Friday, June 3, 2016

ಚಂದಿರನೇತಕೆ ಕಾಡುವನಮ್ಮ?


’ಚಂದಿರನೂರಿಗೆ ದಾರಿಗಳಿದ್ದರೆ ಕನಸೇ ಇರಬೇಕು’ ಬೆಳಿಗ್ಗೆಯಿಂದ ಈ ಸಾಲು ನಾಲಗೆಯಲ್ಲಿ ಕುಣಿಯುತ್ತಿತ್ತು... ಅದಕ್ಕೆ ನೆಪವಾಗಿದ್ದು ಮುಂಜಾನೆ ಕಂಡ  ಥಳಥಳಿಸುತ್ತಿರುವ ಪೂರ್ಣಚಂದ್ರ. ಬಾಲಭಾಸ್ಕರ ಇನ್ನೂ ತನ್ನ ಹೊನ್ನಕರಗಳನ್ನು ಚಾಚಿರಲಿಲ್ಲ..ಮಬ್ಬು ಬೆಳಕಿದ್ದರೂ ಕ್ಯಾಮರಾ ತಂದು ಪೋಕಸ್ ಮಾಡಿದೆ. ಆಗಲೇ ನನ್ನ ಮನಸು ಗುಣುಗುಣಿಸಿದ್ದು. ’ಚಂದಿರನೂರಿಗೆ ದಾರಿಗಳಿದ್ದರೆ ಕನಸೇ ಇರಬೇಕು. ಅಲ್ಲಿಯ ಒಡೆತನ ಸಿಗುವಂತಿದ್ದರೆ ನನಗೇ ಸಿಗಬೇಕು’

ಅದು ಯಾವಾಗಲೂ ಹೀಗೆಯೇ, ಬೆಳಿಗ್ಗೆ ಎದ್ದೊಡನೆ ’ಚುಕ್ಕಿ ಪುಟ್ಟ’ನ [ಪಗ್ ನಾಯಿ] ಬಾಯಿಗೊಂದು ಬಿಸ್ಕತ್ತು ಹಾಕಿ, ಮುಂಬಾಗಿಲು ತೆರೆದು ಪಾರಿಜಾತದ ಮರದಲ್ಲಿ ಕುಳಿತ ಜೋಡಿ ಹೂ ಹಕ್ಕಿಗಳನ್ನು ನೋಡಿ ’ಅಪ್ಪುಚ್ಚಿ ಕೂಚು’ ಎನ್ನುತ್ತಾ ಬಂದು ಹಿಂಬಾಗಿಲು ತೆರೆಯುವುದು. ಅಲ್ಲೇ ಬಾಗಿಲ ಚೌಕಟ್ಟಿಗೊರಗಿ ನಿಂತು ಅಶ್ವಥ ಮರದಲ್ಲಿ ಕುಳಿತ ಹಕ್ಕಿಗಳನ್ನು ನೋಡುವುದು. ಇದು ನನ್ನ ದಿನಚರಿಯ ಆರಂಭ. ಆದರೆ ಇವತ್ತು ಚಂದಮಾಮ ನನ್ನನ್ನು ಸೆಳೆದಿದ್ದ.

ಅವನ ಮತ್ತು ನಮ್ಮ ನಂಟು ನಿನ್ನೆ ಮೊನ್ನೆಯದಲ್ಲ. ಅಮ್ಮ ನಮ್ಮ ಬಾಯಿಗೆ ಮೊದಲು ತುತ್ತನಿಟ್ಟ ಸುವರ್ಣ ಘಳಿಗೆಯಿಂದ ಇಂದಿನವರೆಗೂ ಅದು ನಮ್ಮ ಸಂಗಾತಿ. ’ಚಂದಿರನೇತಕ್ಕೆ ಓಡುವನ್ನಮ್ಮ ಮೋಡಕ್ಕೆ ಹೆದರಿಹನೇ?’ ಹಾಡು ಯಾರಿಗೆ ನೆನಪಿಲ್ಲ?. ಅದು ಕನ್ನಡದ ಕಂದಮ್ಮಗಳ ಜೊಗುಳ ಹಾಡು. ಇಂಥ ಮುದ್ದುಮಕ್ಕಳ ಭಾವಕೋಶ ಬಿರುಕು ಬಿಟ್ಟದ್ದು ಚಂದ್ರನ ಮೇಲೆ ಮನುಷ್ಯನ ಪಾದಸ್ಪರ್ಶವಾದಾಗ. ಆಗ ಮಕ್ಕಳೆಲ್ಲ ಒಕ್ಕೊರಲಿನಿಂದ ಕೇಳಿದ್ದರು; ಚಂದ್ರಲೋಕದೊಳಿನ್ನು ಮನೆಯ ಕಟ್ಟುವರಂತೆ. ಇರುವೊಬ್ಬ ಚಂದ್ರನನ್ನು ಅಂದಗೆಡಿಸುವರೇ? ಚಂದಮಾಮ ಎಂದು ಕರೆವುದಾರನು ಅಮ್ಮ?
ಚಂದ್ರನಲ್ಲೊಂದು ಮೊಲವಿದೆ. ಅದು ಹುಣ್ಣಿಮೆಯಂದು ಕೈ ಜೋಡಿಸಿ ದೇವರಿಗೆ ನಮಸ್ಕರಿಸುತ್ತದೆಯೆಂದು ನನ್ನಜ್ಜಿ ಹೇಳುತ್ತಿದ್ದರು. ನಾನದನ್ನು ನಂಬಿದ್ದೆ ಮತ್ತು ಬೆಳದಿಂಗಳ ರಾತ್ರಿಗಳಲ್ಲಿ ತಲೆಯೆತ್ತಿ ಚಂದ್ರನನ್ನು ನೋಡುತ್ತಿದ್ದೆ. ಅಲ್ಲಿರುವ ಮೊಲವನ್ನು ಹುಡುಕುತ್ತಿದ್ದೆ. ಅದು ನನಗೆ ಕಂಡಿತ್ತು ಕೂಡಾ.

ಈ ಕಥೆಯನ್ನು ಮುಂದುವರಿಸಿದ್ದು ನನ್ನಮ್ಮ. ಅದು ಹೇಗೆಂದರೆ; ಪಶ್ಚಿಮ ಘಟ್ಟದ ದಟ್ಟ ಕಾಡಿನ ಅಂಚಿನೂರು ನಮ್ಮದು. ಹಾಗಾಗಿ ಕಾಡುಪ್ರಾಣಿಗಳು ನಮ್ಮ ಜಮೀನಿಗೆ ಧಾಳಿಯಿಡುವುದು ಸಾಮಾನ್ಯ. ನನ್ನೂರಿನಲ್ಲಿ ಎಲ್ಲರೂ ಸ್ವರಕ್ಷಣೆಗಾಗಿ ಬಂದೂಕಿನ ಪರವಾನಾಗಿ ಹೊಂದಿದ್ದಾರೆ. ನನ್ನಣ್ಣ ತುಂಬಾ ಒಳ್ಳೆಯ ಬೇಟೆಗಾರ.  ಆತನಿಗೆಮ್ರುಗಯಾವ್ಯಾಜದ ಹುಕ್ಕಿ ಬಂದಾಗ ತಲೆಗೆ ಫವರ್ಪುಲ್ಲಾದ ಟಾರ್ಚ್ ಕಟ್ಟಿ ಕೈಯ್ಯಲ್ಲಿ ಡಬ್ಬಲ್ ಬ್ಯಾರಲ್ ಗನ್ ಹಿಡಿದು ರಾತ್ರಿಯೆಲ್ಲಾ ಈ ಕಾಡಿನಲ್ಲಿ ಅಲೆದಾಡುತ್ತಿದ್ದ. ಹಾಗೆ ಆತ ಹೊರಟಾಗ ನಮ್ಮಮ್ಮ ತನ್ನೊಳಗೆ ಮಾತಾಡಿಕೊಂಡಂತೆ ಎನೋ ಮಣಮಣ ಅನ್ನುತ್ತಿದ್ದುದನ್ನು ಗಮನಿಸಿದ್ದೆ. ಅಮ್ಮ ಒಮ್ಮೆ ಹೀಗೆ ಗೊಣಗುತ್ತಿರುವಾಗ ನಾನು ’ಏನದು ನಿಮ್ಮ ಮಣ ಮಣ?’ ಎಂದು ಕೇಳಿದ್ದೆ.  ಅದಕ್ಕಮ್ಮ ಹೇಳಿದ್ರು; ಬೆಳದಿಂಗಳಿನಲ್ಲಿ ಮೊಲ ಎರಡು ಕಾಲಲ್ಲಿ ನಿಂತು ದೇವರಿಗೆ ಕೈಮುಗಿಯುತ್ತಿರುತ್ತದೆ. ಈ ನಿಷ್ಕರುಣಿ ಬೇಟೆಗಾರರು ಅದು ಭಕ್ತಿಪರವಶದಲ್ಲಿ ಮೈಮರೆತಿರುವಾಗ ಅದರತ್ತ ಗುಂಡು ಹಾರಿಸುತ್ತಾರೆ. ಅದಕ್ಕಾಗಿ ಅಣ್ಣ ಬೇಟೆಗೆ ಹೊರಟಾಗಲೆಲ್ಲ ”ಅವನ ಕಣ್ಣಿಗೆ ಮೊಲ ಬೀಳದಿರಲಿ ಸ್ವಾಮಿ ದೇವರೇ’ ಅಂತ ಬೇಡಿಕೊಳ್ಳುತ್ತಿದ್ದೇನೆ ಅಂತ ಪಿಸುದನಿಯಲ್ಲಿ ಹೇಳಿದ್ದರು.

ಚಂದ್ರನಲ್ಲಿ ಮೊಲ ಇದೆಯೆಂಬುದು ಜಾನಪದರ ಸಾರ್ವತ್ರಿಕ ನಂಬಿಕೆಯಾಗಿರಬೇಕು. ನಮ್ಮ  ಮನೆಗೆ ಅಂಧ್ರಮೂಲದ ಹೆಂಗಸೊಬ್ಬಳು ಮನೆಗೆಲಸಕ್ಕೆ ಬರುತ್ತಿದ್ದಳು. ಅವಳ ಪ್ರಕಾರ ಚಂದ್ರನಲ್ಲಿ ಮೊಲ ಇದೆ. ಸೂಕ್ಶ್ಮವಾಗಿ ನೋಡಿದರೆ ಅದು ಕಾಣುತ್ತಂತೆ. ಇನ್ನೂ ಸೂಕ್ಶ್ಮವಾಗಿ ನೋಡಿದರೆ ಅಲ್ಲಿ ಒಂದು ದೊಡ್ಡ ಮರಕ್ಕೆ ಒರಗಿ ಕುಳಿತ ಒಬ್ಬ ಹೆಂಗಸು ಕಾಣಿಸ್ತಾಳೆ. ಅದು ಚಂದ್ರನ ತಾಯಿಯಂತೆ. ಅವಳಿಗೆ ಮೂರು ಮಕ್ಕಳು. ಅವರ ಹೆಸರು ಚುಕ್ಕಿ,ಚಂದ್ರ,ಸೂರ್ಯ. ಆಕೆಗೆ ಒಮ್ಮೆ ಮಕ್ಕಳ ಮೇಲೆ ಸಿಟ್ಟು ಬಂದು  ಶಾಪ ಕೊಟ್ಟಳಂತೆ. ಹಾಗೇ ಶಾಪ ಕೊಟ್ಟುಬಂದು ವಿಷಾಧದಿಂದ ಮರಕ್ಕೆ ಒರಗಿ ಕೂತಳು. ಅನ್ನ ನೀರಿಲ್ಲ. ಯಾವುದೋ ಸಮಾರಂಭಕ್ಕೆ ಹೋದ ಸೂರ್ಯ ಮತ್ತು ಚಂದ್ರ ಗಡದ್ದಾಗಿ ಊಟ ಮಾಡಿ ಬಂದರಂತೆ. ಅವರಿಗೆ ಶಾಪ ಕೊಟ್ಟ ಅಮ್ಮನ ಮೇಲೆ ಸಿಟ್ಟಿತ್ತು. ಆದರೆ ಚಂದ್ರ ಊಟ ಮಾಡಿದ್ರೂ. ಅಮ್ಮನಿಗಾಗಿ ಉಗುರಿನೆಡೆಗಳಲ್ಲಿ ಆಹಾರವನ್ನು ಗುಟ್ಟಾಗಿ ಅಡಗಿಸಿಟ್ಟುಕೊಂಡು ತಂದು ಅಮ್ಮನಿಗೆ ತಿನ್ನಿಸುತ್ತಾನೆ.  ಮಗ ತಂದು ಕೊಟ್ಟ ರೊಟ್ಟಿ ತಿನ್ನುತ್ತ್ತಾ ಮರಕ್ಕೊರಗಿ ಕುಳಿತ ತಾಯಿಯನ್ನು ನಾವು ಭೂಮಿಯಿಂದ ನೋಡಬಹುದಂತೆ.
ಎಂತಹ ಸುಂದರ ಕಥೆಯಲ್ವಾ? ತಂಪು ತಂಪು ಚಂದ್ರ. ಪ್ರೇಮಿಗಳ ಸಂಗಾತಿ, ಕಡಲ ಮೋಹಿತ!

ಆಕಾಶದಲ್ಲಿರುವ ಅಸಂಖ್ಯ ನಕ್ಷತ್ರಗಳು ಸತ್ತವರ ಕಣ್ಣುಗಳಂತೆ, ಸತ್ತವರ ಆತ್ಮ ಅಂತಲೂ ಇನ್ನೊಂದು ನಂಬಿಕೆ. ಜ್ಯೋತಿಷ್ಯಶಾಸ್ತ್ರದಲ್ಲಿ ಚಂದ್ರ ಆತ್ಮದ ಸಿಂಬಲ್. ಬೆಳದಿಂಗಳ ರಾತ್ರಿಗಳಲ್ಲಿ ನಾನ್ಯಾಕೆ ಗಂಟೆಗಟ್ಟಲೆ ಆಕಾಶವನ್ನೇ ದಿಟ್ಟಿಸುತ್ತಾ ಕೂತುಬಿಡುತ್ತೇನೆ.? ತೆಂಗಿನ ಮರಗಳ ಗರಿಗಳೆಡೆಯಿಂದ ಇಣುಕುವ ಚಂದಿರನೇಕೆ ನನ್ನ ಮನಸೂರೆಗೊಳ್ಳುತ್ತಾನೆ? ಇದು ಆತ್ಮದ ಆಕರ್ಷಣೆಯಿರಬಹುದೇ? ಸ್ವಂತ ಬೆಳಕಿಲ್ಲದ ಈತನ ಹಿಂದೆ ನಾನೇಕೆ ಬಿದ್ದಿದ್ದೇನೆ?.

ಪದೇ ಪದೇ ನನಗೊಂದು ಕನಸು ಬೀಳುತ್ತಿರುತ್ತದೆ. ಆಕಾಶದಿಂದ ಬೆಳ್ಳಿರೇಖೆಯಂತ ದಾರವೊಂದು ಕೆಳಗಿಳಿಯುತ್ತಲಿದೆ.ನಾನು ಆ ಇಂದ್ರಛಾಪವನ್ನು ಹಿಡಿದು ಮೇಲೇರಿ ಹೋಗುತ್ತಿದ್ದೇನೆ.. ನನ್ನ ಕೈಯ್ಯಲೊಂದು ಹಕ್ಕಿಯಿದೆ, ಹಕ್ಕಿ ಕೊಕ್ಕಿನಲ್ಲೊಂದು ಹಸಿರೆಲೆಯಿದೆ. ಹಕ್ಕಿಯನ್ನು ನಾನು ತಂದಿದ್ದಲ್ಲ. ಅದು ನನ್ನ ಕೈಗೆ ಹೇಗೆ ಬಂತೋ ನನಗೆ ಗೊತ್ತಿಲ್ಲ. ಇದು ಚಂದ್ರನಿಗೆ ಜೊತೆಯಾಗಲೆಂದು ಹೊರಟಿದೆಯಾ? ಮೇಲೆರುತ್ತಾ ಮೇಲೆರುತ್ತಾ ಹಗ್ಗ ಕಾಣಿಸುತ್ತಿಲ್ಲ..ಕೆಳಗೆ ನೋಡಿದರೆ ಕಣ್ಣೆಟುಕದಷ್ಟು ದೊಡ್ಡ ಹೊಂಡ. ಕಿರುಚಲೆಂದು ಬಾಯಿ ತೆರೆದರೆ ಶಬ್ದ ಹೊರಡುತ್ತಿಲ್ಲ. ಹಕ್ಕಿ ಕೂಗುವುದು ಕೇಳಿಸುತ್ತಿದೆ, ಕಾಣುತ್ತಿಲ್ಲ.
ಇದರರ್ಥ ಏನು?

ಹೋಗಬೇಕು ಒಂದು ಹುಣ್ಣಿಮೆಯಲ್ಲಿ, ಅವನೊಡನೆ ಮರವಂತೆಯ ಕಡಲ ತಡಿಗೆ. ಅಲ್ಲಿಂದ ಸೌಪರ್ಣಿಕಾ ನದಿಯೆಡೆಗೆ ಪಂಥಕಟ್ಟಿ ಓಡಬೇಕು. ಅಲ್ಲಿಂದಿಲ್ಲಿಗೆ...ಇಲ್ಲಿಂದಲ್ಲಿಗೆ.ಹತ್ತಿಳಿಯಬೇಕು. ಕಡಲುಬ್ಬರದಲ್ಲೊಮ್ಮೆ ಪಾದ ತೋಯಿಸಬೇಕು,  ಇನ್ನೊಮ್ಮೆ ಸಿಹಿನೀರ ಮುಕ್ಕಳಿಸಬೇಕು. ಓಡಿ ಬರುವಾಗ ಹೆದ್ದಾರಿಯಲ್ಲೊಮ್ಮೆ ನಾವು ಪರಸ್ಪರ ಡಿಕ್ಕಿ ಹೊಡೆಯಬೇಕು. ಇದ ನೋಡಿ ಚಂದಮಾಮನಲ್ಲಿರುವ ಮೊಲ ಜಿಗಿ ಜಿಗಿದು ನಗಬೇಕು.


['ಚಲಿತ ಚಿತ್ತ’ ಕಾಲಂ ಗಾಗಿ ಬರೆದ ಲೇಖನ ]

0 comments: