Wednesday, June 15, 2016

ಕಪ್ಪೆ ಶಿಬಿರಕ್ಕೆ ಹೊರಟು ನಿಂತೆ!



ಮಗನನ್ನು ಮಂಗಳೂರಿನ ಸೈಂಟ್ ಅಲೋಶಿಯಸ್ ಕಾಲೇಜಿಗೆ ಬಿಟ್ಟು ಬಂದೆ.
ಮಗಳು ದೂರ ದೇಶದಲ್ಲಿದ್ದಾಳೆ.
ಮನೆ ಬಣಗುಡುತ್ತಲಿದೆ.
ಮೊನ್ನೆ ನನ್ನ ಗೆಳತಿಯೊಬ್ಬಳು ಅಮೇರಿಕಾದಿಂದ ಬಂದವಳು ನಿನ್ನೆ ತಾನೇ ಹಿಂತಿರುಗಿ ಹೋದಳು.
ಇತ್ತೀಚೆಗೆ ಗೆಳೆಯನೊಬ್ಬ ಇದ್ದಕ್ಕಿದ್ದಂತೆ ಮೌನ ವ್ರತ ಆರಂಭಿಸಿದವನು ನನ್ನೊಂದಿನ ಎಲ್ಲಾ ಸಂಪರ್ಕಗಳನ್ನು ಕಳೆದುಕೊಂಡ.
ಪಾರಿಜಾತ ಮರದಲ್ಲಿ ಜಕ್ಕವಕ್ಕಿಯಂತೆ ಕೂತಿರುತ್ತಿದ್ದ ಸೂರಕ್ಕಿಗಳಲ್ಲಿ ಒಂದು ಇದ್ದಕ್ಕಿದ್ದಂತೆ ಕಾಣೆಯಾಗಿ ಈಗ ಅದೂ ಕಾಣಿಸುತ್ತಿಲ್ಲ.
ಮರಕ್ಕೆ ಚಿಂತೆ ಆವರಿಸಿದೆ..
ಜೊತೆಯಾಗಿದ್ದದ್ದು ಬೇರೆಯಾಗುವುದು ಅತ್ಯಂತ ಸಹಜ. ಉಳಿದ ಒಂದು ಅಲ್ಲೇ ನಿಂತುಬಿಡಬಾರದು, ಮುಂದಡಿಯಿಡಬೇಕು. ಅದಿಲ್ಲವಾದರೆ ಹಿಂದಡಿ. ಪಕ್ಕಕ್ಕೆ ಸರಿದರೂ ಅದೊಂದು ಚಲನೆಯೇ. ಆದರೆ ನಿಶ್ಚಲತೆ ಸಲ್ಲ. ಅದು ಅಚೇತನ.
ಮೊನ್ನೆ ಮಂಗಳೂರಿನಿಂದ ಬೆಂಗಳೂರಿಗೆ ಪಯಣಿಸುತ್ತಿದ್ದೆ. ಇಡೀ ಶಿರಾಡಿ ಘಾಟಿ ಹೂಹೊದ್ದು ಮಲಗಿತ್ತು. ಅರೇ ಇಷ್ಟು ವರ್ಷ ಇದು ನನಗ್ಯಾಕೆ ಕಾಣಿಸುತ್ತಿರಲ್ಲ ಎನಿಸಿತು.
ಕ್ಯಾಮರಾ ತಗೊಂಡ ಮೇಲೆ ನಂಗೆ ಎಲ್ಲೆಲ್ಲೂ ಹಕ್ಕಿಗಳೇ ಕಾಣುತ್ತಿದ್ದವು,
ಇತ್ತೀಚಿನ ವರ್ಷಗಳಲ್ಲಿ ಹಿಮಾಲಯದ ಗಿರಿ ಶ್ರೇಣಿಗಳನ್ನು ಸುತ್ತುತ್ತಿದ್ದೇನೆ. ಹಾಗಾಗಿ ಇರಬಹುದೇ?
ಶಿರಾಡಿ ಮತ್ತು ಚಾರ್ಮಾಡಿ ಘಾಟಿಯ ಬಾಗು ಬಳುಕುಗಳೆಲ್ಲ ಹಿಮಾಲಯದ ಹಾಗೇ ಕಾಣುತ್ತಿವೆ; ಅದು ಹಿಮ ಹೊದ್ದ ಪರ್ವತ ಸಾಲು, ಇದು ಹಸಿರು ಹೊದ್ದ ಪಶ್ಚಿಮ ಘಟ್ಟಶ್ರೇಣಿ.                                          
ಬೇಸರವಾಯ್ತೇ? ಮನೆಯಿಂದ ಹೊರಬನ್ನಿ. ಆಕಾಶದತ್ತ ಕತ್ತೆತ್ತಿ ನೋಡಿ. ಆ ಅನಂತ ಆಕಾಶದಲ್ಲಿ ನಿಮಗೆ ಏನೆನೆಲ್ಲಾ ಕಾಣಬಹುದು.
ಎರಡು ಹೆಜ್ಜೆ ಮುಂದಿಡಿ. ಊರಂಚಿಗೆ ಬನ್ನಿ. ಬರುವಾಗ ಜೀವಚೈತನ್ಯ ತುಂಬಿತುಳುಕುತ್ತಿರುವ ಎಲ್ಲವನ್ನೂ ಕಣ್ಣಲ್ಲಿ ತುಂಬಿಕೊಳ್ಳಿ.
ತೆರೆದ ಕಿವಿಗೆ ಎಲ್ಲರ ಮಾತುಗಳು ಇಳಿಯುತ್ತಿರಲಿ.
ಊರಂಚಿನ ಮರದ ಬುಡದಲ್ಲಿ ಸುಮ್ಮನೆ ಕೂತುಬಿಡಿ. ತಂಗಾಳಿ ನಿಮ್ಮ ಮೈಸವರುತ್ತಾ ನಿಮ್ಮ ಕುಶಲ ವಿಚಾರಿಸುತ್ತದೆ.
ನಿಸರ್ಗಕ್ಕೆ ಸ್ವಯಂ ಚಿಕಿತ್ಸಾಗುಣವಿದೆ; ಅದು ನಿಮ್ಮ ಎಲ್ಲಾ ಬೇಸರಿಕೆಗಳನ್ನು ಹೊಡೆದೊಡಿಸುತ್ತದೆ.
ನಾನು ಕಪ್ಪೆ ಮೇಳಕ್ಕೆ ಹೊರಟು ನಿಂತಿದ್ದೇನೆ.
ಬಿಸಿಲೆ ಅರಣ್ಯದ ದಟ್ಟ ಕಾಡಿನ ಮಧ್ಯೆ ನಾಗರಿಕ ಜಗತ್ತಿನಿಂದ ದೂರವಾಗಿ ಯಾವುದೇ ಸಂಪರ್ಕ ಸಾಧನಗಳಿಲ್ಲದೆ ಮೂರು ದಿನ ಕಳೆಯಲಿದ್ದೇನೆ. ನಿಸರ್ಗದ ಲಯಕ್ಕೆ ಕಿವಿಯಾಗಲಿದ್ದೇನೆ.
ಜೀವಂತವಾಗಿ ಇರಬೇಕೆಂದರೆ ಇಂತಹದ್ದನ್ನೆಲ್ಲಾ ನಾವು ಆಗಾಗ ಮಾಡುತ್ತಿರಬೇಕು.
ಭವಿಷ್ಯದ ಗರ್ಭದಲ್ಲಿ ಏನೇನು ಅಡಗಿದೆಯೋ ಬಲ್ಲವರಾರು?
ಅಲ್ಲಿ, ಆ ದಟ್ಟ ಕಾನನದ ಬಸಿರೊಳಗೆ ನಾವು ಕಪ್ಪೆಗಳ ಹುಡುಕಾಟದಲ್ಲಿದ್ದಾಗ  ಕಪ್ಪೆಯೊಂದಕ್ಕೆ ನನ್ನ ಉಂಗುಷ್ಠದ ಬೆರಳು ತಾಗಿ ಅದು ಸುಂದರವಾದ ರಾಜಕುಮಾರನಾಗಿ  ನನ್ನೆದುರು ಪ್ರತ್ಯಕ್ಷನಾಗಬಹುದು. ಅವನು ನಸುನಕ್ಕು ನನ್ನೆಡೆಗೆ ಉಂಗುರ ಚಾಚಬಹುದು.
ನನ್ನ ಕಾಲುಗಳಲ್ಲಿ ಕಾಲುಂಗರವಿಲ್ಲ!


0 comments: