Wednesday, November 1, 2017

ಅನ್ನಪೂರ್ಣೇಶ್ವರಿ ಈ ಕನ್ನಡಾಂಬೆ

ಅನ್ನಪೂರ್ಣೇಶ್ವರಿ ಈ ಕನ್ನಡಾಂಬೆ
ಮನುಷ್ಯನಾದವನಿಗೆ ತನ್ನ ನೆಲ, ಜಲ, ನುಡಿಯ ಬಗ್ಗೆ ಅಭಿಮಾನವಿದ್ದೇ ಇರುತ್ತದೆ. ಇಂತಹ ಚೌಕಟ್ಟುಗಳನ್ನು ತಾನು ಮೀರಿದವನು\ಳು, ನಾನು ವಿಶ್ವಪ್ರೇಮಿ ಎಂದುಕೊಂಡವರು ಕೂಡಾ ತನ್ನ ಹೆತ್ತ ತಾಯಿಯನ್ನು ಪ್ರೀತಿಸದೇ ಇರಲಾರರು. ಹಾಗೆ ಪ್ರೀತಿಸಿದ್ದು ನಿಜವಾಗಿದ್ದಲ್ಲಿ ಅವರಿಗೂ ನಾಡು ನುಡಿಯ ಬಗ್ಗೆ ಅಭಿಮಾನವಿದ್ದಿರಲೇ ಬೇಕು.
ನಾನು ತುಳುನಾಡಿನವಳು. ಈಗ ರಾಜಧಾನಿಯಲ್ಲಿದ್ದೇನೆ. ನಾನಿರುವ ಪರಿಸರದಲ್ಲಿ ಎಲ್ಲಿಯಾದರು ತುಳು ಮಾತುಗಳು ನನ್ನ ಕಿವಿಗೆ ಬಿದ್ದರೆ ತಕ್ಷಣ ಕಿವಿ ಚುರುಕಾಗುತ್ತದೆ. ಒಂದು ಕ್ಷಣ ಕತ್ತು ಆ ಕಡೆಗೆ ಹೊರಳುತ್ತದೆ. ಅದುವೇ ತಾಯ್ನುಡಿಯೆಡೆಗಿನ ಸೆಳೆತ, ಮೋಹ, ಅಭಿಮಾನ.
ವಿಶ್ವಪ್ರಜ್ನೆ, ಅನಿಕೇತನ, ಗ್ಲೋಬಲ್ ವಿಲೇಜ್ ಎಂದೆಲ್ಲಾ ಮಾತಾಡುವ ನಮ್ಮ ಭಾವಕೋಶದಲ್ಲಿ ನಮಗೇ ಗೊತ್ತಿಲ್ಲದ ಹಲವಾರು ವಿಷಯಗಳು ಅಡಗಿ ಕುಳಿತಿರುತ್ತವೆ. ಅವು ಯಾವ್ಯಾವ ಸಂದರ್ಭಗಳಲ್ಲಿ ತಮ್ಮ ಇರವನ್ನು ಪ್ರಕಟಿಸಿ ಹೊರಚಿಮ್ಮುತ್ತವೆ ಎಂಬುದರ ಬಗ್ಗೆ ಕಿಂಚಿತ್ ಅರಿವೂ ನಮಗಿರುವುದಿಲ್ಲ.
 ಇಂದು ನಮ್ಮ ಕನ್ನಡ ನಾಡಿನ ಹುಟ್ಟುಹಬ್ಬ; ಕರ್ನಾಟಕ ರಾಜ್ಯ ಉದಯವಾದ ದಿನ,. ’ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು’ ಎಂದು ಕರ್ನಾಟಕದ ಏಕೀಕರಣಕ್ಕಾಗಿ ಹೋರಾಡಿದ ನಮ್ಮ ಹಿರಿಯರಿಂದಾಗಿ ೧೯೫೬ರ ನವೆಂಬರ್ ಒಂದರಂದು ಭಾಷಾವಾರು ಪ್ರಾಂತ್ಯದಡಿ ಮೈಸೂರು ರಾಜ್ಯ  ಉದಯವಾಯ್ತು. ಅಲ್ಲಿಯವರೆಗೆ ಮದರಾಸು, ಮುಂಬೈ ಮತ್ತು ಹೈದರಾಬಾದ್ ಪ್ರಾಂತ್ಯಗಳಲ್ಲಿ ನಮ್ಮ ನಾಡು ಹಂಚಿ ಹರಿದುಹೋಗಿದ್ದವು, ೧೯೭೧ರಲ್ಲಿ ಮೈಸೂರು ರಾಜ್ಯ ಕರ್ನಾಟಕ ರಾಜ್ಯವಾಯ್ತು.
ಇಂದಿಗದು ಇತಿಹಾಸ,
ಈಗ ನಾವು ಅನ್ನವನ್ನರಸಿಕೊಂಡು ಪ್ರಪಂಚದಾದ್ಯಂತ ವಲಸೆ ಹೋಗುತ್ತಿದ್ದೇವೆ. ಹಾಗೆ ಹೋದ ಹೊರನಾಡಿನ ಕನ್ನಡಿಗರನ್ನು ನಮ್ಮ ಸಂಸ್ಕೃತಿಯ ಭಾಗವಾದ ತಾಯ್ನುಡಿ ಒಂದಾಗಿ ಬೆಸೆಯುತ್ತದೆ. ಆಯಾಯ ದೇಶಗಳಲ್ಲಿ ಕನ್ನಡ ಸಂಘಗಳನ್ನು ಸ್ಥಾಪಿಸಿಕೊಂಡು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುತ್ತಾ ತಮ್ಮ ತಾಯ್ನಾಡಿನ ಜೊತೆ ಭಾವಾನಾತ್ಮಕವಾದ ನಂಟನ್ನು ಹಸಿರಾಗಿಸಿಕೊಳ್ಳಲು ಪ್ರಯತ್ನಿಸುತ್ತಾರೆ.
 ನನ್ನಂತವರು ಆಗಾಗ ಪ್ರವಾಸಕ್ಕೆಂದು ತಾಯ್ನಾಡನ್ನು ಅಲ್ಪಕಾಲದ ಮಟ್ಟಿಗೆ ತೊರೆದು ಹೋಗುತ್ತೇವೆ. ಹಾಗೆ ಹೋದಾಗ ಅಲ್ಲೆಲ್ಲೋ ಕನ್ನಡದ ಮಾತುಗಳು ಕಿವಿಗೆ ಬಿದ್ದಾಗ, ಕಣ್ಣಿಗೆ ಕನ್ನಡದ ಬರಹ ಕಂಡಾಗ ಅವರ್ಣನೀಯವಾದ ಆನಂದವುಂಟಾಗುತ್ತದೆ.
ಹಿಮಾಲಯದ ಬಹುತೇಕ ಪುಣ್ಯಕ್ಷೇತ್ರಗಳನ್ನು ಹೊಂದಿರುವ ಉತ್ತರಾಖಂಡ ರಾಜ್ಯವನ್ನು ’ದೇವಭೂಮಿ’ಯೆಂದು ಕರೆಯುತ್ತಿರುತ್ತಾರೆ.ಇತ್ತೀಚೆಗೆ ಚಾರ್ ಧಾಮಗಳಲ್ಲಿ ಒಂದಾದ ಬದರಿನಾಥಗೆ ಹೋಗಿದ್ದೆ. ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿ ದೊಡ್ಡದಾದ ಬೋರ್ಡ್ ನಲ್ಲಿದ್ದ ಕನ್ನಡದ ಸ್ವಾಗತ ಫಲಕವನ್ನು ಕಂಡು ಪುಳಕಗೊಂಡಿದ್ದೆ. ಅದರಲ್ಲಿ ಹೀಗೆ ಬರೆದಿತ್ತು. ’ದೇವಭೂಮಿಗೆ ನಿಮ್ಮನ್ನು ಹಾರ್ದಿಕವಾಗಿ ಸ್ವಾಗತಿಸುತ್ತೇವೆ’ ಎಂಬ ಬೋರ್ಡನ್ನು ನೋಡಿ ಪುಳಕಗೊಂಡೆ. ಹಾಗೆಯೇ ಇದೇ ರಾಜ್ಯದಲ್ಲಿರುವ ಭಾರತ ಕೊನೆಯ ಗ್ರಾಮವಾದ ಮಾನ ವಿಲೇಜ್ ನಲ್ಲಿ ’ಭಾರತದ ಕೊನೆಯ ಚಾ ಅಂಗಡಿ’ ಎಂಬ ಫಲಕ ಕಂದೆ. ಅಲ್ಲೇ ಕೆಳಗೆ ಹರಿಯುತ್ತಿದ್ದ ಪರಮ ಪವಿತ್ರ ಸರಸ್ವತಿ ನದಿಯ ಬೋರ್ಗೆರೆತವನ್ನು ಆಲಿಸುತ್ತಾ ಚಹಾ ಕುಡಿದು ವ್ಯಾಸಗುಹೆಯ ಪಕ್ಕದಲ್ಲಿರುವ ಈ ಅಂಗಡಿಯ ಪೋಟೋಗಳನ್ನು ವಿವಿಧ ಆಯಾಮಗಳ ಪೋಟೋಗಳಲ್ಲಿ ಸೆರೆಹಿಡೆದೆ.
ನಾಲ್ಕೈದು ವರ್ಷಗಳ ಹಿಂದೆ ಇಲ್ಲೇ ಅಂಧ್ರಪ್ರದೇಶದ ಶ್ರೀಶೈಲಕ್ಕೆ ಹೋಗಿದ್ದೆ. ಅದು ನಮ್ಮ ಅಕ್ಕಮಹಾದೇವಿ ಶಿವನಲ್ಲಿ ಐಕ್ಯಗೊಂಡ ಕದಳಿಯ ಪಕ್ಕದಲ್ಲಿರುವ ಶೈವಸ್ಥಳ. ಅಕ್ಕನ ಆರಾಧ್ಯ ದೈವ ಚೆನ್ನಮಲ್ಲಿಕಾರ್ಜುನನ ಮಂದಿರದಲ್ಲಿ ಚಪ್ಪಲಿಯನ್ನು ಕಳಚುತ್ತಿರುವಾಗ ಅಲ್ಲಿರುವ ಕನ್ನಡ ಬೋರ್ಡ್ ನೋಡಿ  ನಗುವುಕ್ಕಿ ಬಂದಿತ್ತು ಅಲ್ಲಿ ಹೀಗೆ ಬರೆದಿತ್ತು; ’ಪಾದರಕ್ಷೆ ಭದ್ರ ಪರಚುವ ಸ್ಥಳ’ ಅಲ್ಲಿಗೆ ಭೇಟಿಕೊಡುವವರಲ್ಲಿ ಬಹುತೇಕರು ಕನ್ನಡಿಗರು ಹಾಗಾಗಿ ಅದು ಸಹ್ಯ ಎನಿಸಿತ್ತು.
ಇದೆಲ್ಲಕ್ಕಿಂತಲೂ ಒಬ್ಬ ಅಪ್ಪಟ್ಟ ಕನ್ನಡಾಭಿಮಾನಿಯನ್ನು ನಾನು ಮಣಿಪುರದ ರಾಜಧಾನಿ ಇಂಪಾಲದಲ್ಲಿ ಕಂಡಿದ್ದೆ. ಅವನ ಹೆಸರು ನನಗಿನ್ನೂ ನೆನಪಿದೆ; ಜ್ನಾನೇಶ. ೨೦೦೯ರಲ್ಲಿ ಅವನು ಬೆಂಗಳೂರಿನಲ್ಲಿ ನೌಕರಿ ಮಾಡುತ್ತಿದ್ದ ಸಮಯದಲ್ಲಿ ಓಡಾಡಲೆಂದು ಮಾಡಿಸಿದ್ದ ಬಿ.ಎಂ.ಟಿ ಬಸ್ಸ್ ಪಾಸನ್ನು ಈಗಲೂ ಸದಾ ತನ್ನ ಕಿಸೆಯಲ್ಲಿಟ್ಟುಕೊಂಡಿದ್ದನ್ನು ಕಂಡು ಅಚ್ಚರಿಗೊಂಡಿದ್ದೆ. ಅತ್ಯಂತ ಸ್ಫುಟವಾದ ಕನ್ನಡದಲ್ಲಿ ಮಾತಾಡಿದ್ದಲ್ಲದೆ ಕನ್ನಡ ಚಲಚಿತ್ರಗೀತೆಯೊಂದನ್ನು ಹಾಡಿಯೂ ತೋರಿಸಿದ್ದನ್ನು ನಾನೆಂದೂ ಮರೆಯಲಾರೆ.
ಮೇಘಾಲಯದ ಚಿರಾಪುಂಜಿಗೆ ಹೋಗುವ ದಾರಿಯಲ್ಲಿ ನಂದಿನಿ ಐಸ್ಕ್ರೀಮಿನ ಜಾಹೀರಾತು ಫಲಕವೊಂದನ್ನು ಕಂಡು ವಾಹನ ನಿಲ್ಲಿಸಿ ಐಸ್ಕ್ರೀಮ್ ಖರೀದಿಸಿ ತಿಂದಿದ್ದೆ.
ಪೂರಣಗಿರಿ ಬೆಟ್ಟವನ್ನು ಹತ್ತುತ್ತಿರುವಾಗ ಇಳಿದು ಬರುತ್ತಿದ್ದ ಒಬ್ಬ ಮಾರ್ವಾಡಿ ನಮ್ಮನ್ನು ನೋಡಿ ಕರ್ನಾಟಕದವರೆಂದು ತಿಳಿದು ಅಭಿಮಾನದಿಂದ ಮಾತಾಡಿಸಿದ್ದ. ಅರುಣಾಚಲಪ್ರದೇಶದ ತವಾಂಗ್ ನಲ್ಲಿ ನಾವು ಉಳಿದುಕೊಂಡಿದ್ದ ವಸತಿನಿಲಯದ ಮಾಲೀಕ ಕನ್ನಡದಲ್ಲೇ ಮಾತಾಡಿ ಅಚ್ಚರಿ ಹುಟ್ಟಿಸಿದ್ದ. ವಿಚಾರಿಸಿದಾಗ, ಅವರೊಬ್ಬ ಇಂಜಿನಿಯರ್. ಬೆಂಗಳೂರಿನಲ್ಲೇ ಕುಟುಂಬದೊಂದಿಗೆ ದಶಕಗಳ ಕಾಲ ವಾಸ್ತವ್ಯ ಹೂಡಿದ್ದರು. ಮಗ ಇಲ್ಲಿಯೇ ಇಂಜಿನಿಯರಿಂಗ್ ಮಾಡಿದ್ದ. ಆತನೂ ಸ್ವಚ್ಚವಾದ ಕನ್ನಡದಲ್ಲಿಯೇ ಕಕ್ಕುಲಾತಿಯಿಂದ ನಮ್ಮ ಬೇಕು-ಬೇಡಗಳನ್ನು ವಿಚಾರಿಸಿಕೊಂಡಿದ್ದ.
ಕಾರ್ಗಿಲ್ ನಲ್ಲಿ ಕೂಡಾ ಒಬ್ಬ ಒಂಜಿನಿಯರ್ ಸಿಕ್ಕಿದ್ದ. ಆತ ಕೂಡಾ ಬೆಂಗಳೂರಿನ ತನ್ನ ಸ್ಟೂಡೆಂಟ್ ಅನುಭವಗಳನ್ನು ಹೇಳುತ್ತಾ ತನ್ನ ತಾಯ್ನಾಡಿನ ಸೇವೆಗಾಗಿ ತಾನು ಕಾರ್ಗಿಲ್ ನಲ್ಲೇ ನೆಲೆಸಿರುವುದಾಗಿ ಹೇಳಿಕೊಂಡಿದ್ದ.

ಈಶಾನ್ಯ ರಾಜ್ಯಗಳ ಪ್ರವಾಸದ ಅನುಭವದಲ್ಲಿ ನನ್ನ ಅನುಭವಕ್ಕೆ ಬಂದಿದ್ದು; ಇವರೆಲ್ಲಾ ಬೆಂಗಳೂರನ್ನು ಕ್ರುತಜ್ನತೆಯಿಂದ ನೆನಪಿಸಿಕೊಳ್ಳುತ್ತಾರೆ; ಪ್ರೀತಿಸುತ್ತಾರೆ ಯಾಕೆಂದರೆ ಇವರಿಗೆಲ್ಲಾ ಬೆಂಗಳೂರು ಅನ್ನ ಕೊಟ್ಟಿದೆ. ಈ ನಾಡು ಅವರಿಗೆಲ್ಲಾ ಅನ್ನಪೂರ್ಣೇಶ್ವರಿಯ ಹಾಗೆ ಕಾಣುತ್ತದೆ.
ನನ್ನ ಪ್ರವಾಸಕಾಲದಲ್ಲಿ ಬಹಳ ಜನ ನನ್ನನ್ನು ’ನೀವು ಬೆಂಗಲಿಯಾ’ ಎಂದು ಮಾತಾಡಿಸುತ್ತಾರೆ. ಯಾಕೆ ಹೀಗೆ ಎಂದು ಯೋಚಿಸುತ್ತಿದ್ದೆ. ಕ್ರಮೇಣ ನನ್ನ ಅನುಭವಕ್ಕೆ ಬಂತು; ಬೆಂಗಾಲಿಗಳು ಮತ್ತು ಕನ್ನಡಿಗರು ಪ್ರವಾಸ ಪ್ರೀಯರು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ತಿರುಗಾಡಿಕೊಂಡಿರುತಾರೆ ಅಂತ. ಚಾರ್ ಧಾಮಗಳಾದ ಕೇದಾರ, ಬದರಿ, ಗಂಗೋತ್ರಿ, ಯಮುನೋತ್ರಿಗಳಲ್ಲಂತೂ ಎಲ್ಲಿ ನೋಡಿದರೂ ಕನ್ನಡಿಗರೇ ಕಾಣಸಿಗುತ್ತಾರೆ, ಕನ್ನಡನುಡಿಯೇ ಕಿವಿಗೆ ಬೀಳುತ್ತದೆ.!

[ ’ಚಲಿತ ಚಿತ್ತ’ ಕಾಲಂಗಾಗಿ ಬರೆದ ಲೇಖನ ]



0 comments: