ್ಪಣಿಯೊಂದನ್ನು ದಾಖಲಿಸಬೇಕು..ಅನಂತರದಲ್ಲಿ
ವಬ್ ಸೈಟ್ ನಿಮಗೆ ಬ್ಲಾಗ್ ರಚಿಸಿಕೊಳ್ಳಲು ಮಾರ್ಗದರ್ಶನ ಮಾಡುತ್ತದೆ. ಮಿಂಚಂಚೆಯ ಮೂಲಕ ನಿಮ್ಮ
ಸಂಶಯಗಳಿಗೆ ಉತ್ತರಿಸುತ್ತದೆ.
ಕಾದಂಬರಿಗೆ ಯಾವುದೇ ಸಬ್ಜೆಕ್ಟ್ ಅನ್ನು ನೀವು ಆಯ್ಕೆ
ಮಾಡಿಕೊಳ್ಳಬಹುದು, ಪ್ಯಾಂಟಸಿ, ಕೈಮ್, ವೈನೋದಿಕ, ಪ್ರವಾಸ. ಇತಿಹಾಸ, ವೈಜ್ನಾನಿಕ ಯಾವುದರ ಸುತ್ತ
ಬೇಕಾದರೂ ಕಥೆ ಹೆಣೆಯಬಹುದು. ಬರಹದ ಮೊದಲ ಪದ ನವೆಂಬರ್ ಒಂದರ ಮಧ್ಯರಾತ್ರಿ ಬ್ಲಾಗಿನಲ್ಲಿ
ದಾಖಲಾಗಿರಬೇಕು ಕೊನೆಯ ಪದ ನವೆಂಬರ್ ೩೦ರ ಮಧ್ಯರಾತ್ರಿ ೧೧.೫೯.೫೯ಕ್ಕೆ ಮುಕ್ತಾಯವಾಗಿರಬೇಕು. ಸಮಯ
ಮೀರಿ ಹೋಯ್ತು ಅಂದುಕೊಂಡಿರಾ? ಪರ್ವಾಗಿಲ್ಲ. ಮುಂದಿನ ವರ್ಷ ಪ್ರಯತ್ನಿಸಬಹುದು. ಅಲ್ಲಿ
ಭಾಗವಹಿಸಿದ ಕೆಲವರು ತಮ್ಮ ಬರವಣಿಗೆಯ ಬಗ್ಗೆ ಹೇಳುತ್ತಾ, ಮೊದಲ ಒಂದೆರಡು ವರ್ಷಗಳಲ್ಲಿ ಅವರ
ಪ್ರಯತ್ನ ಸಫಲವಾಗಲಿಲ್ಲವಂತೆ. ಆಮೇಲೆ ತಾವು ಕಾದಂಬರಿಯನ್ನು ಕ್ಲುಪ್ತ ಸಮಯಕ್ಕೆ ಮುಗಿಸಿರುವುದಾಗಿ
ಹೇಳಿಕೊಂಡಿದ್ದಾರೆ. ಇನ್ನು ಕೆಲವರು ತಮಲ್ಲಿ ಅಗಾಧ ಅನುಭವ ಮತ್ತು ವಿಷಯಗಳಿದ್ದರೂ ಬರವಣಿಗೆಗೆ ತರಲು
ಹಿಂಜರಿಕೆ ಇತ್ತು. ಈಗ ತಾನು ಇದನ್ನು ಸಾಧಿಸಿದ್ದರ ಬಗ್ಗೆ ಹೆಮ್ಮೆ ವ್ಯಕ್ತಪಡಿದ್ದಾರೆ. ಇಂತಹ
ಹಿಂಜರಿಕೆಯ ವ್ಯಕ್ತಿತ್ವದವರಿಗಾಗಿಯೇ ಈಗಾಗಲೇ ಹೆಸರು ಪಡೆದ ಕಾದಂಬರಿಕಾರರಿಂದ ತಾವು ತಮ್ಮ ಮೊದಲ
ಕಾದಂಬರಿಯನ್ನು ಹೇಗೆ ಬರೆದೆ? ವಸ್ತುವನ್ನು ಹೇಗೆ ಆಯ್ಕೆ ಮಾಡಿಕೊಂಡೆ ಎಂಬುದರ ಕುರಿತಾಗಿ
ಅನ್ಲೈನ್ ಉಪನ್ಯಾಸಗಳನ್ನು ರಿಮೋ ಏರ್ಪಡಿಸುತ್ತದೆ.
ಭಾರತದಲ್ಲಿಯೂ ರೈನೋ ಗೆ ಬರೆಯುವುದರ ಬಗ್ಗೆ ದೆಹಲಿ,
ಮುಂಬೈಗಳಲ್ಲಿ ನೊಂದಾಯಿತರ ನಡುವೆ ಆಗಾಗ ಸಂವಾದಗಳು ಏರ್ಪಾಡಾಗುತ್ತಿವೆ. ಅಲ್ಲಿ ಪರಸ್ಪರ
ಅನ್ನಿಸಿಕೆ, ಸಂದೇಹ, ಸಲಹೆ. ಸೂಚನೆಗಳ ವಿನಿಮಯವಾಗುತ್ತವೆ. ಹಿಂಜರಿಕೆಯಿರುವವರಿಗೆ
ಪ್ರೋತ್ಸಾಹವನ್ನು ತುಂಬಲಾಗುತ್ತದೆ.
ಯಶಸ್ವಿ
೧೬ ವರ್ಷಗಳನ್ನು ಪೂರೈಸಿದ ನ್ಯಾನೋ ರೈಮೋ ಪ್ರಸ್ತುತ ೧೭ನೇ ವರ್ಷಕ್ಕೆ ಕಾಲಿಟ್ಟಿದೆ. ಈ
ವರ್ಷದಲ್ಲಿ ಎರಡು ಲಕ್ಷದ ಹದಿನೆಂಟು ಸಾವಿರದ ಎಂಟನೂರ ತೊಂಬತ್ತೇಳು ಜನ ತಮ್ಮ ಹೆಸರನ್ನು
ನೊಂದಾಯಿಸಿಕೊಂಡಿದ್ದಾರೆ. ಈ ಅಂತರ್ಜಾಲ ವೇದಿಕೆ ತನ್ನನ್ನು ತಾನು ನ್ನ್ಯಾಷನಲ್ ರೈಟಿಂಗ್ ಮಂತ್
ಎಂದು ಹೇಳಿಕೊಂಡರೂ ಅದು ನಿಜಾರ್ಥದಲ್ಲಿ ಇಂತರ್ನ್ಯಾಷನಲ್ ಆಗಿದೆ. ಭಾರತದಿಂದಲೂ ಕಳೆದ ವರ್ಷ ೪,೫೦೦ ಜನರು ತಮ್ಮ ಹೆಸರು
ನೊಂದಾಯಿಸಿಕೊಂಡಿದ್ದರು. ಸ್ರುಜನಶೀಲ
ಬರವಣಿಗೆಯಲ್ಲಿ ನ್ಯಾನೋ ರೈಮೋ ಜಗತ್ತಿನಲ್ಲಿಯೇ ಅತ್ಯಂತ ದೊಡ್ಡದಾದ ವೇದಿಕೆ. ಇದರಲ್ಲಿ
ಭಾಗವಹಿಸಿದ ಬರಹಗಾರರು ತಮ್ಮನ್ನು ತಾವು ರೈಮೋಸ್ [’Wrimos] ಎಂದು ಹೆಮ್ಮೆಯಿಂದ ಕರೆದುಕೊಳ್ಳುತ್ತಾರೆ.
ನಾವು ಕನ್ನಡಿಗರಿಗೆ ನವಂಬರ್ ತಿಂಗಳೆಂದರೆ ಕನ್ನಡದ
ತಿಂಗಳು. ಕನ್ನಡದ ಘನತೆಯನ್ನು ಎತ್ತರಿಸುವ ಕೆಲಸಕಾರ್ಯಗಳನ್ನು ಮಾಡಲು ನಾವು ಹವಣಿಸುತ್ತೇವೆ.
ಆದರೆ ವಾಸ್ತವದಲ್ಲಿ ನಾವು ಕನ್ನಡದ ಹಬ್ಬವನ್ನು ಮಾತ್ರ ಆಚರಿಸುತ್ತೇವೆ. ಜನಪ್ರಿಯ ಕಾರ್ಯಕ್ರಮಗಳನ್ನು ಹಾಕಿಕೊಳ್ಳುತ್ತೇವೆ.
ದೂರದರ್ಶಿತ್ವವುಳ್ಳ ಯೋಜನೆಗಳನ್ನು ರೂಪಿಸುವುದೇ ಇಲ್ಲ. ನಾವು ನ್ಯಾನೋ ರೈಮೋ ದಂತಹ ಅನ್ಲೈನ್ ಚಟುವಟಿಕೆಗಳನ್ನು
ಹಾಕಿಕೊಳ್ಳುವುದರ ಮುಖಾಂತರ ಕನ್ನಡದ ಯುವ ಮನಸ್ಸುಗಳನ್ನು ಒಂದಾಗಿಸುವ ಪ್ರಯತ್ನ ಮಾಡಬಹುದು. ಇದು
ನವೆಂಬರ್ ತಿಂಗಳಿನಲ್ಲಿ ನಡೆಯುವ ಕನ್ನಡ ಕಟ್ಟುವ ನಿಜವಾದ ಕೆಲಸವಾಗಬಹುದು. ಯಾಕೆಂದರೆ ಮುಂಬರುವ
ದಿನಮಾನಗಳು ಖಂಡಿತವಾಗಿಯೂ ಅಂತರ್ಜಾಲದ ದಿನಗಳೇ ಆಗಿರುತ್ತವೆ.
ಕಥೆ ಎಂದರೆ ಎಲ್ಲರಿಗೂ ಇಷ್ಟ. ಪುಟ್ಟ ಮಕ್ಕಳು ಕಥೆ ಎಂದೊಡನೆ ಕಣ್ಣರಳಿಸಿ ಗಲ್ಲಕ್ಕೆ
ಕೈಯಿಟ್ಟು ಅಜ್ಜಿ ಕಥೆಗಳನ್ನು ಕೇಳುತ್ತಿರುವುದನ್ನು ನೀವೆಲ್ಲಾ ಗಮನಿಸಿಯೇ ಇರುತ್ತೀರಿ.
ದೊಡ್ಡವರಾದಂತೆಲ್ಲಾ ನಾವು ಕಲ್ಪನಾ ಜಗತ್ತಿನಿಂದ ಮೆಲ್ಲ ಮೆಲ್ಲನೆ ಕಟು ವಾಸ್ತವದ ಜಗತ್ತಿಗೆ ಬಂದು
ಬೀಳುತ್ತೇವೆ. ಆದರೆ ಕಥೆ ಎಂಬುದು ಮತ್ತೆ ಬಾಲ್ಯಕ್ಕೆ ಸೇತುವೆ ಕಟ್ಟುತ್ತದೆ; ಮತ್ತೆ ಯೌವನಕ್ಕೆ
ರೆಕ್ಕೆ ಮೂಡುತ್ತದೆ.
ನಾನಂತೂ ಬರೆಯಲು ಆರಂಬಿಸಿದ್ದೇನೆ. ಪ್ರವಾಸದ
ಹಿನ್ನೆಲೆಯಲ್ಲಿ ಸಧ್ಯಕ್ಕೆ ಬ್ಲಾಗ್ ಆರಂಭಿಸಿದ್ದೇನೆ. ಮುಂದೆ ಯಾವ್ಯವ ತಿರುವುಗಳನ್ನು
ಪಡೆಯುತ್ತದೋ ನನಗೇ ಗೊತ್ತಿಲ್ಲ. ಅಂತೂ ಕಳೆದು ಹೋಗುವುದಕ್ಕೆ ಸಿದ್ಧಳಾಗಿದ್ದೇನೆ. ಎಲ್ಲವೂ
ಸರಿಯಾದರೆ ದಶಂಬರ ಮೊದಲ ವಾರದಲ್ಲಿ ?’ ಎಂಬ ಕಾದಂಬರಿ ಓದುಗರ ಕೈಸೇರಲೂ ಬಹುದು!
0 comments:
Post a Comment