Saturday, October 13, 2018

ಕೊಚ್ಚಿ ಬಿಯನಾಲೆ; ಕಲೆಯ ಬಲೆ.












 ಅಮೂರ್ತತೆಯನ್ನು ಮೂರ್ತರೂಪಕ್ಕೆ ತರುವುದು ಹೇಗೆ?  ಮೂರ್ತವಾಗಿರುವುದನ್ನು ವಿವಿಧ ದ್ರುಷಿಕೋನಗಳಿಂದ ಗ್ರಹಿಸಿ ಅದಕ್ಕೆ ಮತ್ತಷ್ಟು ಹೊಳಪು ತುಂಬಿ ಇನ್ನೊಂದು ಮಾಧ್ಯಮಕ್ಕೆ ತರುವುದು ಹೇಗೆ? ಇದು ಕಲಾವಿದನ ಸವಾಲು.

 ಕಲಾಕ್ರುತಿಯನ್ನು ನೋಡುವ. ಅಸ್ವಾದಿಸುವ ಬಗೆ ಹೇಗೆ?  ಕಲಾಕ್ರುತಿಯ ಮುಂದೆ ಕೆಲವು ಜನರು ಯಾಕೆ ಮೌನವಾಗಿ ಘಂಟೆಗಟ್ಟಲೆ ನಿಂತುಕೊಳ್ಳುತ್ತಾರೆ?  ಇದು ಕಲಾವಿದೆಯಲ್ಲದ. ಕಲಾವಿಮರ್ಶಕಳೂ ಅಲ್ಲದ ನನ್ನನ್ನು  ಕಾಡುವ ಕೆಲವು ಪ್ರಶ್ನೆಗಳು.

  .ಹಾಗಿದ್ದರೂ ನಾನಿರುವ ಬೆಂಗಳೂರಿನಿಂದ 528 ಕಿ.ಮೀ ದೂರದಲ್ಲಿರುವ ಕೇರಳದ ಪೋರ್ಟ್ ಕೊಚ್ಚಿಯಲ್ಲಿ ನಡೆಯುತ್ತಿರುವ  ಕೊಚ್ಚಿ ಬಿಯಾನಾಲೆ’ [Kochi-muziris Biennale] ಕಳೆದ ತಿಂಗಳು ಹೋಗಿದ್ದೆ.. ಹಾಗೆ ಹೋಗಲು ಬಲವಾದ ಇನ್ನೊಂದು ಕಾರಣವೂ ಇತ್ತು.ಅದು ಐತಿಹಾಸಿಕ ಹಿನ್ನೆಲೆಯಿರುವ ಪೋರ್ಟ್ ಕೊಚ್ಚಿಯೆಂ ಪುಟ್ಟ ಬಂದರಿನೆಡೆಗಿರುವ ಸಹಜ ಕುತೂಹಲ. ಪೋರ್ಚಿಗೀಸರು, ಡಚ್ಚರು ಮತ್ತು ಬ್ರಿಟೀಶರು ಇಲ್ಲಿ ಕಾಲಾನುಕ್ರಮದಲ್ಲಿ  ವಸಹಾತುಗಳನ್ನು ನಿರ್ಮಿಸಿಕೊಂಡಿದ್ದರು. ಇಲ್ಲಿಂದಲೇ ಸಾಂಬಾರು ಪದಾರ್ಥಗಳು ಸೇರಿದಂತೆ ಭಾರತದ ಇನ್ನಿತರ ವಸ್ತುಗಳು ಮದ್ಯಪ್ರಾಚ್ಯ ದೇಶಗಳಿಗೆ ರವಾನೆಯಾಗುತ್ತಿತ್ತು. ಹಾಗಾಗಿ ಇಂದಿಗೂ  ಇಲ್ಲಿಯ ವಾಸ್ತುಶಿಲ್ಪಗಳಲ್ಲಿ ಆ ದೇಶಗಳ ಪ್ರಭಾವವನ್ನು ಕಾಣಬಹುದು. ಸುಂದರವಾದ ಕಡಲ ಕಿನಾರೆಯನ್ನು ಹೊಂದಿರುವ ಈ ಪುಟ್ಟ ದ್ವೀಪದಲ್ಲಿ ನಮ್ಮ ಗೋಕರ್ಣದ  ಹಾಗೆ ಸದಾ ವಿದೇಶಿಯರೇ ಅಡ್ಡಾಡುತ್ತಿರುತ್ತಾರೆ.

 

  ಬಿಯನಾಲೆ ಎಂಬುದು ಮೂಲತ್ ಇಟಾಲಿಯನ್ ಪದ. ಅದರ ಅರ್ಥಎರಡು ವರ್ಷಗಳಿಗೊಮ್ಮೆ ನಡೆಯುವ ಉತ್ಸವ, ಈ ಉತ್ಸವದ ಕನಸು ಕಂಡು ಕಾರ್ಯಗತಗೊಳಿಸಿದವರಲ್ಲಿ ಮೂವರ ಹೆಸರು ಪ್ರಮುಖವಾದುದು. ಅವರೇ ಈಗ ಕೊಚ್ಚಿ ಬಿಯನಾಲೆಯ ಪ್ರೆಸಿಡೆಂಟ್ ಆಗಿರುವ ಬೋಸ್ ಕ್ರುಷ್ಣಮಾಚಾರಿ, ಪ್ರೋಗ್ರಾಮ್ಸ್ ಡೈರೆಕ್ಟರ್ ಆಗಿರುವ ರಿಯಾಸ್ ಕೋಮ್ ಮತ್ತು ಎಜುಕೇಶನ್ ಕನ್ಸ್ ಲ್ಟೆಂಟ್ ಆಗಿರುವ ಮೀನಾ ವಾರಿ. ಇವರ ಜೊತೆ ಹತ್ತಾರು ಮಂದಿ ಕ್ಯೂರೇಟರ್ ಗಳು, ಪ್ರೋಜೆಕ್ಟ್ ಅಡೈಸರ್ ಗಳು ಬಿಯನಾಲೆಯ ಯಶಸ್ವಿಗಾಗಿ ಹಗಲಿರುಳು ದುಡಿಯುತ್ತಿರುತ್ತಾರೆ. ಈ ವರ್ಷದ ಬಿಯನಾಲೆಯ ಕ್ಯುರೇಟರ್ ಮೂಲತಃ ಕನ್ನಡಿಗರಾದ ಮುಂಬೈನಿವಾಸಿಯಾಗಿರುವ ಆರ್ಟಿಸ್ಟ್ ಸುದರ್ಶನ ಶೆಟ್ಟಿ . ಪ್ರಪಂಚಾದ್ಯಾಂತದ ಕಲಾವಿದರನ್ನೆಲ್ಲಾ ಸಂಪರ್ಕಿಸಿ ಕೊಚ್ಚಿಗೆ ಬರಮಾಡಿಕೊಳ್ಳುವುದು ಅವರ ಜವಾಬ್ದಾರಿಯಾಗಿತ್ತು. ಬಿಯನಾಲೆಯ ಹಿಂದೆ ವರ್ಷಗಳ ತಯಾರಿಯಿದೆ. ಸಾವಿರಾರು ಜನಗಳ ಪರಿಶ್ರಮವಿದೆ. ಇದೇ ಮಾದರಿಯ ಬಿಯನಾಲೆ ವೆನಿಸ್. ಬರ್ಲಿನ್. ಶಾಂಘೈಗಳಲ್ಲಿ ನಡೆಯುತ್ತಿದೆ.

 ಮುಝುರಿಸ್ ಅಂದರೆ ಕೊಚ್ಚಿಯಲ್ಲಿದ್ದ ಪುರಾತನ ಕೋಟೆ. ಇದು ಕೊಚ್ಚಿಯಲ್ಲಿ ನಡೆಯುತ್ತಿರುವುದರಿಂದ ಕೊಚ್ಚಿ ಮುಝುರೀಸ್ ಬಿಯನಾಲೆ. ಅಂದರೆ ಎರಡು ವರ್ಷಕ್ಕೊಮ್ಮೆ ನಡೆಯುವ ಸ್ಥಳೀಯತೆಯನ್ನು ಒಳಗೊಂಡ ಸಮಕಾಲೀನ ಅಂತರಾಷ್ಟ್ರೀಯ ಮಟ್ಟದ ಕಲಾ ಉತ್ಸವ. ಇಲ್ಲಿಯ ವಿಶೇಶತೆಯೇನೆಂದರೆ ಅಲ್ಲಿ ಯಾವ್ಯಾವ ಕಲಾಪ್ರಕಾರಗಳ ಪ್ರದರ್ಶ ನಡೆಯುತ್ತದೆಯೋ ಅದೆಲ್ಲದರ ರೂವಾರಿಗಳಾದ ಕಲಾವಿದರು ಸ್ವತಃ ಉತ್ಸವದಲ್ಲಿ ಭಾಗಿಯಾಗುತ್ತಾರೆ ಮಾತ್ರವಲ್ಲ. ಕಲಾಪ್ರೇಮಿಗಳ ಜೊತೆ ಸಾಮಾನ್ಯರಲ್ಲಿ ಸಾಮಾನ್ಯರಾಗಿ ಬೆರೆಯುತ್ತಾರೆ; ಸಂವಾದದಲ್ಲಿ ಬಾಗಿಯಾಗುತ್ತಾರೆ. ಕೊಚ್ಚಿ ಬಿಯನಾಲೆಯ ಸ್ಥಾಪಕರಲ್ಲಿ ಒಬ್ಬರಾದ ರಿಯಾಸ್ ಕೊಮು [Riyas Komu] ಇದನ್ನು ಜನರ ಬಿಯನಾಲೆಎಂದು ಕರೆಯುತ್ತಾರೆ,

ಕೊಚ್ಚಿ ಬಿಯನಾಲೆ ಮೊದಲ ಬಾರಿಗೆ ೨೦೧೨ರಲ್ಲಿ ಆರಂಭವಾಗಿತ್ತು. ಈಗ ನಡೆಯುತ್ತಿರುವುದು ಮೂರನೆಯ ಬಿಯನಾಲೆ. ದಿಸೆಂಬರ್ ೧೨ರಂದು ಆರಂಭವಾದ ಬಿಯನಾಲೆ ೧೦೮ ದಿನಗಳ ಕಾಲ ನಡೆದು ಮಾರ್ಚ್ ತಿಂಗಳಾಂತ್ಯಕ್ಕೆ ಸಂಪನ್ನಗೊಳ್ಳುತ್ತದೆ. ಈ ವರ್ಷ ೩೧ ದೇಶಗಳ ೯೭ ಆರ್ಟಿಸ್ಟ್ ಗಳು ಭಾಗವಹಿಸುತ್ತಿದ್ದಾರೆ. ಏಕಕಾಲದಲ್ಲಿ ಹತ್ತು ಜಾಗಗಳಲ್ಲಿ ಕಲಾಪ್ರದರ್ಶನ ನಡೆಯುತ್ತಿದೆ. ಹವ್ಯಾಸಿ ಮತ್ತು ವ್ರುತ್ತಿಪರ  ಕಲಾವಿದರ ಜೊತೆ ವಿದ್ಯಾರ್ಥಿ ಬಿಯನಾಲೆಯೂ ನಡೆಯುತ್ತಿದೆ. ರಾಷ್ಟ್ರದಾದ್ಯಂತದ ೫೫ ಕಲಾಶಾಲೆಗಳ ಕಿರಿಯ ಆರ್ಟಿಸ್ಟ್ ಗಳು ಇದರಲ್ಲಿ ಭಾಗವಹಿಸುತ್ತಿದ್ದಾರೆ. ಒಟ್ಟು ಏಳು ಜಾಗಗಳಲ್ಲಿ ವಿದ್ಯಾರ್ಥಿ ಬಿಯನಾಲೆ ನಡೆಯುತ್ತಿದೆ.. ಮೊಹಮ್ಮದಾಲಿ ವೇರ್ ಹೌಸ್ ಮತ್ತು ಮಟನ್ಚೇರಿ ಟೆಂಪಲ್ ನಲ್ಲಿ ನಡೆಯುತ್ತಿರುವ ಪ್ರದರ್ಶನಗಳು ನಿಜಕ್ಕೂ ವಿದ್ಯಾರ್ಥಿಗಳಲ್ಲಿರುವ ಕಲ್ಪನಾಶಕ್ತಿ ಮತ್ತು ಪ್ರಖರ ಅಲೋಚನೆಗಳ ಕೈಗನ್ನಡಿಯಂತಿದ್ದವು.

ಈ ವರ್ಷದ ಬಿಯನಾಲೆಯ ಥೀಮ್ forming in the pupil of the eye’  ಇದರ ಯಥಾವತ್ ಅನುವಾದ ಮಾಡುವುದಾದರೆ ಕಣ್ಣಿನ ಪಾಪೆಯೊಳಗಿನ ರೂಪಎಂದಾಗುತ್ತದೆ. ಆದರೆ ಇದು ಮಹಾಭಾರತದ ಸಂಜಯನ ನೋಟದಿಂದ ಸ್ಪೂರ್ತಿಯನ್ನು ಪಡೆದಿದೆ.
.ಕಲಾಪ್ರದರ್ಶನವೆಂದರೆ ನಮಗೆ ಅದರಲ್ಲೂ ಬೆಂಗಳೂರಿಗರಿಗೆ ಸಾಮಾನ್ಯವಾಗಿ ನೆನಪಿಗೆ ಬರುವುದು ವೆಂಕಟಪ್ಪ ಆರ್ಟ್ ಗ್ಯಾಲರಿ, ಮಾಡರ್ನ್ ಆರ್ಟ್ ಗ್ಯಾಲರಿ ಮತ್ತು ಚಿತ್ರಕಲಾ ಪರಿಷತ್ತಿನಲ್ಲಿ ಪ್ರದರ್ಶನಗೊಳ್ಳುವ ವರ್ಣಚಿತ್ರಗಳು. ಪೋಟೋಗಳು ಇಲ್ಲವೇ ಶಿಲ್ಪಕಲಾಕ್ರುತಿಗಳು ನೆನಪಿಗೆ ಬರುತ್ತವೆ. ನಾನು ಪೋರ್ಟ್ ಕೊಚ್ಚಿಗೆ ಹೋಗುವಾಗ ಅದೇ ನನ್ನ ತಲೆಯಲ್ಲಿತ್ತು. ಆದರೆ ಅಲ್ಲಿ ಹೋಗಿ ನೋಡಿದಾಗ ಅದೆಲ್ಲಾ ತಲೆಕೆಳಗಾಯಿತು. ಅಲ್ಲಿನ ಕಲಾಪ್ರದರ್ಶನ ನನ್ನ ಕಲ್ಪನೆಯನ್ನು ಮೀರಿದ ವ್ಯಾಪ್ತಿಯಲ್ಲಿ ಹರಡಿಕೊಂಡಿತ್ತು,

ಅಲ್ಲೊಂದು ಕಲಾಪ್ರದರ್ಶನವಿತ್ತು. ಅದರ ವಿವರಣೆಯನ್ನು ನೀಡಿದರೆ ಕೊಚ್ಚಿ ಬಿಯನಾಲೆಯೆಂಬುದು ಉಳಿದೆಲ್ಲಾ ಕಲಾಪ್ರದರ್ಶನಗಳಿಗಿಂತ ಹೇಗೆ ಭಿನ್ನ ಎಂಬುದು ನಮಗೆ ಮನದಟ್ಟಾಗುತ್ತದೆ. ಅಲ್ಲದೆ ಇದು ಬಿಯನಾಲೆಯ ಬಹುಮುಖ್ಯ ಆಕರ್ಷಣೆಯಯೂ ಆಗಿತ್ತು. ಅದರ ಹೆಸರು ನೋವಿನ ಸಮುದ್ರ’ [ The Sea of Pain]  ರಹುಲ್ ಝರಿಟ್ [Raul Zurita] ಎಂಬ ಚಿಲಿ ದೇಶದ ಕವಿಯ ಆಲೋಚನೆಗಳು [Thoughts ] ಇಲ್ಲಿ ಮೂರ್ತ ಸ್ವರೂಪವನ್ನು ಕಂಡಿದ್ದವು. ಆ ಕವನದ ಹುಟ್ಟಿಗೆ ಒಂದು ಹಿನ್ನೆಲೆಯಿತ್ತು;
ಕಳೆದ ಸೆಪ್ಟಂಬರ್ ನಲ್ಲಿ ಟರ್ಕಿಯ ಬೋರ್ಡಮ್ ಬೀಚಿನಲ್ಲಿ ಸಿರಿಯಾದ ಪುಟ್ಟ ಕಂದ ಅಯ್ಲಾನ್ ಕುರ್ದಿಯ ಶವ ಸಿಕ್ಕಿತ್ತು. ನೀಲಿ ಚಡ್ಡಿ ಕೆಂಪು ಟೀ ಶರ್ಟ್ ಧರಿಸಿ ತಲೆಕೆಳಗಾಗಿ ಬಿದ್ದ ಆ ಎಳೆಬಾಲಕನ ಶವ ಪ್ರಪಂಚದಾದ್ಯಂತ ಸುದ್ದಿ ಮಾಡಿತ್ತು; ರೂಪಕವಾಗಿ ಬೆಳೆಯಿತು. ಆದರೆ ಅಲ್ಲೇ ಪಕ್ಕದಲ್ಲಿ ಬಿದ್ದಿದ್ದ ಅವನ ತಾಯಿ ಮತ್ತು ಸಹೋದರ ಗಾಲಿಪ್ ಕುರ್ದಿಯ ಶವ ಮಾತ್ರ ಯಾರ ಗಮನವನ್ನೂ ಸೆಳೆದಿರಲಿಲ್ಲ.  ರಹುಲ್ ಝುರಿಟ್ ನ ಮನವನ್ನು ಇದು ಕಲಕಿತು, ಅದು ಕವನವಾಗಿ ಹೊಮ್ಮಿತು. ಕೊಚ್ಚಿ ಬಿಯನಾಲೆಯಲ್ಲಿ ಅದು ಕಲಾರೂವನ್ನು ತಾಳಿತು. ಅದೇ ಸಿ ಆಪ್ ಪೈನ್’ ” ಸುಮಾರು ಎಪ್ಪತ್ತು ಅಡಿ ಉದ್ದ ಮೂವತ್ತು ಅಡಿ ಅಗಲದ ಮೂರೂ ಕಡೆ ಗೋಡೆಗಳಿಂದಾವ್ರುತವಾದ ಕೊಳವೊಂದನ್ನು ನಿರ್ಮಿಸಲಾಗಿತ್ತು.. ಕಲಾಪ್ರೇಮಿಗಳು ಅಲ್ಲಿ ಬಂದು ಚಪ್ಪಲಿ, ಶುಗಳನ್ನು ಕಳಚಿಟ್ಟು, ತೊಟ್ಟ ಬಟ್ಟೆಯನ್ನು ಮೊಳಕಾಲು ತನಕ ಮಡಚಿ ನೀರಿಗಿಳಿಯುತ್ತಿದ್ದಂತೆಯೇ. ಸಿ ಅಪ್ ಪೈನ್ ಕವನದ ಸಾಲುಗಳನ್ನೊಳಗೊಂಡ ವಿಷಾಧ ಬೆರೆತ ಆಡಿಯೋದ ಅನುರಣನ. ಎರಡೂ ಬದಿಯ ಗೋಡೆಯ ಮೇಲೆಲ್ಲಾ ಕವನದ ಸಾಲುಗಳು. ಮುಂದೆ ಮುಂದೆ ಸಾಗಿದಂತೆಲ್ಲಾ ಎದುರಿನ ಗೋಡೆಯ ಮೇಲೆ ಇಡೀ ಕವನ ಸ್ಕ್ರೋಲಿಂಗ್ ಆಗುತ್ತಿರುತ್ತದೆ.’ ” ನಾನು ಅವನ ತಂದೆಯಲ್ಲ. ಆದರೆ ಅವನು ನನ್ನ ಮಗ ಎಂದು ಅಂತ್ಯವಾಗುವ ಕವನ ,ವಿಸ್ತಾರತೆಯನ್ನು ಪಡೆದುಕೊಳ್ಳುತ್ತಾ ಮತ್ತೊಂದು ಆಯಾಮದತ್ತ ಹೊರಳಿಕೊಳ್ಳುತ್ತದೆ..ಅದನ್ನು ಓದಿ ಹಿಂದಿರುಗಿ ನೀರಿನಲ್ಲಿ ಕಾಲೆಳೆಯುತ್ತಾ ಬರುವಾಗ ನಮ್ಮಳೊಗೂ ರುದ್ರ ಮೌನ ಮೆಲ್ಲನೆ ಪಸರಿಸಿಕೊಳ್ಳುತ್ತದೆ.   ಕವನವನ್ನು ಅನುಭವಿಸುವುದು ಅಂದರೆ ಇದೇ ಏನು? ಅದು ಕಣ್ಣೀರಿನ ಕೊಳವೇ? ಅದು ಸಮುದ್ರದ ನೋವೇ? ನೋವಿನ ಸಮುದ್ರವೇ? ಅಥವಾ ಮನುಕುಲದ ನೋವೇ?   ಇದೇ ಕವಿ ಹೇಳಿದ ಮಾತೊಂದು ನೆನಪಾಗುತ್ತದೆ..’If poetry ends, the dremes is dead’

೩೧ ವಿಡಿಯೋ ಕ್ಯಾಮರಾ, ೩೧ ಪ್ರಾಜೆಕ್ಟರ್ ಗಳನ್ನು ಬಳಸಿ ಗ್ಯಾರಿ ಹಿಲ್ ನಿರ್ಮಿಸಿದ ಡ್ರೀಮ್ ಸ್ಟಾಪ್ಎಂಬ ವಿಡಿಯೋ ಆರ್ಟ್ ಮತ್ತು ಅವರದೇ ತುಂಡಾದ ಒಡೆದ ಗಾಜಿನ ಚೂರುಗಳನ್ನು ಜೋಡಿಸಿ ಮಾಡಿದ ಆಕರ್ಷಕ ಸಂಯೋಜನೆಯೂ ಬಿಯನಾಲೆಯ ಮತ್ತೊಂದು ಆಕರ್ಷಣೆ.
ಸಮಕಾಲೀನ ಕಲೆಯ ವಿಶೇಶತೆಯೇ ಅದು ಅದು ಕಲಾಕಾರನ ಭಾವನೆ, ವಿಚಾರ [thoughts] , ಕಾಳಜಿ ಮತ್ತು ಐಡಿಯಾಗಳನ್ನು ಪ್ರಸ್ತುತ ವಿದ್ಯಾಮಾನದೊಡನೆ ಸಂಯೋಜಿಸಿ ಅದಕ್ಕೊಂದು ಮೂರ್ತರೂಪವನ್ನು ಕೊಟ್ಟು ನೋಡುಗರನ್ನೂ ತನ್ನೊಡನೆ ಅಂತರ್ಗತಮಾಡಿಕೊಳ್ಳುತ್ತದ. ಅಲ್ಲೊಂದು ರೂಪಾಂತರದ ಕ್ರಿಯೆ ನಡೆಯುತ್ತಿರುತ್ತದೆ.

ಗ್ಯಾರಿ ಹಿಲ್, ಶರ್ಮಿಷ್ಟ ಮೊಹಾಂತೀ...ಮುಂತಾದವರ ವಿಡಿಯೋ ಆರ್ಟ್ ಗಳನ್ನು ನೋಡುವಾಗ ನಮ್ಮ ಯೋಚನೆಗಳನ್ನು ಹೀಗೂ ದಾಟಿಸಬಹುದಲ್ಲಾ ಎಂದು ಅಚ್ಚರಿಯಾಗುತ್ತದೆ. ಯಾವ ಪ್ರದರ್ಶನವನ್ನೇ ನೋಡಲಿ ಅಲ್ಲೊಂದು ಹೊಸತನದ ಸಂವಹನ ಸಾಧ್ಯತೆಯಿತ್ತು..

 ಬಿಯನಾಲೆಯಲ್ಲಿ ಸಂಗೀತ ಕಚೇರಿಯೂ ಸೇರಿದಂತೆ ವಿವಿಧ ಪ್ರಕಾರದ ಪ್ರದರ್ಶನ ಕಲೆಗಳಿರುತ್ತವೆ. ಪ್ರಾತ್ಯಕ್ಷಿಕೆಯಿರುತ್ತದೆ. ಸಿನೇಮಾ, ಡಾಕ್ಯುಮೆಂಟರಿ ಶೋಗಳ ಪ್ರದರ್ಶನವಿರುತ್ತದೆ. ಅಸಕ್ತರಿಗೆ ಪಿಲ್ಮ್ ಮೇಕಿಂಗ್ .ನ್ರುತ್ಯ ಸೇರಿದಂತೆ ಲಲಿತಕಲೆಗಳಿಗೆ ಸಂಬಂಧಿಸಿದಂತೆ ಎರಡ್ಮೂರು ದಿವಸಗಳ ಕಾರ್ಯಾಗಾರವಿರುತ್ತಿತ್ತು .ಈ ಕಾರ್ಯಾಗಾರಗಳ ವಿಶೇಶತೆ ಏನೆಂದರೆ ದೇಶ-ವಿದೇಶಗಳ ಕಲಾವಿದರು ಮತ್ತು ತಂತ್ರಜ್ನರ ಜೊತೆ ಬೆರೆಯುವ, ಸಂವಾದಿಸುವ ಅಪೂರ್ವ ಅವಕಾಶ ಸಿಗುತ್ತಿತ್ತು.. ನಾಟಕ .ಸ್ಟೋರಿ ಟೆಲ್ಲಿಂಗ್. ಜಾನಪದ ನ್ರುತ್ಯ. ಕವ್ವಾಲಿ, ಕರಕುಶಲ ವಸ್ತುಗಳ ಪ್ರದರ್ಶನವಿತ್ತು. ವಿದೇಶಿಯರಿಗೆ ಸ್ಥಳೀಯ ಕಲೆ, ಸಂಸ್ಕ್ರುತಿಯನ್ನು ತಿಳಿದುಕೊಳ್ಳುವ ವಿಫುಲ ಅವಕಾಶಗಳನ್ನು ಬಿಯನಾಲೆ ಆಯೋಜಿಸಿದೆ.
ಸಮಕಾಲೀನ ವಿಷ್ಯಗಳ ಬಗ್ಗೆ ಚರ್ಚೆ ಮತ್ತು ಸೆಮಿನಾರುಗಳಿರುತ್ತವೆ. ಜನವರಿ ೨೦ರಂದು ಕಮ್ಯೂನಲಿಸಂ, ಕ್ಯಾಸ್ಟ್ ಸೆಕ್ಯೂಲರಿಸಂ ನ ಚರ್ಚೆಯಲ್ಲಿ ಸಿದ್ದಾರ್ಥ ವರದರಾಜನ್, ಜಿಗ್ನೇಶ್ ಮವಾನಿ ಮತ್ತು ರಾಕೇಶ್ ಶರ್ಮ ಭಾಗವಹಿಸಿದ್ದರು. ಅಂದೇ ಡೈಲಾಗ್ ಅನ್ ಪೀಸ್; ಅಂಡರ್ಸ್ಟ್ಯಾಂಡಿಂಗ್ ವಯ್ಲೆನ್ಸ್ಸಿನೇಮಾ ಪ್ರದರ್ಶನವೂ ಇತ್ತು.. ಸೆಲ್ಪ್ ಇಮೇಜಸ್ ಆಪ್ ಕೇರಳ ಮೊಡರ್ನಿಟಿಚರ್ಚೆಯಲ್ಲಿ ಕೇರಳದ ಚಿಂತಕರು ಬರಹಗಾರರು ಭಾಗವಹಿಸಿದ್ದರು. ಸಿನೇಮಾ ನಿರ್ದೇಶಕರಾದ ರಾಕೇಶ್ ಶರ್ಮ, ಅಡೂರು ಗೋಪಾಲಕ್ರುಷ್ಣ, ಪ್ರಿಯದರ್ಶನ್, ರಾಜಕೀಯ ವಿಶ್ಲೇಶಕರಾದ್ ಮಾಧವಪ್ರಸಾದ್, ಬರಹಗಾರರದ ರಾಮಚಂದ್ರ ಗುಹಾ ಮಲ್ಟಿ ಮಿಡಿಯಾ ತಜ್ನರಾದ ಖಲೀದ್ ಸಬ್ಸಾಬಿ, ಸುದೀರ್ ಕಕ್ಕರ್ ಸೇರಿದಂತೆ ದೇಶವಿದೇಶಗಳ ಚಿತ್ರನಿರ್ದೇಶಕರು, ಸಾಹಿತಿಗಳು, ಕಲಾವಿದರು. ಸಂಗೀತಗಾರರು ವಿಡಿಯೋ ಆರ್ಟಿಸ್ಟ್ ಗಳು  ಇಲ್ಲಿ ಬಂದು ಚರ್ಚೆ-ಸಂವಾದಗಳಲ್ಲಿ ಭಗವಹಿಸಿದ್ದಾರೆ. ನಾಡಿದ್ದು ಮಾರ್ಚ್ ೨೫ರಂದು ಇತಿಹಾಸ ತಜ್ನ ಮತ್ತು ಟ್ರಾನ್ಸ್ಲೇಟರ್ ಆಗಿರುವ ದಿಲಿಪ್ ಮೆನನ್ ಏರುತ್ತಿರುವ ಭೂ ಉಷ್ಣತೆಯ ಬಗ್ಗೆ ಮಾತಾಡಲಿದ್ದಾರೆ..

ಕಳೆದ ಮಾರ್ಚ್ ೨ರಂದು ರಂದು ನಮ್ಮ  ರಾಷ್ಟ್ರಪತಿಗಳಾದ ಪ್ರಣವ ಮುಖರ್ಜಿಯವರು ಇಲ್ಲಿಗೆ ಆಗಮಿಸಿ ವಿ ನೀಡ್ ದಿ ಆರ್ಟ್ಸ್ಎಂಬ ಸೆಮಿನಾರನ್ನು ಉದ್ಘಾಟಿಸಿ ಇಂಪಾರ್ಟೆನ್ಸ್ ಅಪ್ ಸಸ್ಟೈನೇಬಲ್ ಕಲ್ಚರ್-ಬ್ಯುಲ್ಡಿಂಗ್ ’’ ಬಗ್ಗೆ ಉಪನ್ಯಾಸ ನೀಡಿ. ಕೊಚ್ಚಿ ಬಿಯನಾಲೆ ಎಂಬುದು ನಮ್ಮ ದೇಶದ ಕಲ್ಚರಲ್ ಕ್ಯಾಲೆಂಡರನ ಭಾಗವಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು.

ಮೂರು ದಿನಗಳ ಕಾಲ ನಾನು ಪೋರ್ಟ್ ಕೊಚ್ಚಿಯಲೆಲ್ಲಾ ಅಡ್ಡಾಡಿದೆ.  ಅಡ್ಡಾಡಿದೆ ಎಂದರೆ ಕಾಲ್ನಡಿಗೆಯಲ್ಲಿ ಇದನ್ನೆಲ್ಲಾ ಸುತ್ತಾಡಲು ಸಾಧ್ಯವಿಲ್ಲ. ಯಾಕೆಂದರೆ,,ಇಡೀ ಪೋರ್ಟ್ ಕೊಚ್ಚಿಯೇ ಬಿಯನಾಲೆಯಾಗಿತ್ತು. ನಾಲ್ಕು ಚದರ ಕಿಮೀ ವಿಸ್ತಾರದಲ್ಲಿ ಹರಡಿಕೊಂಡಿರುವ ಕಲಾಪ್ರದರ್ಶನದಲ್ಲಿ ಹೆಚ್ಚಿನ ಕಲಾಪ್ರದರ್ಶನವಿದ್ದುದ್ದು ಆಸ್ಪಿಯನ್ ಹಾಲ್ ಮತ್ತು ಪೆಪ್ಪರ್ ಹೌಸ್ ನಲ್ಲಿ, .ಆಸ್ಪಿಯನ್ ಹಾಲ್ ನಿಂದ ಹತ್ತು ಹೆಜ್ಜೆ ಎಡಕ್ಕೆ ನಡೆದರೆ ಪೆಪ್ಪರ್ ಹೌಸ್ ಸಿಗುತ್ತಿತ್ತು. ಅಲ್ಲಿ ಕ್ಯಾಂಟೀನ್ ಕೂಡಾ ಇದೆ. ಮುಖ್ಯವಾಗಿ ವಿದೇಶಿಯರನ್ನು ಗಮನದಲ್ಲಿರಿಸಿಕೊಂಡ ಆಹಾರ ಮತ್ತು ಪಾನೀಯಗಳು ಅಲ್ಲಿ ದೊರೆಯುತ್ತಿದ್ದವು. ಆಸ್ಪಿಯನ್ ಹಾಲ್ ನಿಂದ ಬಲಕ್ಕೆ ನೇರವಾಗಿ ನಡೆದು ಸ್ವಲ್ಪ ದೂರ ನಡೆದರೆ ಗೆಬ್ರಲ್ ಯಾರ್ಡ್, ಇಲೊಂದು ಥೆಯೇಟರ್ ಇದೆ. ನಾಟಕ, ಸಂಗೀತ ಕಚೇರಿಗಳು ಸೇರಿದಂತೆ ಕೆಲವು ಪ್ರದರ್ಶನ ಕಲೆಗಳು ಇಲ್ಲಿ ನಡೆಯುತ್ತವೆ..ಅಲ್ಲಿಂದ ಬಲಕ್ಕೆ ಹೊರಳಿದರೆ ಕಾಶಿ ಆರ್ಟ್ ಗ್ಯಾಲರಿ ಸಿಗುತ್ತದೆ.  ವಿಶಾಲಾರ್ಥದಲ್ಲಿ ಹೇಳಬೇಕೆಂದರೆ ಅದೊಂದು ರೆಸ್ಟೊರೆಂಟ್. ಆದರೆ ಕಲಾಕ್ರುತಿಯಂತೆ ಭಾಸವಾಗುವ ಒಂದು ಕಲಾಪರಿಸರ ಅಲ್ಲಿದೆ. ನಿಮಗೆ ಬೇಕಾದ ಆಹಾರ -ಪಾನೀಯಗಳನ್ನು ಆರ್ಡರ್ ಮಾಡಿ ಅಲ್ಲಿಯ ಮೆಲುಸಂಗೀತಕ್ಕೆ ಮೈಮನಸುಗಳು ಹಗುರವಾಗುವ ಅನುಭವ ಪಡೆಯಬಹುದು...ಉಳಿದ ಜಾಗಗಳನ್ನು ನೋಡಲು ನೀವು ಆಟೋ, ಬಸ್ಸು ಟ್ಯಾಕ್ಸಿಗಳನ್ನು ಅವಲಂಬಿಸಲೇ ಬೇಕಾಗುತ್ತದೆ. ವಿದೇಶಿ ಪ್ರವಾಸಿಗರ ದಟ್ಟಣೆ ಹೆಚ್ಚಿರುವ ಕಾರಣದಿಂದಲೇ ಇರಬಹುದು ಇಲ್ಲಿ ಬಾಡಿಗೆ ದ್ವಿಚಕ್ರವಾಹನಗಳು ದೊರೆಯುತ್ತವೆ. ದಿನಕ್ಕೆ ಇನ್ನುರೈವತ್ತು ರೂಪಾಯಿ, ಆದರೂ ಎಲ್ಲವನ್ನೂ ನೋಡಲು ಕನಿಷ್ಟ ಎರಡು ದಿನಗಳಾದರೂ ಬೇಕು. ಊಟ ವಸತಿಯ ವಿಚಾರಕ್ಕೆ ಬಂದರೆ ಪಕ್ಕದ ಎರ್ನಾಕುಲಂಗಿಂತ ಈ ದ್ವೀಪದಲ್ಲಿ ದುಪ್ಪಟ್ಟು ದುಬಾರಿ.

ಇಡೀ ಪೊರ್ಟ್ ಕೊಚ್ಚಿಯೇ ಒಂದು ಕಲಾಗ್ಯಾಲರಿಯಾದಾಗ ಅದರೊಳಗಿರುವ ಇಂಡೋ ಡಚ್ ಮ್ಯೂಸಿಯಂನನ್ನಾಗಗಿ, ವಾಸ್ಕೋಡಗಾಮನ ಸಮಾಧಿಯಿರುವ ಹಳೆಯ ಯುರೋಪಿಯನ್ ಚರ್ಚ್  ಸೈಂಟ್ ಪ್ರಾನ್ಸಿಸ್ ಚರ್ಚನನ್ನಾಗಲಿ ನೋಡದೇ ಮರಳುವುದುಂಟೇ? ಸಂಜೆಯ ಕಡಲ ಕಿನಾರೆ ಮತ್ತು ಚೈನಿಶ್ ಪಿಶ್ಶಿಂಗ್ ನೆಟ್ ಆಕರ್ಷಣೆಯನ್ನು ಯಾವ ಪ್ರವಾಸಿಯೂ ತಪ್ಪಿಸಿಕೊಳ್ಳಲಾರ.

ಜಗತ್ತಿನ ಹಲವಾರು ಸಂಗತಿಗಳು ನಮ್ಮ ಕಣ್ಣ ಮುಂದೆ ನಡೆಯುತ್ತದೆ.ಅದರಲ್ಲಿ ಕೆಲವನ್ನು ನಮ್ಮ  ಕಣ್ಣು ನೋಡುತ್ತದೆ. ಕೆಲವನ್ನು ನಮ್ಮ ಬುದ್ದಿ ಗ್ರಹಿಸುತ್ತದೆ. ಇನ್ನು ಕೆಲವು ನಮ್ಮ ಎದೆಯಾಳಕ್ಕೆ ಇಳಿಯುತ್ತದೆ.ಹಾಗೆ ಇಳಿದದ್ದು ಬುದ್ದಿಯ ಜೊತೆ ಸಂಲಗ್ನಗೊಂಡು. ಹೊಸತೊಂದರ ಅವಿಷ್ಕಾರಕ್ಕೆ ಕಾರಣವಾಗುತ್ತದೆ. ಅದನ್ನು ಸ್ರುಷ್ಟಿಸಬಲ್ಲವನು ವಿಜ್ನಾನಿಯಾಗುತ್ತಾನೆ. ಕವಿಯಾಗುತ್ತಾನೆ, ಕಲಾವಿದನಾಗುತ್ತಾನೆ, ಇಂತವರ ಸ್ರುಷ್ಟಿಯನ್ನು ನೋಡಿ ಆನಂದಿಸಬಲ್ಲವನು, ತನ್ನೊಳಗೆ ಯಾವುದೋ ಅನೂಹ್ಯವಾದುದನ್ನು ತುಂಬಿಕೊಳ್ಳಬಲ್ಲವನು ಕಲಾರಸಿಕನಾಗುತ್ತಾನೆ, ಸಹ್ರುದಯನಾಗುತ್ತಾನೆ. ೧೦೮ ದಿನಗಳ ಕಾಲ ನಮ್ಮ ನೆರೆಯ ರಾಜ್ಯದ ಪೋರ್ಟ್ ಕೊಚ್ಚಿಯಲ್ಲಿ ನಡೆಯುತ್ತಿರುವ ಈ ವಿಶಿಷ್ಟ ಉತ್ಸವ ಅಂತಹದೊಂದು ವಾತಾವರಣವನ್ನು ಪ್ರತಿ ಎರಡು ವರ್ಷಕ್ಕೊಮ್ಮೆ ನಿರ್ಮಿಸುತ್ತಿರುವುದು ಅಂತರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.
ಕಲೆಯೊಂದೇ ಹ್ರುದಯ-ಹ್ರುದಯಗಳನ್ನು ಬೆಸೆಯಬಲ್ಲುದು.ದೇಶ-ದೇಶಗಳ ಗಡಿ ರೇಖೆಯನ್ನು ಅಳಿಸಬಲ್ಲುದು.








Friday, October 5, 2018

ಅಂತಃಪುರದಲ್ಲಿ ಅತ್ಯಾಚಾರ.



Image courtesy; Internet
 ವೈವಾಹಿಕ ಅತ್ಯಾಚಾರ ಅಪರಾಧವಾದರೆ ವಿವಾಹ ಸಂಬಂಧವೇ ಅಸ್ಥಿರವಾಗುತ್ತದೆ.  ಪತಿಗೆ ಕಿರುಕುಳ ನೀಡಲು ವಿವಾಹಿತ ಮಹಿಳೆಯರಿಗೆ ಸುಲಭವಾದ ಅಸ್ತ್ರ ದೊರೆತಂತಾಗುತ್ತದೆ. ಹಾಗಾಗಿ ವೈವಾಹಿಕ ಅತ್ಯಾಚಾರವನ್ನು ಅಪರಾಧವಾಗಿ ಪರಿಗಣಿಸಬಾರದು.ಎಂದು ಕೇಂದ್ರ ಸರಕಾರ ಕಳೆದ ವರ್ಷ ದೆಹಲಿ ಹೈಕೋರ್ಟಿಗೆ ಪ್ರಮಾಣ ಪತ್ರ ಸಲ್ಲಿಸಿತ್ತು. ಆಗ ಅದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿತ್ತು, ಈಗಲೂ ಆಗುತ್ತಲಿದೆ.

ವೈವಾಹಿಕ ಅತ್ಯಾಚಾರವೆಂದರೇನು? ಪತ್ನಿಯ ಸಮ್ಮತಿಯಿಲ್ಲದೆಯೂ ಅವಳ ಇಚ್ಚೆಗೆ ವಿರುದ್ಧವಾಗಿ ಬಲತ್ಕಾರದಿಂದ ಲೈಂಗಿಕ ಸಂಪರ್ಕ ನಡೆಸುವುದೇ ವೈವಾಹಿಕ ಅತ್ಯಾಚಾರ. ಅದಕ್ಕೆ ಪತ್ನಿಯ ಒಪ್ಪಿಗೆಯನ್ನು ಎಂತಕ್ಕೆ ಕೇಳುವುದು? ಗಂಡನಿಗೆ ಬಯಕೆಯಾದರೆ ಸಹಕರಿಸಬೇಕಾದುದು ಪತ್ನಿಯ ಧರ್ಮ ಎನ್ನುತ್ತದೆ ಭಾರತೀಯ ಸಂಪ್ರದಾಯ. ಅದು ಆ ಕಾಲ., ಈ ಕಾಲದಲ್ಲಿ ತನ್ನ ದೇಹದ ಮೇಲೆ ತನ್ನದೇ ಹಕ್ಕು. ತಾನು ಅವನಂತೆಯೇ ದುಡಿಯುತ್ತೇನೆ, ದಣಿಯುತ್ತೇನೆ, ನನಗೂ ಅನೇಕ ಒತ್ತಡಗಳಿರುತ್ತವೆ. ಕೆಲವು ಸಂದರ್ಭಗಳಲ್ಲಿ ತನಗದು ಬೇಡ ಅನ್ನಿಸುತ್ತದೆ. ಅದನ್ನು ನಯವಾಗಿಯೇ ಅನುನಯಿಸಿ ಹೇಳುತ್ತೇನೆ. ಅದರವನು ಅದನ್ನು ಧಿಕ್ಕರಿಸಿ ತನ್ನ ದೇಹದ ಮೇಲೆ ಅತಿಕ್ರಮಣ ಮಾಡಿದರೆ ಅದು ಅತ್ಯಾಚರವಾಗುತ್ತದೆ. ಆ ಸಂದರ್ಭದಲ್ಲಿ ತನಗೆ ಕಾನೂನಿನ ರಕ್ಷಣೆ ಬೇಕಾಗುತ್ತದೆ. ಆದರೆ ಭಾರತೀಯ ದಂಡ ಸಂಹಿತೆಯಲ್ಲಿ ಅಂತಹದೊಂದು ಕಲಂ ಇಲ್ಲವಲ್ಲ ಎಂದು ಘಾಸಿಗೊಂಡ ಮಹಿಳೆ ಪ್ರಶ್ನಿಸುತ್ತಿದ್ದಾಳೆ. ಈಗ ಇರುವ ಐಪಿಸಿ ೩೭೫ ಕಲಂ೨ರಪ್ರಕಾರ ಹೆಂಡತಿ ಜೊತೆ ಗಂಡ ನಡೆಸುವ ಬಲತ್ಕಾರದ ಲೈಂಗಿಕ ಕ್ರಿಯೆ ಅಪರಾಧವಲ್ಲ.

 ಮಹಿಳಾ ಮತ್ತು ಮಕ್ಕಳಕಲ್ಯಾಣ ಸಚಿವರಾದ ಮನೇಕಾಗಾಂಧಿಯೇ ವೈವಾಹಿಕ ಅತ್ಯಾಚಾರವನ್ನು ಕ್ರಿಮಿನಲ ಅಪರಾಧದ ಅಡಿಯಲ್ಲಿ ತರುವುದರ ಬಗ್ಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಬೇರೆ ದೇಶಗಳಲ್ಲಿ ವೈವಾಹಿಕ ಅತ್ಯಾಚಾರದ ಬಗೆಗಿನ ನಿಲುವುಗಳನ್ನು ಅವಲೋಕಿಸಿದರೂ ಅದೂ ಕೂಡಾ ಅಷ್ಟೇನೂ ಆಶಾಧಾಯಕವಾಗಿಲ್ಲ. ಹೆಣ್ಣು ಗಂಡಸಿನ ಖಾಸಾಗಿ ಆಸ್ತಿ, ಉಪಭೋಗದ ವಸ್ತು ಎಂಬ ಪುರುಷಮನಸ್ಥಿತಿ ಜಗತ್ತಿನ ಎಲ್ಲೆಡೆ ಇದೆ. ಆದರೂ ೧೦೬ ದೇಶಗಳಲ್ಲಿ ವೈವಾಹಿಕ ಅತ್ಯಾಚಾರವೆಂಬುದು ಶಿಕ್ಷಾರ್ಹ ಅಪರಾಧ. ಇವುಗಳಲ್ಲಿ ೩೨ ದೇಶಗಳಲ್ಲಿ ಇದು ಕ್ರಿಮಿನಲ್ ಅಪರಾಧವೆಂದು ಪರಿಗಣಿಸಿದೆ.

 ಸ್ವತಃ ನಾನೇ ಸಾಕ್ಷಿಯಾಗಿರುವ ಎರಡು ಘಟನೆಗಳನ್ನು ನಿಮ್ಮ ಮುಂದಿಡುತ್ತೇನೆ.

ಆಗ ನಾನು ಚಿಕ್ಕವಳೇನಾಗಿರಲಿಲ್ಲ. ಆದರೆ ಕೆಲವು ವಿಷಯಗಳಲ್ಲಿ ಲೋಕಜ್ನಾನ ಕಮ್ಮಿಯಿತ್ತು. ಹಿಂದಿನ ದಿನ ಸಂಬಂಧಿಯೊಬ್ಬರ ಮದುವೆಯಲ್ಲಿ ಪಾಲ್ಗೊಂಡಿದ್ದೆ. ರಾತ್ರಿ ಮದುಮಗನ ರೂಮಿಗೆ ಮದುಮಗಳು ಹೋಗಿದ್ದಳು. ಬೆಳಿಗ್ಗೆ ಅಡುಗೆಮನೆಯಲ್ಲಿ ದೊಡ್ಡವರ ಜೊತೆ ಕುಳಿತಿದ್ದೆ. ಮದುಮಗಳು ಅಡುಗೆ ಮನೆಗೆ ಬಂದಳು. ಅವಳ ಒಂದು ಕೆನ್ನೆ ರಕ್ತ ಹೆಪ್ಪುಗಟ್ಟಿದಂತಾಗಿ ಕಂದು ಬಣ್ಣಕ್ಕೆ ತಿರುಗಿತ್ತು. ಹಿಂದಿನ ಬೆಳ್ಳಗೆ ಕೆಂಪು ಕೆಂಪಾಗಿ ತುಂಬಾ ಸುಂದರವಾಗಿ ಕಂಡಿದ್ದರು. ಏನಾಯ್ತು ಎಂಬ ಆತಂಕದಲ್ಲಿ ನಾನು ನಿಮ್ಮ ಕೆನ್ನೆ ಯಾಕೆ ಸುಟ್ಟಬದನೆಕಾಯಿಯಂತಾಗಿದೆ? ಪಕ್ಕದಲ್ಲಿದ್ದ ಹಿರಿಯರು ನನ್ನ ತೊಡೆಗೆ ಚುವುಟಿದರು. ಅಲ್ಲಿದ್ದವರು ಕಿರುನಗೆಯಿಂದಲೇ ಪರಸ್ಪರ ಮುಖ ನೋಡಿಕೊಂಡರು. ಮದುಮಗಳು ಯಾವುದೇ ಭಾವನೆಯನ್ನು ವ್ಯಕ್ತಪಡಿಸದೆ ಅಲ್ಲಿಂದ ಬಚ್ಚಲು ಮನೆಗೆ ಹೋದಳು. ದೇಹದ ಮೇಲಿನ ಕಲೆಯೂ ಒಮ್ಮೊಮ್ಮೆ ಪ್ರೇಮದ ಗುರುತಾಗಬಹುದು

ಅದರೆ ಮದುವೆಯಾಗಿ ಹತ್ತಾರು ವರ್ಷಗಳು ಕಳೆದಮೇಲೆ ಪತ್ನಿಯಾದವಳು ಬೆಳಿಗ್ಗೆ ಕೆನ್ನೆ ಊದಿಸಿಕೊಂಡು ದಾಂಪತ್ಯದ ಕೋಣೆಯಿಂದ ಬೆಳಿಗ್ಗೆ ಹೊರಬಂದರೆ ಅಸಹಜವಾದುದು ಅಲ್ಲೇನೋ ನಡೆದಿದೆ ಎಂದು ಹತ್ತಿರದವರಿಗೆ ತಿಳಿದೇ ತಿಳಿಯುತ್ತದೆ. ಆದರೆ ಅಲ್ಲೇನೋ ನಡೆದಿದಿದೆ ಎಂದು ಹೊರಗಿನವರು ತರ್ಕಿಸಬಹುದಷ್ಟೇ. ಆದರೆ ಏನು ನಡೆದಿದೆಯೆಂಬುದನ್ನು ಅವರಿಬ್ಬರಲ್ಲಿ ಒಬ್ಬರು ಬಾಯಿಬಿಟ್ಟು ಹೇಳಿದರೆ ಮಾತ್ರ ಉಳಿದವರಿಗೆ ಗೊತ್ತಾಗುತ್ತದೆ.

Image courtesy; Internet
ನಮ್ಮ ಹತ್ತಿರದ ಬಂಧುವೊಬ್ಬರ ಮನೆಯಲ್ಲಿ ಒಂದು ರಾತ್ರಿ ಉಳಿದುಕೊಳ್ಳುವ ಸಂದರ್ಭ ಬಂದಿತ್ತು. ಆ ಮನೆಯ ಯಜಮಾನಿ ತನ್ನ ಮೊಮ್ಮಗಳೊಡನೆ ನಾನು ಮಲಗಿದ್ದ ಹಾಲಿನಲ್ಲೇ ಮಲಗಿದ್ದರು. ಆ ಮನೆಯ ಯಜಮಾನನಾಗಿದ್ದ ಆಕೆಯ ಗಂಡ ಪಕ್ಕದ ರೂಮಿನಲ್ಲಿದ್ದರು. ಮಧ್ಯರಾತ್ರಿ ಯಾರೋ ನರಳಿದಂತೆ ಶಬ್ದ ಕೇಳಿಸಿ ಎಚ್ಚರಾಗಿ ಸುತ್ತ ಕಣ್ಣಾಡಿಸಿದಾಗ ಆ ಮಹಿಳೆ ಕಾಣಿಸಲಿಲ್ಲ. ಸ್ವಲ್ಪ ಹೊತ್ತಿನಲ್ಲಿ ಅವರು ಪಕ್ಕದ ರೂಮಿನಿಂದ ಬಂದು ಮೊಮ್ಮಗಳ ಪಕ್ಕದಲ್ಲಿ ಮಲಗಿಕೊಂಡರು. ಕಾಲುಗಳನ್ನು ಅಗಲಿಸಿಕೊಂಡು ತೊಡೆ ಮದ್ಯಕ್ಕೆ ಲಂಗದಿಂದ ಗಾಳಿಹಾಕಿಕೊಳ್ಳುತ್ತಾ ಆಗಾಗ ಕೈಮುಚ್ಚಿಕೊಳ್ಳುತ್ತಿದ್ದರು.  ಆಗ ನನಗೂ ಮದುವೆಯಾಗಿತ್ತು. ಲೈಂಗಿಕ ಸಮಸ್ಯೆಗಳ ಬಗ್ಗೆ ಕುರಿತಾಗಿಯೇ ಆಪ್ತ ಸಲಹಾ ತರಬೇತಿಯನ್ನೂ ಪಡೆದುಕೊಂಡಿದ್ದೆ. ಹಾಗಾಗಿ ಅರುವತ್ತು ದಾಟಿದ ಆ ಮಹಿಳೆಗಾದ ಹಿಂಸೆಯನ್ನು ನಾನು ಊಹಿಸಿಕೊಳ್ಳಬಲ್ಲವಳಾಗಿದ್ದೆ..

ಕೌನ್ಸಿಲಿಂಗ್ ಎಂದಾಗ ಒಂದು ಘಟನೆ ನನಗೆ ನೆನಪಿಗೆ ಬರುತ್ತದೆ. ಅವಳು ನನ್ನೆದುರು ಕೂತಿದ್ದಳು.ಒಂದು ಮಗುವಿನ ತಾಯಿ. ತುಂಬು ಯೌವನದ ಆರೋಗ್ಯದ ಕಳೆಯಿಂದ ಮಿಂಚುತ್ತಿರುವ ಹುಡುಗಿ. ತನ್ನ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದಳು.; ಅವಳ ಗಂಡ ಸಂಭೋಗಪೂರ್ವ ಸಲ್ಲಾಪದ ಕಲೆಯನ್ನು ಕರಗತ ಮಾಡಿಕೊಂಡಾತ. ಅವಳ ಬಯಕೆಗಳನ್ನು ಕೆರಳಿಸಿ ಅವಳು ಉನ್ಮಾದಕ್ಕೆ ಜಾರುತ್ತಿದ್ದಾಳೆ ಎಂದೆನಿಸಿದಾಗ ತಾನು ತಣ್ಣಗೆ ಪಕ್ಕಕ್ಕೆ ಸರಿದು ಬಾಲ್ಕನ್ನಿಗೆ ಹೋಗಿ ಸಿಗರೇಟು ಹಚ್ಚಿಕೊಳ್ಳುತ್ತನಂತೆ. ಇದು ಒಂದೆರಡು ದಿನದ ಮಾತಲ್ಲ. ಹಲವಾರು ತಿಂಗಳುಗಳಿಂದ ನಡೇಯುತ್ತಾ ಬಂದಿದೆ. ಆ ಸಂದರ್ಭದಲ್ಲಿ ಬೆಂಕಿಯಂತಾಗುವ ತಾನೇನು ಮಾಡಬೇಕು? ಎಂದವಳು ನನ್ನನ್ನು ಪ್ರಶ್ನಿಸಿದ್ದಳು..
ಅವಳು ತುಂಬಾ ಸಂಕೀರ್ಣವಾದ ಪ್ರಶ್ನೆಯನ್ನು ಕೇಳಿದ್ದಳು. ಕೊಡಬಹುದಾಗಿದ್ದ ಉತ್ತರ ಸರಳವಾದುದಲ್ಲ. ಹತ್ತು ಹಲವು ಆಯಾಮಗಳನ್ನು ಮಥಿಸಿ ಉತ್ತರಿಸಬೇಕಾಗಿತ್ತು.

ಭಾರತೀಯ ಸಂಸ್ಕ್ರುತಿಯಲ್ಲಿ ಮದುವೆಯೆಂಬುದು ಏಳೇಳು ಜನ್ಮಗಳ ಅನುಬಂಧ. ಇದರ ಮುಖ್ಯ ಉದ್ದೇಶ ಸಂತಾನವನ್ನು ಪಡೆಯುವುದೇ ಆಗಿತ್ತು. ಹಾಗಾಗಿ ಇಲ್ಲಿ ದಂಪತಿಗಳು ಮಿಲನಗೊಳ್ಳುವುದಕ್ಕೂ ಒಂದು ಶುಭಮೂಹೂರ್ತವಿದೆ. ಮುಂದೆಯೂ ದಾಂಪತ್ಯನಿಷ್ಠೆ ಎಂಬುದು ಬಹುಮುಖ್ಯ. ಆದರಿದು ಪತ್ನಿಯಾದವಳಿಗೆ ಮಾತ್ರ. ಗಂಡನಾದವನು ಎಷ್ಟು ಮದುವೆಯನ್ನಾದರೂ ಮಾಡಿಕೊಳ್ಳಬಹುದು.ಎಷ್ಟು ಹೆಂಗಸರೊಡನೆಯಾದರೂ ಸಂಬಂಧ ಇಟ್ಟುಕೊಳ್ಳಬಹುದು ಆದರೆ ಹೆಂಡತಿ ಪತಿವ್ರತೆಯಾಗಿರಲೇಬೇಕು!

ಸಪ್ತಪದಿ ತುಳಿಯುವಾಗ ಪರಸ್ಪರ ಸಮಾನತೆಯ, ಬದ್ಧತೆಯ ಏನೇ ಮಂತ್ರಪಠಣವಾಗಿರಲಿ ವಾಸ್ತವದಲ್ಲಿ ಪತ್ನಿಯಾದವಳು ಎಂದೂ ಗಂಡನ ಸಹವರ್ತಿನಿಯಲ್ಲ. ಮಹಿಳೆ ತನ್ನ ಅಸೌಖ್ಯದ, ದಣಿದ ದಿನಗಳಲ್ಲಿ ಇಂದು ಬೇಡಎಂದು ಹೇಳಲು ಸಾಧ್ಯವೇ? ಹಾಗೆ ಹೇಳಲು ಸಾಧ್ಯವಾದರೆ ಅದು ಅನುಕೂಲಕರ ದಾಂಪತ್ಯ. ಲೈಂಗಿಕಬಯಕೆ ಗಂಡಿನಂತೆ ಹೆಣ್ಣಿಗೂ ಇರುತ್ತದೆ. ಹಸಿವು ಬಾಯಾರಿಕೆ, ನಿದ್ರೆಗಳಂತೆ ಅದು ಪ್ರಕೃತಿ ಸಹಜ ಬಯಕೆ ಆದರೆ ಅವಳು ಅದನ್ನು ಬಾಯಿಬಿಟ್ಟು ಹೇಳಿದರೆ ವಾತ್ಸಯಾನ ಅಂತಃಪುರದಲ್ಲಿ ಜೀವಂತವಾಗಿರಬಹುದು1. ಇಲ್ಲವಾದರೆ ಪುರುಷಾಂಕಾರದ ಮಿಷನರಿ ಆಸನವೇ ಅಂತಃಪುರವನ್ನಾಳುತ್ತದೆ. ಹಾಂ. ಅಂದಹಾಗೆ ಮಿಷನರಿ ಆಸನದ ಬಗ್ಗೆ ಬಗ್ಗೆ ಹೇಳುವಾಗ ಕಳೆದ ವರ್ಷ ಬಿಡುಗಡೆಯಾದ ತುಳು ಸಿನೇಮಾದ ದ್ರುಶ್ಯವೊಂದು ನೆನಪಾಗುತ್ತದೆ. ಅದರಲ್ಲಿ ರೇಪ್ ಮಾಡುವುದು ಹೇಗೆ ಎಂಬುದನ್ನೂ ಹೇಳಿಕೊಡಲಾಗುತ್ತದೆಯಂತೆ. ಮತ್ತೆ ನೆನಪಿಸಿಕೊಳ್ಳುತ್ತೇನೆ; ಭಾರತದ ಮಟ್ಟಿಗೆ ಸಿನೇಮಾ ಕೂಡಾ ಪುರುಷಾಧಿಪತ್ಯದ ಕ್ಷೇತ್ರವೇ. ಅಲ್ಲಿಯೂ ಮಹಿಳಾ ಧ್ವನಿ ಕ್ಷೀಣವಾಗಿದೆ

ಗಂಡನಾದವನು ಸೂಕ್ಷ್ಮಜ್ನನಾಗಿದ್ದು ಸಂವೇದನಾಶೀಲನಾಗಿದ್ದರೆ ಆತ ಅರ್ಥ ಮಾಡಿಕೊಳ್ಳುತ್ತಾನೆ. ಕೆಲವೊಮ್ಮೆ ಇಬ್ಬರಿಗೂ ಕೌನ್ಸಿಲಿಂಗ್ ಕೂಡಾ ಬೇಕಾಗಬಹುದು ಆದರೆ ಎಷ್ಟು ಜನ ಗಂಡಂದಿರು ಕೌನ್ಸಿಲಿಂಗ್ ಗೆ ಬರಲು ಒಪ್ಪುತ್ತಾರೆ?. ಹೆಚ್ಚೇಕೆ, ಕುಟುಂಬ ನಿಯಂತ್ರಣ ಸಾಧನಗಳನ್ನು ಅಳವಡಿಸಿಕೊಳ್ಳುವುದಕ್ಕೇ ಶೇ ೯೯ರಷ್ಟು ಗಂಡಸರು ಒಪ್ಪಿಕೊಳ್ಳುವುದಿಲ್ಲ. ಅದು ಹೆಂಗಸರ ಜವಾಬ್ದಾರಿ ಎಂಬುದೇ ಗಂಡಸರ ಧೋರಣೆ. ಇದು ಸಮೀಕ್ಷೆಗಳಿಂದಲೇ ಋಜುವಾತಾಗಿದೆ. ಇನ್ನು ಲೈಂಗಿಕ ವಿಷಯಗಳಿಗೆ ಸಂಬಂಧಿಸಿದಂತೆ ಕೌನ್ಸಿಲಿಂಗ್ ಗೆ ಬರುತ್ತಾನೆಯೇ? ದೈಹಿಕಹಿಂಸೆ ಅನುಭವಿಸುತ್ತಾ  ಒಳಗೊಳಗೆ ಬೇಯುತ್ತಿದ್ದ ಮಹಿಳೆ ಕೊನೆಗೊಮ್ಮೆ ಸಿಡಿದು ನಿಂತರೆ ಆಗ ಅವಳಿಗೆ ಕಾನೂನಿನ ನೆರವು ಬೇಕಲ್ಲವೇ?

ನನ್ನ ದೇಶದಲ್ಲಿ ರೇಪ್ ಅನ್ನುವುದು ಪುರುಷತ್ವದ ಸಂಕೇತ. ಅದು ಯುದ್ಧವೇ ಆಗಲಿ ಗುಂಪುಗಳ ನಡುವಿನ ಸಂಘರ್ಶವೇ ಆಗಲಿ ಎದುರಾಳಿಗಳನ್ನು ಹಣೆಯಲು ವಿರುದ್ಧ ಗುಂಪಿನ ಮಹಿಳೆಯರ ಮೇಲೆ ಲೈಂಗಿಕ ಅತ್ಯಾಚಾರವೆಸಗುವುದು ಕೂಡಾ ಅದರ ಭಾಗವೇ ಆಗಿದೆ.  ಇತ್ತೀಚೆಗೆ ಜಮ್ಮು ಕಾಶ್ಮೀರದ ಅಸಿಫಾ ಎಂಬ ಪುಟ್ಟ ಬಾಲೆಯ ಮೇಲೆ ಧರ್ಮಾಂದರು ನಡೆಸಿದ ಪೈಶಾಚಿಕ ಅತ್ಯಾಚಾರಕ್ಕೆ ಜನಾಂಗೀಯ ದ್ವೇಶವೇ ಕಾರಣವಾಗಿತ್ತು. ಇದೆಲ್ಲದರ ವಿರುದ್ಧ ನಾವು, ನಾಗರಿಕರು ಸಂಘಟಿರಾಗಿ ಹೋರಾಡಬಹುದು, ಆದರೆ ಬೆಡ್ರೂಮಿನಲ್ಲಾಗುವ ಅತ್ಯಾಚಾರದ ಬಗ್ಗೆ ಹೇಗೆ ಪ್ರತಿಕ್ರಿಯಿಸುವುದು? ಯಾರು ಪ್ರತಿಕ್ರಿಯಿಸಬೇಕು? ಯಾಕೆಂದರೆ ಇದು ಧರ್ಮಸೂಕ್ಷ್ಮದ ಸಂಗತಿ. ಭಾರತೀಯ ಕೌಟುಂಬಿಕ ಬದುಕಿನ ತಾಯಿಬೇರು ಮದುವೆ,ಅದರ ಮೇಲೆ ಪ್ರಹಾರ ಮಾಡಲು ಸಾಧ್ಯವೇ? ಹಾಗಾಗಿಯೇ ಕಾನೂನುಗಳು ಇಲ್ಲಿ ಸೋಲುತ್ತವೆ. ಕಾನೂನನ್ನು ರೂಪಿಸುವ ಸಂಸತ್ತಿನಲ್ಲಿ ಬಹುಸಂಖ್ಯಾತ ಪುರುಷರು ಕೂತಿದ್ದಾರಲ್ಲವೇ? ಪಕ್ಷರಾಜಕಾರಣಿಗಳು ಮಹಿಳೆಯರನ್ನು ನೋಡುವ ಪರಿ ಒಂದೇ ಆಗಿರುತ್ತದೆ. ಇಂತವರು ಮಹಿಳಾ ಪರವಾದ ಕಾನೂನು ರೂಪಿಸುತ್ತಾರೆಯೇ?

ಕಾನೂನು ಸೇರಿದಂತೆ ಜಗತ್ತಿನ ಎಲ್ಲಾ ನೀತಿನಡಾವಳಿಗಳನ್ನು ಧರ್ಮದ\ರಿಲೀಜಿಯನ್ನಿನ ದ್ರುಷ್ಟಿಕೋನದಿಂದ ನೋಡಲಾಗಿದೆ. ಕಾನೂನುಗಳನ್ನು ಪುರುಷನ ಮೂಗಿನ ನೇರಕ್ಕೆ ತಕ್ಕಂತೆ ರೂಪಿಸಲಾಗಿದೆ. ಬಹುಶಃ ಮಹಿಳೆಯರೇ ನೀತಿನಿರೂಪಕರು ಆಗಿದ್ದಲ್ಲಿ ಭಾನುವಾರದ ರಜೆಯ ಬದಲು, ತಮಗೆ ಬೇಕಾದ ದಿನಗಳಲ್ಲಿ ತಿಂಗಳಿಗೆ ಐದು ದಿನ ರಜೆ ತೆಗೆದುಕೊಳ್ಳುವ ಅವಕಾಶವನ್ನು ಮಾಡಿಕೊಳ್ಳುತ್ತಿದ್ದರು. ಜಗತ್ತನ್ನು ತಾಯಿನೋಟವೊಂದು ಕಾಪಾಡುತ್ತಿತ್ತು. ನಾಮಕಾವಸ್ಥೆಯ ಗಡಿರೇಖೆಗಳಿರುತ್ತಿದ್ದವು. ಮುಖ್ಯವಾಗಿ ಯುದ್ಧವೆಂಬುದು ನಡೆಯುತ್ತಿರಲಿಲ್ಲ.

ಪ್ರಜಾವಾಣಿಯ ಮುಕ್ತಛಂಧಕ್ಕಾಗಿ ಬರೆದ ಬರಹ. ಎಡಿಟ್ ಆಗಿ ಪ್ರಸಾರವಾಗಿತ್ತುನಾಲ್ಕು ತಿಂಗಳ ಹಿಂದೆ.  ]







Sunday, June 10, 2018

ಕಾಶ್ಮೀರಿಪಂಡಿತರು ಮತ್ತು ಕಾಶ್ಮೀರಿ ಮುಸ್ಲಿಮರು



 
ಸೋಷಿಯಲ್ ಮೀಡಿಯಾಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ಪ್ರಗತಿಶೀಲ ಮನಸ್ಸುಗಳು ದೇಶದ ಜ್ವಲಂತ ಸಮಸ್ಯೆಗಳ ಬಗ್ಗೆ  ಮಾತಾಡಲು ಮುಂದಾದಾಗ ಅವರಿಗೆ ಉಗ್ರ ಹಿಂದುತ್ವವಾದಿಗಳು ಎಸೆಯುವ ಲೇವಡಿಯ ಹಾಗು ಬೆದರಿಕೆಯ ಪ್ರಶ್ನೆಗಳು ಎರಡು; ಒಂದು, ಮುಸ್ಲಿಮ್ ಉಗ್ರವಾದಿಗಳು ಕಾಶ್ಮೀರಿ ಪಂಡಿತರ ಮೇಲೆ ಹಲ್ಲೆ ಮಾಡಿ,  ಅವರ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿ, ಆಸ್ತಿಪಾಸ್ತಿ ದೋಚಿ ಅವರನ್ನು ಹುಟ್ಟಿದೂರಿನಿಂದ ಓಡಿಸುವಾಗ ನೀವು ಕಾಂಗಿಗಳು ಎಲ್ಲಿದ್ದೀರಿ? ಆಗ ಯಾಕೆ ನೀವು ಕಣ್ಣೀರು ಹರಿಸಿಲ್ಲ?. ಇನ್ನೊಂದು, ಕೊರೆಯುವ ಚಳಿಯಲ್ಲಿ ಗಡಿಕಾಯುತ್ತಾ  ನಮ್ಮ ದೇಶವನ್ನು ರಕ್ಷಿಸುವ ಸೈನಿಕರ ಬಗ್ಗೆ ನೀವೆಂದಾದರೂ ಕಣ್ಣಿರು ಹಾಕಿದ್ದೀರಾ?

ಅಂತಹ ಕೇಸರಿ ಕನ್ನಡಕದಾರಿಗಳು ಈಗ ಕಕ್ಕಾಬಿಕ್ಕಿಯಾಗಿದ್ದಾರೆ. ಯಾಕೆಂದರೆ ಕಠಾರದಲ್ಲಿ ಎಂಟು ವರ್ಷದ ಪುಟ್ಟ ಮಗುವಿನ ಮೇಲಾದ ಪೈಶಾಚಿಕ ಅತ್ಯಾಚಾರ ಮತ್ತು ಕೊಲೆಯ ಪ್ರಕರಣದಲ್ಲಿ ಅರೋಪಿಗಳ ಸ್ಥಾನದಲ್ಲಿ ನಿಂತ ಎಂಟೂ ಜನರು ಹಿಂದುಗಳು. ಅದು ಅಲೆಮಾರಿ ಬಿಕ್ರವಾಲ್ ಸಮುದಾಯಕ್ಕೆ ಸೇರಿದ ಮುಸ್ಲಿಮ್ ಮಗು, ಅತ್ಯಾಚಾರದ ಅರೋಪಿಗಳಿಗೆ ಕಾನೂನಿನ ಕುಣಿಕೆ ಹಾಕಲು ಪಣತೊಟ್ಟವರು ಎರಡು ಜನ. ಅವರೇ ಈ ಪ್ರಕರಣದ ತನಿಖಾ ದಳದ ಮುಖ್ಯಸ್ಥರಾದ ರಮೇಶ್ ಕುಮಾರ್ ಮತ್ತು ಅಸಿಫಾ ಪರ ವಕೀಲಾರಾದ ದೀಪಿಕಾಸಿಂಗ್. ಇವರಿಬ್ಬರೂ ಕಾಶ್ಮೀರ ಪಂಡಿತರು.  ಒಂದುವೇಳೆ ನಾಳೆ ಅರೋಪಿಗಳ ಅಪರಾಧ ಸಾಬೀತಾಗಿ ಅವರೆಲ್ಲ ನೇಣುಗಂಬವನ್ನೇರಿದರೆ ಅದರ ಪೂರ್ಣ ಶ್ರೇಯಸ್ಸು ಸಲ್ಲ ಬೇಕಾದದ್ದು ಈ ಇಬ್ಬರು ಕಾಶ್ಮೀರಿ ಪಂಡಿತರಿಗೇ

ಈ ಪ್ರಕರಣದ ವಿರುದ್ಧವಾಗಿ ಕೆಲಸ ಮಾಡಲು ಇವರಿಗೆ ಪ್ರಭಲವಾದ ಕಾರಣಗಳಿದ್ದವು.ಆದರೆ ಅವರು ಹಾಗೆ ಮಾಡಲಿಲ್ಲ. ಕಾರಣವೇನಂದರೆ ಅವರು ಮಾನವಪ್ರೇಮಿಗಳಾಗಿದ್ದರು ನ್ಯಾಯನಿಷ್ಠರಾಗಿದ್ದರು. ಸತ್ಯದ ಪರವಾಗಿದ್ದರು . ಇವರಿಬ್ಬರು ತೆಗೆದುಕೊಂಡ ಗಟ್ಟಿ ನಿಲುವು ಭಾರತೀಯರು ಮತ್ತು ಕಾಶ್ಮೀರಿ ಮುಸ್ಲಿಮರ ನಡುವಿನ ಸಂಘರ್ಷವನ್ನು ಭವಿಷ್ಯದಲ್ಲಿ ಹೊಸ ದ್ರುಷ್ಟಿಕೋನದಿಂದ ನೋಡಲು ಸಾಧ್ಯವಾಗಬಹುದು.





ವರ್ತಮಾನದಲ್ಲಿ ಮುಸ್ಲಿಂರೇ ಬಹುಸಂಖ್ಯಾತರಾಗಿರುವ ಭಾರತದ ಏಕೈಕ ರಾಜ್ಯ ಜಮ್ಮು ಕಾಶ್ಮೀರ. ಇದಕ್ಕೆ ವಿಶೇಶ ಸ್ಥಾನಮಾನವಿದೆ. ಭಾರತದ ಭಾಗವಾಗಿದ್ದರೂ ತನ್ನದೇ ಪ್ರತ್ಯೇಕತೆಯನ್ನು ಹೊಂದಿರುವ ರಾಜ್ಯವದು. ಆದರೆ ಅದರ ಇತಿಹಾಸದತ್ತ ಕಣ್ಣು ಹೊರಳಿಸಿದರೆ ಈಗಿನ ಮುಸ್ಲಿಮರು ಹಿಂದೆ ಹಿಂದುಗಳೇ ಆಗಿದ್ದರು ಎಂಬುದು ಗೊತ್ತಾಗುತ್ತದೆ.

ಈಗ ಅಲ್ಪಸಂಖ್ಯಾತರಾಗಿರುವ ಕಾಸ್ಮೀರಿ ಪಂಡಿತರು ಕಾಶ್ಮೀರ ಕಣಿವೆಯ ಮೂಲನಿವಾಸಿಗಳು. ಅಲ್ಲಿಯ ಜನರು ಬೌದ್ಧ ಮತ್ತು ಹಿಂದು ಧರ್ಮದ ಅನುಯಾಯಿಗಳಾಗಿದ್ದರು.  ೧೨ನೇ ಶತಮಾನದಲ್ಲಿ ಇಲ್ಲಿಗೆ ಮುಸ್ಲಿಮರು ಆಗಮಿಸಿದರೆಂದು ಇತಿಹಾಸಕಾರರು ಹೇಳುತ್ತಾರೆ. ಆಗ ಅಳ್ವಿಕೆಕೆಯಲ್ಲಿದ್ದ ಹಿಂದೂ ರಾಜರು ಅವರ ಧರ್ಮಪ್ರಸಾರಕ್ಕೆ ಅಡ್ಡಿಯೇನು ಉಂಟುಮಾಡಲಿಲ್ಲ. ಆದರೆ ಹದಿನಾಲ್ಕನೇ ಶತಮಾನಕ್ಕಾಗುವಾಗ ಅದೊಂದು ಪ್ರಭಲಧರ್ಮವಾಗಿ ಪ್ರವರ್ಧಮಾನ ಬಂತು. ಈನಡುವೆ ಮುಸ್ಲಿಮ್ ಧರ್ಮದವರು ರಾಜರೂ ಆದರು. ಆದರೂ ಹಿಂದು ಮುಸ್ಲಿಮರು ಸೌಹಾರ್ಧತೆಯಿಂದಲೇ ಬದುಕಿದ್ದರು.  ಹಿಂದೆಯೂ ಅವರು ಅನ್ಯಧರ್ಮಿಯರೊಡನೆ ಸೌಹಾರ್ಧತೆಯಿಂದ ಬದುಕಿದವರು. ಸ್ಥಳೀಯ ಸಂಸ್ಕ್ರುತಿಯೊಡನೆ ಮುಸ್ಲಿಮರ ಕಲಾಕೌಶಲ್ಯವು ಸೇರಿಕೊಂಡು ಕರಕುಶಲವಸ್ತುಗಳಿಗೆ ಹೊಸತೊಂದು ಮೆರಗು ಬಂದು ಇಲ್ಲಿಯ ಪಿಂಗಾಣಿವಸ್ತುಗಳು. ಶಾಲು, ಕಾರ್ಪೆಟ್, ಮುಂತಾದ ನೇಕಾರಿಯ ವಸ್ತುಗಳು ಜಗದ್ವಿಖ್ಯಾತಿಯನ್ನು ಪಡೆದುಕೊಂಡವು. ಇದೊಂದು ಪ್ರವಾಸಿಕೇಂದ್ರವಾಗಿ ಬೆಳೆಯತೊಡಗಿತು.

೧೮೧೯ರಲ್ಲಿ ಕಾಶ್ಮೀರ ಮತ್ತೆ ಸಿಖ್ಖ್ ದೊರೆ ಮಹಾರಾಜ ರಂಜಿತ್ ಸಿಂಗ್ ತೆಕ್ಕೆಗೆ ಬಂದಾಗ ಆತ ಕೆಲವು ಮುಸ್ಲಿಂ ವಿರೋಧಿ ಕಾನೂನುಗಳನ್ನು ಜಾರಿಗೆ ತಂದ. ರಾಜ್ಯದ ಉನ್ನತಸ್ಥಾನಗಳಲ್ಲಿ ಕಾಶ್ಮೀರಿ ಪಂಡಿತರ ನೇಮಕವಾಯ್ತು. ಅದುವರೆಗೆ ಇದ್ದ ಸೌಹಾರ್ಧಮಯ ವಾತಾವರಣ ಕದಡಿ ಹೋಯ್ತು. ಆಗಿನ ಕಾಶ್ಮೀರದ ಸ್ಥಿತಿಯನ್ನು ಬ್ರಿಟೀಶ್ ಕೌನ್ಸಿಲ್ ಸದಸ್ಯನೂ, ಬಾರತದಲ್ಲಿ ಅಧಿಕಾರಿಯೂ,ಪ್ರವಾಸಿ ಲೇಖಕನೂ ಆದ ಲಾರೆನ್ಸ್ ತನ್ನ ಪುಸ್ತಕದಲ್ಲಿ ದಾಖಲಿಸಿದ್ದಾನೆ. ಹಾಗೆಯೇ  ಗೌಶಾನಾಥ್ ಕೌಲ್ ಎಂಬ ಲೇಖಕ ತನ್ನ ’ಕಾಶ್ಮೀರ’ ಎಂಬ ಪುಸ್ತಕದಲ್ಲಿ ಮುಸ್ಲಿಮರ ದಯಾನೀಯ ಸ್ಥಿತಿಯ ಬಗ್ಗೆ ಬರೆಯುತ್ತಾ ಶೇ ೯೦ರಷ್ಟು ಮುಸ್ಲಿಮರ ಆಸ್ತಿಪಾಸ್ತಿ ಹಿಂದೂ ಲೇವಾದೇವಿಗಾರರ ವಶದಲ್ಲಿದ್ದು ಅವರು ತೀರ ಬಡತನದ ಬದುಕನ್ನು ಸಾಗಿಸುತ್ತಲಿದ್ದಾರೆ ಎಂದು ದಾಖಲಿಸಿದ್ದಾನೆ.  ಇದು ಇತಿಹಾಸ.

ಆದರೆ ಆಮೇಲೆ ಭಾರತ ವಿಭಜನೆಯಾಯ್ತು. ಧರ್ಮದ ಆಧಾರದ ಮೇಲೆ ಮುಸ್ಲಿಮರ ರಾಜ್ಯ ಉದಯವಾಯ್ತು. ಕಾಶ್ಮೀರ ನಮ್ಮದೇ ಅನ್ನುತ್ತಾ ಪಾಕಿಸ್ತಾನಿಯರು ಗಡಿಯೊಳಗೆ ನುಸುಳಿ ಬರಲು ಆರಂಭವಾಯ್ತು. ಭಾರತ ಸರಕಾರವೂ ಕಾಶ್ಮೀರದ ಅಬಿವ್ರುದ್ಧಿಯ ಬಗ್ಗೆ ಅಸಡ್ಡೆಯಿಂದಲೇ ನಡೆದುಕೊಂಡಿತ್ತು. ಕ್ರಮೇಣ ಅಲ್ಲಿ ಪ್ರತ್ಯೇಕ ದೇಶದ ಕೂಗು ಕ್ಷೀಣವಾಗಿ ಕೇಳಲಾರಂಭಿಸಿತು.ಅದಕ್ಕೆ ನಮ್ಮ ದಾಯಾದಿ ದೇಶ ಪಾಕಿಸ್ತಾನ ಕುಮ್ಮಕ್ಕು ಕೊಡಾಲಾರಂಭಿಸಿತು. ಅಲ್ಲಿಂದ ಮುಂದಿನ ಇತಿಹಾಸ ಎಲ್ಲರಿಗೂ ಗೊತ್ತಿರುವಂತಹದೇ. ಭೌಗೋಳಿಕವಾಗಿ ಸ್ವರ್ಗದ ತುಣುಕಿನಂತಿದ್ದ ಕಾಶ್ಮೀರದ ಮೇಲೆ ಹಕ್ಕುಸ್ಥಾಪನೆಮಾಡುವುದಕ್ಕಾಗಿ ಪಾಕಿಸ್ತಾನವು ಮುಸ್ಲಿಂ ಉಗ್ರವಾದಿಗಳಿಗೆ ಕುಮ್ಮಕ್ಕು ನೀಡಿ ಶಸ್ತ್ರಾಸ್ತ್ರಗಳನ್ನು ಯಥೇಚ್ಚವಾಗಿ ಪೂರೈಸತೊಡಗಿತು. ಪಾಕಿಸ್ತಾನಕ್ಕೆ ಬುದ್ಧಿ ಕಲಿಸಲು ಭಾರತ ಅದರ ಮೇಲೆ ೧೯೭೧ರಲ್ಲಿ ಯುದ್ಧಸಾರಿತು. ಪಾಕಿಸ್ತಾನದ ಒಂದು ಭಾಗವನ್ನು ಕಿತ್ತು ಬಾಂಗ್ಲಾದೇಶ ಮಾಡಿತು. ಪಾಕಿಗಳ ಮನದಲ್ಲಿ ಇದು ಆಳವಾದ ಗಾಯ ಮಾಡಿತು. ಪರಿಣಾಮವಾಗಿ ಕಾಶ್ಮೀರದಲ್ಲಿ ಉಗ್ರಗಾಮಿ ಚಟುವಟಿಕೆಗಳು ಹೆಚ್ಚಾದವು. ಅವರ ಗುರಿ ಈಗಾಗಲೇ ಅಲ್ಪಸಂಖ್ಯಾತರಾಗಿರುವ ಕಾಶ್ಮೀರಿ ಪಂಡಿತರ ಮೇಲೆ ಬಿತ್ತು. ಅವರಿಗೆ ಕಿರುಕುಳ ಕೊಡಲು ಆರಂಭಿಸಿದರು.

ಈ ವೇಳೆಗಾಗಲೇ ಜಗತ್ತಿನಾದ್ಯಂತ ಉಗ್ರಗಾಮಿಗಳಿಗೆ ಸಂವಾದಿ ಪದವಾಗಿ ಮುಸ್ಲಿಂ ಪದ ಎಲ್ಲೆಡೆ ಪ್ರಚಲಿತವಾಗಿತ್ತು. ಹಿಜ್ಬುಲ್ ಮುಜಾಯಿದ್ , ಅಲ್ಖೈದಾ ಮುಂತಾದ ಸಂಘಟನೆಯ ಜೊತೆ ಪಾಕಿಸ್ತಾನ ನೇರ ಸಂಬಂಧ ಸಂಬಂಧ ಹೊಂದಿರುವುದು ಜಗಜ್ಜಾಹೀರವಾಗಿತ್ತು. ಅದು ೧೯೮೯-೯೦ರ ಸಮಯ ಒಂದು ರಾತ್ರಿ ಜಿಹಾದಿಗಳು  ಕಾಶ್ಮೀರ ಪಂಡಿತರಿಗೆ, ’ ಮತಾಂತರವಾಗಬೇಕು, ಇಲ್ಲವೇ ಎರಡು ದಿನಗಳಲ್ಲಿ ಊರು ಬಿಡಬೇಕು’ ಎಂದು ಎಚ್ಚರಿಕೆ ನೀಡಿದರು. ಕಾಶ್ಮೀರಿ ಪಂಡಿತರು ತಮ್ಮ ಜನ್ಮಭೂಮಿಯನ್ನು ಬಿಟ್ಟು ಉಟ್ಟಬಟ್ಟೆಯಲ್ಲಿ ಅಲ್ಲಿಂದ ಓಡಿ ಬಂದರು. ಹಾಗೇ ಬಂದವರಿಗೆ ಭಾರತ ಸರಕಾರವು ದೆಹಲಿ ಮತ್ತು ಜಮ್ಮುವಿನಲಿ ತಾತ್ಕಲೀಕ ಡೇರೆಗಳಲ್ಲಿ ಇರಿಸಿತು. ಆದರೆ ಪರಿಸ್ಥಿತಿ ತಿಳಿಯಾದಾಗ ತಾವು ತಮ್ಮ ತಾಯ್ನಾಡಿಗೆ ಮರಳಿ ಹೋಗುವೆವೆಂಬ ಆಶಾಭಾವನೆಯಲ್ಲಿ ಈಗಾಗಲೇ ಹದಿನೆಂಟು ವರ್ಷಗಳು ಸರಿದು ಹೋಗಿವೆ. ಆ ಶೀತಪ್ರದೇಶದಿಂದ ಬಂದ ಬಹಳಷ್ಟು ಮಂದಿ ದೆಹಲಿಯ ಬಿಸಿಲಭೇಗೆಯನ್ನು ಸಹಿಸಿಕೊಳ್ಳಲಾರದೆ ಮರಣವನ್ನಪ್ಪಿದ್ದಾರೆ. ಕೆಲವು ಪಂಡಿತರು ನಮ್ಮ ಬೆಂಗಳೂರಿನಲ್ಲಿಯೂ ನೆಲೆಸಿದ್ದಾರೆ.  ಪಾಕಿಸ್ತಾನ ಬೆಂಬಲಿತ ಉಗ್ರಗಾಮಿಗಳಿಗೆ ಬೆದರಿ ತಮ್ಮ ಎಲ್ಲಾ ಅಸ್ತಿಪಾಸ್ತಿಯನ್ನು, ಸಾವಿರಾರು ವರ್ಷಗಳ ತಮ್ಮ ಭವ್ಯಪರಂಪರೆಯ ನೆನಪುಗಳನ್ನು ಅಲ್ಲಿಯೇ ಹುಗಿದಿಟ್ಟು ರಾಷ್ಟ್ರ ರಾಜಧಾನಿಗೆ ಓಡಿ ಬಂದ ಜನಾಂಗವದು. ಅವರ ಆಸ್ತಿಪಾಸ್ತಿಯನ್ನು ಮುಸ್ಲಿಮರು ದೋಚಿದರು. ಸುಟ್ಟುಹಾಕಿದರು. ಭೂಮಿಯನ್ನು ತಮ್ಮ ವಶಕ್ಕೆ ತೆಗೆದುಕೊಂಡರು. ಅಲ್ಲೇ ಉಳಿದ ಹೆಣ್ಣ್ಣುಮಕ್ಕಳ ಮೇಲೆ ಅತ್ಯಾಚಾರವೆಸಗಿದರು, ಗಂಡಸರನ್ನು ಬರ್ಬರವಾಗಿ ಕೊಂದರು.

 ಕಾಶ್ಮೀರಿ ಪಂಡಿತರ ಬಗ್ಗೆ ನಮಗೆ ಗೊತ್ತಿದ್ದ ವಿಚಾರ ಇಷ್ಟು.ಆದರೆ ಈಗ ರಮೇಶ್ ಕುಮಾರ್ ಮತ್ತು ದೀಪಿಕಾಸಿಂಗ್ ತಮ್ಮ ನಡೆಯಿಂದ ಕೊಡುತ್ತಿರುವ ಸಂದೇಶವೇ ಬೇರೆ; ಇತಿಹಾಸವನ್ನು ಕೇವಲ ಇತಿಹಾಸವನ್ನಾಗಿಯೇ ನೋಡಬೇಕು. ಇತಿಹಾಸದಲ್ಲಾದ ತಪ್ಪುಗಳಿಗೆ ವರ್ತಮಾನದಲ್ಲಿ ನಿಂತು ಪ್ರತಿಕಾರಕ್ಕೆ ಮುಂದಾಗಬಾರದು.

.ಅಲ್ಲಿ ಜನವರಿಯಲ್ಲಿ ಆ ಮಗುವಿನ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಲಾಗಿದೆ. ಏಪ್ರಿಲ್ ನಲ್ಲಿ ಕೊಲೆಯಾದ ಮಗುವಿನ ತಂದೆ ಮಹಮ್ಮದ್ ಅಕ್ಬರ್ ಜೊತೆ ಲಾಯರ್ ದೀಪಿಕಾಸಿಂಗ್. ಕೋರ್ಟಿಗೆ ಹಾಜರಾಗಿದ್ದಾಳೆ. ಅಂದರೆ ಎರಡು ತಿಂಗಳು ಆಕೆ ಮಗುವಿನ ಹೆತ್ತವರನ್ನು ಭೇಟಿ ಮಾಡಿ ಮೊಕ್ಕದ್ದಮೆ ಹೂಡಲು ಮನವೊಲಿಸಿದ್ದಾಳೆ ಅಸಿಫಾ ಪರವಾಗಿ ಕೋರ್ಟ್ನಲ್ಲಿ ರಿಟ್ ಪಿಟಿಷನ್ ಹಾಕಿದ್ದಾಳೆ. ಅತ್ಯಾಚಾರ ಮತ್ತು ಕೊಲೆಯ ಆರೋಪ ಹೊತ್ತವರು ಹಿಂದುಗಳೆಂದೂ ಗೊತ್ತಾಗಿ ಅವರ ಪರವಾಗಿ ರಾಜಕೀಯ ಮತ್ತು ವಕೀಲರುಗಳ ಒತ್ತಡ ಬಂದಾಗಲೂ ಅವರ ತಮ್ಮ ಸತ್ಯ ಮತ್ತು ನ್ಯಾಯನಿಷ್ಟುರತೆಯನ್ನು ಬಿಟ್ಟುಕೊಡಲಿಲ್ಲ. ಅವರಲ್ಲಿ ಕಿಂಚಿತ್ತಾದರೂ ಸೇಡಿನ ಮನೋಭಾವವಿದ್ದಿದ್ದರೆ ಇದು ಸಾಧ್ಯವಾಗುತ್ತಿರಲಿಲ್ಲ. ಮಾನವಹಕ್ಕುಗಳ ಹೋರಾಟಗಾರ್ತಿಯೂ, ಸ್ವತಃ ’ವಾಯ್ಸ್ ಫಾರ್ ರೈಟ್ಸ್’ ಎಂಬ ಸ್ವಯಂಸೇವಾಸಂಘಟನೆಯ ಸಂಸ್ಥಾಪಕಿಯೂ ಆದ ದೀಪಿಕಾಸಿಂಗ್ ಮತ್ತು ನಿಶ್ಕಳಂಕ ಟ್ರಾಕ್ ರೆಕಾರ್ಡ್ ಹೊಂದಿರುವ ಪೋಲಿಸ ಅಧಿಕಾರಿ ರಮೇಶ್ ಕುಮಾರ್ ಜಲ್ಲಾ ಈ ಕ್ಷಣಕ್ಕೆ ಹೊಸ ಯುಗದ ಹರಿಕಾರರಾಗಿ ಕಾಣುತ್ತಿದ್ದಾರೆ . ಯಾವಾಗಲೂ ಅಷ್ಟೇ. ಪರಸ್ಪರ ಕತ್ತಿ ಮಸೆಯುತ್ತಿದ್ದ ಎರಡು ಗುಂಪುಗಳು ಅಸ್ತ್ರ್ಗಳನ್ನು ಕೆಳಗೆ ಹಾಕಿ ಪ್ರೀತಿಯ ಅಪ್ಪುಗೆಗಾಗಿ ತೋಳು ಚಾಚಲು ಮುಂದಾದರೆ ಅಲ್ಲಿ ಪ್ರಾಣವಾಯು ಸುಳಿದಾಡುತ್ತದೆ.

ಅತ್ತ ಕಾಶ್ಮೀರದಲ್ಲೂ ಮಾನವತೆಯ ಜಲವೊಂದು ಒಸರುತ್ತಿದೆ. ಅದೂ ಕೂಡಾ ಅಸಿಫಾ ಪ್ರಕರಣ ನಡೆದ ಮೇಲೆ ಪೆಭ್ರವರಿ ಮಧ್ಯಭಾದಲ್ಲಿ ಶಿವರಾತ್ರಿ ಆಚರಣೆಯ ಶುಭ ಸಂದರ್ಭದಲ್ಲಿ ನಡೆದಿದೆ ಎಂಭುದು ಆಶಾದಾಯಕ ಬೆಳವಣಿಗೆ. ಜೈಬರ್ ಅಹಮ್ಮದ್ ಎಂಬ ಕಾಶ್ಮೀರಿ ಯುವಕ ಪೇಸ್ಬುಕ್ ಪೇಜ್ ಆರಂಭಿಸಿ, ನಾವು ೨೮ ವರ್ಷಗಳ ಹಿಂದೆ ನಮ್ಮ ಸಹಪಾಥಿಗಳನ್ನು, ಹಳೆಯ ಗೆಳೆಯರನ್ನು, ನಮ್ಮ ನೆರೆಹೊರೆಯವರನ್ನು, ನಮ್ಮ ಕುಟುಂಬ ಸ್ನೇಹಿತರನ್ನು ಕಳೆದುಕೊಂಡಿದ್ದೇವೆ. ಅವರ ಬಗ್ಗೆ ಯಾವ ಸಮಚಾರವೂ ಇಲ್ಲ. . ಈಗ ಅವರನ್ನು ನಾವು ಹುಡುಕೋಣ ಮತ್ತೆ ಒಂದಾಗಿ ಬಾಳೋಣ. ಅದಕ್ಕಾಗಿ ಸಹಾಯ ಮಾಡಿ’’ ಎಂದು ಬರೆದುಕೊಂಡಿದ್ದಾನೆ. ಮಾತ್ರವಲ್ಲ. ಕಾಶ್ಮೀರಿ ಮುಸ್ಲಿಮರು ಕಾಶ್ಮೀರಿ ಪಂಡಿತರಿಗೆ ಶಿವರಾತ್ರಿಯ ಶುಭಾಶಯಪತ್ರಗಳನ್ನು [ಹಿರಾತ್ ಮುಬಾರಕ್]  ರವಾನಿಸಿದ್ದಾರೆ.

 ಈ ಪೇಜಿಗೆ ವಿಸಿಟ್ ಕೊಟ್ಟ ಅನೇಕರು ಕಾಶ್ಮೀರಿ ಮುಸ್ಲಿಮರ ಈ ನಡೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ ಕಾಮೆಂಟ್ ಗಳನ್ನು ಹಾಕಿದ್ದಾರೆ. ಮುಖ್ಯವಾಗಿ ಆಲ ಪಾರ್ಟೀಸ್ ಹುರಿಯತ್ ಕಾನ್ಫರೆನ್ಸ್ ನ [ APHC ] ಮುಖ್ಯಸ್ಥರಾದ ಮಿರ್ವಾಝಿ ಉಮರ್ ಫಾರೂಕ್ ಹಿರಾತ್ ಶುಭಾಶಯಗಳನ್ನು ಹೇಳುತ್ತಾ  ಕಾಶ್ಮೀರಿ ಪಂಡಿತರನ್ನು ಉದ್ದೇಶಿಸಿ’ ನೀವೆಲ್ಲಾ ತಾಯ್ನಾಡಿಗೆ ಮರಳಿ ಬನ್ನಿ. ನಾವೆಲ್ಲಾ ಮತ್ತೆ ಒಟ್ಟಾಗಿ ಬಾಳೋಣ’ ಎಂಬ ಸಂದೇಶವನ್ನು ಕಳುಹಿಸಿದ್ದಾರೆ.
ಒಳ್ಳೆಯದು ಎಲ್ಲಾ ಕಡೆಯಿಂದಲೂ ಹರಿದು ಬರಲಿ. ಆಗ ಉತ್ತಮವಾದ ಫಲವೇ ದೊರಕುತ್ತದೆ.

[ ಕಾಶ್ಮೀರದ ಕಟುವಾದಲ್ಲಿ ಬಕ್ರೆವಾಲ್ ಬುಡಗಟ್ಟಿನ ಎಂಟುವರ್ಷದ ಬಾಲಕಿಯ ಮೇಲೆ ನಡೆದ  ರೇಪ್ ಮತ್ತು ಮರ್ಡರ್ ಕೇಸನ್ನು ಲಾಯರ್ ದೀಪಿಕಾ ಸಿಂಗ್ ತಾನಾಗಿಯೇ ಕೈಗೆತ್ತಿಕೊಂಡು ನ್ಯಾಯಾಲಯದಲ್ಲಿ ಬಾಲಕಿಯ ತಂದೆಯ ಪರವಾಗಿ ವಕಾಲತ್ತು ವಹಿಸಿಕೊಂಡಾಗ ಮತ್ತು ತನಿಖಾಧಿಕಾರಿಯಾಗಿ ರಮೇಶ್ ಕುಮಾರ ಜಲ್ಲಾ ಅಧಿಕಾರ ವಹಿಸಿಕೊಂಡಾಗ ಏಪ್ರೀಲ್ ನಲ್ಲಿ ಈ ಲೇಖನ ಬರೆದೆ. ಯಾವುದೋ ಹುಕ್ಕಿನಲ್ಲಿ ದಿನಪತ್ರಿಕೆಯೊಂದಕ್ಕೆ ಕಳುಹಿಸಿಬಿಟ್ಟೆ. ಆದರೆ ಪ್ರಕಟವಾಗಲಿಲ್ಲ.


ಈಗ ಅತ್ಯಾಚಾರ ಅರೋಪಿಗಳ ಮೇಲೆ ಮೇಲೆ ಚಾರ್ಜ್ ಶೀಟ್ ಹಾಕಲಾಗಿದೆ. ಲಾಯರ್ ದೀಪಿಕಾ ಸಿಂಗ್ ರಾಜವತ್ ಗೆ ಇಂಡಿಯನ್ ಮರ್ಚೆಂಟ್ಸ್ ಚೇಂಬರ್ ಅಫ್ ಕಾಮರ್ಸ್ ಮತ್ತು ಇಂಡಸ್ತ್ರಿ ಲೇಡಿಸ್ ವಿಂಗ್ ‘ವರ್ಷದ ಮಹಿಳೆ’ ಎಂಬ ಬಿರುದನ್ನು ಕೊಟ್ಟು ಸನ್ಮಾನಿಸಿದೆ. ಆದರೆ ಬಿಜೆಪಿ ಸರಕಾರದಲ್ಲಿ ಫಾರೆಸ್ಟ್ ಸಚಿವರಾಗಿದ್ದ ಲಾಲ್ ಸಿಂಗ್ ಮತ್ತು ಇಂಡಸ್ಟ್ರಿ ಸಚಿವರಾದ ಚಂದ್ರ ಪ್ರಕಾಶ್  ರೇಪ್ ಆರೋಪ ಹೊತ್ತವರ ಪರ್ವಾಗಿ ಬೀದಿಗಿಳಿದು ಮೆರವಣಿಗೆ ಮಾಡಿದ್ದರು.
ಹಾಗಾಗಿ ಈ ಲೇಖನವನ್ನು ಬ್ಲಾಗ್ ಗೆ ಹಾಕಬೇಕೆನಿಸಿತು ]







Sunday, May 20, 2018

ಹಿಂದು, ಜೈನ, ಬೌದ್ಧ ಧರ್ಮಿಯರ ಶ್ರದ್ಧಾಕೇಂದ್ರ-ಕೈಲಾಸ ಪರ್ವತ.




ಕೈಲಾಸ ಪರ್ವತವೆಂದರೆ, ಅದು ಶಿವನ ಆವಾಸ ಸ್ಥಾನ. ಬದುಕಿನಲ್ಲಿ ಒಮ್ಮೆಯಾದರೂ ಅಲ್ಲಿಗೆ ಹೋಗಬೇಕೆಂದು ಪ್ರತಿಯೊಬ್ಬ ಭಾರತೀಯನೂ ಆಸೆಪಡುತ್ತಾನೆ. ಪ್ರತಿಯೊಬ್ಬ ಭಾರತೀಯನೂ ಎಂದು ಯಾಕೆ ಒತ್ತಿಹೇಳಿದೆನೆಂದರೆ ಅದು ಕೇವಲ ಹಿಂದುಗಳಿಗೆ ಮಾತ್ರ ಪೂಜನೀಯ ಜಾಗವಲ್ಲ. ಅದು ಬೌದ್ಧ ಮತ್ತು ಜೈನರಿಗೂ ಕೂಡಾ ಅದು ಪವಿತ್ರ ಸ್ಥಳವೇ ಆಗಿದೆ. ಇದರ ಎತ್ತರ ೨೧೭೭೮ ಅಡಿ . ಸದಾ ಹಿಮದಿಂದ ಆವೃತವಾದ ಶಿಖರವಿದು

ಕೈಲಾಸ ಪರ್ವತದ ಪಕ್ಕದಲ್ಲಿಯೇ ಇದೆ. ಮಾನಸ ಸರೋವರ. 
ಮಾನಸ ಸರೋವರ, ಹಾಗೆಂದಕೂಡಲೇ  ತಕ್ಷಣಕ್ಕೆ ನೆನಪಿಗೆ ಬರುವುದು ಕೈಲಾಸ ಪರ್ವತವೇ. ಅದೊಂದು ಜೋಡಿ ಶಬ್ದದಂತೆ. . ಬ್ರಹ್ಮನ ಮನಸ್ಸಿನಿಂದ ಹುಟ್ಟಿದ ಕಾರಣದಿಂದಾಗಿ ಇದಕ್ಕೆ ಮಾನಸ ಸರೋವರವೆಂಬ ಹೆಸರು ಬಂದಿದೆ. ಇದು ಅತ್ಯಂತ ಎತ್ತರದಲ್ಲಿರುವ ತಿಳಿ ನೀರಿನ ಸರೋವರ. ಇದರಲ್ಲಿ ಸ್ನಾನ ಮಾಡಿದರೆ ಸರ್ವಪಾಪಗಳು ಪರಿಹಾರವಾಗಿ ಮೋಕ್ಷ ದೊರಕುತ್ತದೆಯೆಂದು ಆಸ್ತಿಕರು ನಂಬುತ್ತಾರೆ. ಇದರ ವಿಸ್ತಿರ್ಣ ೪೧೦ ಕಿ.ಮೀ ಮತ್ತು ೩೦೦ ಅಡಿ ಆಳ ಹೊಂದಿದೆ.

ಮಾನಸ ಸರೋವರ ಹಿಂದೆ ಅದು ಭಾರತದ ಭೂಭಾಗವೇ ಆಗಿದ್ದರೂ ಈಗ ಅದು ಚೀನಾದ ಸ್ವಾಧೀನದಲ್ಲಿರುವ ಟಿಬೇಟ್ ನಲ್ಲಿದೆ. ಆದ ಕಾರಣ ಅಲ್ಲಿಗೆ ಹೋಗಲು ಚೀನಾ ಸರಕಾರ ವೀಸಾ ಕೊಡಲೇಬೇಕು.  ಇಂತಿಷ್ಟೇ ಸಂಖ್ಯೆಯಲ್ಲಿ  ಯಾತ್ರಿಗಳು ಬರಬಹುದು ಎಂದು ಅದು ನಿಗದಿ ಮಾಡುತ್ತದೆ. ಮಾನಸ ಸರೋವರಕ್ಕೆ ಹೋಗಲು ಇದುವರೆಗೆ ಎರಡೇ ದಾರಿಗಳಿದ್ದವು ಅದು ಉತ್ತರಾಖಂಡ ರಾಜ್ಯದ ಲಿಪುಲೇಖ್ ಪಾಸ್ ಮುಖಾಂತರ ಹಾದು ಹೋಗುವ ಕಠಿಣವಾದ ಹಾದಿ. ಇದಕ್ಕೆ ಸರಿಸುಮಾರು ಮುನ್ನೂರು ಕಿ. ಮೀ ನಡೆಯಬೇಕಾಗುತ್ತದೆ. ಇದು ಗೌರ್ನ್ಮೆಂಟ್ ರೂಟ್, ನೇಪಾಳದ ಕಟ್ಮಂಡು ಮುಖಾಂತರ ಹೋಗುವ ಖಾಸಗಿ ರೂಟ್ ಇನ್ನೊಂದು. ಇದಕ್ಕೆ ಜೀಪು, ಬಸ್ಸು ಹೆಲಿಕಾಪ್ಟರ್ ಮುಂತಾದ ಸೌಲಭ್ಯಗಳನ್ನು ಆಯೋಜಕರು ಒದಗಿಸುವ ಕಾರಣಗಳಿಂದ ಯಾತ್ರೆ ಕಠಿಣವೆನಿಸುವುದಿಲ್ಲ

ಸರಕಾರಿ ರೂಟ್ನಲ್ಲಿ ಅಬ್ಬರಿಸುವ ಮಹಾಕಾಳಿ ನದಿ ಹರಿಯುತ್ತಿರುವುದರಿಂದ ಅಲ್ಲಿ ಭೂಕುಸಿತವಾಗುವುದು ಸಾಮಾನ್ಯ. ಹಾಗಾಗಿ ಈ ದಾರಿಯಲ್ಲಿ ಸರಕಾರದ ಸುಪರ್ದಿಯಲ್ಲೇ ಯಾತ್ರೆ ಕೈಗೊಳ್ಳಬೇಕಾಗುತ್ತದೆ. ಇದೇ ಹಾದಿಯಲ್ಲಿ ಮಲ್ಪಾದ ಹತ್ತಿರ ೧೯೯೭ರಲ್ಲಿ ಪ್ರಖ್ಯಾತ ಓಡಿಸ್ಸಿ ನ್ರುತ್ಯಗಾತಿಯೂ, ರೂಪದರ್ಶಿಯೂ ಆದ ಪ್ರೋತಿಮಾಬೇಡಿ ಭೂಕುಸಿತದಲ್ಲಿ ಸಾವನ್ನಪ್ಪಿದ್ದು. ಕಳೆದ ವರ್ಷ ಇಲ್ಲಿ ಸತತ ಭೂಕುಸಿತವುಂಟಾಗಿ ಮಾನಸ ಯಾತ್ರೆಯ ನಾಲ್ಕು  ಬ್ಯಾಚ್ ರದ್ದಾಗಿತ್ತು. ರದ್ದಾದ ಬ್ಯಾಚಿನಲ್ಲಿ ನಾನೂ ಒಬ್ಬಳಾಗಿದ್ದೆ. ಹಾಗಾದಾಗ ನಾವು ಕಟ್ಟಿದ್ದ ದುಡ್ಡು ವಾಪಾಸು ಸಿಕ್ಕಿದರೂ ಅದಕ್ಕಾಗಿ ನಡೆಸಿದ ತಯಾರಿ ಮತ್ತು ವಿಮಾನ ಟಿಕೇಟ್ ಗಳ ಕಾರಣದಿಂದಾಗಿ ಸುಮಾರು ನಷ್ಟವುಂಟಾಗುತ್ತದೆ.

ನರೇಂದ್ರ ಮೋದಿ ಸರಕಾರದ ಮಾತುಕತೆಯ ಫಲವಾಗಿ ಈ ವರ್ಷದಿಂದ ಮೂರನೆಯ ಹಾದಿಯೊಂದು ತೆರೆದುಕೊಂಡಿದೆ. ಇದು ಸಿಕ್ಕಿಂ- ಚೀನಾ ಗಡಿಭಾಗವಾದ ನಾತೂಲ ಪಾಸ್ ಮೂಲಕವಾಗಿ ಹೋಗುವ ರಸ್ತೆ ಮಾರ್ಗ. ಇದು ಅತ್ಯಂತ ಸುಲಭವಾದ ರಸ್ತೆ ಹಾದಿ ಮತ್ತು ಯಾತ್ರೆಯ ಸಮಯದ ಅವಧಿ ಕೂಡಾ ಕಡಿಮೆ.
ಕೈಲಾಸ ಮಾನಸಯಾತ್ರೆಯ ಸಂಕಲ್ಪ ಮಾಡಿಕೊಂಡರೂ ಅದು ನೆರವೇರುತ್ತದೆಯೆಂಬ ಯಾವ ಭರವಸೆಯೂ ಇರುವುದಿಲ್ಲ. ಯಾಕೆಂದರೆ ಅದಕ್ಕೆ ಬಹುದೊಡ್ಡ ಅಡ್ಡಿಯಾಗುವುದು ಪ್ರಕೃತಿಯೇ. ಹಿಮಪಾತ, ಭೂಕುಸಿತ ಮುಂತಾದ ಹವಮಾನ ವೈಪರಿತ್ಯಗಳಿಂದ ಹಲವಾರು ಭಾರಿ ಯಾತ್ರೆ ಅರ್ಧಕ್ಕೆ ನಿಂತಿರುವುದೂ ಇದೆ.

ಇಷ್ಟೇಲ್ಲಾ ಕಷ್ಟಪಟ್ಟು ಯಾತ್ರೆಯನ್ನು ಕೈಗೊಂಡ ಮೇಲೆ ಅಲ್ಲಿ ನೋಡುವುದಾದರೂ ಏನನ್ನು? ಮಾನಸಸರೋವರ ಮತ್ತು ಕೈಲಾಸ ಪರ್ವತ ಎಲ್ಲರಿಗೂ ಗೊತ್ತಿರುವಂತಹದೇ. ಅಲ್ಲಿರುವುದು ಇಷ್ಟು ಮಾತ್ರವೇ, ಇನ್ನೇನು ಇಲ್ಲವೇ ಎಂಬ ಪ್ರಶ್ನೆ ಸಹಜವಾಗಿ ಹುಟ್ಟುತ್ತದೆ.

ನನಗೊಬ್ಬ ಚಾರಣದ ಗೆಳತಿಯಿದ್ದಾಳೆ. ಆಕೆಯ ಹೆಸರು ಗಾಯತ್ರಿ. ನಮ್ಮದೊಂದು ಪುಟ್ಟ ಐದು ಜನರ ತಂಡವಿದೆ. ಪ್ರತಿವರ್ಷ ಹಿಮಾಲಯದಲ್ಲಿ ಚಿಕ್ಕಪುಟ್ಟ ಚಾರಣ್ಗಳನ್ನು ಕೈಗೊಳ್ಳುತ್ತೇವೆ.ಗಾಯತ್ರಿ ಆರು ಭಾರಿ ಕೈಲಾಸ ಮಾನಸ ಸರೋವರ ಯಾತ್ರೆ ಮಾಡಿದ್ದಾಳೆ. ’ ಅಷ್ಟು ಬಾರಿ ನೋಡುವಂತದ್ದು ಅಲ್ಲೇನಿದೆ?’ ಅಂತ ಅವಳನ್ನು ಪ್ರಶ್ನಿಸಿದರೆ ಆಕೆ ಅಲ್ಲಿರುವ ಸ್ಥಳಗಳ ಪಟ್ಟಿಯನ್ನೇ ಕೊಡುತ್ತಾಳೆ.

ರಾಕ್ಷತಾಳ್, ಅಷ್ಟಪಾದ, ನಂದಿಪರಿಕ್ರಮ, ಸಪ್ತಋಷಿ ಗುಹೆ, ಯಮಧ್ವಾರ..ಹೀಗೆ ಪಟ್ಟಿ ಮುಂದುವರಿಯುತ್ತದೆ.
ರಾಕ್ಷಸ ತಾಳ್ [ರಾಕ್ಷಸ ಸರೋವರ.] ಇದು ಮಾನಸ ಸರೋವರಕ್ಕಿಂತಲೂ ದೊಡ್ಡದು. ಇದರ ಹೆಸರಿಗೊಂದು ಹಿನ್ನೆಯಿದೆ. ರಾವಣ ತನ್ನ ತಾಯಿಯ ಬಯಕೆಯಂತೆ ಆತ್ಮಲಿಂಗವನ್ನು ಪಡೆಯುವುದಕ್ಕಾಗಿ ಶಿವನನ್ನು ಕುರಿತು ಘೋರ ತಪಸ್ಸನ್ನು ಮಾಡುತ್ತಾನೆ. ಆದರೆ ಶಿವ ಪ್ರತ್ಯಕ್ಷನಾಗುವುದಿಲ್ಲ. ಆಗ ಹತ್ತು ತಲೆಯ ರಾವಣ ತನ್ನ ಒಂದೊಂದೇ ತಲೆಯನ್ನು ಕಡಿದು ಹೋಮಕುಂಡಕ್ಕೆ ಅರ್ಪಿಸುತ್ತಾನೆ. ಹತ್ತನೆಯ ತಲೆಗೆ ಕತ್ತಿಯಿಕ್ಕುವಾಗ ಶಿವ ಪ್ರತ್ಯಕ್ಷನಾಗಿ ಆತ್ಮಲಿಂಗವನ್ನು ಕೊಡುತ್ತಾನೆ.. ರಾವಣ ಅಮೇಲೆ ಈ ಸರೋವರದಲ್ಲಿ ಸ್ನಾನ ಮಾಡಿದಾಗ ಆತ ಕಳೆದುಕೊಂಡ ತಲೆ ಪುನಃ ಚಿಗುರಿತಂತೆ. ಈ ಸರೋವರ ಮಾನಸ ಸರೋವರಕ್ಕಿಂತಲೂ ವಿಸ್ತೀರ್ಣ್ದಲ್ಲಿ ದೊಡ್ಡದು. ನೀರು ಶುಬ್ರವಾಗಿದ್ದರೂ ರಾಕ್ಷಸ ಗುಣ ಬರಬಹುದೆಂಬ ಭಯದಿಂದ ಭಕ್ತರು ಇಲ್ಲಿ ಸ್ನಾನ ಮಾಡುವುದಿಲ್ಲ.  

ಬೌದ್ದರಿಗೂ ಕೈಲಾಸ ಮಾನಸ ಸರೋವರ ಪವಿತ್ರವೆಂದು ಹಿಂದೆ ಪ್ರಸ್ತಾಪಿಸಿದ್ದೆ. ಹೌದು, ಇದೇ ರಾಕ್ಷಸ ಸರೋವರದಲ್ಲಿ ಎರಡ್ಮೂರು ಚಿಕ್ಕಪುಟ್ಟ ದ್ವೀಪಗಳಿವೆ. ಇದರಲ್ಲಿ ಬೌದ್ಧಬಿಕ್ಕುಗಳು, ಲಾಮಗಳು ವಾಸಿಸುತ್ತಾರೆ. ಚಳಿಗಾಲದ ಸಮಯದಲ್ಲಿ ಈ ಸರೋವರ ಹೆಪ್ಪುಗಟ್ಟುತ್ತದೆ. ಆಗ ಇವರು ಹೆಪ್ಪುಗಟ್ಟಿದ ಸರೋವರದ ಮೇಲೆ ನಡೆದು ಬಂದು ಇಡೀ ವರ್ಷಕ್ಕೆ ಬೇಕಾದ ಅಗತ್ಯ ವಸ್ತುಗಳನ್ನು ತಂದು ಸಂಗ್ರಹಿಸಿಟ್ಟುಕೊಂಡು ತಮ್ಮ ಆಧ್ಯಾತ್ಮಿಕ ಸಾಧನೆಯನ್ನು ಮುಂದುವರಿಸುತ್ತಾರೆ.

ನಮ್ಮ ಹಾಗೆಯೇ ಬೌದ್ಧರು ಕೂಡಾ ಕೈಲಾಸ ಪರ್ವತವನ್ನು ಬುದ್ಧನ ಆವಾಸ ಸ್ಥಾನವೆಂದು ನಂಬುತ್ತಾರೆ. ಅವರ ಭಾವ ದ್ರುಷ್ಟಿಗೆ ಕೈಲಾಸ ಪರ್ವತವು ಸಮಾಧಿ ಸ್ಥಿತಿಯಲ್ಲಿ ಕುಳಿತ ಬುದ್ಧನಂತೆ ಗೋಚರವಾಗುತ್ತದೆ. ಅವರೂ ಕೂಡಾ ಹಿಂದುಗಳಂತೆಯೇ ಕೈಲಾಸ ಪರ್ವತಕ್ಕೆ ಪರಿಕ್ರಮವನ್ನು ಮಾಡುತ್ತಾರೆ. ಇನ್ನೀತರ ಪವಿತ್ರ ಬೌದ್ಧಮಂದಿರಗಳಲ್ಲಿ ಮಾಡುವ ಹಾಗೆ ಹೆಜ್ಜೆ ನಮಸ್ಕಾರ ಮತ್ತು ಮಂಡಿಯೂರಿ ನಮಸ್ಕಾರ ಮಾಡುವ ಬೌದ್ಧ ಸನ್ಯಾಸಿಗಳನ್ನು ಪರಿಕ್ರಮದ ಹಾದಿಯಲ್ಲಿ ಕಾಣಬಹುದು. ಇಲ್ಲಿಯೂ ಬೌದ್ದರೇ ಭಾಗವಹಿಸುವ ಬಹುದೊಡ್ಡ ಕುಂಭಮೇಳವೊಂದು ಯಮಧ್ವಾರದ ಬಳಿ ಹನ್ನೆರಡು ವರ್ಷಕ್ಕೊಮ್ಮೆ ನಡೆಯುತ್ತದೆ. . ಇದನ್ನು ’ಹಾರ್ಸ್ ಇಯರ್’ ಎಂದು ಕರೆಯುತ್ತಾರೆ. ಯಮಧ್ವಾರದಿಂದ ನಿಂತು ನೋಡಿದರೆ ಎರಡು ಬೆಟ್ಟಗಳು ಕಾಣುತ್ತವೆ. ಅವುಗಳ ಹೆಸರು ಅವಲೋಕಿತೇಶ್ವರ ಬೆಟ್ಟ ಮತ್ತು ಮಂಜುಶ್ರೀ ಬೆಟ್ಟ.

ಜೈನರಿಗೂ ಇದು ಪವಿತ್ರ ಜಾಗ. ಜೈನ ತೀರ್ಥಂಕರಲ್ಲಿ ಮೊದಲನೆಯವನಾದ ವೃಷಭದೇವನು ಕೈಲಾಸ ಪರ್ವತದ ಪಕ್ಕದಲ್ಲಿರುವ ಬೆಟ್ಟವನ್ನು ಕೇವಲ ಎಂಟು ಹೆಜ್ಜೆಗಳಲ್ಲಿ ಹತ್ತಿ ಕೈಲಾಸ ಪರ್ವತವನ್ನು ತಲುಪಿ ಅಲ್ಲಿ ನಿರ್ವಾಣ ಹೊಂದಿದ ಎಂಬ ನಂಬಿಕೆಯಿದೆ. ಹಾಗಾಗಿ ಆ ಬೆಟ್ಟಕ್ಕೆ  ಅಷ್ಟಪಾದ ಎಂಬ ಹೆಸರು ಬಂದಿದೆ. ಆ ಬೆಟ್ಟದ ಬುಡದಲ್ಲಿ ವೃಷಭದೇವನ ಸಮಾಧಿಯಿರುವ ಗೊಂಪವಿದೆ.

ಕೈಲಾಸ ಮಾನಸ ಸರೋವರದ ಯಾತ್ರೆಯನ್ನು ತಾನು ಮುಗಿಸಿ ಬಂದೆ ಅಂತ ಯಾರದರೂ ಹೇಳಿದರೆ ಅದರ ಬಗ್ಗೆ ಸ್ವಲ್ಪ ಗೊತ್ತಿದ್ದವರು ತಕ್ಷಣ ಒಂದು ಪ್ರಶ್ನೆ ಕೇಳುವುದಿದೆ. ’ಇನ್ನರ್ ಪರಿಕ್ರಮ ಮಾಡಿದ್ರಾ ಅಥ್ವಾ ಔಟರ್ ಮಾತ್ರವಾ?’ ಅಂತ. ಹಾಗೆಂದರೇನು?   ಕೈಲಾಸ ಪರ್ವತದ ಹೊರ ಆವರಣದಲ್ಲಿ ಪರ್ವತಕ್ಕೆ ಸುತ್ತು ಬರುವುದಕ್ಕೆ ಔಟರ್ ಪರಿಕ್ರಮ ಎನ್ನುತ್ತಾರೆ. ಇದನ್ನು ಕಾಲುನಡಿಗೆಯಲ್ಲಿ ಮಾಡಿದರೆ ಮೂರು ದಿವಸ ಬೇಕಾಗುತ್ತದೆ. ವಾಹನದಲ್ಲಾದರೆ ಕೆಲವು ಘಂಟೆಗಳು ಸಾಕು. ಒಳಗಿನಿಂದ ಸುತ್ತು ಬರುವುದಕ್ಕೆ ಇನ್ನರ್ ಪರಿಕ್ರಮ ಎನ್ನುತ್ತಾರೆ. ಮೈಕೊರೆಯುವ ಚಳಿಯಲ್ಲಿ ಇದನ್ನು ಮಾಡುವುದು ತುಂಬಾ ಕಷ್ಟಕರ. ಆ ಕಾರಣದಿಂದಲೇ ಇರಬಹುದು. ಈಗ ಐದಾರು ವರ್ಷಗಳಿಂದ ಇನ್ನರ್ ಪರಿಕ್ರಮಕ್ಕೆ ಚೀನಾ ಸರಕಾರವು ಒಪ್ಪಿಗೆಯನ್ನು ನೀಡುತ್ತಿಲ್ಲ.

ಸಪ್ತಸಿಂಧುಗಳಲ್ಲಿ ಉಲ್ಲೇಖವಾಗಿರುವ ಗಂಗಾನದಿಯೂ ಸೇರಿದಂತೆ, ಸಿಂಧು, ಸಟ್ಲೇಜ್ ಮುಂತಾದ ನದಿಗಳ ಉಗಮ ಸ್ಥಾನ ಕೂಡ ಇದೇ ಇದೇ ಮಾನಸ ಸರೋವರ. ಪ್ರತಿದಿನ ಬೆಳಿಗ್ಗೆ ಬ್ರಾಹ್ಮಿ ಮೂಹೂರ್ತದಲ್ಲಿ ದೇವತೆಗಳು ಬೆಳಕಿನ ರೂಪದಲ್ಲಿ, ನಕ್ಷತ್ರಗಳಾಗಿ ಬಂದು ಇಲ್ಲಿ ಸ್ನಾನ ಮಾಡುತ್ತಾರೆಂಬು ಆಸ್ತಿಕರು ನಂಬುತ್ತಾರೆ. ತಾವದನ್ನು ನೋಡಿದುದಾಗಿಯೂ ಕೆಲವರು ಹೇಳುತ್ತಾರೆ.

 ಆಸ್ತಿಕರು ಗುಡಿಯೊಳಗಿನ ದೇವರನ್ನು ನಂಬುತ್ತಾರೆ.  ಹಾಗೆಯೇ ಪ್ರಕೃತಿಯಲ್ಲೂ ದೇವರನ್ನು ಕಾಣುತ್ತಾರೆ. ನನ್ನಂತವರು ಕ್ಷಣ ಕ್ಷಣಕ್ಕೂ ಬದಲಾಗುವ ಪ್ರಕೃತಿಯನ್ನು, ಸೃಷ್ಟಿಯ ಅದ್ಭುತವನ್ನು ನೋಡಿ ಬೆರಗಾಗಿ ನಿಲ್ಲುತ್ತೇವೆ. ಹಾಗಾಗಿಯೇ ಅಸ್ತಿಕಳಾದ ಗಾಯತ್ರಿ ಮತ್ತು  ಪೂಜೆ, ಪುನಸ್ಕಾರಗಳಲ್ಲಿ ಆಸಕ್ತಿಯಿಲ್ಲದ ನಾನು ಒಟ್ಟಾಗಿ ಪ್ರವಾಸ ಹೋಗಲು ಸಾಧ್ಯವಾಗುತ್ತದೆ. ಅವಳು ಗರ್ಬಗುಡಿಯೊಳಗೆ ಹೊಕ್ಕರೆ ನಾನು ಗಿರಿ- ಶಿಖರ, ಹಕ್ಕಿ ಪಕ್ಕಿಗಳ ಕಡೆಗೆ ಕ್ಯಾಮಾರ ಫೋಕಸ್ ಮಾಡುತ್ತೇನೆ.

[ಇವತ್ತಿನ -೫.೨೦.೨೦೧೮- ಸಂಯುಕ್ತ ಕರ್ನಾಟಕ ಪೇಪರಿನ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಲೇಖನ]


Saturday, March 10, 2018

ಶ್ರೀಲಂಕಾದಲ್ಲಿ ಸಂಘರ್ಷ ಮತ್ತು ಸಹಿಷ್ಣುತೆ.







ಶ್ರೀಲಂಕಾದಲ್ಲಿ ಬೌದ್ಧರಿಗೂ ಮುಸ್ಲಿಂರಿಗೂ ಸಂಘರ್ಷ ಉಂಟಾಗಿ ಅಲ್ಲಿ ತುರ್ತುಪರಿಸ್ಥಿತಿ ಘೋಷಣೆಯಾಗಿದೆ. ೧೯೭೧ರಲ್ಲಿ ಶ್ರೀಲಂಕಾ ತಮಿಳರು ಮತ್ತು ಸೇನೆಯ ನಡುವೆ ಸಂಘರ್ಷವೇರ್ಪಟ್ಟ ಸಮಯದಲ್ಲಿ ದಶಕಗಳ ಕಾಲ ತುರ್ತುಪರಿಸ್ಥಿ ಹೇರಲಾಗಿತ್ತು. ಈಗ ಮತ್ತೆ ಹತ್ತು ದಿನಗಳ ತುರ್ತುಪರಿಸ್ಥಿತಿ ಬಂದಿದೆ. ಇಂಟರ್ನೆಟ್ ಸ್ಥಗಿತಗೊಳಿಸಿ ಎಲ್ಲಾ ರೀತಿಯ ಸೋಷಿಯಲ್ ಮೀಡಿಯಾಗಳನ್ನು ಬ್ಯಾನ್ ಮಾಡಿದೆ.

ತುರ್ತುಪರಿಸ್ಥಿಗೆ ಕಾರಣವಾಗಿದ್ದು ಒಂದು ಸಾಧಾರಣ ಘಟನೆ. ಪೆಭ್ರವರಿ ೨೨ರಂದು ಕ್ಯಾಂಡಿಯಲ್ಲಿ ಕುಮಾರಸಂಘಿಯೆಂಬ ಟ್ರಕ್ ಡ್ರೈವರ್ ಗಾಡಿ ಓಡಿಸುತ್ತಿದ್ದ. ಹಿಂದಿನಿಂದ ಒಂದು ಅಟೊ ಬರುತ್ತಿತ್ತು. ಈತ ಅವನಿಗೆ ದಾರಿಬಿಡಲಿಲ್ಲ. ಇಬ್ಬರಿಗೂ ಜಗಳ ಹತ್ತಿಕೊಂಡಿತು. ಅದು ಮುಸ್ಲಿಂ ಪ್ರಾಬಲ್ಯದ ಪ್ರದೇಶ. ಹತ್ತಾರು ಮುಸ್ಲಿಮರು ಸೇರಿಕೊಂಡು ಕುಮಾರಸಂಘಿಯನ್ನು ಥಳಿಸಿದರು. ಆತ ಸತ್ತು ಹೋದ. ಆತನ ಶವದ ಮೆರವಣಿಗೆಯ ಸಮಯದಲ್ಲಿ ಬೌದ್ಧರು ಸಿಕ್ಕ ಸಿಕ್ಕ ಮುಸ್ಲಿಮರ ಮೇಲೆ ಏರಿ ಹೋದರು. ಅವರ ಮನೆ ಅಂಗಡಿಗಳನ್ನು ಸುಟ್ಟು ಹಾಕಿದರು. ಮಸೀದಿಗಳಿಗೆ ಹಾನಿ ಉಂಟು ಮಾಡಿದರು. ಪರಿಸ್ಥಿತಿ ಬಿಗಾಡಾಯಿಸಿತು. ಸೇನೆ ಮತ್ತು ಪೋಲಿಸರು ಮಧ್ಯೆ ಪ್ರವೇಶಿಸಿದರು.  ಅಧ್ಯಕ್ಷ ಮೈತ್ರಿಪಾಲ ಸಿರಿಸೇನಾ ತುರ್ತುಪರಿಸ್ಥಿತಿ ಘೋಷಣೆ ಮಾಡಿದರು.

ಕಳೆದ ವಾರ ನಾನು ಅಲ್ಲಿದ್ದೆ. ತಮ್ಮ ಧರ್ಮದ ವಿಷಯವಾಗಿ ಅಲ್ಲಿನ ಜನರು ಎಷ್ಟು ಸೂಕ್ಷ್ಮಮತಿಗಳು ಎಂಬುದಕ್ಕೆ  ಒಂದು ಪ್ರತ್ಯಕ್ಷ ಘಟನೆಯನ್ನು ಹೇಳುತ್ತೇನೆ.

ನಮ್ಮ ಪ್ರವಾಸಿ ತಂಡ ಭಾರತಕ್ಕೆ ಮರಳಲು ಕೊಲೊಂಬೋದ ಭಂಡಾರೆನಾಯಿಕೆ ಇಂಟರ್ ನ್ಯಾಷನಲ್ ವಿಮಾನ ನಿಲ್ಡಾಣದ ಚಿಕ್ ಇನ್ ಕೌಂಟರ್ ನಲ್ಲಿ ನಿಂತಿದ್ದೆವು.  ಸರತಿ ಸಾಲಿನಲ್ಲಿ ನಮ್ಮ ಸಹ ಪ್ರವಾಸಿಗರಾದ ನಮ್ಮ ಕನ್ನಡದ ಹಿರಿಯ ನಟ ಅಶೋಕ್ ರವರ ಅಣ್ಣ ಮತ್ತು ಅತ್ತಿಗೆ ಕೂಡಾ ಇದ್ದರು. ನಮ್ಮ ಪಕ್ಕದ ಸಾಲಿನಲ್ಲಿದ್ದ ಮೂರ್ನಾಕು ಜನ ಬೌದ್ಧಬಿಕ್ಕುಗಳು ಪರಸ್ಪರ ಗುಸುಗುಸು ಮಾತಾಡುತ್ತಾ ಆಗಾಗ ಅಶೋಕರ ಅತ್ತಿಗೆಯನ್ನು ನೋಡುತ್ತಿರುವುದನ್ನು ಗಮನಿಸಿದೆ.
ನಾವೆಲ್ಲ ಬುದ್ಧ ಹುಟ್ಟಿದ ನಾಡಿನವರು. ಹಾಗಾಗಿ ಅಭಿಮಾನದಿಂದ ನಮ್ಮನ್ನವರು ನೋಡುತ್ತಿರಬಹುದೆಂದು ಒಳಗಿಂದೊಳಗೆ ಹೆಮ್ಮೆಯಿಂದ ಬೀಗುತ್ತಲಿದ್ದೆ.. ಆದರೆ ಇದ್ದಕ್ಕಿದ್ದಂತೆ ಮೂರ್ನಾಲ್ಕು ಜನ ಸೆಕ್ಯೂರಿಟಿ ಗಾರ್ಡಗಳು ಆಕೆಯಿದ್ದೆಡೆಗೆ ಬಂದುನಮ್ಮ ಜೊತೆ ಬನ್ನಿ ಎಂದು ಕರೆದಾಗ ಅವರ ಜೊತೆ ನಾವು ಕೂಡಾ ತಬ್ಬಿಬ್ಬುಗೊಂಡೆವು. ಗಂಡ ಹೆಂಡತಿಯರಿಬ್ಬರೂ ಚಕಿತಗೊಳ್ಳುತ್ತಲೇ ಅವರನ್ನು ಹಿಂಬಾಲಿಸಿದರು. ನಾವೆಲ್ಲಾ ಯಾಕಾಗಿರಬಹುದು? ಎಂದು ಕಾತರದಿಂದ ಅವರು ಹಿಂದಿರುಗಿ ಬರುವುದನ್ನೇ ಕಾಯುತ್ತಿದ್ದೆವು. ಆಕೆ ಹಿಂದಿರುಗಿ ಬರುತ್ತಲೇ ತನ್ನ ಲಗ್ಗೇಜ್ ಬ್ಯಾಗನ್ನು ತಡಕಾಡುತ್ತಾ ಅದರಿಂದ ಒಂದು ಚೂಡಿದಾರ್ ಟಾಪ್ ಎತ್ತಿಕೊಂಡು ಲೇಡಿಸ್ ರೆಸ್ಟ್ ರೂಮ್ ನತ್ತ ಹೋದರು. ನಾವು ಪ್ರಶ್ನಾರ್ಥಕ ಚಿಹ್ನೆಯಿಂದ ಆಕೆಯ ಗಂಡನೆಡೆ ನೋಡಿದಾಗ ಅವರು ಹೇಳಿದರು; ತಮ್ಮ ಪತ್ನಿ ಬುದ್ಧನ ಚಿತ್ರಗಳಿದ್ದ ಟಾಪ್ ಹಾಕಿಕೊಂಡಿದ್ದು ಅಲ್ಲಿಯ ಬಹುಸಂಖ್ಯಾತ ಬೌದ್ಧರ ಧಾರ್ಮಿಕ ಭಾವನೆಗಳಿಗೆ ನೋವನ್ನುಂಟುಮಾಡುವಂತಿತ್ತಂತೆ. ಹಾಗಾಗಿ ಬದಲಾಯಿಸಲು ಹೇಳಿದರಂತೆ. ನಿಜ ಬೌದ್ಧರಿಗೆ ಬುದ್ಧ ದೇವರಿದ್ದಂತೆ. ಅತನ ಚಿತ್ರಗಳಿರುವ ಮೇಲುಡುಗೆಯನ್ನು ವಿದೇಶಿಯ ಹೆಣ್ಣುಮಗಳೊಬ್ಬಳು ತೊಟ್ಟಾಗ ಅವರು ಅಕ್ಷೇಪಿಸುವುದು ಸಹಜವಾಗಿತ್ತು.

 ದೇವರ ವಿಷಯದಲ್ಲಿ ನಾವು ಭಾರತೀಯರು ಉದಾರಿಗಳು, ನಮ್ಮಲ್ಲಿ ಮೂವತ್ತಮೂರು ಕೋಟಿ ದೇವತೆಗಳಿದ್ದಾರೆ, ಅವರನ್ನು ನಾವು ಬೇಕಾದಂತೆ ಬಳಸಿಕೊಳ್ಳುತ್ತೇವೆ. ಅವರ ಟ್ಯಾಟು ಹಾಕಿಸಿಕೊಳ್ಳುತ್ತೇವೆ, ನಾವು ಉಡುವ ವಸ್ತ್ರಗಳಲ್ಲಿ ದೇವರ ಚಿತ್ರಗಳಿದ್ದರೆ ನಮಗದು ಅಕ್ಷೇಪಾರ್ಹವಲ್ಲ, ಗಣೇಶ, ಶಿವ,  ಶ್ರೀಕೃಷ್ಣರಂತೂ ಸರ್ವಾಂತರ್ಯಾಮಿಗಳು. ಅದರೆ ವಿದೇಶಿಗರು ಇವರನ್ನು ಬೇಕಾಬಿಟ್ಟಿಯಾಗಿ ಬಳಸಿಕೊಂಡಾಗ ನಮ್ಮಿಂದಲೂ ಪ್ರತಿಭಟನೆ ವ್ಯಕ್ತವಾದುದುಂಟು. ಬುದ್ಧ ನಮ್ಮ ನಾಡಿನಲ್ಲೇ ಹುಟ್ಟಿದರೂ ಆತ ನಮ್ಮವನಾಗಿಯೇ ಉಳಿದಿಲ್ಲ. ಆ ಕಾರಣದಿಂದಲೇ ಇರಬಹುದು, ಅವನ ಚಿತ್ರವನ್ನೂ ನಾವು ಸಹ ಬೇಕಾಬಿಟ್ಟೆಯಾಗಿ ಉಪಯೋಗಿಸುತ್ತಿದ್ದೀವೆನೋ ಎಂಬ ಶಂಕೆ ಶ್ರೀಲಂಕಾದ ಏರ್ಪೋರ್ಟ್ ಘಟನೆಯಿಂದ ನನ್ನಲ್ಲಿ ಮೂಡಿದೆ.

 ನಮ್ಮ ಬೆಂಗಳೂರಿನಲ್ಲಿ ನಡೆಯುವ ಬಹುತೇಕ ಕರಕುಶಲವಸ್ತು ಪ್ರದರ್ಶನಗಳಲ್ಲಿ ಬುದ್ಧನ ಚಿತ್ರಗಳಿರುವ ಸೀರೆ, ಕುಪ್ಪಸ, ಶರ್ಟ್, ಕಿವಿಯೋಲೆ, ಪೆಂಡೆಂಟ್ ಎಲ್ಲವೂ ದೊರೆಯುತ್ತದೆ. ಚಿತ್ರಕಲಾ ಪರಿಶತ್ತಿನಲ್ಲಾದ ಕರಕುಶಲ ಮೇಳದಲ್ಲಿ ಖರೀದಿಸಿದ ಒಂದು ಚೂಡಿದಾರ್ ಟಾಪ್ ನನ್ನಲ್ಲೂ  ಇದೆ. ಬುದ್ಧನ ಮೇಲಿನ ಪ್ರೀತಿ, ಆರಾಧನೆಗಳಿಂದ ಖರೀದಿಸಿದ್ದೆ. ಬಹುಶಃ ಇನ್ನದನ್ನು ನಾನು ಧರಿಸಲಾರೆ!

ಭಾರತಕ್ಕೆ ನೇತು ಬಿದ್ದಿರುವ ನೀರಿನ ಬಿಂದುವಿನಂತಿರುವ ಪುಟ್ಟ ದ್ವೀಪ ರಾಷ್ಟ್ರ. ಶೀಲಂಕಾ. ೧೯೮೮ರ ಜನಗಣತಿಯಂತೆ ಇಲ್ಲಿಯ ಒಟ್ಟು ಜನಸಂಖ್ಯೆಯಲ್ಲಿ  ಶೇ. ೯೩ರಷ್ಟು ಜನರು ಸಿಂಹಳೀಯ ಬುದ್ದಿಸ್ಟ್ ಆಗಿದ್ದರು. ೨೦೧೧ರ  ಜನಗಣತಿಗೆ ಬರುವಾಗ ಆ ಸಂಖ್ಯೆ ಶೇ ೭೦.೧೯ಕ್ಕೆ ಇಳಿದಿತ್ತು. ಉಳಿದವರಲ್ಲಿ ೧೨.೬ ಹಿಂದುಗಳು. ೯.೭ ಮುಸ್ಲೀಮರು ಮತ್ತು ೭.೪ ರಷ್ಟು ಕ್ರಿಶ್ಚಿಯನ್ನರು ಇದ್ದಾರೆ. ಏರುತ್ತಿರುವ ಮುಸ್ಲಿಮ್ ಜನಸಂಖ್ಯೆಯ ಬಗ್ಗೆ ಬೌದ್ಧರಲ್ಲಿ ಈಗ ಅಸಮಧಾನ ಮೂಡುತ್ತಿದೆ. ಹಾಗಾಗಿ ಅಲ್ಲಲ್ಲಿ ಚಿಕ್ಕಪುಟ್ಟ ಸಂಘರ್ಷಗಳು ಈ ಹಿಂದೆಯೂ ನಡೆಯುತ್ತಿದ್ದವು. ಅಂಪಾರವೆಂಬ ಪ್ರದೇಶದಲ್ಲಿ ಮುಸ್ಲಿಮರು ತಿಂಡಿ ತಿನಿಸುಗಳ ಮಳಿಗೆಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ನಡೆಸುತ್ತಿದ್ದಾರೆ. ಅವರು ಸಿಂಹಳಿ ಬೌದ್ಧರಿಗೆ ಆಹಾರದಲ್ಲಿ ನಿರ್ವೀರ್ಯರಾಗುವಂತ ಔಷಧಿಗಳನ್ನು ಬೆರೆಸಿ ಅವರ ಜನಸಂಖೆಯನ್ನು ನಿಯಂತ್ರಿಸಿಸುತ್ತಾರೆ, ಆ ಮೂಲಕ ತಮ್ಮ ಸಂಖ್ಯಬಲವನ್ನು ವೃದ್ಧಿಸಿಕೊಳ್ಳುತ್ತಿದ್ದಾರೆ. ಇದಲ್ಲದೆ ಅವರು ಕುಟುಂಬಯೋಜನೆಯನ್ನು ಪಾಲಿಸುತ್ತಿಲ್ಲ ಎಂಬುದು ಸಿಂಹಳೀಯರ ಆರೋಪ. ಬರ್ಮಾದಿಂದ ಓಡಿ ಬಂದ ರೋಹಿಂಗಾ ಮುಸ್ಲಿಮರು ಶ್ರೀಲಂಕಕ್ಕೆ ನುಗ್ಗುತ್ತಿದ್ದಾರೆ, ಮುಸ್ಲಿಮರ ಸಂಘಟನೆಗಳಿಗೆ ಸೌದಿ ಅರೇಬಿಯಿಂದ ಹಣ ಬರುತ್ತಿದೆ ಎಂಬ ಆರೋಪದೊಂದಿಗೆ ಅಲ್ಲಿ ಮುಸ್ಲಿಮ್ ದ್ವೇಷ ಒಳಗಿನ ಕಿಚ್ಚಾಗಿ ಉರಿಯುತ್ತಿದೆ. ಈಗ ಅಲ್ಲಿ ಬುರ್ಕಾಗಳೂ, ದಾಡಿಗಳು ಕಾಣಿಸಿಕೊಳ್ಳಲು ಶುರುವಾಗಿದೆ.

ಈಗಿನ ಶ್ರೀಲಂಕಾಕ್ಕೆ ಬೌದ್ಧಧರ್ಮ ಹೇಗೆ ಬಂದಿಳಿಯಿತು ಎಂದು ಇತಿಹಾಸದತ್ತ ಕಣ್ಣು ಹೊರಳಿಸಿದಾಗ ಸಿಗುವುದೇ ಮೌರ್ಯ ಸಾಮ್ರಟ ಅಶೋಕನ ಚರಿತ್ರೆ. ಅದು ಕ್ರಿ.ಫು ಮೂರನೇ ಶತಮಾನ, ಕಳಿಂಗ ಯುದ್ಧದ ಭೀಕರತೆಯಿಂದ ಕನಲಿ ಹೋದ ಅಶೋಕ ಹಿಂದೂ ಧರ್ಮವನ್ನು ತ್ಯಜಿಸಿ ಬೌದ್ಧದರ್ಮವನ್ನು ಅಂಗೀಕರಿಸುತ್ತಾನೆ. ಧರ್ಮಪ್ರಚಾರಕ್ಕಾಗಿ ತನ್ನ ಮಕ್ಕಳಾದ ಸಂಘಮಿತ್ರೆ ಮತ್ತು ಮಹೇಂದ್ರರನ್ನು ಸಿಂಹಳಕ್ಕೆ ಕಳುಹಿಸುತ್ತಾನೆ. ಅಶೋಕನ ಸಮಕಾಲೀನನಾದ ದೊರೆ ದೇವನಾಂಪ್ರಿಯ ಟಿಸ್ಸಾ ಅವರಿಗೆ ಆಶ್ರಯನ್ನು ನೀಡಿದ. ಅವರು  ಧರ್ಮಪ್ರಚಾರವನ್ನು ಮಾಡುತ್ತಾ ಅಲ್ಲಿಯೇ ಕೊನೆಯುಸಿರೆಳೆಯುತ್ತಾರೆ.  ಆ ಅಣ್ಣತಂಗಿಯರಿಬ್ಬರೂ ಅಲ್ಲಿಗೆ ಬರುವ ಮೊದಲು ಶ್ರೀಲಂಕಾ ಹೇಗಿತ್ತು?

ವಿದೇಶಿ ಪ್ರವಾಸಿಗರು ಕಂಡಂತೆ ಅಲ್ಲಿ ಪ್ರಕೃತಿಯ ಆರಾಧನೆಯಿತ್ತು.  ನಿಗೂಢ ಶಕ್ತಿಗಳಲ್ಲಿ ನಂಬುಗೆಯಿತ್ತು, ಆತ್ಮ, ಪುನರ್ಜನ್ಮಗಳಲ್ಲಿ ನಂಬಿಕೆಯಿತ್ತು. ಸತ್ತವರನ್ನು ಪೂಜಿಸುತ್ತಿದ್ದರು. ಮುಖ್ಯವಾಗಿ ಯಕ್ಷ-ಯಕ್ಷಿಣಿಯರ ಆರಾಧನೆಯಿತ್ತು. ಈಗ ಕ್ಯಾಂಡಿಯಲ್ಲಿ ಪ್ರತಿದಿನವೂ ವಿದೇಶಿ ಪ್ರವಾಸಿಗರನ್ನು ದೃಷಿಯಲ್ಲಿಟ್ಟುಕೊಂಡು ಕಲ್ಚರಲ್ ಶೋ ನಡೆಯುತ್ತಿದೆ. ಅಲ್ಲಿ ಕಲಾವಿದರು ಬಳಸುವ ಮುಖವಾಡಗಳು, ವಾದ್ಯಪರಿಕರಗಳು, ವಸ್ತ್ರವಿನ್ಯಾಸ, ಬಳಸುವ ಬಣ್ಣಗಳು- ಇವೆಲ್ಲವುಗಳಲ್ಲಿ ಬೌದ್ಧಪೂರ್ವದ ಸಿಂಹಳೀಯ ಸಂಸ್ಸ್ಕೃತಿಯನ್ನು ಕಾಣಬಹುದು.  ಆ ಕಾಲಕ್ಕೆ ಮೂಲನಿವಾಸಿಗಳ ಜೊತೆ ಸಾಕಷ್ಟು ಸಂಖ್ಯೆಯಲ್ಲಿ ಜೈನರೂ ಇದ್ದರು. ಆದರೆ ಈಗ ಅವರು ನಾಮಾವಶೇಷವಾಗಿದ್ದಾರೆ.

ರಾಮಾಯಣದ ಹೆಜ್ಜೆ ಗುರುತುಗಳನ್ನು ಹುಡುಕುತ್ತಾ ಒಂದು ಕಾಲದಲ್ಲಿ ರಾವಣನ ಸ್ವರ್ಣಲಂಕೆಯೆಂದು ಕರೆಯಿಸಿಕೊಂಡಿದ್ದ ಶ್ರೀಲಂಕಾಗೆ ಹೋದವಳು ನಾನು. ಆದರೆ ಹೋದೆಡೆಯಲೆಲ್ಲಾ ನಮಗೆ ಕಂಡಿದ್ದು ರಾಮಾಯಣದ ಘಟನೆಗಳು ನಡೆಯಿತ್ತೆನ್ನಲಾದ ಜಾಗಗಳಲ್ಲಿ ನಿರ್ನಾಮಗೊಂಡಿರುವ ದೇವಾಲಯದ ಅವಶೇಷಗಳು, ಮತ್ತು ಅವುಗಳ ಅಸ್ತಿಭಾರದಲ್ಲಿಯೇ ಅರಳಿರುವ ಬೌದ್ಧಚೈತ್ಯಾಲಯಗಳು.
 ಶ್ರೀರಾಮಚಂದ್ರನು ವಿಭಿಷಣನಿಗೆ ಪಟ್ಟಾಭೀಷೇಕ ಮಾಡಿದನೆಂಬ ನಂಬಲಾದ ಕೆಲಿನಿಯಾ ಟೆಂಪಲ್ ಗೆ ಹೋದರೆ ಅಲ್ಲೇನಿದೆ? ಅದೀಗ ಬೌದ್ಧರ ಬಹುಮುಖ್ಯ ಆರಾಧನಕೇಂದ್ರ. ಪ್ರಾಚೀನ ಮಂದಿರವಿರಬಹುದೆಂದು ತೋರುವ ಎತ್ತರದ ಗೋಡೆಗಳ ಮೇಲೆಲ್ಲಾ ಸಸ್ಯಜನ್ಯ ಬಣ್ಣಗಳಿಂದ ಮಾಡಿದ ಚಿತ್ತಾರಗಳು. ವಿಶಾಲವಾದ ಪ್ರವೇಶಧ್ವಾರವನ್ನು ಪ್ರವೇಶಿಸಿ ನೀಲತಾವರೆಗಳಿಂದ ಅಲಂಕೃತನಾದ ಬುದ್ಧನಿಗೆ ಪ್ರದಕ್ಷಿಣೆ ಹಾಕಿ ಬರುತ್ತಿರುವಾಗ ಎಡ ಬದಿಯ ಗೋಡೆಯಲ್ಲಿ ಕೆತ್ತಿದ ಕೊಳಲನ್ನುದೂತ್ತಿರುವ ಗೋಪಾಲ ಕೃಷ್ಣ .. ವಿಭಿಷಣನನ್ನು ಹುಡುಕಲೇ ಬೇಕೆಂದು ಕಣ್ಣು ಕಿರಿದುಗೊಳಿಸಿ ಆ ಬಿರು ಬಿಸಿಲಿನಲ್ಲಿ ಬರಿಗಾಲಿನಲ್ಲಿ ದೇವಸ್ಥಾನ ಪೌಳಿಯುದ್ದಕ್ಕೂ ಸುತ್ತು ಹಾಕುತ್ತಿರುವಾಗ ಗರ್ಭಗುಡಿಯಲ್ಲಿರುವ ಬುದ್ಧನ ಹಿಂಬದಿಗೆ ಸರಿಯಾಗಿ ಬರುವಂತೆ ಪಟ್ಟಾಭಿಷೇಕದ  ಚಿತ್ರವನ್ನು ಕೆತ್ತಿದ್ದನ್ನು ಕಂಡೆ. 

ನಮ್ಮ ಮುಂದಿನ ಪ್ರವಾಸದುದ್ದಕ್ಕೂ ನಮಗೆ ಇಂತಹದೇ ಅನುಭವಗಳಾದವು. ಸೀತೆಯ ಅಗ್ನಿ ಪ್ರವೇಶ ನಡೆಯಿತ್ತೆನ್ನಲಾದ  ಲಿಟ್ಲ್ ಇಂಗ್ಲೆಂಡ್ ಎಂದು ಕರೆಯುವ ನೌರಾ ಎಲಿಯಾದ ದುವೊಂಪುಲಾ, ರಾವಣನ ಅರಮನೆ ಇತ್ತೆನ್ನಲಾದ ಸಿಗೇರಿಯಾ, ಕಟಿಗ್ರಾಮದ ಸುಪ್ರಸಿದ್ಧ ಸುಬ್ರಹ್ಮಮಣ್ಯ ಸ್ವಾಮಿ ದೇವಾಲಯ, ಎಲ್ಲಾ ಎಂಬಲ್ಲಿರುವ ರಾವಣನ ಪುರಾತನ ಗುಹೆ, ರಾವಣ ತನ್ನ ಒಂದು ತಲೆಯನ್ನು ಶಿವನಿಗರ್ಪಿಸಿದ ಎಂದು ನಂಬಿರುವ ಟ್ರಿಂಕಮಲೆಯ ತ್ರಿಕೋನೇಶ್ವರ ದೇವಾಲಯ. ಕ್ಯಾಂಡಿಯಲ್ಲಿರುವ ಬುದ್ಧ ಹಲ್ಲನ್ನು ಇಟ್ಟಿರುವ ಬುದ್ಧ ಟೂತ್ ರಿಕ್ ಟೆಂಪಲ್, ಅಶೋಕನ ಮಕ್ಕಳಾದ ಸಂಘಮಿತ್ರೆ ಮತ್ತು ಮಹೇಂದ್ರ ಚಿನ್ನದ ಪಾತ್ರೆಯಲ್ಲಿ ತಂದ ಬುದ್ಧನಿಗೆ ಜ್ನಾನೋದಯವಾದ ಬೋಧಗಯಾದ ಬೋಧಿವೃಕ್ಷದ ರೆಂಬೆಯನ್ನು ಊರಿದ ಮತ್ತೆ ಅಲ್ಲಿಯೇ ಅವ್ರು ಮಾಹಾನಿರ್ವಾಣವಾದ ಅನುರಾಧಪುರ ಸೇರಿದಂತೆ ಎಲ್ಲಿಯೂ ನಮಗೆ ರಾಮಾಯಣದ ಪುರಾತನ ಕುರುಹಗಳು ದೊರೆಯುವುದಿಲ್ಲ. ಅದೆಲ್ಲವೂ ಬೌದ್ಧ ಮಂದಿರಗಳಾಗಿವೆ, ಹುಡುಕಿದರೆ ಹಿಂದೂ ಧರ್ಮದ ಕೆಲವು ಕುರುಹುಗಳನ್ನಷ್ಟೇ ಅಲ್ಲಿ ಕಾಣಬಹುದು.

ನಿಜ, ಒಬ್ಬ ದೊರೆ ತನ್ನ ಸಾಮ್ರಾಜ್ಯ ವಿಸ್ತರಣೆ ಮಾಡಿದಾಗ ಅಲ್ಲಿಯ ಕಟ್ಟಡಗಳನ್ನು ನಾಶಪಡಿಸಿ, ಅಲ್ಲಿಯ ಸಂಸ್ಕೃತಿಯನ್ನು ಹತ್ತಿಕ್ಕಿ ತನ್ನದೇ  ಛಾಪನ್ನು ಒತ್ತುವುದು, ಅಲ್ಲಿಯ ಜನರನ್ನು ಮತಾಂತರಗೊಳಿಸುವುದನ್ನು ನಾವು ಇತಿಹಾಸದುದ್ದಕ್ಕೂ ಓದುತ್ತಾ ಬಂದಿದ್ದೇವೆ. ಅದು ಒಪ್ಪಿತ ಸತ್ಯ. ಇದು ಧರ್ಮಗಳಿಗೂ ಅನ್ವಯವಾಗುತ್ತದೆ. 
 ಬೌದ್ಧರು ಶಾಂತಿಪ್ರಿಯರು, ಕರುಣಾಳುಗಳು, ಅಧ್ಯಾತ್ಮದೆಡೆ ದೃಷ್ಟಿ ನೆಟ್ಟವರು ಎಂಬುದನ್ನು ನಾವು ಚರಿತ್ರೆಯಲ್ಲಿ ಓದಿದ್ದೇವೆ. ಅವರು ಕತ್ತಿಯ ಮೊನೆಯಲ್ಲಿ ಸಾಮ್ರಜ್ಯಗಳನ್ನು ಗೆದ್ದವರಲ್ಲ . ಪ್ರೀತಿಯಿಂದಲೇ ತಮ್ಮ ಧರ್ಮವನ್ನು ಜಗತ್ತಿನೆಲ್ಲೆಡೆ ಪಸರಿಸಿದವರು. ಆದರೆ ಮಯ್ನಮಾರು ನಡೆಯುತ್ತಿರುವ ರೋಹಿಂಗ್ಯಾ ಮುಸ್ಲಿಮರ ಮಾರಣ ಹೋಮ ನೋಡಿದರೆ ಹಾಗೆನ್ನಿಸುವುದಿಲ್ಲ. ಶ್ರಿಲಂಕಾವೂ ಆ ಸಾಲಿಗೆ ಸೇರುತ್ತದೆಯಾ?

 ಶಾಂತಿ ಮತ್ತು ಸಹಬಾಳ್ವೆಯನ್ನು ಭೋದಿಸಬೇಕಾಗಿದ್ದ, ಬೋದಿಸಿದ್ದನ್ನು ಆಚರಣೆಯಲ್ಲಿ ತರಬೇಕಾಗಿರುವ ಧರ್ಮಗಳು ಉಗ್ರತ್ವದ ರಕ್ತಸಿಕ್ತ [ಮಿಲಿಟೆಂಟ್] ಹಾದಿಯನ್ನು ತುಳಿಯುತ್ತಿದೆಯಾ? ಸಿರಿಯದಲ್ಲಾಗುತ್ತಿರುವ ಹಸುಕಂದಮ್ಮಗಳ, ನಾಗರಿಕರ ಪೈಶಾಚಿಕ ಹತ್ಯೆಗಳನ್ನು ನೋಡುತ್ತಿದ್ದರೆ, ಹೌದು ಎಂದು ಉತ್ತರಿಸಲೇಬೇಕಾಗಿದೆ. ಇದಕ್ಕೆ ಪರಿಹಾರವೇನು? ಗೊತ್ತಿಲ್ಲ, ಬೆಳೆಯುತ್ತಿರುವ ಜನಸಂಖ್ಯೆಯನ್ನು ನಿಯಂತ್ರಣಕ್ಕೆ ತಂದು, ಸಂಪತ್ತನ್ನು ಕೂಡಿಡುವ ಲಾಲಸೆಯನ್ನು ಬಿಟ್ಟು ಪ್ರೀತಿ ಹಂಚಿಕೊಂಡು ಬಾಳಿದರೆ ಪರಿಸ್ಥಿತಿ ಸುಧಾರಿಸಬಹುದೇನೋ! ಅದೂ ಸರಿಯಾಗಿ ಗೊತ್ತಾಗುತ್ತಿಲ್ಲ.

[ ೧೧.೩.2018ರ ಉದಯವಾಣಿ ಸಾಪ್ತಾಹಿಕ ಪುರವಣಿಯಲ್ಲಿ ಪ್ರಕಟವಾದ ಬರಹ]