ಐದು ಸಾವಿರ ವರ್ಷಗಳಷ್ಟು ಪುರಾತನವಾದ ಸಿಂಧು ಕೊಳ್ಳದ ನಾಗರೀಕತೆ, ಸಿಂಧು ನದಿಯ ದಡದಲ್ಲಿ ಅರಳಿತ್ತು ಮತ್ತು ಹಿಂದುಸ್ತಾನಕ್ಕೆ ಆ ಹೆಸರು ಬರಲು ಕಾರಣವಾಗಿತ್ತು ಎಂಬುದನ್ನು ಚರಿತ್ರೆಯಲ್ಲಿ ಓದಿದ್ದೇವೆ.
ಆದರೆ ಆ ನದಿ ಮತ್ತು ನಾಗರೀಕತೆಯ ಪಳೆಯುಳಿಕೆಗಳು ಇಂದು ಪಾಕಿಸ್ತಾನದ ಆಸ್ತಿ. ಹಾಗಾಗಿ ನಮಗೆ
ಬೇಕೆಂದಾಗಲೆಲ್ಲಾ ಅದನ್ನು ನೋಡುವುದು ಸಾಧ್ಯವಿಲ್ಲ. [ಹಾಗೆಂದು ಭಾವಿಸಿದ್ದೆ] ಆದರೂ..ಬೊಗಸೆಯಲ್ಲಿ ನೀರನ್ನು ತೆಗೆದುಕೊಂಡು
ಅರ್ಚಿಸುವಾಗ ಸಪ್ತನಧಿಯಲ್ಲಿ ಸಿಂಧುವನ್ನು ಸೇರಿಸಿಸುತ್ತೇವೆ;
’ಗಂಗೇಚಾ ಯಮುನೇ ಚೈವಾ ಗೋಧಾವರಿ ಸರಸ್ವತಿ, ನರ್ಮದೇ, ಸಿಂಧು, ಕಾವೇರಿ ಜಲಸ್ಮಿನ್
ಸನ್ನಿಧಿಂಕರು’
ಹೀಗೆ ಭಾರತೀಯರು ಪರಮ ಪವಿತ್ರವಾದುದೆಂದು ಪೂಜಿಸುವ, ನಮ್ಮ ಭಾವಕೋಶದಲ್ಲಿ ಸೇರಿ ಹೋಗಿರುವ, ನಮ್ಮ ರಾಷ್ಟ್ರಗೀತೆಯಲ್ಲಿ ಉಲ್ಲೇಖಿತವಾಗಿ ನಮ್ಮವಳಾಗಿದ್ದ
ಸಿಂಧು ಭಾರತದಲ್ಲಿಯೂ ಸ್ವಲ್ಪ ದೂರ
ಹರಿಯುತ್ತಾಳೆಂದು ನನಗೆ ಬಹುಕಾಲದವರೆಗೂ ಗೊತ್ತಿರಲೇ ಇಲ್ಲ. ಆದರೆ ಕಳೆದ ವರ್ಷ ಯೋಗ ದಿನದಂದು
[ಜೂನ್ ೨೧] ಆ ನದಿ ದಂಡೆಯಲ್ಲಿ ಅಡ್ಡಾಡಿದೆ, ಅ ಪವಿತ್ರ
ಜಲವನ್ನು ಸ್ಪರ್ಶಿಸಿದೆ, ನದಿಗಿಳಿದು ಮಿಂದೆ. ಆಕೆಯನ್ನು ತಾಯಿ ಎಂದು ಪರಿಭಾವಿಸಿ
ಪುನೀತರಾದ ಭಕ್ತ ಜನ ಮತ್ತು ಇತ್ತೀಚೆಗೆ ವಾಸ್ತವದ ನೆಲೆಗಟ್ಟಿನಲ್ಲಿ ಲೇಹ್ ನಲ್ಲಿ ಆಚರಿಸಿಕೊಂಡು
ಬರುತ್ತಿರುವ ’ಸಿಂಧು ಉತ್ಸವ’ ದಲ್ಲಿ ಭಾಗಿಯಾಗಿ ಬಂದೆ.
ಕಳೆದ ಕೆಲವರ್ಷಗಳಿಂದ ಪ್ರತಿವರ್ಷ ನಾವು ಐದು ಮಂದಿ ಸ್ನೇಹಿತರು ಹಿಮಾಲಯದ ಕೆಲವು ಗಿರಿ ಶೃಂಗಗಳಿಗೆ ಟ್ರೆಕ್ಕಿಂಗ್
ಹೋಗುತ್ತಿದ್ದೆವು. ಕಳೆದ ವರ್ಷ ಸ್ವಲ್ಪ ಬದಲಾವಣೆ ಇರಲೆಂದು ಜಮ್ಮು ಕಾಶ್ಮೀರಕ್ಕೆ ಪ್ರವಾಸ
ಹೊರಟಿದ್ದೆವು. ಆ ಬಗ್ಗೆ ಮಾಹಿತಿ ಕಲೆ ಹಾಕಿಕೊಳ್ಳುತ್ತಿರುವಾಗ ನಾವು ಹೋಗುವ ಸಮಯದಲ್ಲೇ ಆ
ರಾಜ್ಯದ ಲಡಾಕ್ ಜಿಲ್ಲೆಯ ಲೇಹ್ ನಲ್ಲಿ ’ಸಿಂಧು ಉತ್ಸವ’ ನಡೆಯುತ್ತಿದೆಯೆಂದು ಗೊತ್ತಾಯ್ತು. ಅದರಲ್ಲಿ
ಭಾಗಿಯಾಗಬೇಕೆಂಬ ಉತ್ಸಾಹದಿಂದ ನಾವು ಬೆಂಗಳೂರಿನಿಂದ ಐದು ಮಂದಿ ರಾಜಧಾನಿ ರೈಲು ಏರಿದ್ದೆವು
ಸಿಂಧು ನದಿ ಟಿಬೇಟ್ ಪ್ರಸ್ಥಭೂಮಿಯಲ್ಲಿರುವ [ಈಗ ಚೀನಾದೇಶದ] ಮಾನಸಸರೋವರದ ಸಮೀಪ ಹುಟ್ಟಿ
ಕಾರಕೋರಂ ಹಿಮ ಪರ್ವತಗಳೆಡೆಯಲ್ಲಿ ಬಳುಕಿ
ಬಾಗುತ್ತಾ ಜಮ್ಮು ಕಾಶ್ಮೀರದ ಲಡಾಕಿನಲ್ಲಿ ಭಾರತವನ್ನು ಪ್ರವೇಶಿಸುತ್ತಾಳೆ. ಉಗಮದಿಂದ
ಪಾಕಿಸ್ತಾನದ ಕರಾಚಿಯಲ್ಲಿ ಕಡಲ ಸೇರುವವರೆಗಿನ ಸಿಂಧು ನದಿಯ ಒಟ್ಟು ಉದ್ದ ೩೧೮೦ ಕಿ.ಮೀ. ಇದರಲ್ಲಿ
ಕೇವಲ ೩೦೦ ಕಿ. ಮೀ ಮಾತ್ರ ಆಕೆ ಭಾರತದ ಭೂಭಾಗಕ್ಕೆ ಸೇರಿದವಳು.
ನಮ್ಮ ದೇಶಕ್ಕೆ ’ಹಿಂದುಸ್ತಾನ್’ ಎಂಬ ಹೆಸರನ್ನು ತಂದುಕೊಟ್ಟ,ಋಗ್ವೇದದಲ್ಲಿ ೧೭೬ ಬಾರಿ
ಉಲ್ಲೇಖಿತವಾದ, ಪುರಾತನವಾದ ಸಿಂಧು ನಾಗರೀಕತೆಯನ್ನು ತನ್ನ ಸೆರಗಿನಲ್ಲಿ ಪೋಷಿಸಿದ ಸಿಂಧು
ನದಿಯನ್ನು ಈಗ ಭಾರತದ ಐಕ್ಯತೆ ಮತ್ತು ಕೋಮು ಸೌಹಾರ್ಧದ ಸಂಕೇತವನ್ನಾಗಿಸಿಕೊಂಡು ಪ್ರತಿ ವರ್ಷ
ಜೂನ್ ತಿಂಗಳ ಹುಣ್ಣಿಮೆಯಂದು ’ಸಿಂಧು ದರ್ಶನ್ ಉತ್ಸವ್ ಅನ್ನು ಆಚರಿಸಲಾಗುತ್ತಿದೆ. ಅದನ್ನು ನಮ್ಮ ಗಡಿ ಕಾಯುವ ವೀರ ಸೈನಿಕರಿಗೆ ಅರ್ಪಿಸಲಾಗುತ್ತಿದೆ. ಈ ವರ್ಷ ಜೂನ್
೨೩ರಿಂದ ೨೬ರ ತನಕ ನಡೆಯಲಿದೆ.
ಈ ಉತ್ಸವಕ್ಕೊಂದು ಹಿನ್ನೆಲೆಯಿದೆ. ೧೯೯೬ರಲ್ಲಿ ಬಿಜೆಪಿಯ ನೇತಾರ ಲಾಲ್ ಕ್ರುಷ್ಣ ಅಡ್ವಾಣಿ
ಮತ್ತು ಆಗ ಪತ್ರಕರ್ತರಾಗಿದ್ದ ಈಗ
ರಾಜಕಾರಣಿಯಾಗಿರುವ ತರುಣ್ ವಿಜಯ್ ಲೇಹ್ ಗೆ ಭೇಟಿ ನೀಡಿದ್ದರು. ಲೇಹ್ ನಲ್ಲಿ ಸಿಂಧು
ನದಿಯನ್ನು ನೋಡಿದ ತರುಣ್ ವಿಜಯ್ ಬಹುಪುರಾತನ ಇತಿಹಾಸವನ್ನು ಹೊಂದಿರುವ ಇದರ ದಂಡೆಯಲ್ಲಿ
ಇಂತಹದೊಂದು ಉತ್ಸವವನ್ನು ಏರ್ಪಡಿಸುವ ಕನಸು ಕಂಡರು. ಮರು ವರ್ಷ ೧೯೯೭ರಲ್ಲಿ ಇದು ಸಾಕಾರವಾಯ್ತು. ಸಿಂಧು ನದಿಯ ಹಿನ್ನೆಲೆಯಲ್ಲಿ ಆ ನಾಗರೀಕತೆಯ ಸಿಂಬಲ್
ಆದ ಎತ್ತು ಮತ್ತು ಸಿಂಧು ನದಿಯನ್ನು ವ್ಯಾಖ್ಯಾನಿಸುವ ಋಗ್ವೇದದ ಸಾಲುಗಳನ್ನು ಒಳಗೊಂಡ ಸ್ಟಾಂಪ್
ಅನ್ನು ಭಾರತ ಸರಕಾರವು ೧೯೯೯ ರಲ್ಲಿ ಬಿಡುಗಡೆ ಮಾಡಿತ್ತು. ೨೦೦೦ ನೇ
ಇಸವಿಯ ಜೂನ್ ೭ರಂದು ನಡೆದ ಸಿಂಧು ಉತ್ಸವದಲ್ಲಿ ಆಗ ಪ್ರಧಾನಮಂತ್ರಿಯಾಗಿದ್ದ ಅಟಲ್
ಬಿಹಾರಿ ವಾಜಪಯಿಯವರು ಭಾಗವಹಿಸಿದ್ದರು. ಅಂದು ಅವರು ಸಿಂಧು ಕಲ್ಚರಲ್ ಸೆಂಟರ್ ಗೆ ಶಂಕುಸ್ಥಾಪನೆ
ಮಾಡಿದ್ದರು.
ಸಿಂಧು ಉತ್ಸವಕ್ಕೆ ರಾಷ್ಟ್ರದಾದ್ಯಂತ ಪ್ರವಾಸಿಗರು ಬರುತ್ತಾರೆ. ಹಾಗೆ ಬರುವಾಗ ಅವರು
ತಂತಮ್ಮ ರಾಜ್ಯಗಳ ನದಿಗಳ ಪವಿತ್ರ ಜಲವನ್ನು ಮಣ್ಣಿನ ಕುಂಭಗಳಲ್ಲಿ ಹೊತ್ತು ತಂದು ಸಿಂಧು ನದಿಯಲ್ಲಿ
ಸೇರಿಸಿ ವೈವಿದ್ಯತೆಯಲ್ಲಿ ಏಕತೆಯನ್ನು ಕಾಣುತ್ತಾರೆ.ನಾವು ಅಲ್ಲಿಗೆ ಹೋದಾಗ ನಮ್ಮ ರಾಜ್ಯದಿಂದಲೂ
೧೭೦ ಮಂದಿ ಕನ್ನಡಿಗರು ಭಾಗವಹಿಸಲೆಂದೇ ಇಲ್ಲಿಗೆ ಬಂದಿದ್ದರು. ಅವರನ್ನೆಲ್ಲಾ ಅಲ್ಲಿ ಕಂಡು
ಮಾತಾಡಿಸಿದ್ದು ನಮಗೆ ಮುದವನ್ನು ನೀಡಿತ್ತು.
ವೈವಿಧ್ಯತೆಯಲ್ಲಿ ಏಕತೆಯನ್ನು ಸಾರುವ, ರಾಷ್ಟ್ರೀಯ ಭಾವೈಕತೆಯನ್ನು ಬಿಂಬಿಸುವ ಈ ಉತ್ಸವವನ್ನು
ಎಲ್ಲಾ ಮತಧರ್ಮವರು ಒಟ್ಟಾಗಿ ಸೇರಿ ಆಚರಿಸುತ್ತಾರೆ. ನಿಮಗೆ ಗೊತ್ತಿರಬೇಕು, ಇಲ್ಲಿ ಹಿಂದುಗಳು
ಅಲ್ಪಸಂಖ್ಯಾತರು. ಬೌದ್ಧರ ಬಾಹುಳ್ಯವಿರುವ ಲಡಾಕಿನಲ್ಲಿ ಮುಸ್ಲಿಂ ಸಮುದಾಯ ಎರಡನೇ
ಸ್ಥಾನದಲ್ಲಿದ್ದಾರೆ. ಲಡಾಕ್ ಬುದ್ದಿಸ್ಟ್ ಅಸೋಶಿಯನ್, ಶಿಯಾ ಮಜ್ಲೀನ್,ಸುನ್ನಿ ಅಂಜುಮಾನ್,
ಕ್ರಿಶ್ಚಿಯನ್ ಮೊರಾವಿಯನ್ ಚರ್ಚ್, ಹಿಂದು ಟ್ರಸ್ಟ್, ಸಿಖ್ ಗುರುದ್ವಾರ ಪ್ರಬಂಧಕ್ ಸಮೀತಿ-
ಇವರೆಲ್ಲಾ ಒಟ್ಟಾಗಿ ಭಾರತದ ಪುರಾತನ ನಾಗರೀಕತೆ ಮತ್ತು ಸಂಸ್ಕ್ರುತಿಯನ್ನು
ಕೇಂದ್ರವಾಗಿಟ್ಟುಕೊಂಡು ಮೂರು ದಿವಸಗಳ ಸಿಂಧು ಉತ್ಸವದ ಕಾರ್ಯಕ್ರಮಗಳ ರೂಪರೇಶೆಯನ್ನು
ತಯಾರಿಸುತ್ತಾರೆ..ಇಲ್ಲಿಯ ಸಾಂಸ್ಕ್ರುತಿಕ ಕಾರ್ಯಕ್ರಮಗಳಲ್ಲಿ ಈಶಾನ್ಯ ರಾಜ್ಯಗಳ ತಂಡಗಳು ಕೂಡಾ
ಭಾಗವಹಿಸಿದ್ದನ್ನು ನಾವು ಕಂಡೆವು. ಉತ್ಸವ ನಡೆಯುವ ಸಮಯದಲ್ಲೇ ಪ್ರಥಮ ಅಂತರಾಷ್ಟ್ರೀಯ ಯೋಗ ದಿನವೂ
ಬಂದಿತ್ತು. ಹಾಗಾಗಿ ನದಿ ದಂಡೆಯಲ್ಲೇ ಸಾಮೂಹಿಕ ಯೋಗವನ್ನೂ ಮಾಡಲಾಯ್ತು.
ಅತ್ಯಂತ ಬಿಗಿ ಬಂದೋಬಸ್ತಿನಲ್ಲಿ ಸಿಂಧು ಉತ್ಸವ ನಡೆಯುತ್ತದೆ; ಯಾಕೆಂದರೆ ಅದು ಕಾಶ್ಮೀರ.
ಅಥಿತಿಗಳು ಭಾಷಣ ಮಾಡುವಾಗ ಯಾವ ಕೋನದಿಂದ ನೋಡಿದರೂ ಅವರ ಮುಖ್ದ ಕಿಂಚಿತ್ ದರ್ಶನವೂ ಆಗಲಿಲ್ಲ.
ಅವರ ಗನ್ ಮ್ಯಾನ್ ಗಳು, ಸೇನಾ ಸಿಬ್ಬಂದಿ ಮೆಷಿನ್ ಗನ್ ಹಿಡಿದು. ಅವರನ್ನು ಎರಡ್ಮೂರು ಸುತ್ತು
ವರ್ತುಲಾಕಾರದಲ್ಲಿ ಕೋಟೆ ಕಟ್ಟಿದ್ದರು. ನಮ್ಮ ಪ್ರವಾಸೋಧ್ಯಮ ಮತ್ತು ಸಂಸ್ಕ್ರುತಿ ಸಚಿವರಾದ
ಮಹೇಶ್ ಶರ್ಮ, ಜಮ್ಮು ಕಾಶ್ಮೀರದ ಸ್ಪೀಕರ್ ಕವೀಂದರ್ ಗುಪ್ತಾ, ಉಪಮುಖ್ಯಮಂತ್ರಿ ನಿರ್ಮಲ್ ಕುಮಾರ
ಸಿಂಗ್, ಲೇಹ್ ನ ಸಂಸತ್ ಸದಸ್ಯರಾದ ತುಪ್ತಾನ್ ಚುವಾಂಗ್, ಸಿಂಧು ಉತ್ಸವ ಸಮಿತಿಯ ಪೋಶಕರಾದ
ಇಂದ್ರೇಶ್ ಕುಮಾರ ಮುಂತಾದ ಗಣ್ಯರು ಉತ್ಸವದಲ್ಲಿ ಭಾಗಿಯಾಗಿ ಸಿಂಧು ನದಿಯ ಪ್ರಾಚೀನತೆ ಮತ್ತು
ಅದನ್ನು ಪುನರುಜ್ಜೀವಗೊಳಿಸುವ ಬಗ್ಗೆ ಲಡಾಕಿ ಸಂಸ್ಕ್ರುತಿಯ ಬಗ್ಗೆ, ಅಖಂಡ ಭಾರತದಲ್ಲಿ ತಮಗಿರುವ
ನಂಬುಗೆಯ ಬಗ್ಗೆ, ಲಡಾಕಿನ ಬೌಗೋಳಿಕ ವಿಶಿಷ್ಟತೆಯ ಬಗ್ಗೆ ಮಾತಾಡಿದರು. ಇದೆಲ್ಲವೂ ಪೋಲಿಸ್ ಮತ್ತು
ಸೇನೆಯ ಸರ್ಪಗಾವಲಿನಲ್ಲೇ ನಡೆದವು. ಹೆಜ್ಜೆ ಹೆಜ್ಜೆಗೂ ಅಲ್ಲಿ ಸೇನಾ ಸಿಬ್ಬಂದಿಯೇ
ಕಾಣುತ್ತಿದ್ದರು.
ಸಿಂಧು ಕೊಳ್ಳ-ಮ್ಯಾಗ್ನಟಿಕ್ ಹಿಲ್ ಹತ್ತಿರ |
ಅವರೆಲ್ಲರ ಮಾತಿನ ಸಾರಾಂಶ ಇಷ್ಟು; ಸಮುದ್ರ ಮಟ್ಟದಿಂದ ೧೧೫೦೦ ಅಡಿ ಎತ್ತರದಲ್ಲಿರುವ ಲಡಾಕ್
ನಲ್ಲಿ ಆಮ್ಲಜನಕದ ಕೊರತೆಯಿದೆ, ಹಸಿರಿಲ್ಲ. ಸುತ್ತ ಬೋಳು ಪರ್ವತಗಳು. ಅಲ್ಲಲ್ಲಿ ಗಿಡ್ಗಳಿದ್ದರೂ
ಅವು ೩-೪ ಅಡಿಗಳಿಗಿಂತ ಜಾಸ್ತಿ ಎತ್ತರ ಬೆಳೆಯಲಾರವು.. ಹಾಗಾಗಿ ಹೊರ ರಾಜ್ಯಗಳಿಂದ ಬರುವ
ಪ್ರವಾಸಿಗರಿಗೆ ಇಲ್ಲಿ ತಲೆ ನೋವು ಬರುವುದು ಸಾಮಾನ್ಯ. ಅದಕ್ಕಾಗಿ ಯಾಥೇಚ್ಛ ನೀರು ಕುಡಿಯಿರಿ. ಇದು
ಭಾರತದ ಮರುಭೂಮಿ. ಈ ಮಣ್ಣಿನ ಧಾರಣಾಶಕ್ತಿ ಕಡಿಮೆ. ಹಾಗಾಗಿ ಅತೀ ಎತ್ತರದ ಕಟ್ಟಡಗಳನ್ನು
ಕಟ್ಟಿದರೆ ಅಪಾಯ ಕಟ್ಟಿಟ್ಟಬುತ್ತಿ. ತಾವು
ಮಂಗೋಲಿಯನ್ ಬುಡಕಟ್ಟಿಗೆ ಸೇರಿದವರಾದ ಕಾರಣ ಭಾರತದ ಇತರ ಜನರಿಗಿಂತ ಭಿನ್ನವಾಗಿ ಕಾಣುತ್ತೇವೆ.
ಹಾಗಾಗಿ ಅವರು ನಮ್ಮನ್ನು ವಿದೇಶಿಯರೆಂದು ಭಾವಿಸುತ್ತಾರೆ. ಆದ್ರೆ ನಾವು ದೇಶಭಕ್ತರು. ಕಾರ್ಗಿಲ್
ಯುದ್ಧದಲ್ಲಿ ಅತಿ ಹೆಚ್ಚು ಬಲಿದಾನಗೈದವರು ನಾವೇ. ಅದಕ್ಕಾಗಿಯೇ ನಾವು ಮತ್ತೆ ಮತ್ತೆ
ಹೇಳುತ್ತಿದ್ದೇವೆ;ನಾವೂ ನಿಮ್ಮವರೇ!
ಉದಯವಾಣಿ ಸಾಪ್ತಾಹಿಕದಲ್ಲಿ ಪ್ರಕಟವಾದ ಬರಹ. |
ನಮ್ಮ ದೇಶದ ಮುಕುಟ ಮಣಿಯಂತಿರುವ ಜಮ್ಮು ಕಾಶ್ಮೀರ ರಾಜ್ಯದ ಲಡಾಕ್ ನಲ್ಲಿ ನಡೆಯುವ ಈ ಉತ್ಸವದಲ್ಲಿ ನೀವು
ಭಾಗವಹಿಸಬೇಕೆಂದು ಬಯಸಿದ್ದಲ್ಲಿ ಒಂಚೂರು ಸಿದ್ಧತೆಗಳೊಡನೆ ಹೋಗುವುದು ಒಳ್ಳೆಯದು. ಯಾಕೆಂದರೆ
ಜಮ್ಮು ಕಾಸ್ಮೀರ ನಮ್ಮ ದೇಶದ ಉಳಿದ ರಾಜ್ಯಗಳಂತಲ್ಲ.ಅದಕ್ಕೆ ವಿಶೇಷ ಅಧಿಕಾರವಿದೆ. ಕಾನೂನಿದೆ;
ಪ್ರತ್ಯೇಕ ಅಸ್ತಿತ್ವವಿದೆ. ಅದು ಸೇನೆಯ ಕಟ್ಟುನಿಟ್ಟಿನ ಕಣ್ಗಾವಲಿನಲ್ಲಿರುವ ನಾಡು. ಅಲ್ಲಿ
ನಿಮ್ಮ ಪ್ರೀ ಪೆಯ್ಡ್ ಮೊಬೈಲ್ ಪೋನ್ ಕೆಲಸ ಮಾಡುವುದಿಲ್ಲ.
ಇದರ ಒಂದು ಜಿಲ್ಲೆಯಾದ ಲಡಾಕ್ ನಲ್ಲಿ
ಸಿಂಧು ಯಾತ್ರ ಉತ್ಸವ್ ನಡೆಯುತ್ತದೆ. ಇದು ಸಮುದ್ರಮಟ್ಟದಿಂದ ೧೧೫೦೦ ಕಿ ಮೀ ಎತ್ತರದಲ್ಲಿದೆ. ಸುತ್ತಮುತ್ತ ಹಿಮಾಲಯ
ಪರ್ವತ ಶ್ರೇಣಿ. ಗಿಡಮರಗಳಿಲ್ಲ. ಆಮ್ಲಜನಕದ ಕೊರತೆಯಿದೆಖಾಗಾಗಿ ಇಲ್ಲಿಗೆ ಬರುವ ಪ್ರವಾಸಿಗರು
ಇಲ್ಲಿಯ ಹವಮಾನಕ್ಕೆ ಒಗ್ಗಿಕೊಳ್ಳುವಂತೆ ಒಂದು ದಿವಸ ಕಡ್ಡಾಯವಾಗಿ ರೂಮಿನೊಳಗೆ ಇರಬೇಕಾಗುತ್ತದೆ.
ಸಣ್ಣಗೆ ತಲೆನೋಯುವುದು, ಒಮ್ಮೊಮ್ಮೆ ವಾಕರಿಕೆ ಬರುವುದು ಇವೆಲ್ಲ ಅಲ್ಟಿಟ್ಯೂಡ್ ಸಿಕ್ನೆಸ್ ಗಳೇ.
ಹಾಗಾಗಿಯೇ ಇಲ್ಲಿಯ ಎಲ್ಲಾ ಪ್ರವಾಸಿ ವಾಹನಗಳಲ್ಲಿ ಅಕ್ಸಿಜನ್ ಸಿಲಿಂಡರ್ ಗಳನ್ನು
ಇಟ್ಟಿರುತ್ತಾರೆ.
ತುಂಬಾ ಮಿತವ್ಯಯದಲ್ಲಿ ನಮ್ಮ ಪ್ರವಾಸ ಹಮ್ಮಿಕೊಳ್ಳುತ್ತಿದ್ದುದರಿಂದ ರೈಲಿನಲ್ಲಿ ದೆಹಲಿ ತಲುಪಿದೆವು.
ದೆಹಲಿಯಿಂದ ಲೇಹ್ ತಲುಪಲು ಇರುವುದು ಎರಡೇ ರಸ್ತೆ
ಮಾರ್ಗಗಳು. ಒಂದು ಮನಾಲಿ ರೂಟ್. ಇನ್ನೊಂದು ಶ್ರೀನಗರ ರೂಟ್. ಶ್ರೀನಗರ ಮಾರ್ಗದಲ್ಲಿ ಹೋದರೆ
ನಿಸರ್ಗದ ಅನುಪಮ ಐಸಿರಿಯ ದರ್ಶನವಾಗುತ್ತದೆಯೆಂದು ಆ ರೂಟನ್ನೇ ಆಯ್ಕೆಮಾಡಿಕೊಂಡೆವು. ಇದಲ್ಲದೆ
ಮನಾಲಿ ರೂಟ್ ಇನ್ನೂ ಪ್ರಯಾಣಕ್ಕೆ ತೆರವಾಗಿರಲಿಲ್ಲ. ರಸ್ತೆಗಳಲ್ಲಿ ಆಳೆತ್ತರದ ಹಿಮ
ಆವರಿಸಿಕೊಂಡಿತ್ತು.
ಹಸಿರು ಕಾಣಿಸುತ್ತಿರುವುದು ಸಿಂಧು, ಬೂದು ಬಣ್ಣದ್ದು ಝನ್ಸ್ ಕಾರ್-ಲೇಹ್ ಸಮೀಪ ನಿಮು ಎಂಬ ಊರಲ್ಲಿ |
ದೆಹಲಿಯಿಂದ ವಿಮಾನದಲ್ಲಿ ಜಮ್ಮು ಮೂಲಕವಾಗಿ ಶ್ರೀನಗರ ತಲುಪಿ ಅಲ್ಲಿ ಆ ದಿನ
ತಂಗಿ ಅಲ್ಲಿಂದ ಸರಕಾರಿ ಬಸ್ಸಿನಲ್ಲಿ ಕಾರ್ಗಿಲ್
ಮೂಲಕವಾಗಿ ಲೇಹ್ ತಲುಪುವುದು ನಮ್ಮ ಪ್ಲಾನ್ ಆಗಿತ್ತು. ರಸ್ತೆ ಮೂಲಕ ಹೋಗಿದ್ದರೆ ದೆಹಲಿಯಿಂದ ಶ್ರೀನಗರ
ತಲುಪಲು ಎರಡು ದಿನ ಅಲ್ಲಿಂದ ಲೇಹ ತಲುಪಲು ಇನ್ನೆರಡು ದಿನ. ಒಟ್ಟು ನಾಲ್ಕು ದಿನಗಳಾಗುತ್ತಿತ್ತು.
ಇನ್ನೊಂದು ಮನಾಲಿ ರೂಟ್.ಇಲ್ಲಿಯೂ ದೆಹಲಿಯಿಂದ ಮನಾಲಿ ಮೂಲಕವಾಗಿ ಲೇಹ್ ತಲುಪಲು ನಾಲ್ಕು ದಿನಗಳು ಬೇಕು. ಅಂದರೆ ನಿಮ್ಮ
ಪ್ರವಾಸದ ಒಟ್ಟು ದಿನಗಳಲ್ಲಿ ಎಂಟು ದಿನಗಳು ದಾರಿ ಕ್ರಮಿಸುವುದರಲ್ಲೇ ಕಳೆದು ಹೋಗುತ್ತದೆ. ಆದರೆ
ವಿಮಾನ ಪ್ರಯಾಣದಲ್ಲಿ ಸಿಗದ ಕಣಿವೆ ರಾಜ್ಯದ ಅದ್ಭುತವಾದ ಗಿರಿ ಶಿಖರಗಳ ಸೌಂದರ್ಯ, ನಮ್ಮ ಗಡಿ
ಕಾಯುವ ಯೋದರ ಅಸಂಖ್ಯ ಸೇನಾನೆಲೆಗಳನ್ನು ನೋಡುವ ಭಾಗ್ಯ ರಸ್ತೆ ಪಯಣದಲ್ಲಿ ನಮ್ಮದಾಗುತ್ತದೆ.
ಶ್ರೀನಗರ ದಾರಿಯಂತೂ ಅತ್ಯಂತ ರಮಣೀಯವೂ, ರುದ್ರಭಯಂಕರವೂ ಆಗಿರುತ್ತದೆ. ಸೋನು ಮಾರ್ಗವಾಗಿ ಬರುವಾಗ
ಬಾಲ್ಟಾಲ್ ಹತ್ತಿರ ಏರಿ ಬರುವ ಸುತ್ತು ಹಾದಿಯಲ್ಲಿ ಜೀವ ಕೈಯ್ಯಲ್ಲಿ ಹಿಡಿದುಕೊಂಡು
ಕುಳಿತಿರಬೇಕಾಗುತ್ತಿತ್ತು. ಇಲ್ಲಿಯೇ ರಸ್ತೆ ಅಮರನಾಥ್ ಕಡೆಗೆ ಕವಲೊಡೆಯುತ್ತದೆ. ಬಲ್ಟಾಲ್ ನಿಂದ
ಕೇವಲ ೨೫ ಕಿ.ಮೀ ದೂರ ನಡೆದರೆ ಅಮರನಾಥ್ ಗುಹೆಗಳು ಸಿಗುತ್ತವೆ. ನಾವು ಆದಾರಿಯಲ್ಲಿ ಬಂದಾಗ ಸೇನೆ
ಯಾತ್ರಾರ್ಥಿಗಳಿಗಾಗಿ ಡೇರೆಯನ್ನು ಸಿದ್ಧಪಡಿಸುತ್ತಿತ್ತು.
ಜಮ್ಮು ಕಾಶ್ಮೀರಕ್ಕೆ ಪ್ರವಾಸ ಹೋಗಬೇಕೆನ್ನುವ ಹಂಬಲವುಳ್ಳವರು ಸಿಂಧು ಉತ್ಸವಕ್ಕೆ ತಮ್ಮ ಡೇಟ್
ಅನ್ನು ಹೊಂದಿಸಿಕೊಂಡರೆ ಅದು ನಿಶ್ಚಯವಾಗಿಯೂ ಪ್ರವಾಸದ ಬೋನಸ್ಸೇ !.
[ಉದಯವಾಣಿಯ ”ಸಾಪ್ತಾಹಿಕ ಸಂಪದ’ದಲ್ಲಿ ಪ್ರಕಟವಾದ ಲೇಖನ ]
.
0 comments:
Post a Comment